Photo by afkrii from Pexels
ಕೋಲಾರ: ಹೆಲ್ಮೆಟ್ ಇಲ್ಲದೆಯೇ ಓಡಾಡುವ ಹಾಗೂ ಮೀಟರ್ ಇಲ್ಲದೆ ಮನಬಂದತೆ ಸಂಚರಿಸುವ ಆಟೋ ಚಾಲಕರಿಗೆ ಜಿಲ್ಲಾಧಿಕಾರಿ ಮಂಗಳವಾರ ಬೆಳಗ್ಗೆ ಬಿಸಿ ಮುಟ್ಟಿಸುವ ಸುದ್ದಿ ನೀಡಿದ್ದಾರೆ.
ಇನ್ನು ಪಟ್ಟಣದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದೂ ಹಾಗೂ ಆಟೋ ಚಾಲಕರು ಮೀಟರ್ ಹಾಕುವುದು ಕೂಡ ಕಡ್ಡಾಯ. ಡಿಸೆಂಬರ್ 1ರಿಂದಲೇ ಈ ಆದೇಶ ಜಾರಿಗೆ ಬರುತ್ತದೆ. ಈ ನಿಯಮ ಮೀರಿದರೆ ದಂಡ ವಿಧಿಸಿ, ಕಠಿಣ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಹಿಂಬದಿ ಸವಾರರಿಗೂ ಹೆಲ್ಮೆಟ್
ಬೈಕ್ ಸವಾರನ ಜತೆಗೆ ಹಿಂಬದಿ ಕೂರುವ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ನಗರದದಲ್ಲಿ ಹೆಲ್ಮೆಟ್ ಇಲ್ಲದೆ ಓಡಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಅನೇಕ ಸವಾರರಿಗೆ ಸಂಚಾರ ನಿಯಮಗಳ ಮೇಲೆ ಅಲಕ್ಷ್ಯವಿದೆ. ಅಂಥವರಿಗೆ ತಕ್ಕಶಾಸ್ತಿ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮೀಟರ್ ದರ ಅಂತಿಮ
ಆಟೋ ಚಾಲಕರು ಮೀಟರ್ ಹಾಕುತ್ತಿಲ್ಲ. ತಮಗೆ ಇಷ್ಟಬಂದಷ್ಟು ದರವನ್ನು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆ ಹಾಗೂ ಮೂವರಿಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ದೂರುಗಳು ಬರುತ್ತಲೇ ಇವೆ. ಹೀಗಾಗಿ ಆಟೋ ಚಾಲಕರು ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು, ಅದರಂತೆ ಹಣ ಪಡೆಯಬೇಕು ಮತ್ತೂ ಮೂವರಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಒಮ್ಮೆಲೆ ಹತ್ತಿಸಿಕೊಳ್ಳುವಂತಿಲ್ಲ. ಈ ನಿಯಮ ಮೀರಿದ ಚಾಲಕರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸತ್ಯಭಾಮ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೆದ್ದಾರಿಗಳಲ್ಲಿ ಕತ್ತಲು
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳ ಸಮಸ್ಯೆ ಇದೆ. ಇದರಿಂದ ಕತ್ತಲು ಆವರಿಸಿದ್ದು, ರಾತ್ರಿ ಹೊತ್ತು ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆಯಾಗಿದೆ. ಹೆದ್ದಾರಿಗಳಲ್ಲಿ ಕೂಡಲೇ ವಿದ್ಯುತ್ ದೀಪಗಳನ್ನು ಸಮರ್ಪಕವಾಗಿ ಅಳವಡಿಸಬೇಕು ಎಂದು ಹೆದ್ದಾರಿಗಳನ್ನು ನಿರ್ವಹಣೆ ಮಾಡುತ್ತಿರುವ ಲ್ಯಾಂಕೋ ಸಂಸ್ಥೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಡಿಸಿ ಹೇಳಿದರು.
ಮುಖ್ಯವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ, ಮೆಡಿಕಲ್ ಕಾಲೇಜ್ ಸಮೀಪದ ಹೆದ್ದಾರಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಅದರ ಜತೆಗೆ, ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ, ಬಗ್ಗೆ ಲ್ಯಾಂಕೋ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ. ಸ್ವಚ್ಛತೆ ಬಗ್ಗೆಯೂ ಗಮನ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಬೇಸರ ಹೊರಹಾಕಿದರು.