Lead photo courtesy: Jason Nicholls@jnmet
ಚಿಕ್ಕಬಳ್ಳಾಪುರ/ಕೋಲಾರ: ಈಗಷ್ಟೇ ಬೆಳೆಗಳನ್ನು ಒಪ್ಪ ಮಾಡಿಕೊಂಡು ಕಟಾವು ಮಾಡಿಕೊಂಡು ಜೋಪಾನ ಮಾಡಿಕೊಳ್ಳಬೇಕೆಂದು ಧಾವಂತದಲ್ಲಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಗೊಂದು ಆತಂಕದ ಸುದ್ದಿ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಂಡಮಾರುತ ಎದ್ದಿದ್ದು, ಅದಕ್ಕೆ ʼನಿವಾರ್ʼ ಸೈಕ್ಲೋನ್ ಎಂದು ಹೆಸರಿಡಲಾಗಿದೆ. ಈಗಾಗಲೇ ತಮಿಳುನಾಡಿಗೆ ಅಪ್ಪಳಿಸಿ ಆಂಧ್ರ ಪ್ರದೇಶವನ್ನೂ ಮುಟ್ಟಿದ್ದು, ಇನ್ನು ಕೆಲ ಗಂಟೆಗಳಲ್ಲಿ ಕರ್ನಾಟಕವನ್ನು ತಲುಪಲಿದೆ.
ತಮಿಳುನಾಡಿನ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಖ್ಯವಾಗಿ ಚೆನ್ನೈನಲ್ಲೂ ಹೆಚ್ಚಾಗಿದೆ. ಹೀಗಾಗಿ ಆ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಮುದ್ರ ತೀರದ ಪಕ್ಕದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಇನ್ನು ಕರ್ನಾಟಕದಲ್ಲಿ ʼನಿವಾರ್ʼ ಮಾರುತದ ಪ್ರಭಾವ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ತಮಿಳುನಾಡಿನ ಕಡಲ ತೀರದಲ್ಲಿ ಉಂಟಾಗುವ ಯಾವುದೇ ಮಾರುತವು ಮೊದಲು ಕೋಲಾರ ಜಿಲ್ಲೆಯ ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ ಪಟ್ಟಣಗಳನ್ನು ಮೊದಲು ಟಚ್ ಮಾಡುತ್ತದೆ. ಆಮೇಲೆ ಇಡೀ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ವ್ಯಾಪಿಸಿಕೊಳ್ಳುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೊನೆಯ ತಾಲ್ಲೂಕು ಗೌರಿಬಿದನೂರಿಗೂ ಇದರ ತೀತ್ರತೆ ತಪ್ಪುವಂತಿಲ್ಲ.
ಈಗಾಗಲೇ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ದಟ್ಟವಾಗಿ ಮೋಡ ಕವಿದಿದೆ. ಮೊದಲೇ ಚಳಿ ಬಿದ್ದಿದ್ದ ವಾತಾವರಣದಲ್ಲಿ ಸೈಕ್ಲೋನ್ ಶೀತವೂ ಸೇರಿ ಜನರು ನಡುಗುವಂತಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮಳೆಯಿಂದ ಕಂಗೆಟ್ಟಿದ್ದ ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಇದೆ. ಜತೆಗೆ; ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆಯಾಗಲಿದ್ದು, ಈಗಾಗಲೇ ರಾಜ್ಯದ ಈ ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ.
ಎರಡು ಜಿಲ್ಲೆಗಳಲ್ಲಿ ಆತಂಕ
ದೀಪಾವಳಿ ಹೊತ್ತಿನಲ್ಲೇ ಮಳೆ ಅಥವಾ ಯಾವುದಾದರೊಂದು ಸೈಕ್ಲೋನ್ ಬರುವುದು ರೂಢಿ. ಆದರೆ, ರೈತರಿಗೆ ಬೆಳೆಗಳನ್ನು ಕಟಾವು ಮಾಡಿಕೊಳ್ಳಲು ಇನ್ನೂ ಆಗಿಲ್ಲ. ಈ ವರ್ಷ ಭಿತ್ತನೆ ಕೆಲಸವೇ ತಡವಾದ ಹಿನ್ನೆಲೆಯಲ್ಲಿ ಕಟಾವು ಕೂಡ ತಡವಾಗಿದೆ. ವಾರದ ಹಿಂದೆ ಸುರಿದ ಮಳೆಯಿಂದ ಈ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ರಾಗಿ, ಭತ್ತ ಸೇರಿದಂತೆ ಟೊಮ್ಯಾಟೋ, ಮತ್ತಿತರೆ ತರಕಾರಿ ಬೆಳೆಗಳಿಗೆ ಹಾನಿಯಾಗಿತ್ತು. ಅನೇಕ ಕಡೆ ರಾಗಿ, ಭತ್ತ ಬಾಗಿ ತೆನೆಗಳು ನೆಲದ ಮೇಲೆ ಮಲಗಿದ್ದವು. ಇನ್ನು, ಮತ್ತೆ ಮೂರು-ನಾಲ್ಕು ದಿನಗಳ ಚಂಡಮಾರುತದ ಮಳೆ ಅಪ್ಪಳಿಸಿದರೆ ಬೆಳೆನಷ್ಟ ಮಾತ್ರವಲ್ಲದೆ, ಮನೆಗೆ ಅರ್ಧ ಬೆಳೆ ಬರುವುದು ಕೂಡ ಕಷ್ಟ ಎನ್ನುವುದು ರೈತರ ಆತಂಕ.
