ಬೆಂಗಳೂರು: ನಗರದಲ್ಲಿ ಗುರುವಾರ ಆರಂಭವಾದ ಬೆಂಗಳೂರು ಟೆಕ್ ಸಮಿಟ್-2020ಯಲ್ಲಿ ಪಾಲ್ಗೊಂಡು ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್, ಭಾರತದ ಗ್ರೇಟ್ ಸಿಟಿಗಳಲ್ಲಿ ಒಂದಾದ ಬೆಂಗಳೂರು ನಗರವನ್ನು ಮಿಸ್ ಮಾಡಿಕೊಳ್ಳುತ್ತಿವೆ ಎಂದರು.
ಸಿಡ್ನಿಯಿಂದಲೇ ವರ್ಚುಯಲ್ ವೇದಿಕೆಯ ಮೂಲಕ ಭಾಷಣ ಮಾಡಿದ ಅವರು, ಆಸ್ಟ್ರೇಲಿಯಾ ಮತ್ತು ಬೆಂಗಳೂರು ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದರಲ್ಲದೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಶೃಂಗಸಭೆಯ ʼಸದ್ದುʼಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಸ್ಕಾಟ್ ಮಾರಿಸನ್ ಆಡಿದ ಕೆಲ ಮುಖ್ಯವಾದ ಮಾತುಗಳು ಇಲ್ಲಿವೆ;
- ನಮಸ್ಕಾರ ಫ್ರಮ್ ಆಸ್ಟ್ರೇಲಿಯಾ. ಆಸ್ಟ್ರೇಲಿಯಾ ಮತ್ತು ಭಾರತ ಆವಿಷ್ಕಾರ ಮೈತ್ರಿಕೂಟದ ಹೆಮ್ಮೆಯ ದೇಶಗಳಾಗಿದ್ದು, ಈ ಸಮಿಟ್‌ನಲ್ಲಿ ಭಾಗಿಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ನಾನು ನನ್ನ ಗುಡ್‌ಫ್ರೆಂಡ್ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಭಾರಿಯಾಗಿದ್ದೇನೆ.
- ಆಸ್ಟ್ರೇಲಿಯಾದ ನೀತಿ ನಿರೂಪಕರು, ಹೂಡಿಕೆದಾರರು, ಕೈಗಾರಿಕೋದ್ಯಮಿಗಳು, ಸ್ಟಾರ್‌ಟಪ್ ಲೀಡರ್ಸ್ ಸೇರಿದಂತೆ 150ಕ್ಕೂ ಹೆಚ್ಚು ಆಸಿಸ್ ಪ್ರತಿನಿಧಿಗಳು ಈ ಸಮಿಟ್‌ನಲ್ಲಿ ಭಾಗಿಯಾಗಿದ್ದಾರೆ. ಹಾಗೆ ನೋಡಿದರೆ, ಈ ವರ್ಷ ಶೃಂಗದಲ್ಲಿ ನೇರವಾಗಿ ಭಾಗಿಯಾಗಲು ಸಾಧ್ಯವಾಗದ್ದಕ್ಕೆ ಕ್ಷಮಿಸಿ. ಮುಂದಿನ ಬಾರಿ ಖಂಡಿತವಾಗಿಯೂ ಬೆಂಗಳೂರಿಗೆ ಹಾರಿ ಬರುತ್ತೇನೆ. ಈ ಟೆಕ್ ಸಮಿಟ್‌ನಲ್ಲಿ ಶ್ರೇಷ್ಠ ನಗರವಾದ ಬೆಂಗಳೂರಿನ ಸ್ಫೂರ್ತಿ ಹಾಗೆಯೇ ಇದೆ ಎಂದು ಭಾವಿಸಿದ್ದೇನೆ.
- ಭಾರತವು ಜಗತ್ತಿನ 4ನೇ ಅತಿದೊಡ್ಡ ಕೈಗಾರಿಕಾ ಕ್ಲಸ್ಟರ್ ಆಗಿದೆ. ದೇಶದ ಒಟ್ಟಾರೆ ತಾಂತ್ರಿಕ ನಿಪುಣರಲ್ಲಿ ಮೂರನೇ ಒಂದು ಭಾಗದಷ್ಟು ತಜ್ಞರು ಬೆಂಗಳೂರಿನಲ್ಲೇ ಇದ್ದಾರೆ. ಆ ಮಟ್ಟಿಗೆ ಆ ನಗರದ ಪ್ರಭಾವವಿದೆ. ಹಾಗೆಯೇ, 25ಕ್ಕೂ ಹೆಚ್ಚು ಆಸ್ಟ್ರೇಲಿಯಾ ಕಂಪನಿಗಳು ಬೆಂಗಳೂರಿನಲ್ಲಿ ನೆಲೆನಿಂತಿದ್ದು, ಈ ಕಂಪನಿಗಳಲ್ಲಿ ಬೆಂಗಳೂರಿನ ಮಹತ್ವಾಕಾಂಕ್ಷೆಯ ಮಾನವ ಸಂಪನ್ಮೂಲ ಕೆಲಸ ಮಾಡುತ್ತಿದೆ. ನೆಕ್ಸ್ಟ್ ಈಸ್ ನೌ ಎಂಬ ಪರಿಕಲ್ಪನೆಗೆ ಬೆಂಗಳೂರು ಅತ್ಯುತ್ತಮ ಉದಾಹರಣೆ.
