ಆಡಳಿತಾರೂಢ ಬಿಜೆಪಿಗೆ ಏನಾಗಿದೆ? ದೇಶ ಮೊದಲು, ಉಳಿದಿದ್ದೆಲ್ಲ ಆಮೇಲೆ ಎನ್ನುತ್ತಿದ್ದ ಆ ಪಕ್ಷದಲ್ಲಿ ನಡೆಯುತ್ತಿರುವುದೇನು? ತನ್ನ ಪಾಲಿನ ದಕ್ಷಿಣ ಭಾರತದ ಗೇಟ್‌ವೇ ಅಂತ ಬೀಗುವಂತೆ ಮಾಡಿದ್ದ ಕರ್ನಾಟಕದಲ್ಲಿ ಕಮಲ ಪಾಳೆಯ ಒಡೆದ ಮನೆಯಾಗಿದೆಯಾ? ವಿಧಾನಸೌಧದಷ್ಟೇ ಸದೃಢವಾಗಿ ಮೇಲ್ನೋಟಕ್ಕೆ ಕಂಡರೂ ಒಳಗೊಳಗೆ ಜಾತಿವಾರು, ಪ್ರಾಂತ್ಯವಾರು ಬಿರುಕುಬಿಟ್ಟ ಗೋಡೆಯಂತಾಗಿದೆಯಾ?
ಈ ಸರಣಿ ಪ್ರಶ್ನೆಗಳ ನಡುವೆ ಇನ್ನೊಂದು ಪ್ರಶ್ನೆಯೂ ಇದೆ. ಮೋದಿ, ಅಮಿತ್ ಶಾ ಮತ್ತು ನಡ್ಡಾ ನೇತೃತ್ವದಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ. ಸರಿ; ಹಾಗಾದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವ, ಮಂಗಳೂರು ಸಂಸದ ನಳೀನ್‌ಕುಮಾರ್ ಕಟೀಲ್ ಅಧ್ಯಕ್ಷರಾಗಿರುವ ರಾಜ್ಯ ಬಿಜೆಪಿಯಲ್ಲಿ ಅದೆಲ್ಲ ಇಲ್ಲವಲ್ಲ!
ಕರ್ನಾಟಕದಲ್ಲಿ ಮನೆಯೊಂದು, ಮೂರು ಬಾಗಿಲು ಎಂಬ ಲೆಕ್ಕವಲ್ಲ. ಮನೆಯೊಂದು ಹತ್ತನ್ನೊಂದು, ಅದರ ಮೇಲೆ ಇನ್ನೊಂದು ಬಾಗಿಲು ಎನ್ನುವಂತಾಗಿದೆ ಬಿಜೆಪಿಯ ಕಥೆ. ಏಕೆ ಹೀಗೆ? ಹೆಸರಿಗಷ್ಟೇ ಶಿಸ್ತಿನ ಪಕ್ಷ, ಒಳಗೆಲ್ಲ ಏಕಚಕ್ರಾಧಿಪತ್ಯ!! ಇದಪ್ಪಾ ರಾಜ್ಯ ಬಿಜೆಪಿಯ ಸಿಂಗಲ್ ಲೈನಿನ ಚಿತ್ರಣ.
ಯಡಿಯೂರಪ್ಪ, ಮತ್ತವರ ಮಗ ವಿಜಯೇಂದ್ರ, ಅನೇಕ ವಿರಶೈವ-ಲಿಂಗಾಯತ ಶಾಸಕರು ಒಂದು ಬಾಗಿಲಲ್ಲಿ ಬಂದುಹೋಗುತ್ತಿದ್ದರೆ, ಇನ್ನೊಂದು ಬಾಗಿಲಲ್ಲಿ ಕಟೀಲ್, ನಿರ್ಮಲ್‌ಕುಮಾರ ಸುರಾನ ಹಾಗೂ ಕೆಲ ಸಂಘಪರಿವಾರಿ ನಿಷ್ಠರು ಓಡಾಡುತ್ತಿದ್ದಾರೆ. ಈ ಎರಡನೇ ಬಾಗಿಲಿಗೆ ʼಸಂತೋಷʼದ ಸಾಥ್ ಇರುವುದರಿಂದ ಹೈಕಮಾಂಡ್‌ಗೆ ಸಹಜವಾಗಿಯೇ ಈ ಬಾಗಿಲ ಮೇಲೆ ಹೆಚ್ಚು ಒಲವು. ಉಳಿದಂತೆ; ಮೂರನೇ ಬಾಗಿಲು, ಅಂದರೆ; ಅಕ್ಕಪಕ್ಕದ ಪಕ್ಷಗಳಿಂದ ಬಿಜೆಪಿಗೆ ಹಾರಿಬಂದು ಭರ್ಜರಿ ಅಧಿಕಾರ ಅನುಭವಿಸುತ್ತಿರುವ ವಲಸಿಗರದ್ದು. ಇವರೋ, ತಾವಾಯಿತು ಮತ್ತೂ ತಮ್ಮ ಬಾಗಿಲಾಯಿತು ಎಂದು ನೆಮ್ಮದಿಯಾಗಿದ್ದಾರೆ. ಮುಖ್ಯಮಂತ್ರಿ ಕೃಪೆಯಿಂದ ಅವರಿಗೆ ವಹಿಸಿರುವ ಖಾತೆಗಳಿಗೆ ‘ಸಾಕಾ’ಗುವಷ್ಟು ಅನುದಾನವೂ ಸಿಗುತ್ತಿದೆ.
