ಸಂಪಾದಕೀಯ
ಮೇಲ್ನೋಟಕ್ಕೆ ಗ್ರಾಮ ಪಂಚಾಯಿತಿ ಎಲೆಕ್ಷನ್‌ಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದರೆ ತಪ್ಪಾಗುತ್ತದೆ. ಅದರ ಟಾರ್ಗೆಟ್ ಏನಿದ್ದರೂ ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಆ ನಂತರ ಬರುವ ಪಾರ್ಲಿಮೆಂಟ್ ಎಲೆಕ್ಷನ್.
ಆದಿಯಿಂದಲೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಬಗ್ಗೆ ಮಲತಾಯಿ ದೋರಣೆಯನ್ನೇ ತಾಳಿಕೊಂಡು ಬಂದಿದ್ದ ಬಿಜೆಪಿಗೆ ಇದೀಗ ಈ ಅವಳಿ ಜಿಲ್ಲೆಗಳ ಮೇಲೆ ವಿಪರೀತ ಎನ್ನುವಷ್ಟು ಪ್ರೀತಿ ಉಕ್ಕಿ ಹರಿಯುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಇನ್ನೂ ಅಸ್ತಿತ್ವದಲ್ಲಿದೆ, ಜೆಡಿಎಸ್ ಅವಸಾನದ ಅಂಚಿನಲ್ಲಿದೆ. ಈ ಗ್ಯಾಪಿನಲ್ಲಿ ನುಗ್ಗಿ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿ ಲೆಕ್ಕಾಚಾರ.
ಇದಕ್ಕೆ ಇಂಬು ಕೊಡುವಂತೆ, ಕೆಲ ದಿನಗಳಿಂದ ಬಿಜೆಪಿ ನಾಯಕರು ಎರಡೂ ಜಿಲ್ಲೆಗಳಿಗೆ ಎಡತಾಕುತ್ತಿದ್ದಾರೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಲ್ಲಿ ಎರಡೂ ಜಿಲ್ಲೆಗಳ ಭೂಮಿಯನ್ನು ಬಂಜರು ಭೂಮಿ ಎಂದು ಬಿಂಬಿಸಿ ಕಾರ್ಪೋರೇಟ್ ಕುಳಗಳ ಮುಂದೆ ಹರಾಜಿಗಿಟ್ಟ ಬಿಜೆಪಿ, ಇದೀಗ ʼಗ್ರಾಮ ಸ್ವರಾಜ್ಯʼ ಎಂದು ಹೊಸ ಸ್ಲೋಗನ್ ಹೇಳಿಕೊಂಡು ಮತ್ತೆ ಪ್ರತ್ಯಕ್ಷವಾಗಿದೆ.
ಭೂ ಸುಧಾರಣಾ ಕಾಯ್ದೆಯಲ್ಲಿ ಭೂಮಿಯ ಮುಕ್ತ ಖರೀದಿಗೆ ತನ್ನ ಭದ್ರನೆಲೆಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿ ಕೃಷ್ಣಾ ಮತ್ತು ಕಾವೇರಿ ಕೊಳ್ಳದ ನೀರಾವರಿ ಜಿಲ್ಲೆಗಳನ್ನು ಹೊರಗಿಟ್ಟು ತನಗೆ ನೆಲೆಯೇ ಇಲ್ಲದಿದ್ದ, ಶಾಶ್ವತ ನೀರಾವರಿ ಸೌಲಭ್ಯ ಇಲ್ಲದಿರುವ ಹಾಗೂ ಬೆಂಗಳೂರಿನ ಕೊಳಚೆ ನೀರಿಗೆ ಎದುರು ನೋಡುತ್ತಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಭೂಮಿಯನ್ನು ಮುಕ್ತವಾಗಿ ಕೊಳ್ಳೆ ಹೊಡೆಯಲು ಕಾರ್ಪೋರೇಟ್ ಮಂದಿಗೆ ಬಿಟ್ಟ ಬೆಜೆಪಿಯ ಅಸಲಿಯತ್ತನ್ನು ಎತ್ತಿ ತೋರಿಸುವ ಶಕ್ತಿಯನ್ನು ಕಾಂಗ್ರೆಸ್ ಎರಡೂ ಜಿಲ್ಲೆಗಳಲ್ಲಿ ಕಳೆದುಕೊಂಡಿದೆ. ಇನ್ನು, ಸದಾ ಕಾಲದಿಂದ ಬಿಜೆಪಿ ಜತೆ ಅಡ್ಪಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಕೊಂಡು ಬರುತ್ತಿರುವ ಜೆಡಿಎಸ್ ಅಂತೂ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಮಂಗಳೂರಿನಿಂದ ಸರಣಿ ಸೋಲು ಕಂಡು ಬಂದು ನಿಂತು ಎರಡು ಸಲ ಲೋಕಸಭೆಗೆ ಆಯ್ಕೆಯಾಗಿದ್ದ ವೀರಪ್ಪ ಮೊಯ್ಲಿ, ತಮ್ಮ ಪೊಳ್ಳು ಮಾತುಗಳಿಂದಲೇ ಬಿಜೆಪಿಯ ಬಚ್ಚೇಗೌಡರ ಪಾಲಾಗುವಂತೆ ಮಾಡಿದ್ದರು. ಇನ್ನು ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿದ್ದರಾಮಯ್ಯ ಬ್ರಿಗೇಡ್‌ನಲ್ಲಿ ಕಾಯಂ ಮೆಂಬರ್ ಆಗಿದ್ದ ಡಾ.ಕೆ.ಸುಧಾಕರ್, ಮಂತ್ರಿಗಿರಿ ಮಾಯೆಗೆ ಬಿದ್ದು ಬಿಜೆಪಿಗೆ ಹಾರಿ ಮಂತ್ರಿಯೂ ಆಗಿಬಿಟ್ಟರು. ಅದಕ್ಕೂ ಮೊದಲು ಅವರು ನಡೆದ ಬೈ ಎಲೆಕ್ಷನ್‌ನಲ್ಲಿ ಗೆದ್ದರು ಮತ್ತೂ ಬೈ ಎಲೆಕ್ಷನ್‌ಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗ ಮಂಚೇನಹಳ್ಳಿ ತಾಲ್ಲೂಕು ಹಾಗೂ ತಮ್ಮ ಹುಟ್ಟೂರು ಪೇರೇಸಂದ್ರದ ಬಳಿಗೆ ಮೆಡಿಕಲ್ ಕಾಲೇಜು ತಂದುಕೊಂಡರು!
ಹೀಗೆ; ಸುಧಾಕರ್ ಮೂಲಕ ಜಿಲ್ಲೆಯಲ್ಲಿ ಬೇಸ್ ಮಾಡಿಕೊಂಡ ಬಿಜೆಪಿ, ಭಾನುವಾರ ಪಕ್ಕದ ವಿಧಾನಸಭೆ ಕ್ಷೇತ್ರವಾದ ಬಾಗೇಪಲ್ಲಿಯಲ್ಲಿ ತನ್ನ ʼಗ್ರಾಮ ಸ್ವರಾಜ್ಯʼ ಕಾರ್ಯಕ್ರಮವನ್ನು ನಡೆಸಿದೆ. ಆಪರೇಷನ್ ಕಮಲದ ಹೊತ್ತಿನಲ್ಲಿ ಈ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಗಾಳ ಹಾಕಿತ್ತು ಬಿಜೆಪಿ. ಇನ್ನೇನು ಕಮಲ ಪಾಳಯಕ್ಕೆ ಹಾರಿಯೇ ಬಿಡುತ್ತಾರೆಂದು ನಂಬಲಾಗಿದ್ದ ಸುಬ್ಬಾರೆಡ್ಡಿ ಕೊನೆ ಕ್ಷಣದವರೆಗೂ ಕಾಯಿಸಿ ಕಮಲಕ್ಕೆ ಕೈಕೊಟ್ಟುಬಿಟ್ಟಿದ್ದರು. ಮಂತ್ರಿಯಾದ ಮೇಲೆ ಒಂದು ದಿನ ಠಾಕುಠೀಕಾಗಿ ಬಾಗೇಪಲ್ಲಿಗೆ ಬಂದ ಸುಧಾಕರ್, “ಸುಬ್ಬಾರೆಡ್ಡಿ ಕೂಡ ನನ್ನ ಜತೆಯಲ್ಲೇ ಬಿಜೆಪಿಗೆ ಬಂದು ಸಚಿವರಾಗಬೇಕಾಗಿತ್ತು. ಕೊನೆಯ ಕ್ಷಣದಲ್ಲಿ ಏನಾಯಿತೋ ಗೊತ್ತಿಲ್ಲ. ಹಿಂದೆ ಸರಿದು ಶಾಸಕರಾಗಿಯೇ ಉಳಿದುಬಿಟ್ಟರು” ಎಂಬುದಾಗಿ ಜನರ ಸಮಕ್ಷಮದಲ್ಲಿಯೇ ರೆಡ್ಡಿಗೆ ಬಿಜೆಪಿ ಬಲೆ ಬೀಸಿದ್ದ ವಿಷಯವನ್ನು ಬಹಿರಂಗ ಮಾಡಿದ್ದರು ಡಾಕ್ಟರ್ ಸುಧಾಕರ್! ಅಲ್ಲಿಗೆ ಆಪರೇಷನ್ ಕಮಲ ಅತ್ಯ ಎಂದು ಸಚಿವರೊಬ್ಬರೇ ಜನರಸತ್ಯವಾಗಿ ಒಪ್ಪಿಕೊಂಡುಬಿಟ್ಟಿದ್ದರು. ಅಲ್ಲಿಗೆ, ರಾಜ್ಯ ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ನಡೆದ ವಿಚಾರಣೆ, ಬಂದ ತೀರ್ಪುಗಳ ಬಗ್ಗೆ ಜನರು ಏನೆಂದುಕೊಳ್ಳುತ್ತಿದ್ದಾರೆಂದು ಹೇಳುವುದು ಇಲ್ಲಿ ಅಗತ್ಯವಿಲ್ಲ ಎನಿಸುತ್ತದೆ.
ಈ ಹಿಂದೆ ವಿಧಾನಸಭೆ ಚುನಾವಣೆಗಳಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಿತ್ರನಟ ಸಾಯಿಕುಮಾರ್ ಅಷ್ಟೂ ಸಲವೂ ಠೇವಣಿ ಕಳೆದುಕೊಂಡಿದ್ದರು. ಆ ಕಾರಣವೋ ಅಥವಾ ಸುಬ್ಬಾರೆಡ್ಡಿಯನ್ನು ಹೇಗಾದರೂ ಮನವೊಲಿಸಿ ಬಿಜೆಪಿಗೆ ಕರೆತಂದು ಬಾಗೇಪಲ್ಲಿಯಲ್ಲೂ ಬಿಜೆಪಿ ಬೇಸ್ ಕ್ರಿಯೇಟ್ ಮಾಡಬೇಕು ಎಂಬ ಕಾರಣಕ್ಕೆ ಅಲ್ಲಿಯೂ ಭಾನುವಾರ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ನಡೆಸಿದೆ ಬಿಜೆಪಿ. ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಕೋಲಾರ ಸಂಸದ ಮುನಿಸ್ವಾಮಿ ಮುಂತಾದವರು ಗ್ರಾಮ ಸ್ವರಾಜ್ಯದ ಮೂಲಕ ಬಾಗೇಪಲ್ಲಿ ತಾಲ್ಲೂಕನ್ನು ಬಂಗಾರದಂಥ ಭಾಗ್ಯನಗರ ಮಾಡಿಯೇ ಬಿಡುತ್ತೇವೆ ಎಂದರು. ಆದರೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬಂದ ನಂತರ, ಅಥವಾ ಅದಕ್ಕೂ ಮುನ್ನ ಬೆಂಗಳೂರು ಮತ್ತೂ ಆಂಧ್ರ ಪ್ರದೇಶದ ಕಡೆಯಿಂದ ಬಂದು ಬಡರೈತರ ನೆಲವನ್ನು ಕೊಳ್ಳೆ ಹೊಡೆಯುತ್ತಿರುವ ಭೂ ರಣಹದ್ದುಗಳ ಬಗ್ಗೆ ಕಟೀಲ್ ಚಕಾರವನ್ನೂ ಎತ್ತಲಿಲ್ಲ. ನೇತ್ರಾವತಿ ನದಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸಲು ಡಾ.ಪರಮಶಿವಯ್ಯ ಅವರ ಪ್ರಸ್ತಾವನೆಯನ್ನು ಮುಂಚೂಣಿಯಲ್ಲಿ ನಿಂತು ವಿರೋಧಿಸಿದ್ದವರಲ್ಲಿ ಇದೇ ಕಟೀಲ್ ಪ್ರಮುಖರು. ಜನ ಇದೆಲ್ಲವನ್ನೂ ಮರೆತರು ಎಂದು ಭಾವಿಸಿದಂತಿರುವ ಬಿಜೆಪಿ, ಈಗ ಬಂದು ಬರಪೀಡಿತ ಜಿಲ್ಲೆಯಲ್ಲಿ ʼಗ್ರಾಮ ಸ್ವರಾಜ್ಯʼ ಎಂಬ ಸವಕಲು ಮಂತ್ರವನ್ನು ಜಪಿಸುತ್ತಿದೆ.
