Lead Photo by Vlada Karpovich from Pexels
ದೇಶಲ್ಲೇ ಮೊದಲು: 8,000 ತರಗತಿ ಕೊಠಡಿಗಳು ಸ್ಮಾರ್ಟ್‌ಕ್ಲಾಸ್ ರೂಮುಗಳಾಗಿ ಪರಿವರ್ತನೆ; 430 ಪ್ರಥಮ ದರ್ಜೆ, 14 ಎಂಜಿನಿಯರಿಂಗ್, 87 ಪಾಲಿಟೆಕ್ನಿಕ್ʼಗಳಲ್ಲಿ ಜಾರಿ
ಬೆಂಗಳೂರು: ಸರಕಾರಿ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಬಲ್ಲ ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆ ‘ಕರ್ನಾಟಕ ಎಲ್ಎಂಎಸ್’ (ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್-ಎಲ್‌ಎಂಎಸ್)ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಸೋಮವಾರ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಿದ ಮುಖ್ಯಮಂತ್ರಿ, “ವಿದ್ಯಾರ್ಥಿಗಳು ಇದ್ದ ಜಾಗದಿಂದಲೇ ಜ್ಞಾನಾರ್ಜನೆ ಮಾಡಬಹುದು. ‘ಲರ್ನಿಂಗ್ ಫ್ರಮ್ ಎನಿವೇರ್’ʼ ಎನ್ನುವ ಪರಿಕಲ್ಪನೆಯನ್ನು ಇದು ಸಾಕಾರಗೊಳಿಸುತ್ತದೆ. ಇದರಿಂದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ” ಎಂದರು.
ಏನಿದು ಕಲಿಕಾ ನಿರ್ವಹಣಾ ವ್ಯವಸ್ಥೆ?
- ಕೋವಿಡ್ ಹಿನ್ನೆಲೆಯಲ್ಲಿ ಡಿಜಿಟಲ್ ಕಲಿಕೆಗೆ ಎಲ್ಲಡೆ ಹೆಚ್ಚು ಒತ್ತು ಸಿಗುತ್ತಿದೆ. ಈ ಕಾರಣದಿಂದ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಎಲ್‌ಎಂಎಸ್ ಆಧಾರಿತ ಡಿಜಿಟಲ್ ಕಲಿಕೆಯನ್ನು ʼಕರ್ನಾಟಕ ಎಲ್‌ಎಂಎಸ್ʼ ಎಂಬ ಹೆಸರಿನಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, 14 ಸರಕಾರಿ ಎಂಜಿನಿಯರಿಂಗ್ ಮತ್ತು 87 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ಈ ಉಪಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಕಲಿಕೆ ಹಾಗೂ 24,000 ಅಧ್ಯಾಪಕರ ಬೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾಗಲಿವೆ. ನಮ್ಮ ಶಕ್ತಿ, ನಮ್ಮ ಭವಿಷ್ಯ ಎನ್ನುವುದು ಈ ಪರಿಕಲ್ಪನೆಯ ಟ್ಯಾಗ್‌ಲೈನ್ ಆಗಿದೆ.
- ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಮುಖ್ಯವಾಗಿ; ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಅವರ ಕಲಿಕೆಯ ಮಟ್ಟವನ್ನು ಈ ಹೊಸ ಪದ್ಧತಿ ಗಣನೀಯವಾಗಿ ಸುಧಾರಿಸಲಿದೆ.
- ಎಲ್‌ಎಂಎಸ್ ಆಧಾರಿತ ಡಿಜಿಟಲ್ ಕಲಿಕೆ ಪದ್ಧತಿಯು ವಿಷಯ ಸಂವಹನ, ವಿಷಯ ಲಭ್ಯತೆ ಮತ್ತು ಮೌಲ್ಯಮಾಪನದಲ್ಲಿ ಗುರುತರ, ಮಹತ್ವದ ಬದಲಾವಣೆಗಳನ್ನು ತರುತ್ತದೆ. ಈ ಮೂಲಕ ಅದು ಡಿಜಿಟಲ್ ಅಂತರವನ್ನು ಅಳಿಸಿ ಹಾಕುತ್ತದೆ. ತನ್ಮೂಲಕ ಬೋಧನೆ- ಕಲಿಕೆಗಳಲ್ಲಿ ಕ್ರಾಂತಿಕಾರಕ ಮುನ್ನಡೆಯನ್ನು ಸಾಧಿಸಬಲ್ಲ ಪರಿಣಾಮಕಾರಿ ವೇದಿಕೆಯಾಗಿದೆ. ಇದರಿಂದ ಎಲ್ಲ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಬಹುದು, ಸಮಯವನ್ನು ಉಳಿಸಬಹುದು.
- ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರು, ವಿವಿಧ ಭಾಷೆಗಳಲ್ಲಿ 14 ಸಂಯೋಜಿತ ವಿಶ್ವವಿದ್ಯಾಲಯಗಳ ಪಠ್ಯಕ್ಕೆ ಪೂರಕವಾಗಿ ಸ್ವ-ಕಲಿಕೆ ಮತ್ತು ಬೋಧನೆಗೆ ಸೂಕ್ತವಾದ ಇ-ಕಂಟೆಂಟ್ ಅನ್ನು ಪಿಪಿಟಿ, ವಿಡಿಯೋ, ಅಸೈನ್‌ಮೆಂಟುಗಳು, ಇ-ಅಧ್ಯಯನ ಮಾಹಿತಿ, ಪ್ರಶ್ನೋತ್ತರ ವಿವರ, ಕ್ವಿಜ್ ರೂಪದಲ್ಲಿ ಅಭಿವೃದ್ಧಿಗೊಳಿಸಿದ್ದು, ಇದರ ಜತೆಗೆ ವಿವಿಗಳವಾರು ಕೇಂದ್ರೀಕೃಗೊಂಡು, ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಸಾರಪಠ್ಯವೂ ಬೋಧಕರಿಗೆ ಲಭ್ಯವಾಗಲಿದೆ.
- ಈ ಕಲಿಕಾ ನಿರ್ವಹಣೆ ಪದ್ದತಿಯಲ್ಲಿ ಶಿಕ್ಷಣದ ವಿವಿಧ ಅಂಶಗಳ ವೈಜ್ಞಾನಿಕ ಮಾಹನಕ್ಕೆ ಪೂರಕವಾಗಿ ವಿಶ್ಲೇಷಣೆ ಇರುತ್ತದೆ. ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಕಾಲೇಜುಗಳ ಹಿಂದಿನ ಮಾಹಿತಿ, ಕಂಟೆಂಟ್ ರೇಟಿಂಗ್, ವಿದ್ಯಾರ್ಥಿಗಳಿಂದ ಮತ್ತು ತರಗತಿಗಳಲ್ಲಿ ಅಧ್ಯಾಪಕರಿಂದ ಇ-ಕಂಟೆಂಟ್ ಬಳಕೆಯ ಟ್ರ್ಯಾಕಿಂಗ್, ಸಂಪೂರ್ಣ ವಿವರಗಳುಳ್ಳ ವರದಿ ತಯಾರಿಕೆ ಇತ್ಯಾದಿಗಳಿಗೆ ಅವಕಾಶ ಕಲಿಸಲಾಗಿದೆ.
- ಎಲ್‌ಎಂಎಸ್ ಆಧಾರಿತ ಡಿಜಿಟಲ್ ಕಲಿಕೆಯಿಂದ ಉತ್ತಮ ಗುಣಮಟ್ಟದ ಬೋಧನೆ, ಕಲಿಕೆ, ನಿರಂತರ ಮೌಲ್ಯಮಾಪನ ಮತ್ತು ಮಾಹಿತಿ ಆಧಾರಿತ ತಿದ್ದುಪಡಿ ಕ್ರಮಗಳಿಂದ ಇಡೀ ಉನ್ನತ ಶಿಕ್ಷಣಕ್ಕೆ ಒಂದು ರೀತಿಯ ಪರಿಪೂರ್ಣತೆ ಬರಲಿದೆ.
