ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಲೆ ಕೆಡಿಸಿಕೊಂಡಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ಬೀರುವ ರಾಜಕೀಯ ಪ್ರಭಾವದ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.
ಬಿಜೆಪಿಯಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರು ಎಂಬ ಎರಡು ಬಣಗಳಾಗಿರುವ ಬೆನ್ನಲ್ಲೇ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ತಮಗೇನಾದರೂ ಹೊಡೆತ ಬೀಳಬಹುದಾ? ಬಿದ್ದರೆ ಬೆಂಗಳೂರು ಪಕ್ಕದಲ್ಲೇ ಇರುವ ಎರಡೂ ಜಿಲ್ಲೆಗಳಿಗೆ ಬಿಸಿ ತಟ್ಟಲಿದೆಯಾ ಎಂಬುದುದು ಕಾಂಗ್ರೆಸ್, ಜೆಡಿಎಸ್ನಲ್ಲಷ್ಟೇ ಅಲ್ಲ, ಬಿಜೆಪಿಯಲ್ಲೇ ಕಾವೇರುವಂತೆ ಚರ್ಚೆಯಾಗುತ್ತಿದೆ.
ಆಪರೇಷನ್ ಕಮಲದ ಸೆಳೆತಕ್ಕೆ ಸಿಕ್ಕಿ ಬಿಜೆಪಿ ಸೇರಿದ್ದ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಅಬಕಾರಿ ಮಂತ್ರಿಯಾಗಿರುವ ಮುಳಬಾಗಿಲಿನ ಎಚ್.ನಾಗೇಶ್ ಅವರಿಬ್ಬರೂ ಯಡಿಯೂರಪ್ಪ ಸಂಪುಟದಲ್ಲಿದ್ದು, ವಿಸ್ತರಣೆ ಅಥವಾ ಪುನಾರಚನೆ ವೇಳೆ ಇವರಿಗೇನಾದರೂ ಸಮಸ್ಯೆ ಆಗಬಹುದೇ ಎಂಬುದು ಈಗ ಹುಟ್ಟಿಕೊಂಡಿರುವ ದೊಡ್ಡ ಪ್ರಶ್ನೆ.
ನಾಗೇಶ್ ಅವರು, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಣ್ಣ ಕೈಗಾರಿಕೆ ಮಂತ್ರಿಯಾಗಿದ್ದರು. ಆಮೇಲೆ ಬಿಜೆಪಿಗೆ ಬೆಂಬಲ ನೀಡಿ ಇದೀಗ ಯಡಿಯೂರಪ್ಪ ಸಂಪುಟದಲ್ಲೂ ಸಚಿವರಾಗಿದ್ದು, ಪ್ರಬಲವಾದ ಅಬಕಾರಿ ಖಾತೆ ಹೊಂದಿದ್ದಾರೆ. ಈ ಖಾತೆಯ ಮೇಲೆ ಬೆಳಗಾವಿ ನಾಯಕರೊಬ್ಬರು ಕಣ್ಣು ಹಾಕಿದ್ದಾರೆನ್ನಲಾಗಿದೆ.
ನಾಗೇಶ್ ವಿರುದ್ಧ ದೂರು
ಖಚಿತ ಮಾಹಿತಿಯ ಪ್ರಕಾರ ನಾಗೇಶ್ ವಿರುದ್ಧ ಕೋಲಾರ ಜಿಲ್ಲೆಯ ಬಿಜೆಪಿ ನಾಯಕರೇ ವರಿಷ್ಠರಿಗೆ ದೂರು ನೀಡಿದ್ದಾರೆ. ಅಲ್ಲದೆ, ರಾಜ್ಯ ನಾಯಕರಿಗೆ; ಅದರಲ್ಲೂ ಸಂಘ ಪರಿವಾರ ಮುಖಂಡರಿಗೆ ಆಪ್ತರಾಗಿರುವ ಕೋಲಾರದ ಸಂಸದ ಮುನಿಸ್ವಾಮಿ ಮತ್ತು ನಾಗೇಶ್ ನಡುವಿನ ತಿಕ್ಕಾಟ ಜಿಲ್ಲೆಯಲ್ಲಿ ಹಾದಿಬೀದಿ ರಂಪವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಸಿ ಮುಟ್ಟಿಸಲು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿರ್ಧರಿಸಿದ್ದಾರೆಂದು, ಹೀಗಾಗಿ ಅವರ ಅಬಕಾರಿ ಖಾತೆ ಬದಲಾಗಬಹುದು ಎಂಬ ಮಾಹಿತಿ ಸಿಕ್ಕಿದೆ. ಆದರೆ, ಸಂಪುಟದಿಂದ ಅವರನ್ನು ಕೈಬಿಡುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಬಿಜೆಪಿ ಸರಕಾರ ರಚನೆಗೆ ಅವರೂ ಕಾರಣರು.
ಡಾ.ಸುಧಾಕರ್ ಬಗ್ಗೆ ಮೆಚ್ಚುಗೆ
ಇನ್ನು ಚಿಕ್ಕಬಳ್ಳಾಪುರದ ಡಾ.ಸುಧಾಕರ್ ಕೂಡ ಸಂಪುಟದಲ್ಲಿ ಪ್ರಬಲ ಖಾತೆಗಳನ್ನೇ ಹೊಂದಿದ್ದಾರೆ. ಅವರಿಗೆ ಮೊದಲೇ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯ ಜತೆಗೆ ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಖಾತೆಯನ್ನು ಕಿತ್ತುಕೊಟ್ಟಿರುವುದರ ಹಿಂದೆ ಕೆಲಸ ಮಾಡಿರುವ ಕಾಣದ ಕೈಗಳ ಬಗ್ಗೆ ಈಗಾಗಲೇ ವರಿಷ್ಠರಿಗೆ ಮಾಹಿತಿ ಹೋಗಿದೆ. ಆದರೆ, ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಆರೋಗ್ಯ ಸಚಿವರೇ ಸುಧಾಕರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಕೆಲವರು ಸುಧಾಕರ್ ಅತಿಯಾದ ಕ್ರಿಯಾಶೀಲತೆಯ ಬಗ್ಗೆ ಒಳಗೊಳಗೇ ಚಡಿಪಡಿಸುತ್ತಿದ್ದರೂ ಅವರ ಖಾತೆಗಳ ಮೇಲಾಗಲಿ ಅಥವಾ ಅವರ ಮೇಲಾಗಲಿ ವಿಸ್ತರಣೆ ಅಥವಾ ಪುನಾರಚನೆಯ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುವ ಮಾತು.
ಆದಾಗ್ಯೂ, ಈಗಿರುವ ಸಂಪುಟದಲ್ಲಿ ಆಮೂಲಾಗ್ರ ಬದಲಾವಣೆ, ಇಲ್ಲವೇ ಪುನಾರಚನೆ ಮಾಡಬೇಕು ಎಂದು ಕೆಲ ಶಕ್ತಿಶಾʻಲಿ ಮೂಲ ನಿವಾಸಿಗಳು ಪಟ್ಟು ಹಿಡಿದಿದ್ದು, ಈ ಕೂಗಿಗೇನಾದರೂ ವರಿಷ್ಠರು ಸೊಪ್ಪು ಹಾಕಿದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಮೇಲೆಯೂ ಕೊಂಚ ಪ್ರಭಾವ ಇರಬಹುದು ಎಂದು ಅವರು ಹೇಳಿದ್ದಾರೆ.