- ಕೋವಿಡ್‌ನಿಂದ ಜಗತ್ತು ತುಂಬಾ ಕಷ್ಟಪಟ್ಟಿದೆ. ಎಲ್ಲಡೆ ಪ್ರಾಣನಷ್ಟ, ಉದ್ಯೋಗ ನಷ್ಟ ಉಂಟಾಗಿ ಆರ್ಥಿಕ ಮತ್ತು ಸಾಮಾಜಿಕ ಕಂಪನಗಳು ಉಂಟಾಗಿವೆ. ಅದು ನಮಗೆಲ್ಲರಿಗೂ ನೋವು ಕೊಟ್ಟಿದೆ. ಆದರೂ ಅದನ್ನು ಸಮರ್ಥವಾಗಿ ಎದುರಿಸಲು ಪ್ರಯತ್ನ ಮಾಡಿದ್ದೇವೆ. ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳುತ್ತಿದ್ದೇವೆ. ವಾಕ್ಸಿನ್‌ಗಾಗಿ ಒಟ್ಟಾಗಿ ಹೋರಾಟ ನಡೆಸುತ್ತಿದ್ದೇವೆ.
- ಕೋವಿಡ್ ಪೀಡೆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದೆ. ವೈರಸ್ ಬಂದ ಮೊದಲ ಮೂರೇ ವಾರಗಳಲ್ಲಿ ಆಸ್ಟ್ರೇಲಿಯಾ ಕಂಪನಿಗಳು ಕಾರ್ಯ ನಿರ್ವಹಿಸುವ ವಿಧಾನವನ್ನೇ ಬದಲಿಸಿಕೊಂಡವು. ಕೋವಿಡ್ ಅನ್ನು ತಂತ್ರಜ್ಞಾನ ಮತ್ತು ವಿಜ್ಞಾನದಿಂದ ಸಮರ್ಥವಾಗಿ ಎದುರಿಸಿದವು. ಬಹುತೇಕ ಎಲ್ಲ ವ್ಯಾಪಾರ-ವಹಿವಾಟುಗಳು ಆನ್‌ಲೈನ್‌ಗೆ ಬಂದವು. ಅದೇ ರೀತಿ ವೈದ್ಯಕೀಯ, ಪರಿಸರ ಅಸಮತೋಲನ ಸೇರಿದಂತೆ ಜಗತ್ತನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳ ವಿರುದ್ಧ ತಂತ್ರಜ್ಞಾನ ಮತ್ತು ವಿಜ್ಞಾನದಿಂದಲೇ ಹೋರಾಟ ನಡೆಸಬಹುದು ಎಂದು ಕಂಡುಕೊಂಡವು. ಈ ನಿಟ್ಟಿನಲ್ಲಿ ಭಾರತದ ಜತೆ ಒಟ್ಟಾಗಿ ಕೆಲಸ ಮಾಡಲು ಆಸ್ಟ್ರೇಲಿಯಾ ಸದಾ ಸಿದ್ಧವಿದೆ.
- ಆಸ್ಟ್ರೇಲಿಯಾ-ಭಾರತ ದೀರ್ಘಕಾಲದ ಸ್ನೇಹಶೀಲ ದೇಶಗಳು. ಪ್ರಜಾಪ್ರಭುತ್ವ, ಕಾನೂನು, ಹಿತಾಸಕ್ತಿ, ಬದ್ಧತೆ, ಆವಿಷ್ಕಾರ ಸೇರಿ ಅನೇಕ ವಿಷಯಗಳಲ್ಲಿ ಎರಡೂ ದೇಶಗಳ ನಡುವೆ ಅಗಾಧ ಸಾಮ್ಯತೆ ಇದೆ. ನಂಬಿಕೆ, ಗೆಳೆತನ, ಬದ್ಧತೆ ನಮ್ಮ ಹೆಗ್ಗುತುಗಳಾಗಿವೆ. ಹೀಗಾಗಿ ಬೆಂಗಳೂರಿನಲ್ಲಿ ನಮ್ಮ ದೇಶದ ಕಂಪನಿಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಅದೇ ರೀತಿ ಇನ್ಫೋಸಿಸ್‌ನಂಥ ಕಂಪನಿಗಳು ಆಸ್ಟ್ರೇಲಿಯಾದಲ್ಲಿ ತಮ್ಮ ವಹಿವಾಟನ್ನು ವಿಸ್ತರಿಸಿಕೊಳ್ಳುತ್ತಿವೆ.
- ಕಳೆದ ಹತ್ತು ವರ್ಷಗಳಲ್ಲಿ ಐಎಸ್‌ಎಸ್‌ಆರ್‌ಎಫ್ ಕಡೆಯಿಂದ 13 ಸಲ ಬೆಂಗಳೂರು ಮತ್ತು ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳಿಗೆ ಅನುದಾನ ಸಿಕ್ಕಿದೆ. ಇದರಿಂದ ಸಂಶೋಧನೆ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಮತ್ತಷ್ಟು ಆಳವಾಗಿ ಅಧ್ಯಯನ ನಡೆಸಲು ಸಾಧ್ಯವಾಗುತ್ತಿದೆ. ಹೀಗಾಗಿ ಭಾರತ-ಆಸ್ಟ್ರೇಲಿಯಾ ಮುಂದೆ ಅಪರಿಮಿತ ಅವಕಾಶಗಳೇ ಇವೆ. ಅವುಗಳನ್ನು ಸಾಧ್ಯತೆಗಳನ್ನಾಗಿ ಪರಿವರ್ತಿಸಿಕೊಳ್ಳುವ ನಿಟ್ಟಿನಲ್ಲಿ ಒಟ್ಟಾಗಿ ನಡೆಯಬೇಕಿದೆ.