ಇನ್ನು ಸಚಿವ ಸುಧಾಕರ್ ಈಗಾಗಲೇ ಚಿಕ್ಕಬಳ್ಳಾಪುರ ಪಕ್ಕದ ಶಿಡ್ಲಘಟ್ಟ, ತಮ್ಮ ರಾಜಕೀಯ ಕಡು ವಿರೋಧಿ ಎಚ್.ಎನ್.ಶಿವಶಂಕರರೆಡ್ಡಿ ಪ್ರತಿನಿಧಿಸುವ ಗೌರಿಬಿದನೂರು, ಜೆಡಿಎಸ್ ಶಾಸಕ ಹಾಗೂ ಮಾಜಿ ಡೆಪ್ಯೂಟಿ ಸ್ಪೀಕರ್ ಜೆ.ಎಂ.ಕೃಷ್ಣಾರೆಡ್ಡಿ ಗೆದ್ದಿರುವ ಚಿಂತಾಮಣಿ ಮೇಲೂ ಪಾರುಪತ್ಯ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಆದರೆ, ಅಲ್ಲೆಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ನಾಯಕರು ಬಿಜೆಪಿಗೆ ಬರಲು ಸಿದ್ಧರಿದ್ದರೂ, ಸುಧಾಕರ್ ಮುಂದಿನ ವಿಧಾನಸಭೆ ಎಲೆಕ್ಷನ್‌ವರೆಗೂ ಬಿಜೆಪಿಯಲ್ಲೇ ಇರುತ್ತಾರಾ ಇಲ್ಲವಾ ಎಂಬುದನ್ನು ಕನ್‌ಫರ್ಮ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಜಿಲ್ಲೆಯ ಬಿಜೆಪಿಗೇ ಹೇಳುವಂತೆ; ಸುಧಾಕರ್ ಬಿಜೆಪಿಯಲ್ಲಿ ಹೆಚ್ಚುಕಾಲ ಮುಂದುವರಿಯಲಾರರು.
ಕೋಲಾರದಲ್ಲಿ ಬಿಜೆಪಿ ಹೇಗಿದೆ?
