ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರೊಂದಿಗೆ ಕರ್ನಾಟಕವು 31 ಜಿಲ್ಲೆಗಳ ರಾಜ್ಯವಾಗಿ ಹೊರಹೊಮ್ಮಿದೆ.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ಈ ನಿರ್ಧಾರವನ್ನು ತಿಳಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ, ವಿಜಯನಗರ ನೂತನ ಜಿಲ್ಲೆ ರಚನೆಗೆ ತಾತ್ವಿಕ ಅನುಮೋದನೆ ಸಿಕ್ಕಿದೆ ಎಂದರು.
ಅಂದಹಾಗೆ, ಹೊಸಪೇಟೆ ಕೇಂದ್ರವಾಗಿ ವಿಜಯನಗರ ಜಿಲ್ಲೆ ಕಾರ್ಯನಿರ್ವಹಿಸಲಿದೆ. ಮುಖ್ಯವಾಗಿ ವಿಜಯನಗರ ಕ್ಷೇತ್ರದ ಶಾಸಕ ಹಾಗೂ ಸಚಿವ ಆನಂದ್ ಸಿಂಗ್ ಈ ಪ್ರತ್ಯೇಕ ಜಿಲ್ಲೆಗಾಗಿ ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು. ಹಲವಾರು ವರ್ಷಗಳಿಂದಲೂ ಆ ಭಾಗದ ಜನರ ಬೇಡಿಕೆಯೂ ಇತ್ತು.
ಆದರೆ, ಈ ಜಿಲ್ಲೆ ರಚನೆಗೆ ಬಳ್ಳಾರಿಯ ಬಹುತೇಕ ಶಾಸಕರು, ಸಚಿವರು, ಅದರಲ್ಲೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಮೊದಲೇ ಆನಂದ್ ಸಿಂಗ್ ಅವರಿಗೆ ನೀಡಿದ್ದ ಭರವಸೆಯಂತೆ ಹೊಸ ಜಿಲ್ಲೆ ರಚನೆಗೆ ಅಸ್ತು ಎನ್ನಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯಾವ ತಾಲ್ಲೂಕುಗಳು ಸೇರಲಿವೆ?
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಹನ್ನೊಂದು ತಾಲ್ಲೂಕುಗಳು ಇದ್ದು, ಈ ಪೈಕಿ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ವಿಜಯನಗರ ಜಿಲ್ಲೆಗೆ ಸೇರಲಿವೆ. ಉಳಿದಂತೆ; ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು ಹಾಗೂ ಕೂಡ್ಲಗಿ ಮೂಲಜಿಲ್ಲೆ ಬಳ್ಳಾರಿಯಲ್ಲೇ ಉಳಿಯಲಿವೆ.
ಮುಖ್ಯಮಂತ್ರಿಗೆ ಮನವಿ ನೀಡಲಾಗಿತ್ತು
ಕೆಲ ದಿನಗಳ ಹಿಂದೆ ಉಜ್ಜಯನಿ ಸದ್ಧರ್ಮ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರ ನೇತೃತ್ವದ ನಿಯೋಗವು ವಿಜಯನಗರ ಜಿಲ್ಲೆಗೆ ಬೇಡಿಕೆ ಇಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಆ ನಿಯೋಗದಲ್ಲಿ ಆನಂದ್ ಸಿಂಗ್ ಸೇರಿದಂತೆ ಶಾಸಕ ಕಂಪ್ಲಿ ಗಣೇಶ್, ಕಾಂಗ್ರೆಸ್ ನಾಯಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಮುಂತಾದವರು ಇದ್ದರು. ಜತೆಗೆ, ಆದೇ ನಿಯೋಗದ ಜತೆಯಲ್ಲಿ ಇನ್ನೂ ಹಲವು ಮುಖಂಡರು ಹೊಸ ಜಿಲ್ಲೆಯ ಅಗತ್ಯದ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಅಸಮಾಧಾನವೂ ಇದೆ