ಎಲ್ಲಿ ವಾಯುಭಾರ ಕುಸಿತ?
ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ತೀವ್ರ ಪ್ರಭಾವ ಶ್ರೀಲಂಕಾಕ್ಕೆ ತಟ್ಟಿದ್ದು, ಅಲ್ಲಿ ವಿಪರೀತ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಅದೇ ರೀತಿ ತಮಿಳುನಾಡಿನಲ್ಲೂ ನಿವಾರ್ ಅಬ್ಬರ ಹೆಚ್ಚಾಗಿದ್ದು, ಮೀನುಗಾರಿಕೆ, ಕೃಷಿ ಚಟುವಟಿಕೆ ಬಂದ್ ಆಗಿದೆ. ಬಸ್, ರೈಲು, ವಿಮಾನ ಸಂಚಾರದಲ್ಲಿ ಏರುಪೇರಾಗಿದೆ. ಆಂಧ್ರ ಪ್ರದೇಶದಲ್ಲಿ ಮಳೆ ಶುರುವಾಗಿದ್ದು, ಜಗತ್ಪ್ರಸಿದ್ಧ ಯಾತ್ರಾಸ್ಥಳಗಳಾದ ತಿರುಮಲ, ಶ್ರೀಕಾಳಹಸ್ತಿಯಲ್ಲಿ ಮಳೆ ಆರಂಭವಾಗಿದೆ. ಮುಖ್ಯವಾಗಿ ತಮಿಳುನಾಡಿಗೆ ಹೊಂದಿಕೊಂಡಿರುವ ಚಿತ್ತೂರು ಮತ್ತಿತರೆ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ೧೫ರಿಂದ ೨೦ ಗಂಟೆಗಳಲ್ಲಿ ವರ್ಷಧಾರೆ ವಿಸ್ತೃತವಾಗಿ ವ್ಯಾಪಿಸುವ ಸಾಧ್ಯತೆ ಇದೆ.
courtesy: Infant Jacop@Agnelijacop
ರಾಜ್ಯದಲ್ಲಿ ಏಲ್ಲೆಲ್ಲಿ ಮಳೆ?
ಈ ಚಂಡಮಾರುತದ ಪ್ರಭಾವ ರಾಜ್ಯದ ಮೇಲೆ ತಪ್ಪದೇ ಇರುತ್ತದೆ. ಈಗಾಗಲೇ ವಾತಾವರಣದಲ್ಲಿ ಮತ್ತಷ್ಟು ತಂಪು ಉಂಟಾಗಿದೆ. ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ. ಮುಖ್ಯವಾಗಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಮಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾರುತದ ವೇಗವು ಮಂಗಳವಾರ ಬೆಂಗ್ಗೆ ಪ್ರತಿ ಗಂಟೆಗೆ ಸುಮಾರು 65 ಕಿ.ಮೀ ವೇಗದಲ್ಲಿತ್ತು. ಅದರ ವೇಗ 75 ಕಿ.ಮೀ.ಗೆ ಹೆಚ್ಚಬಹುದು. ಬುಧವಾರದ ಹೊತ್ತಿಗೆ ತಮಿಳುನಾಡಿನ ಉತ್ತರ ಭಾಗ ಹಾಗೂ ಪುದುಚೇರಿಯ ವ್ಯಾಪ್ತಿಯಲ್ಲಿ ಈ ವೇಗ ಪ್ರತಿ ಗಂಟೆಗೆ 100ರಿಂದ 120 ಕಿ.ಮೀ.ವರೆಗೂ ಇರಬಹುದು ಎಂದು ಚೆನ್ನೈ ಹವಾಮಾನ ಇಲಾಕೆಯ ಮೂಲಗಳನ್ನು ಪ್ರಸ್ತಾಪಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ತರಕಾರಿ, ಹೂವಿಗೆ ನಷ್ಟ
ನಿವಾರ್ ಚಂಡಮಾರುತದಿಂದ ಕೋಲಾರ, ಚಿಕ್ಕಬಳ್ಳಾಪುರದಿಂದ ತಮಿಳುನಾಡು ಕಡೆ ಹೋಗುತ್ತಿದ್ದ ತರಕಾರಿ ಮತ್ತಿತರೆ ಪದಾರ್ಥಗಂ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿರುವ ಹೂವು, ಟೊಮ್ಯಾಟೋ, ಹುರುಳಿಕಾಯಿ, ಹೀರೇಕಾಯಿ ಮತ್ತಿತರೆ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಈ ಚಂಡಮಾರುತದ ಪ್ರಭಾವ ಒಂದು ವಾರವಾದರೂ ಮಾರುಕಟ್ಟೆಗಳ ಮೇಲೆ ಇರಲಿದ್ದು, ರೈತರು ಕಂಗಾಲಾಗಿದ್ದಾರೆ.