ಆದರೆ, ಈ ವಲಸಿಗರ ಪೈಕಿ ಬೆಳಗಾವಿ ಸಾಹುಕಾರ ರಮೇಶ ಜಾರಕಿಹೊಳಿ ಇಡುತ್ತಿರುವ ನಿಗೂಢ ಹೆಜ್ಜೆಗಳು ಪಕ್ಷದ ಮೂಲನಿವಾಸಿಗಳಿಗೆ ಇರಲಿ, ಅವರ ಅಕ್ಕಪಕ್ಕದಲ್ಲೇ ಇರುವ, ತಮ್ಮ ಜತೆಯಲ್ಲೇ ಜಂಪ್ ಹೊಡೆದುಬಂದ ಗೆಳೆಯರಿಗೂ ಕಾಣುತ್ತಿಲ್ಲ. ಜಾರಕಿಹೊಳಿ ಎಲ್ಲಿ ಮುಳುಗುತ್ತಾರೆ? ಎಲ್ಲಿ ಮೇಲೆದ್ದು ಬರುತ್ತಾರೆಂಬುದೇ ಗೊತ್ತಾಗುತ್ತಿಲ್ಲ. ಬೆಳಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಕಾಣಿಸಿಕೊಂಡರೆ, ಮಧ್ಯಾಹ್ನದ ಹೊತ್ತಿಗೆ ಮುಂಬಯಿ, ಸಂಜೆ ಕಾಲಕ್ಕೆ ದಿಲ್ಲಿಯಲ್ಲಿ ಪ್ರತ್ಯಕ್ಷರಾಗುತ್ತಾರೆ. ಬಿಜೆಪಿ ನಾಯಕರೊಬ್ಬರು ಹೇಳುವ ಪ್ರಕಾರ, “ಯಡಿಯೂರಪ್ಪ ಸರಕಾರದ ಯಾವೊಬ್ಬ ಸಚಿವರೂ ಜಾರಕಿಹೊಳಿಯಷ್ಟು ಬ್ಯಾಕ್ ಟು ಬ್ಯಾಕ್ ದಿಲ್ಲಿಗೆ ಹೋಗುತ್ತಿಲ್ಲ. ಯಾರನ್ನಾದರೂ ಈ ಬಗ್ಗೆ ಕೇಳಿದರೆ, ಅವರು ತಮ್ಮ ಇಲಾಖೆ ಕೆಲಸಕ್ಕೆ ಅಂತ ಹೋಗಿರಬಹುದು ಎನ್ನುತ್ತಾರೆ. ಜಲಸಂಪನ್ಮೂಲ ಇಲಾಖೆ ಒಂದರ ಕೆಲಸಕ್ಕೆ ಇಷ್ಟು ಸಲ ಹೋಗಬೇಕೆ? ಹಾಗಾದರೆ, ಹಿರಿಯ ಸಚಿವರಾದ ಅಶೋಕ್, ಡಾ.ಅಶ್ವತ್ಥನಾರಾಯಣ, ಈಶ್ವರಪ್ಪ ಇವರಿಗೆಲ್ಲ ದೇಶದ ರಾಜಧಾನಿಯಲ್ಲಿ ಕೆಲಸವೇ ಇರುವುದಿಲ್ಲವೇ? ಯಡಿಯೂರಪ್ಪ ಸರಕಾರದಲ್ಲಿ ಜಲಸಂಪನ್ಮೂಲ ಖಾತೆಯೊಂದೇ ಇರುವುದಾ?” ಎಂದು ಪ್ರಶ್ನೆ ಕೇಳಿದ ನಮ್ಮನ್ನೇ ಮರು ಪ್ರಶ್ನಿಸುತ್ತಾರೆ ಬಿಜೆಪಿ ನಾಯಕರೊಬ್ಬರು.
