ಮೇಲಿನ ಚಿತ್ರದಲ್ಲಿ; ಎಲ್.ಮುರುಗನ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಣ್ಣಾಮಲೈ.
photo: Dr. Ashwathnarayan C. N.@drashwathcn
ಕೊಯಮತ್ತೂರು: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಭರ್ಜರಿ ತಾಲೀಮು ಆರಂಭಿಸಿದೆ. ಪರಿಯಾರ್ ಐಡಿಯಾಲಜಿ ಮೇಲೆ ರಾಜಕೀಯ ಮಾಡುತ್ತಿರುವ ಡಿಎಂಕೆ, ಎಐಎಡಿಎಂಕೆ ಪಕ್ಷಗಳನ್ನು ಸರಿಗಟ್ಟಲು ಕಮಲ ಪಾಳಯ ತನ್ನ ಮೂಲ ಅಜೆಂಡಾ ಹಿಂದುತ್ವವನ್ನೇ ನೇರವಾಗಿ ಪ್ಲೇ ಮಾಡುತ್ತಿದೆ.
ಈ ನಿಟ್ಟಿನಲ್ಲಿ ತಮಿಳುನಾಡು ಬಿಜೆಪಿ ಘಟಕ ಕೈಗೊಂಡಿರುವ ʼವೆಟ್ರಿವೇಲ್ʼ ಯಾತ್ರೆ ಇದೀಗ ಮಧ್ಯಂತರ ಹಂತಕ್ಕೆ ಬಂದಿದ್ದು, ಕ್ಲೈಮ್ಯಾಕ್ಸ್ ಹೊತ್ತಿಗೆ ದ್ರಾವಿಡ ರಾಜ್ಯದಲ್ಲಿ ಹಿಂದುತ್ವವೆಂಬ ವಾಹಕದ ಮೇಲೆ ತನ್ನ ಪರ ಅಲೆ ಎಬ್ಬಿಸಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಯೋಜನೆಯನ್ನು ಕಾರ್ಯಗತ ಮಾಡಲು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಮುಂದಕ್ಕೆ ಬಿಟ್ಟಿರುವ ವರಿಷ್ಠರು, ತಮ್ಮ ಕರಾರುವಕ್ಕಾದ ಸ್ಕೆಚ್ಚಿನೊಂದಿಗೆ ಕರ್ನಾಟಕದ ಇನ್ನಿಬ್ಬರನ್ನು, ಅವರಿಬ್ಬರ ಜತೆ ಮುಂದೆ ಬಿಟ್ಟಿದ್ದಾರೆ.
ಈಗಾಗಲೇ ತಮಿಳುನಾಡಿನಲ್ಲಿ ಪಕ್ಷದ ಪರ ಸಣ್ಣ ಅಲೆಯನ್ನು ಎಬ್ಬಿಸಿರುವ ಎಲ್.ಮುರುಗನ್ ಜತೆ, ಅಣ್ಣಾಮಲೈ ಮತ್ತು ನೈನಾರ್ ನರೇಂದ್ರನ್ ಅವರನ್ನು ಜೋಡಿಸಲಾಗಿದೆ. ಮೊದಲೇ ಹೇಳಿದಂತೆ ಅಣ್ಣಾಮಲೈ ಅವರು ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ. ಇನ್ನು ನರೇಂದ್ರನ್ ಸಿಕ್ಕಾಪಟ್ಟೆ ವಿವಾದಿತ ವ್ಯಕ್ತಿ ಹಾಗೂ ತಿರುನಲ್ವೇಲಿಯ ಮಾಜಿ ಶಾಸಕ ಕೂಡ. ಒಂದು ಫೈರ್‌ಬ್ರ್ಯಾಂಡ್ ನಾಯಕ.