ಎತ್ತಿನಹೊಳೆ, ಬೆಂಗಳೂರು ಕೊಳಚೆ ನೀರನ್ನು ನಂಬಿಕೊಂಡಿರುವ ಕೋಲಾರದಲ್ಲೂ ಬಿಜೆಪಿ ಗ್ರಾಮ ಸ್ವರಾಜ್ಯದ ಸ್ಲೋಗನ್ ಮೊಳಗಿಸುತ್ತಿದೆ. ಅನುಕೂಲವೆಂದರೆ, ಕೋಲಾರ ಲೋಕಸಭಾ ಕ್ಷೇತ್ರ ಈಗ ಬಿಜೆಪಿಯ ವಶದಲ್ಲೇ ಇದೆ. ಸಂಸದ ಮುನಿಸ್ವಾಮಿ ಇದೀಗ ರಾಜ್ಯ ನಾಯಕರ ಆಪ್ತ ವಲಯದಲ್ಲಿದ್ದಾರೆ. ಕೆಜಿಎಫ್‌ನಲ್ಲಿ ಒಮ್ಮೆ ತಾನು ಗೆದ್ದು, ಮತ್ತೊಮ್ಮೆ ಹೆತ್ತ ತಾಯಿಯನ್ನು ಅಸೆಂಬ್ಲಿ ಮೆಂಬರ್ ಮಾಡಿದ್ದ ಎನ್.ಸಂಪಂಗಿ ಈಗ ಮಾಜಿ. ಅಲ್ಲಿ ಕೇಂದ್ರದ ಮಾಜಿ ಮಂತ್ರಿ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಎಮ್ಮೆಲ್ಲೆ ಆಗಿದ್ದಾರೆ. ಮಾಲೂರಿನ ಮತ ಮಾರುಕಟ್ಟೆಯಲ್ಲಿ ಭರ್ಜರಿ ಫಸಲು ತೆಗೆಯುತ್ತಿದ್ದ ಕೃಷ್ಣಯ್ಯಶೆಟ್ಟಿ ಸೋತು ಮನೆಯಲ್ಲಿದ್ದಾರೆ. ಅಲ್ಲಿ ಅವರಿಗಿಂತ ಇನ್ನೂ ಹೆಚ್ಚು ಫಸಲು ತೆಗೆಯುವವರು ಬಂದಿದ್ದಾರೆ. ಶೆಟ್ಟಿ ಅವರಿಗೆ ನಿಗಮ-ಮಂಡಳಿ ಕೋಟಾದಲ್ಲಿ ಜಾಗವೂ ಸಿಕ್ಕಿಲ್ಲ. ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ನಾಗೇಶ್ ಇದೀಗ ಬಿಜೆಪಿ ಸರಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದಾರಾದರೂ, ಅವರು ಬಿಜೆಪಿಯಲ್ಲಿ ದೀರ್ಘಕಾಲ ಏಗುವುದು ಸುಲಭವಲ್ಲ. ಉಳಿದಂತೆ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶಾಸಕರು. ಬಂಗಾರಪೇಟೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ ಅಸೆಂಬ್ಲಿ ಮೆಂಬರ್. ೀ ಪೈಕಿ ನಾರಾಯಣಸ್ವಾಮಿಗೆ ಆಪರೇಷನ್ ಕಮಲದ ಗಾಳ ಹಾಕಲಾಗಿತ್ತು. ಜಸ್ಟ್ ಮಿಸ್ ಆಗಿದ್ದರಷ್ಟೇ. ಇನ್ನು ಕೋಲಾರದ ಶಾಸಕ ಶ್ರೀನಿವಾಸಗೌಡರಿಗೆ ಬಿಜೆಪಿ ಬಲೆ ಬೀಸಿದ್ದ ವಿಷಯ ಬಿಬಿಸಿ ಚಾನೆಲ್ಲಿನಲ್ಲಿ ಭಿತ್ತರವಾಗಲಿಲ್ಲ ಅಷ್ಟೇ.
ಕೋಲಾರದ ಕೆ.ಎಚ್.ಮುನಿಯಪ್ಪ ವಿರುದ್ಧ ಸ್ವಪಕ್ಷದಲ್ಲಿಯೇ ಎದ್ದ ಸುನಾಮಿಯಲ್ಲಿ ತೇಲಿದವರು ಸಂಸದ ಮುನಿಸ್ವಾಮಿ. ದಿಢೀರೆಂದು ಬೆಂಗಳೂರಿನಿಂದ ಬಂದ ಪ್ರತ್ಯಕ್ಷರಾದ ಅವರನ್ನು ಮುನಿಯಪ್ಪ ಅವರ ವಿರೋಧಿಗಳೇ ತಲೆಮೇಲೆ ಹೊತ್ತು ಮೆರೆಸಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸ್ವತಃ ಶ್ರೀನಿವಾಸಗೌಡರಿಗೇ ಮುನಿಯಪ್ಪನವರನ್ನು ಕಂಡರೆ ಆಗುತ್ತಿಲ್ಲ. ಇಂಥ ನೂರಾರು ಕಾರಣಗಳಿಂದಲೇ ಮುನಿಯಪ್ಪ ಬದಲಿಗೆ ಮುನಿಸ್ವಾಮಿ ಬಂದು ಕೂತರು. ಹೀಗಾಗಿ, ಈ ಜಿಲ್ಲೆಯಲ್ಲೂ ಬಿಜೆಪಿಗೆ ಬೇಸ್ ಸೃಷ್ಟಿ ಮಾಡಬೇಕಾದ ದೊಡ್ಡ ಸವಾಲು ಅವರಿಗಿದೆ. ಪಕ್ಷದ ಸಂಘಟನೆಗೆ ಬಂದರೆ, ಕೃಷ್ಣಯ್ಯಶೆಟ್ಟಿ ನೇಪಥ್ಯಕ್ಕೆ ಸರಿದು ತುಂಬಾ ದಿನವಾಗಿದೆ. ಹೀಗಾಗಿ ಬಿಜೆಪಿ ಸಂಘಪರಿವಾರದ ನಂಟು ಇರುವ ಕಮಲದ ಕಟ್ಟಾಳುಗಳನ್ನು ತೆರೆಗೆ ತರುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಅದರ ಮುಂದುವರಿದ ಯೋಚನೆಯೇ ಗ್ರಾಮ ಸ್ವರಾಜ್ಯ ಅಭಿಯಾನ. ಈ ಅಭಿಯಾನದಲ್ಲಿ ಹೊಳೆಯುವ ವಜ್ರದಂಥ ಹುಡುಗರನ್ನು ಹೆಕ್ಕಿಗೆತೆದು ಅವರನ್ನು ತಿಕ್ಕಿತೀಡಿ ನಾಯಕರನ್ನಾಗಿ ರೂಪಿಸಿ ಆಯಾ ಅಸೆಂಬ್ಲಿ ಕ್ಷೇತ್ರಗಳಿಗೆ ಕಳಿಸಿಕೊಡುವ ಕೆಲಸ ದೊಡ್ಡ ಪ್ರಮಾಣದಲ್ಲಿ ಟೇಕಾಫ್ ಆಗಿದೆ. ಇದು ಎರಡೂ ಜಿಲ್ಲೆಗಳ ಅಷ್ಟೂ ಅಸೆಂಬ್ಲಿ ಕ್ಷೇತ್ರಗಳಿಗೆ ಅನ್ವಯವಾಗುತ್ತದೆ.
ಮೇಲ್ನೋಟಕ್ಕೆ ಗ್ರಾಮ ಪಂಚಾಯಿತಿ ಎಲೆಕ್ಷನ್‌ಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದರೆ ತಪ್ಪಾಗುತ್ತದೆ. ಅದರ ಟಾರ್ಗೆಟ್ ಏನಿದ್ದರೂ ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಆ ನಂತರ ಬರುವ ಪಾರ್ಲಿಮೆಂಟ್ ಎಲೆಕ್ಷನ್. ಇಂಥ ಬಿಗ್ ಟಾರ್ಗೆಟ್ ಹಾಕಿಕೊಂಡಿರುವ ಆ ಪಕ್ಷಕ್ಕೆ ಈಗಾಗಲೇ ಗೆದ್ದಿರುವ ಚಿಕ್ಕಬಳ್ಳಾಪುರ, ಕೋಲಾರದ ಸಂಸತ್ ಸ್ಥಾನಗಳನ್ನು ಉಳಿಸಿಕೊಳ್ಳುವುದು; ಜತೆಗೆ, ಎರಡೂ ಜಿಲ್ಲೆಗಳ ಹನ್ನೊಂದು ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲುವುದು ಮುಖ್ಯವಾಗಿದೆ. ಅದಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಬಿಜೆಪಿ.
ಇನ್ನು; ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಹೈ ಜೋಶ್‌ನಲ್ಲಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಎಲೆಕ್ಷನ್ ಬಂದಾಗ ಕುಂಭಕರ್ಣ ನಿದ್ದೆಯಿಂದ ಎದ್ದು ಕ್ಯಾಂಡಿಡೇಟಿಗಾಗಿ ಕಂದೀಲು ಹಚ್ಚುವ ಇವೆರಡೂ ಪಕ್ಷಗಳಿಗೆ ಕಮಲ ಪಕ್ಷದ ಹೆಜ್ಜೆಗಳು ಕಾಣುತ್ತಿಲ್ಲ.
Lead photo courtesy: Narendra modi Facebook page