ಇನ್ನು; ವಲಸಿಗರಲ್ಲಿ ಈಗ ಮೊದಲಷ್ಟು ಕುಚುಕು ಗೆಳೆತನ ಉಳಿದಿಲ್ಲ. ಕುರ್ಚಿ ಸಿಕ್ಕಿದ ಮೇಲೆ ಭರ್ಜರಿ ಪೋರ್ಟುಪೊಲಿಯೋಗಳು ಬಂದ ಮೇಲೆ ಆ ಟೀಮಿನಲ್ಲೂ ಧ್ರುವೀಕರಣ ಆಗುತ್ತಿದೆ. ಕೆಲವರು ಯಡಿಯೂರಪ್ಪ ಬಿಟ್ಟರೆ ಗತಿ ಇಲ್ಲ ಎಂದು ಅವರ ಸುತ್ತಲೇ ಪ್ರದಕ್ಷಣಿ ಹಾಕುತ್ತಿದ್ದರೆ, ಇನ್ನು ಕೆಲವರು ಬಿಎಸ್‌ವೈ ಕುರ್ಚಿಯಿಂದ ಇಳಿದರೆ, ನಮಗೆ ಇನ್ನೊಬ್ಬರೂ ಇರಲಿ ಎಂದು ಆಗಾಗ ಸಂಘ ಪರಿವಾರದ ಕಚೇರಿ ಹಾಗೂ ದಿಲ್ಲಿಯಲ್ಲಿರುವ ಸಂತೋಷ್ ಅವರ ನಿವಾಸಕ್ಕೂ ಎಡತಾಕುತ್ತಿದ್ದಾರೆ! ಅಂದರೆ; ಆ ವಲಸಿಗರಲ್ಲಿ ಸಿಎಂ ಮೇಲಿನ ಪರಮನಿಷ್ಠೆಯೆಂಬುದು ಮೆಲ್ಲಮೆಲ್ಲನೆ ಇಳಿಜಾರಿನತ್ತ ಸಾಗುತ್ತಿದೆ.
ಪಕ್ಷದ ಹಿರಿಯ ಸಚಿವರೊಬ್ಬರು ಗಮನಿಸುತ್ತಿರುವ ಹಾಗೆ, ಯಡಿಯೂರಪ್ಪ ಅವರ ಸುತ್ತ ಅವರ ಪುತ್ರ ವಿಜಯೇಂದ್ರರ ಪ್ರಭಾವಳಿ ಹೆಚ್ಚುತ್ತಿದ್ದಂತೆಲ್ಲ, ಸಂಘಕ್ಕೂ ನಿಷ್ಠರಾಗಿರುವ ವೀರಶೈವ ಲಿಂಗಾಯತ ನಾಯಕರು, ಅನ್ಯಜಾತಿಗಳ ಪ್ರಬಲ ನಾಯಕರು ಅನುಗ್ರಹ, ಕೃಷ್ಣಾದತ್ತ ಸುಳಿಯುವುದು ಕಡಿಮೆಯಾಗುತ್ತಿದೆ. ಅವರ ಹಾಜರಾತಿ ಚಾಮರಾಜಪೇಟೆ ಹಾಗೂ ದಿಲ್ಲಿಯಲ್ಲಿ ಹೆಚ್ಚು ಕಾಣುತ್ತಿದೆ. ಸಿಎಂ ಕಚೇರಿಯಲ್ಲಿ ತಮ್ಮ ಕೆಲಸವಾಗುತ್ತಿಲ್ಲ ಎಂದು ಗೊಣಗುತ್ತಿರುವ ಕೆಲವರು ವಿರೋಧಿ ಬಣದ ನಾಯಕರಲ್ಲಿ ದುಃಖ ತೋಡಿಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ಶಕ್ತಿ ಏನು?
ಮುಖ್ಯಮಂತ್ರಿಗೆ ತಮ್ಮ ಜಾತಿಯ ಬಲ ಬಿಟ್ಟರೆ ಬೇರೇನೂ ಇಲ್ಲ. ಈ ಮಾತನ್ನು ಕಾಂಗ್ರೆಸ್-ಜೆಡುಎಸ್ ನಾಯಕರು ಮಾತ್ರವಲ್ಲ, ಸಿಎಂ ನಿಷ್ಠರೇ ಮೆಲುದನಿಯಲ್ಲಿ ಹೇಳುತ್ತಿರುವ ಸಂಗತಿ. ಇದು ಗುಟ್ಟಾಗೇನೂ ಉಳಿದಿಲ್ಲ. ಲಿಂಗಾಯತರ ಮೇಲಿನ ಅತಿಯಾದ ವ್ಯಾಮೋಹದಿಂದ ಸಿಎಂ ಇತರೆ ಜಾತಿಗಳ ಬಲ ಕಳೆದುಕೊಳ್ಳುತ್ತಿದ್ದಾರೆ. ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಆರ್.ಟಿ.ವಿಠ್ಠಲಮೂರ್ತಿ ಅವರೊಂದಿಗೆ ಸಿಕೆನ್ಯೂಸ್ ನೌ ಸಂವಾದ ನಡೆಸಿದೆ.