ಇತ್ತೀಚೆಗೆ ಬಿಜೆಪಿ ಸೇರಿದ ನಟಿ ಖುಷ್ಬೂ ಈ ನಾಲ್ವರಿಗೆ ಸಾಥ್ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರು ಈ ಯಾತ್ರೆಯಿಂದ ದೂರ ಉಳಿದಿದ್ದಾರೆ. ಇನ್ನು, ರಾಜ್ಯ ಬಿಜೆಪಿ ಉಸ್ತುವಾರಿ ಆಗಿರುವ ಕರ್ನಾಟಕದ ಸಿ.ಟಿ.ರವಿ, ದ್ರಾವಿಡ ಪಾಲಿಟಿಕ್ಸ್‌ಗೆ ಹೇಗಾದರೂ ಮಾಡಿ ಚೆಕ್‌ಮೇಟ್ ಇಡಲು ಓಡಾಡುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಪಾಲಿನ ʼಸೈಲಂಟ್ ಟ್ರಬಲ್‌ಶೂಟರ್ʼ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ಯಾತ್ರೆಯಲ್ಲಿ ಭಾನುವಾರ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದು, ಕೊಯಮತ್ತೂರಿನಲ್ಲಿ ಭಾನುವಾರ ನಡೆದ ಇದೇ ಯಾತ್ರೆಯಲ್ಲಿ ಅವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು.
ಮತ್ತೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರವೇ ಚೆನ್ನೈಗೆ ಬಂದಿದ್ದರು. ಬಿಜೆಪಿಗೆ ಬೇಕಿಲ್ಲದಿದ್ದರೂ ಎಐಎಡಿಎಂಕೆ ನಾಯಕರು ಮೈತ್ರಿಗಾಗಿ ಶಾಗೆ ದುಂಬಾಲು ಬಿದ್ದಿದ್ದಾರೆ. ವಿಚಿತ್ರವೆಂದರೆ, ಕೋವಿಡ್ ನೆಪವೊಡ್ಡಿ ವೆಟ್ರಿವೇಲ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರನ್ನು ಪಳನಿಸ್ವಾಮಿ ಸರಕಾರ ಬಂಧಿಸುತ್ತಿದೆ!
ಶನಿವಾರ ಚೆನ್ನೈನಲ್ಲಿ ಅಮಿತ್ ಶಾ ಜತೆ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮೈತ್ರಿ ಮಾತುಕತೆ ನಡೆಸುತ್ತಿದ್ದರೆ, ಕೊಯಮತ್ತೂರು ಆಸುಪಾಸಿನಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದರು!
ಡಿಎಂಎ ವಿರುದ್ಧ ಡಿಸಿಎಂ ಗುಡುಗು
ಅಭಿವೃದ್ಧಿಯಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕಾಗಿದ್ದ ತಮಿಳುನಾಡು ರಾಜ್ಯವು ಭ್ರಷ್ಟ ರಾಜಕೀಯ ಕೂಟಗಳು ಹಾಗೂ ಕೌಟುಂಬಿಕ ಸ್ವಾರ್ಥ ರಾಜಕಾರಣದ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ದೂರಿದರು.
ಕೊಯಮತ್ತೂರಿನಲ್ಲಿ ಭಾನುವಾರ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ʼವೆಟ್ರಿವೇಲ್ʼ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಬಹಳ ಮಹತ್ವದ ಸ್ಥಾನವಿದೆ. ಇತರೆ ರಾಜ್ಯಗಳೆಲ್ಲ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಪ್ರಗತಿಯತ್ತ ಸಾಗುತ್ತಿದ್ದರೆ, ಈ ರಾಜ್ಯ ಮಾತ್ರ ರಾಜಕೀಯ ದಿಕ್ಕುದೆಸೆ ಇಲ್ಲದೆ, ಹಿಮ್ಮುಖವಾಗಿ ಚಲಿಸುತ್ತಿದೆ ಎಂದರು.
ಕೆಲವರು ನಮ್ಮ ದೈವ ಮುರುಗನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ನಿಜಕ್ಕೂ ಖಂಡನೀಯ. ನಮ್ಮ ದೇವರು, ಸಂಸ್ಕೃತಿ, ಧರ್ಮದ ಬಗ್ಗೆ ಯಾರೇ ಆಗಲಿ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸುವ ಪ್ರಶ್ನೆ ಇಲ್ಲ. ಅಂಥವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಡಿಸಿಎಂ ಗುಡುಗಿದರು.
ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ. ಈಗಲ್ಲದಿದ್ದರೆ ಇನ್ನೆಂದಿಗೂ ಅಲ್ಲ. ಮುಂದಿನ ಚುನಾವಣೆಯಲ್ಲಿ ಭ್ರಷ್ಟ ರಾಜಕೀಯ ಕೂಟಗಳಿಗೆ, ಕುಟುಂಬಗಳ ಆಧಾರಿತ ಸ್ವಾರ್ಥ ರಾಜಕಾರಣಕ್ಕೆ ಮಣೆ ಹಾಕಬಾರದು. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಅಂತ ಬಂದರೆ ಬಜೆಪಿಗಿಂತ ಅತ್ಯುತ್ತಮ ಆಯ್ಕೆ ಇನ್ನೊಂದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
ಈ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಕೊಯಮತ್ತೂರು ನಗರಕ್ಕೆ 15 ಕಿ.ಮೀ. ದೂರದಲ್ಲಿ ಇರುವ ಮರುದಾಮಲೈನಲ್ಲಿರುವ ಮುರುಗರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು ಉಪ ಮುಖ್ಯಮಂತ್ರಿ. ಇವತ್ತಿನ ಯಾತ್ರೆ ತಿರುತ್ತಣಿಯಿಂದ ತಿರುಚ್ಚೆಂದೂರ್ ದೇವಸ್ಥಾನದವರೆಗೆ ಸಾಗಿದೆ. ಈ ಯಾತ್ರೆಯಲ್ಲಿ ಕೊಂಚ ದೂರ ಡಿಸಿಎಂ ಸಾಗಿ ಶುಭಹಾರೈಸಿದರು. ಸಿ.ಟಿ.ರವಿ ಅವರು ಈ ಯಾತ್ರೆಯ ಭಾಗವಾಗಿಯೇ ಇದ್ದು, ಅವರು ಇನ್ನೂ ಕೆಲ ದಿನ ಅಲ್ಲೇ ಉಳಿಯುವ ಸಾಧ್ಯತೆ ಇದೆ.
ಏನಿದು ಯಾತ್ರೆ?
ಡಿಎಂಕೆ ನಾಯಕರೊಬ್ಬರು ತಮಿಳುನಾಡಿನ ಆರಾಧ್ಯ ದೈವ ಮುರುಗರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಪಕ್ಷ ಈ ಹೇಳಿಕೆಯನ್ನು ಡಿಎಂಕೆಯ ಉನ್ನತ ನಾಯಕರು ಖಂಡಿಸಲೂ ಇಲ್ಲ. ಈ ಅಪಚಾರವನ್ನು ಖಂಡಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಮುರುಗನ್ ಅವರು ರಾಜ್ಯದಲ್ಲಿರುವ ಆರು ಮುರುಗರ ಕ್ಷೇತ್ರಗಳ ಯಾತ್ರೆ ಕೈಗೊಂಡಿದ್ದಾರೆ. ಮುರುಗರ ಆಯುಧವಾದ ವೇಲ್ (ದಂಡ)ವನ್ನು ಕೈಯ್ಯಲ್ಲಿಡಿದು ಅವರು ಯಾತ್ರೆ ಕೈಗೊಂಡಿದ್ದು, ಅದು ಡಿಸೆಂಬರ್ 5ರಂದು ಕೊನೆಗೊಳ್ಳಲಿದೆ.
ಅಂದಹಾಗೆ, ಯಾತ್ರೆಯ ನೇತೃತ್ವ ವಹಿಸಿರುವ ಮುರುಗನ್ ದೀಕ್ಷೆಯಂತೆ ಸ್ವೀಕರಿಸಿ ಈ ಯಾತ್ರೆ ಕೈಗೊಂಡಿದ್ದಾರೆ. ಕೇಸರಿ ಅಂಗಿ, ಕೇಸರಿ ಅಂಗಿಯನ್ನು ತೊಟ್ಟು ಚಪ್ಪಲಿ ತೊಡದೇ ಬರಿಗಾಲಿನಲ್ಲಿಯೇ ಅವರು ನಡೆಯುತ್ತಿದ್ದಾರೆ. ಕೈಯ್ಯಲ್ಲಿ ವೇಲ್ (ದಂಡ) ಅನ್ನು ಹಿಡಿದು ಸಾಗಿಬರುತ್ತಿರುವ ಅವರಿಗೆ ಎಲ್ಲಡೆ ಭರ್ಜರಿ ಸ್ವಾಗತ ಸಿಗುತ್ತಿದೆ.