ಏತನ್ಮಧ್ಯೆ, ವಿಜಯನಗರ ಜಿಲ್ಲೆಯ ಬಗ್ಗೆ ಸಚಿವ ಶ್ರೀರಾಮುಲು ಹಾಗೂ ಶಾಸಕ ಸೋಮಶೇಖರ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆ ಅಖಂಡವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಹರಿದುಹಂಚಿ ಹೋದರೆ ಪ್ರಯೋಜನವಿಲ್ಲ. ಈ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಯಬೇಕು ಎಂದು ಅವರು ಈ ಮೊದಲೇ ಹೇಳಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಸೋಮಶೇಖರ ರೆಡ್ಡಿ, ಸ್ವಾರ್ಥಿಗಳೆಲ್ಲ ಸೇರಿ ಬಳ್ಳಾರಿ ಜಿಲ್ಲೆ ಇಬ್ಭಾಗಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದವರೆಲ್ಲ ಸ್ವಾರ್ಥಿಗಳು ಎಂದು ರೆಡ್ಡಿ ದೂರಿದ್ದರು. ಇದೀಗ ಸರಕಾರ ಬಳ್ಳಾರಿ ರೆಡ್ಡಿ ಬ್ರದರ್ಸ್ ಹಾಗೂ ಶ್ರೀರಾಮುಲು ಮಾತಿಗೆ ಸೊಪ್ಪು ಹಾಕದೆ ವಿಜಯನಗರ ಜಿಲ್ಲೆಗೆ ಅಸ್ತು ಎಂದಿದೆ. ಈ ಮೂಲಕ ಗಣಿನಾಡು ಬಿಜೆಪಿ ಪಾಲಿಟಿಕ್ಸ್‌ನಲ್ಲಿ ಆನಂದ್ ಸಿಂಗ್ ಮೇಲುಗೈ ಸಾಧಿಸಿದಂತಾಗಿದೆ. ಮುಂದಿನ ದಿಗಳಲ್ಲಿ ಇದು ಎರಡೂ ಜಿಲ್ಲೆಗಳಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡುವುದು ಖಚಿತ.
ಜಿಲ್ಲೆಯ ಭಗೋಳಿಕ ರಚನೆ ಬಗ್ಗೆ
ಅವಿಭಜಿತ ಕೋಲಾರ ಜಿಲ್ಲೆಯಂತೆ ಬಳ್ಳಾರಿ ಜಿಲ್ಲೆಯೂ 11 ತಾಲ್ಲೂಕುಗಳನ್ನು ಹೊಂದಿದ್ದು, ಈ ಪೈಕಿ ಕೊಟ್ಟೂರು, ಹೂವಿನಹಡಗಲಿ ಹಾಗೂ ಹರಪನಹಳ್ಳಿ ತಾಲ್ಲೂಕುಗಳ ಕಡೆ ಅಂಚಿನ ಗ್ರಾಮಗಳು ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಏನಿಲ್ಲವೆಂದರೂ 200 ಕಿ.ಮೀ. ದೂರದಲ್ಲಿವೆ. ಇದೀಗ ವಿಜಯನಗರ ಜಿಲ್ಲಾ ಕೇಂದ್ರವಾದರೆ ಈ ಅಂತರ ೭೦ರಿಂದ 80 ಕಿ.ಮೀಗೆ ಇಳಿಯಲಿದೆ. ಆದರೆ, ಕೂಡ್ಲಗಿ ಹಾಗೂ ಸಂಡೂರು ತಾಲ್ಲೂಕುಗಳು ಹೊಸಪೇಟೆಗೆ 30-40 ಕಿ.ಮೀ ಹತ್ತಿರದಲ್ಲಿದ್ದು, ಅವುಗಳನ್ನು ವಿಜಯನಗರ ಜಿಲ್ಲೆಗೆ ಪರಿಗಣನೆ ಆಗಿಲ್ಲ. ಹೀಗಾಗಿ ತಾಲ್ಲೂಕುಗಳನ್ನು ದೂರವನ್ನು ಪರಿಗಣಿಸಿ ಹಂಚಿಕೆ ಮಾಡಿಲ್ಲ ಎಂದು ದೂರಲಾಗುತ್ತಿದೆ.
Lead Photo courtesy: Wikipedia