ಅವರು ಹೇಳುವಂತೆ; “ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯವಾದ ಒಬ್ಬ ನಾಯಕನೂ ಇಲ್ಲ. ಫೀಲ್ಡಿನಲ್ಲಿ ನಿಂತು ಅವರಿಗೆ ಕೌಂಟರ್ ಕೊಡುವ ಒಬ್ಬರೂ ಕಾಣುತ್ತಿಲ್ಲ. ಪಕ್ಷದಲ್ಲಿ ಅವರ ನಿಷ್ಠರು ವಿಜಯೇಂದ್ರ ಅವರಲ್ಲಿ ಯಡಿಯೂರಪ್ಪ ಅವರನ್ನು ಕಾಣುತ್ತಿದ್ದಾರೆ. ಹೀಗಾಗಿ ಅಶೋಕ್ ಇರಬಹುದು, ಈಶ್ವರಪ್ಪ ಇರಬಹುದು, ಗೋವಿಂದ ಕಾರಜೋಳ ಇರಬಹುದು, ಕೊನೆಗೆ ಕೆಲದಿನಗಳ ಹಿಂದೆ ಸಂಘದ ನೆರಳಲ್ಲಿ ಸಿಎಂ ಕುರ್ಚಿ ಕನಸು ಕಂಡ ಅರವಿಂದ್ ಬೆಲ್ಲದ್ ಇರಬಹುದು.., ಇವರಾರೂ ನೇರವಾಗಿ ಯಡಿಯೂರಪ್ಪ ವಿರುದ್ಧ ಮಾತನಾಡುವ ಧೈರ್ಯ ತೋರುತ್ತಿಲ್ಲ. ಅಂಥ ಧೈರ್ಯವೂ ಇವರಿಗಿಲ್ಲ. ಅವರು ಇಳಿದರೂ ಇವರಿಗೆಲ್ಲ ಮುಂದೆ ಯಡಿಯೂರಪ್ಪ ಬೆಂಬಲ ಬೇಕೇಬೇಕು.”
ಇದು ಒಂದು ಕಡೆಯಾದರೆ, ಇನ್ನೊಂದೆಡೆ ಯಡಿಯೂರಪ್ಪ ಕಂಪ್ಲೀಟ್ ಫ್ಯಾಮಿಲಿ ಸೆಂಟ್ರಿಕ್ ಆಗಿದ್ದಾರೆ. ತಾವು ಅಧಿಕಾರ ಬಿಡುವ ಮೊದಲು ಹೇಗಾದರೂ ಸರಿ, ವಿಜಯೇಂದ್ರ ಅವರನ್ನು ಫ್ರಂಟ್‌ಲೈನಿಗೆ ತರಲೇಬೇಕು ಎಂದು ಅವರು ಹೊರಟಿದ್ದಾರೆ. ಈಗಲ್ಲದಿದ್ದರೆ ಮತ್ತೆಂದು ಅಲ್ಲ ಎನ್ನುವುದು ಸಿಎಂಗೆ ಗೊತ್ತಿದೆ. ಅದಕ್ಕೆ ಅವರನ್ನು ಕೆ.ಆರ್.ಪೇಟೆ, ಶಿರಾ ಕ್ಷೇತ್ರಗಳಲ್ಲಿ ಬಿಟ್ಟರು. ಈಗ ಬಸವಕಲ್ಯಾಣ ಹಾಗೂ ಮಸ್ಕಿಗೂ ಕಳಿಸುತ್ತಾರೆ. ಅಧಿಕಾರ ಕೇಂದ್ರ ಸ್ಥಾನದಲ್ಲಿ ಪುತ್ರನಿಗೆ ಅವರು ಹೆಚ್ಚೆಚ್ಚು ಮಣೆ ಹಾಕುತ್ತಿದ್ದಾರೆ. ಸಚಿವರು, ಎಮ್ಮೆಲ್ಯೆಗಳು, ಇತರೆ ಲೀಡರುಗಳು ಇಷ್ಟವಿಲ್ಲದಿದ್ದರೂ ವಿಜಯೇಂದ್ರ ಅವರಲ್ಲಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿಯನ್ನು ಸೃಷ್ಟಿಸಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್‌ರಂಥ ಹಿರಿಯ ಶಾಸಕರು ಸಡ್ಡು ಹೊಡೆಯಲು ಮುಂದಾಗಿದ್ದೇ ಈ ಕಾರಣಕ್ಕೆ. ಹೈಕಮಾಂಡ್ ಅಂಗಳದಲ್ಲಿ ಯಡಿಯೂರಪ್ಪ ವಿರುದ್ಧ ಅಸಹನೆ ಹೆಚ್ಚಲಿಕ್ಕೂ ಈ ಪುತ್ರ ವ್ಯಾಮೋಹವೇ ಕಾರಣ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಜೆಪಿ ಹಿರಿಯ ನಾಯಕರೊಬ್ಬರು.
