ಕೋವಿಡ್ ಪೀಡೆಯನ್ನು ಸಮರ್ಥವಾಗಿ ಎದುರಿಸಲಾಗದೆ ಮುಗ್ಗರಿಸಿ ತನ್ನ ಮುಂದೆ ಮಂಡಿಯೂರುತ್ತದೆ ಎಂದು ಭಾರತದ ಬಗ್ಗೆ ಕೇವಲವಾಗಿ ಲೆಕ್ಕಾಚಾರ ಹಾಕಿದ್ದ ಚೀನಾ, ಈಗಷ್ಟೇ ಅಲ್ಲ; ಹಿಂದಿನಿಂದಲೂ ಇಂಡಿಯಾ ಬಗ್ಗೆ ಹೆದರಿಕೊಳ್ಳುತ್ತಿದೆ ಎಂದ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಅಮೆರಿಕ ವಿದೇಶಾಂಗ ಇಲಾಖೆಯ ಇತ್ತೀಚೆಗಿನ ವರದಿಯೊಂದು ಈ ಅಂಶವನ್ನು ಪುಷ್ಠೀಕರಿಸಿದ್ದು, ಆದಿಯಿಂದಲೂ ಭಾರತದ ಬಗ್ಗೆ ಚೀನಾ ಆತಂಕ, ಭೀತಿ ಹಾಗೂ ಅಸೂಯೆಯಿಂದ ಒದ್ದಾಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ವರ್ಚಸ್ಸು, ನಿರಂತರ ಬೆಳವಣಿಗೆ ಬಗ್ಗೆ ಚೀನಾ ಚಿಂತಿತವಾಗಿದೆ. ಮುಖ್ಯವಾಗಿ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಯುರೋಪಿನ ಎಲ್ಲ ಪ್ರಜಾಪ್ರಭುತ್ವ ದೇಶಗಳ ಜತೆ ಗಾಢವಾಗುತ್ತಿರುವ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ಸಂಬಂಧಗಳು ಬೀಜಿಂಗ್ ತಲೆ ಕೆಡುವಂತೆ ಮಾಡಿದೆ. ಈ ದೇಶಗಳ ಜತೆಗಿನ ಭಾರತ ಸಂಬಂಧವನ್ನು ಹಾಳುಗೆಡವಲು ಚೀನಾ ಷಡ್ಯಂತ್ರಗಳನ್ನು ಹೂಡುತ್ತಲೇ ಇದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.
ಕೆಲ ವರ್ಷಗಳ ಹಿಂದೆ ಜಗತ್ತಿನ ಆರ್ಥಿಕ ಶಕ್ತಿಗಳಲ್ಲಿ 5ನೇ ಸ್ಥಾನದಲ್ಲಿದ್ದ ಭಾರತವು ಇದೀಗ 3ನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೇ, ಆರ್ಥಿಕವಾಗಿ ಚೀನಾವನ್ನು ಸರಿಗಟ್ಟುವ ಶಕ್ತಿ ಭಾರತಕ್ಕೇ ಇದೆ. ಅದೂ ಸಾಲದೇ ಉತ್ಪಾದನೆ ಹಾಗೂ ಸೇವಾರಂಗ ಸೇರಿ ಎಲ್ಲ ಕ್ಷೇತ್ರಗಳಲ್ಲೂ ತನಗೆ ಅಮೆರಿಕ ನಂತರ ಪ್ರಬಲ ಪೈಪೋಟಿ ನೀಡುತ್ತಿರುವ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ. ಹೀಗಾಗಿ ಗಡಿ ಪ್ರದೇಶದಲ್ಲಿ ಭಾರತವನ್ನು ಕೆಣಕುತ್ತಾ ಪಾಕಿಸ್ತಾನದಂಥ ದೇಶಗಳನ್ನು ಎತ್ತಿ ಕಟ್ಟುತ್ತಾ ದಿಲ್ಲಿಯ ಆರ್ಥಿಕತೆಗೆ ಹೊಡೆತ ನೀಡಲು ಚೀನಾ ಯತ್ನಸುತ್ತಲೇ ಇದೆ ಎಂದು ಅಮೆರಿಕದ ಆ ವರದಿಯಲ್ಲಿ ತಿಳಿಸಲಾಗಿದೆ.
