ಹೈದರಾಬಾದ್: ಒಂದೆಡೆ ಕೋವಿಡ್; ಇನ್ನೊಂದೆಡೆ ನಿವಾರ್ ಚಂಡಮಾರುತ. ಈ ಮಧ್ಯೆ ರಾಕಿಂಗ್ಸ್ಟಾರ್, ರಾಕಿಭಾಯ್ ಯಶ್ ಅವರು ಹೈದರಾಬಾದ್ ಸೇರಿಕೊಂಡಿದ್ದಾರೆ.
ಗುರುವಾರದಿಂದ ಇಲ್ಲಿನ ರಾಮೋಜಿ ಫಿಲ್ಮ್ಸಿಟಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ʼಕೆಜಿಎಫ್ ಚಾಪ್ಟರ್-೨ʼ ಚಿತ್ರದ ಕೊನೆಯ ಶೆಡ್ಯೂಲ್ ಆರಂಭವಾಗಿದ್ದು, ಡಿಸೆಂಬರ್ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಕೋವಿಡ್ ಕಾರಣಕ್ಕೆ ಫೆಬ್ರವರಿ ನಂತರ ಈ ಚಿತ್ರದ ಶೂಟಿಂಗ್ ಸ್ಥಗಿತವಾಗಿತ್ತು. ಆಮೇಲೆ, ಲಾಕ್ಡೌನ್ ಬಂದು ಸಿನಿಮಾಗೆ ಸಂಬಂಧಿಸಿದ ಬಹುತೇಕ ಎಲ್ಲ ಕೆಲಸಗಳು ಸ್ಥಗಿತವಾಗಿದ್ದವು.
ಬೆಂಗಳೂರಿನಿಂದ ಹೈದರಾಬಾದ್ಗೆ ಬಂದ ಯಶ್, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರಲ್ಲದೆ, ಅಲ್ಲಿಂದ ಅವರು ನೇರವಾಗಿ ರಾಮೋಜಿ ಫಿಲ್ಮ್ಸಿಟಿ ಸೇರಿಕೊಂಡಿದ್ದಾರೆ. ಅಲ್ಲಿ ಚಿತ್ರಕ್ಕಾಗಿ ದೊಡ್ಡ ಸೆಟ್ ಹಾಕಲಾಗಿದೆ. ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರತಂಡದ ಎಲ್ಲರೂ ಅಲ್ಲೇ ಬೀಡುಬಿಟ್ಟಿದ್ದಾರೆ.
2018ರಲ್ಲಿ ಕೆಜಿಎಫ್ ಚಾಪ್ಟರ್-1 ರಿಲೀಸ್ ಆಗಿತ್ತು. ಕನ್ನಡ, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಂದಿದ್ದ ಈ ಚಿತ್ರವು ಊಹೆಗೂ ಮೀರಿದ ಗೆಲುವು ಸಾಧಿಸಿತ್ತು. ಚಾಪ್ಟರ್-2ರಲ್ಲಿ ಬಾಲಿವುಡ್ ಹೀರೋ ಸಂಜಯ ದತ್ ವಿಲನ್ ʼಅಧಿರಾʼ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ, ಜತೆಗೆ; ಪ್ರಕಾಶ್ ರಾಜ್, ರವೀನಾ ಟಂಡನ್ ಮುಂತಾದವರು ನಟಿಸುತ್ತಿದ್ದಾರೆ.
ಚಿತ್ರತಂಡದ ಮೂಲವೊಂದರ ಮಾಹಿತಿಯಂತೆ, ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಚಾಪ್ಟರ್-2 ರಿಲೀಸ್ ಆಗುತ್ತದೆ ಎನ್ನಲಾಗಿದೆ.