ಸಿಎಂ ಕನಸು; ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್
ಯಡಿಯೂರಪ್ಪ ಎಷ್ಟೇ ಹಾರಾಡಿದರೂ ಅವರು ಕುರ್ಚಿ ಬಿಡಿವುದು ಕಾಯಂ ಎಂದು ಒಳಗೊಳಗೇ ಗುನುಗುತ್ತಿರುವ ನಾಯಕರು ಇತ್ತ ಯಡಿಯೂರಪ್ಪ ಆಗಲಿ, ಅತ್ತ ಅವರ ವಿರೋಧಿ ಗ್ಯಾಂಗ್ ಅನ್ನಾಗಲಿ ಎದುರು ಹಾಕಿಕೊಳ್ಳುವ ಧೈರ್ಯ ತೋರುತ್ತಿಲ್ಲ. ಒಬ್ಬರು ಒಕ್ಕಲಿಗರ ಕೋಟಾದಲ್ಲಿ ಸಿಎಂ ಗಾದಿ ಸಿಕ್ಕೀತು ಎಂದು ಕನಸು ಕಾಣುತ್ತಿದ್ದರೆ, ಮತ್ತೊಬ್ಬರು ಅಹಿಂದ ಲೆಕ್ಕದಲ್ಲಿ ವಿಧಾನಸೌಧ ಮೂರನೇ ಮಹಡಿ ಏರಬಹುದು ಎಂಬ ತವಕದಲ್ಲಿದ್ದಾರೆ. ಮಗದೊಬ್ಬರು ದಲಿತ ಸಿಎಂ ಟ್ರಂಪ್‌ಕಾರ್ಡಿನ ಮೇಲೆ ಧುತ್ತೆಂದು ಬಂದು ಕುರ್ಚಿಯೇರುವ ಡ್ರೀಮಿನಲ್ಲಿದ್ದಾರೆ. ಇದು ಹೀಗಿದ್ದರೆ, ಯಡಿಯೂರಪ್ಪ ಅಖಾಡದಲ್ಲಿ ʼಸನ್‌ರೈಸ್ʼ ಆಗುತ್ತಿದ್ದರೆ ಅವರ ನಂತರ ನಾವೇ ಎಂದು ಪೋಸು ಕೊಡುತ್ತಿದ್ದವರೆಲ್ಲ ಸೈಡಲೈನಿಗೆ ಹೋಗಿದ್ದಾರೆ. ಹಿಂದೆ, ದೇವೇಗೌಡರ ಫ್ಯಾಮಿಲಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ರೈಸ್ ಆಗಬೇಕಾದರೆ ಹೀಗೆಯೇ ಆಗಿತ್ತು. ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್ ಆದಿಯಾಗಿ ಅನೇಕ ಲೀಡರುಗಳು ಬಲವಂತವಾಗಿ ನೇಪಥ್ಯಕ್ಕೆ ತಳ್ಳಲ್ಪಟ್ಟರು. ಈಗ ಬಿಜೆಪಿಯಲ್ಲಿ ಆಗುತ್ತಿರುವುದೂ ಇದೆ. ಕುಟುಂಬ ರಾಜಕಾರಣವೇ ವಿಜೃಂಭಿಸುವಾಗ, ಆ ಕುಟುಂಬದಿಂದಲೇ ಉತ್ತರಾಧಿಕಾರಿ ಬರುವ ಹಾಗಿದ್ದರೆ, ಮಹತ್ವಾಕಾಂಕ್ಷೆ ಹೊಂದಿರುವ ನಾಯಕರು ಅಕ್ಕಪಕ್ಕ ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ವರ್ಷದ ಹಿಂದೆ ಯಡಿಯೂರಪ್ಪ ಅಕ್ಕಪಕ್ಕದಲ್ಲಿ ಜಯ-ವಿಜಯರಂತೆ ನಿಂತಿದ್ದ ನಾಯಕರೆಲ್ಲ ದೂರ ಸರಿದಿದ್ದಾರೆ. ಆದರೂ, ಅವರಿಗೆ ಯಡಿಯೂರಪ್ಪ ಬೆಂಬಲವಿಲ್ಲದೆ ಮುಂದೆ ಸಾಗಲು ಯಾರಿಗೂ ಸಾಧ್ಯವೇ ಇಲ್ಲ. ಲಿಂಗಾಯತರು ಕೈಕೊಡುತ್ತಾರೆಂಬ ಭೀತಿ ಅವರಲ್ಲಿ ಹೆಪ್ಪುಗಟ್ಟಿದೆ.