ಒನ್ ಬೆಲ್ಟ್ ಒನ್ ರೋಡ್, ಆಸಿಯಾ ವಾಣಿಜ್ಯ ಕಾರಿಡಾರ್ ಸೇರಿ ಜಾಗತಿಕವಾಗಿ ತಾನು ಫಿಕ್ಸ್ ಮಾಡಿಕೊಂಡಿರುವ ಮಹತ್ವಾಕಾಂಕ್ಷೆಯ ಟಾರ್ಗೆಟ್ಟುಗಳಿಗೆ ಭಾರತ ದೊಡ್ಡ ಅಡ್ಡಿಯಾಗಿದೆ. ಏಷ್ಯಾದಲ್ಲಿ ಅನಭಿಶಕ್ತ ಸೂಪರ್ ಪವರ್ ಆಗಲು ದಿಲ್ಲಿಯ ಅಡ್ಡಿ ಹೆಚ್ಚುತ್ತಲೇ ಇದೆ. ಅದೂ ಸಾಲದೆ ತನಗೆ ಆಗದ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಜತೆ ಗಾಢವಾದ ವ್ಯೂಹಾತ್ಮಕ ಸಂಬಂಧವನ್ನು ಹೊಂದಿದೆ. ಹಾಗೆಯೇ ದಕ್ಷಿಣ ಏಷ್ಯಾ ಸಮುದ್ರ ಭಾಗದಲ್ಲಿಯೂ ಪ್ರಭಾವ ಬೀರುತ್ತಿದೆ ಎಂದು ಚೀನಾ ಚಡಪಡಿಸುತ್ತಿದೆ.
ದಕ್ಷಿಣ ಏಷ್ಯಾದಲ್ಲಿ ಅಮೆರಿಕ ಪ್ರಭಾವವನ್ನು ತಗ್ಗಿಸಿ ಭಾರತವನ್ನು ಏಕಾಂಗಿಯನ್ನಾಗಿ ಮಾಡುವುದಲ್ಲದೆ, ಅದರ ಅಕ್ಕಪಕ್ಕದ ದೇಶಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಚೀನಾ. ಮೊದಲು ಏಷ್ಯಾದಲ್ಲಿ ತಾನು ದೊಡ್ಡಣ್ಣನಾಗಿ ತದನಂತರ ಅಮೆರಿಕವನ್ನು ಸರಿಗಟ್ಟಬೇಕೆಂಬ ಅತೀ ಮಹತ್ವಾಕಾಂಕ್ಷೆಯನ್ನು ಚೀನಾ ಹೊಂದಿದೆ ಎಂದ ಅಂಶವೂ ಆ ವರದಿಯಲ್ಲಿದೆಯಂತೆ.
ಕೆಲ ದಿನಗಳ ಹಿಂದೆ ಗಡಿಯಲ್ಲಿ ಭಾರತ-ಚೀನಾ ಬಿಕ್ಕಟ್ಟಿನ ಬಗ್ಗೆಯೂ ಈ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ವಿವಾದಿತ ಗಡಿ ಪ್ರದೇಶಗಳಲ್ಲಿ ಭಾರತವನ್ನು ಕೆಣುಕುವುದರ ಜತೆಗೆ; ತೈವಾನ್, ಜಪಾನ್, ಆಸ್ಟ್ರೇಲಿಯಾ ಜತೆಗೂ ಕಾಲುಕೆರೆದು ಜಗಳಕ್ಕೆ ಹೋಗುತ್ತಿದೆ. ಇನ್ನು ಕೋವಿಡ್ ಜಗತ್ತಿನಾದ್ಯಂತ ಹರಡಲು ಚೀನಾ ದೇಶವೇ ಮುಖ್ಯ ಕಾರಣ ಎಂದು ಆ ವರದಿಯಲ್ಲಿ ದೂರಲಾಗಿದೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
- ವಿವಿಧ ಮೂಲಗಳಿಂದ
- lead photo from Narendra Modi Facebook