ಹೀಗೆ; ಹೇಗೆ ಲೆಕ್ಕಹಾಕಿ ನೋಡಿದರೂ ಯಡಿಯೂರಪ್ಪ ಅವರೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅವರನ್ನು ಬಿಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಊಹಿಸಿಕೊಳ್ಳುವಂತೆಯೇ ಇಲ್ಲ. ವೀರಶೈವ ಲಿಂಗಾಯಿತರ ನಿಗಮ ಮಾಡಿ ಅದಕ್ಕೆ ಐದುನೂರು ಕೋಟಿ ರೂ. ಅನುದಾನ ಕೊಟ್ಟ ಅವರ ʼಎದೆಗಾರಿಕೆʼ ಎಂಥದ್ದು ಎಂಬುದು ಹೈಕಮಾಂಡ್‌ಗೂ ಗೊತ್ತಿದೆ. ಜತೆಗೆ, ವೀರಶೈವ ಲಿಂಗಾಯತರನ್ನು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸುವ ನಿರ್ಧಾರಕ್ಕೆ ಈ ನಿರ್ಧಾರದ ಬಗ್ಗೆ ಯಾರೊಬ್ಬರೂ ಸೊಲ್ಲೆತ್ತದ ಹಾಗೆ ಆಗಿದೆ. ಬೇಕಾದರೆ, ಬೇರೆ ಜಾತಿಗಳ ನಿಗಮ, ಪ್ರಾಧಿಕಾರ ಕೇಳಬಹುದು. ಅಷ್ಟುಬಿಟ್ಟರೆ, ವೀರಶೈವ ಲಿಂಗಾಯಿತರ ನಿಗಮದ ಬಗ್ಗೆ ಚಕಾರ ಎತ್ತುವಂತಿಲ್ಲ. ಅದಲ್ಲದೆ, ಮುಖ್ಯಮಂತ್ರಿ ಪಡಸಾಲೆಯಲ್ಲಿ ನಡೆಯುತ್ತಿರುವುದು ಏನು? ವಿಜಯೇಂದ್ರ ಅಂಗಳದಲ್ಲಿ ಏನೇನು ಆಗುತ್ತಿದೆ? ಎಂಬ ಮಾಹಿತಿ ಮೋದಿ, ಶಾ, ನಡ್ಡಾ ಮತ್ತು ಸಂತೋಷ್ ಅವರಿಗೆ ಗೊತ್ತಿಲ್ಲದ್ದೇನಲ್ಲ. ಅವರೆಲ್ಲರೂ ಒಂದು ಸಮಯಕ್ಕಾಗಿ ಕಾಯುತ್ತಿರಬಹುದು. ಹೇಳಿಕೇಳಿ, ವೀರೇಂದ್ರ ಪಾಟೀಲರ ಎಪಿಸೋಡು ಇದ್ದೇ ಇದೆಯಲ್ಲ. ಅವರನ್ನು ಇಳಿಸಿದ ಕಾಂಗ್ರೆಸ್ಸಿಗೆ ಲಿಂಗಾಯತ-ವೀರಶೈವರು ಹೇಗೆ ಆಘಾತ ಕೊಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ರಿಸ್ಕ್ ಬೇಡ ಎನ್ನುವ ಲೆಕ್ಕದಲ್ಲಿ ದಿಲ್ಲಿ ನಾಯಕರು ಇರಬಹುದು ಎನ್ನುತ್ತಾರೆ ವಿಠ್ಠಲಮೂರ್ತಿ.
Courtesy: Vijayendra Yeddyurappa@BYVijayendra
ವಿಜಯೇಂದ್ರ ರೈಸಿಂಗ್ ಹೇಗಿದೆ?
ಈ ಸನ್‌ರೈಸಿಂಗ್ ಅದ್ಭುತವಾಗಿಯೇ ನಡೆಯುತ್ತಿದೆ. ಅಕ್ಕಪಕ್ಕದವರು ಮುಟ್ಟಿ ನೋಡಿಕೊಳ್ಳುವಷ್ಟು ಪ್ರಖರವಾಗಿ ಆಗುತ್ತಿದೆ. ಯಡಿಯೂರಪ್ಪ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು (ಎಂ.ಬಿ.ಪಾಟೀಲ್) ಅನ್ಯಪಕ್ಷದಿಂದ ಎರವಲು ಪಡೆಯಲು ಇಷ್ಟವಿಲ್ಲ. ಅದೇನಿದ್ದರೂ ತಮ್ಮ ಕುಟುಂಬದಿಂದಲೇ ಬರಬೇಕು ಎನ್ನುವುದು ಅವರ ಉದ್ದೇಶ. ಹೀಗಾಗಿಯೇ ಅವರು; ತಮ್ಮ ಸಮುದಾಯದ ನಾಯಕನಾಗಿ ಬೆಳೆಯಲು ವಿಜಯೇಂದ್ರಗೆ ವಿಪುಲ ಅವಕಾಶಗಳನ್ನು ನೀಡುತ್ತಿದ್ದಾರೆ. ಈಗ ನಡೆದಿರುವ ನಿಗಮ-ಮಂಡಳಿ ನೇಮಕಾತಿ, ಹೊಸ ನಿಗಮ-ಮಂಡಳಿಗಳ ಸ್ಥಾಪನೆ, ರೇಣುಕಾಚಾರ್ಯ ಅಂಥವರ ನಿರಂತರ ಹೇಳಿಕೆಗಳೆಲ್ಲ ಈ ಸನ್‌ರೈಸ್ ಪಾಲಿಟಿಕ್ಸ್‌ನ ಭಾಗವೇ. ರಾಜ್ಯದಲ್ಲಿ ಅತಿದೊಡ್ಡ ಸಮುದಾಯವಾದ ವೀರಶೈವ-ಲಿಂಗಾಯತ ರಾಜಕಾರಣದಲ್ಲಿ ತಮ್ಮ ಮನೆಯ ಲೆಗಸಿ ಮುಕ್ಕಾಗದಂತೆ ಮುಂದುವರಿಯಬೇಕು ಎನ್ನುವುದು ಯಡಿಯೂರಪ್ಪ ಅವರ ಪರಮೋದ್ದೇಶ. ಆ ನಿಟ್ಟಿನಲ್ಲಿ ಅವರು ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಅದೂ ಹೈಕಮಾಂಡ್ ಕಣ್ಣು ಕುಕ್ಕುವಂತಿದೆ ಎನ್ನುವುದು ವಿಠ್ಠಲಮೂರ್ತಿ ಅವರ ಮಾತು.
ಬಿ.ಎಲ್ ಸಂತೋಷ್, ರಮೇಶ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಕಥೆ ಏನು?
ನಿಜಕ್ಕಾದರೆ, ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ನಲ್ಲಿ ಕೊಂಚ ಸೀರಿಯಸ್ಸಾಗಿ ಪರಿಗಣಿಸಲಾಗುತ್ತಿತ್ತು. ಆದರೆ, ಬಿಜೆಪಿಯಲ್ಲಿ ಅವರಿಗೆ ಮೊದಲಿದ್ದಷ್ಟು ಪ್ರಾಮುಖ್ಯತೆ ಇದ್ದಂತೆ ಕಾಣುತ್ತಿಲ್ಲ. ಮುಖ್ಯವಾಗಿ ವಲಸಿಗರ ಟೀಮಿನಲ್ಲೇ ಈಗ ಅಪಸ್ವರಗಳು ಎದ್ದಿವೆ. ಮಾತೆತ್ತಿದರೆ ಇವರು ದಿಲ್ಲಿಗೆ ಹೋಗುವುದು, ಚನ್ನಪಟ್ಟಣದಲ್ಲಿ ಸೋತಿದ್ದ ಸಿ.ಪಿ.ಯೋಗೀಶ್ವರ್ ಪರ ಬ್ಯಾಟಿಂಗ್ ಮಾಡುತ್ತಿರುವುದು ವಿಶ್ವನಾಥ್, ಎಂಟಿಬಿ ನಾಗಾರಾಜ್ ಮುಂತಾದವರಿಗೆ ಸರಿಕಾಣುತ್ತಿಲ್ಲ ಎಂಬ ಸಂಗತಿ ಈಗ ಗುಟ್ಟಾಗೇನೂ ಉಳಿದಿಲ್ಲ. ಜತೆಗೆ, ಅವರ ಜತೆಯಲ್ಲೇ ಬಂದ ಕೆಲವರು ವಿಧಾನಸೌಧ, ವಿಕಾಸಸೌಧದಲ್ಲಿ ಸಿಕ್ಕಿದ ಚೇಂಬರ್‌ಗಳಲ್ಲಿ ಹಾಯಾಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಪರ್ಯಾಯವಾಗಿ ಬಿಜೆಪಿಯಲ್ಲಿ ಬೆಳೆಯಬೇಕೆನ್ನುವ ಆಸೆ ಇದೆ. ಆದರೆ ಇಬ್ಬರ ಕ್ಯಾಲಿಬರ್ರೇ ಬೇರೆ. ಒಂದು ರೀತಿಯಲ್ಲಿ ಜಾರಕಿಹೊಳಿ ಪಾಳೆಯಗಾರಿಕೆ ಮನಸ್ಥಿತಿಯವರು. ಯಡಿಯೂರಪ್ಪ ಇರಲಿ ಅಥವಾ ಕೆಳಗಿಳಿಯಲಿ, ಪಕ್ಷದಲ್ಲಿ ತಮಗೊಂದು ಸ್ಥಾನವಿರಬೇಕು ಎಂಬುದಷ್ಟೇ ಅವರ ಲೆಕ್ಕಾಚಾರ. ಅದಕ್ಕಾಗಿ ಅವರು ದಿಲ್ಲಿ, ಬಾಂಬೆ ಅಂತ ಸುತ್ತಾಡುತ್ತಿದ್ದಾರೆ, ಯೋಗಿಶ್ವರ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗೆ ನೋಡುತ್ತಾ ಹೋದರೆ ಬಿಜೆಪಿಯಲ್ಲಿ ಅನೇಕ ಪಾಳೆಯಪಟ್ಟುಗಳಿವೆ. ಅವರಲ್ಲಿ ಏಕತೆ ಇಲ್ಲ. ಹೀಗಾಗಿ ಎಲ್ಲರೂ ಬಲಿಷ್ಠವಾದ ಯಡಿಯೂರಪ್ಪ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಇವರೆಲ್ಲರಿಗೂ ಯಡಿಯೂರಪ್ಪ ಬೇಕೆಬೇಕು. ಒಂದು ವೇಳೆ ಯಡಿಯೂರಪ್ಪಗೆ ಪರ್ಯಾಯವಾದ ನಾಯಕತ್ವ ಇದ್ದಿದ್ದರೆ ಇವೆರೆಲ್ಲರೂ ಅಲ್ಲಿಗೂ ಎಡತಾಕುತ್ತಿದ್ದರು. ಒಟ್ಟಾರೆಯಾಗಿ ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದರೆ, ಬ್ರಿಟೀಷ್ ಪೂರ್ವ ಭಾರತದಂತೆ ಕಾಣುತ್ತಿದೆ ಎಂದು ವಿಶ್ಲೇಷಿಸುತ್ತಾರೆ ವಿಠ್ಠಲಮೂರ್ತಿ.
ವಿಜಯೇಂದ್ರ ಕ್ಲಿಕ್ ಆಗ್ತಾರಾ?
ಇನ್ನೊಂದೆಡೆ ಬಿಜೆಪಿಯಲ್ಲಿ ದಿನಕ್ಕೊಂದಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಯಡಿಯೂರಪ್ಪ ತಮ್ಮ ಹಾಗೂ ತಮ್ಮ ಪುತ್ರನ ರಾಜಕೀಯ ಅಸ್ತಿತ್ವದ ಬಗ್ಗೆ ಯೋಚಿಸುತ್ತಿದ್ದರೆ, ಪಕ್ಷದ ಕೇಂದ್ರದ ನಾಯಕತ್ವದ ಬೇರೆ ದಿಕ್ಕಿನಲ್ಲೇ ಚಿಂತಿಸುತ್ತಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಸದ್ಯಕ್ಕೆ ನೋಡಿದರೆ ವಿಜಯೇಂದ್ರ ತುಂಬಾ ವೇಗವಾಗಿ ಎಮರ್ಜ್ ಆಗುತ್ತಿದ್ದಾರೆ. ಆದರೆ, ಆ ಬೆಳವಣಿಗೆಯ ವೇಗಕ್ಕೆ ಅವರ ವಯಸ್ಸು ಅಡ್ಡಿ ಬರುತ್ತಿದೆ. ಇತ್ತೀಚೆಗೆ ಕರ ನಾಟಕದ ರಾಜಕಾರಣದಲ್ಲಿ ʼಮತ ಮಾರುಕಟ್ಟೆʼಯನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡವರು ಅವರು ಮಾತ್ರ. ಶಿರಾದಲ್ಲಿ ಅವರು ಮಿತಿಮೀರಿ ಹಣ ಹಂಚಿದರು. ಯಾವ ಜಾತಿಗಳಿಗೆ ಹಣ ಕೊಟ್ಟರೆ ವೋಟುಗಳು ಬೀಳುತ್ತವೆ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಇದು ಎಷ್ಟು ದಿನ ನಡೆಯುತ್ತದೆ ಎಂಬುದು ಕಾದು ನೋಡಬೇಕು. ಯಡಿಯೂರಪ್ಪ ಬಂದಾಗಿನಿಂದ ಬಿಜೆಪಿ ಚುನಾವಣೆಗಳಲ್ಲೇ ಮುಳುಗಿ ತೇಲುತ್ತಿದೆ. ಜನರಿಗೂ ಇದು ಗೊತ್ತಾಗುತ್ತಿದೆ ಎನ್ನತ್ತಾರೆ ವಿಠ್ಠಲಮೂರ್ತಿ.
“ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಹಣೆಯಲು ಎಲ್ಲ ಪ್ರಯತ್ನಗಳೂ ನಡೆಯುತ್ತಿದೆ. ಆದರೆ, ಹಣೆಯಲು ಪ್ರಯತ್ನಿಸಿದಷ್ಟೂ ಅವರು ಸ್ಟ್ರಾಂಗ್ ಆಗುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ರಾಜ್ಯ ಬಿಜೆಪಿ ಪಾಲಿಗೆ ಯಡಿಯೂರಪ್ಪ ಖಂಡಿತವಾಗಿಯೂ ಬಾಹುಬಲಿಯೇ. ಕಟ್ಟಪ್ಪ ಯಾರು ಎನ್ನುವುದಷ್ಟೇ ಗೊತ್ತಾಗಬೇಕಿದೆ. ಆತ ಯಾರೂ ಅನ್ನೋದನ್ನು ಎಷ್ಟು ಕಾಲಾಂತ ಮುಚ್ಚಿಡಲು ಸಾಧ್ಯ?” ಎನ್ನುತ್ತಾರೆ ಅವರು.
- ಇಲಸ್ಟ್ರೇಷನ್: ಸಂತೋಷ್ ಸಸಿಹಿತ್ಲು