ಡಿಸಿಎಂ ಹೇಳಿದ್ದೇನು?
ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆಯು ಕೋವಿಡ್‌ನಿಂದ ಕಲಿಕೆಯಿಂದ ವಂಚಿತವಾಗುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇಡೀ ದೇಶದಲ್ಲಿಯೇ ಇದು ಹೊಸ ರೀತಿಯ ಪ್ರಯತ್ನ ಹಾಗೂ ಮೊದಲು ಎನ್ನಬಹುದು. ಈ ಉಪಕ್ರಮದಿಂದ ಸರಕಾರಿ ಕಾಲೇಜುಗಳ ಪದವಿ, ಎಂಜಿನಿಯರಿಂಗ್, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಈ ಲರ್ನಿಂಗ್ ಸಿಸ್ಟಮ್‌ನಲ್ಲಿ ಪರಿಹಾರಗಳಿವೆ. ಎಲ್ಲೇ ಇದ್ದರೂ ವಿದ್ಯಾರ್ಥಿಗಳು ಕಲಿಯಬಹುದು. ಲೈವ್ ತರಗತಿಗಳಲ್ಲಿ ಭಾಗಿಯಾಗಬಹುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳೀದರು.
ಜಾಗತಿಕ ಮಟ್ಟದಲ್ಲಿ ಬೋಧನೆ- ಕಲಿಕೆಯಲ್ಲಿ ಗುರುತರ ಬದಲಾವಣೆಗಳಾಗುತ್ತಿವೆ. ಇದನ್ನು ಕ್ಷಿಪ್ರವಾಗಿ ಗ್ರಹಿಸಿರುವ ಕರ್ನಾಟಕವೂ ಈ ನಿಟ್ಟಿನಲ್ಲಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ. ತಂತ್ರಜ್ಞಾನದ ಮೂಲಕ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ ಎಂದರು ಡಿಸಿಎಂ
ಸ್ಮಾರ್ಟ್‌ಕ್ಲಾಸ್ ಕೊಠಡಿಗಳು
ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು; “ರಾಜ್ಯದಲ್ಲಿ ಈಗ ಸರಕಾರಿ ಎಂಜಿನೀಯರಿಂಗ್, ಪದವಿ, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಟ್ಟು 8,000 ತರಗತಿ ಕೊಠಡಿಗಳಿವೆ. ಇವುಗಳ ಪೈಕಿ 2,500 ಕೊಠಡಿಗಳನ್ನು ಕೂಡಲೇ ಅತ್ಯಂತ ವೇಗದ ವೈಫೈ ವ್ಯವಸ್ಥೆ ಇರುವ ಸ್ಮಾರ್ಟ್‌ಕ್ಲಾಸ್ ಕೊಠಡಿಗಳನ್ನಾಗಿ ರೂಪಿಸಲಾಗುತ್ತಿದೆ. ಉಳಿದ 5,500 ಕೊಠಿಡಿಗಳನ್ನು 4ರಿಂದ 5 ತಿಂಗಳಲ್ಲಿ ಸ್ಮಾರ್ಟ್‌ಕ್ಲಾಸ್ ರೂಮುಗಳನ್ನಾಗಿ ಪರಿವರ್ತಿಸಲಾಗುವುದು. ಇಷ್ಟೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ಲಕ್ಷ ವಿದ್ಯಾರ್ಥಿಗಳ ಹಾಗೂ ಎಲ್ಲ ಬೋಧಕರು ಏಕಕಾಲದಲ್ಲಿಯೇ ಲಾಗಿನ್ ಆಗಬಹುದು ಎಂದು ಮಾಹಿತಿ ನೀಡಿದರು.
ತಂತ್ರಜ್ಞಾನ ಮತ್ತು ಶಿಕ್ಷಣದಲ್ಲಿ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಹೆಗ್ಗಳಿಕೆ ಸೇರಿ ಹೊಸ ಗರಿಯಂದರೆ, ನೂತನ ಕಲಿಕಾ ನಿರ್ವಹಣಾ ಪದ್ಧತಿ. ಆನ್‌ಲೈನ್, ಆಫ್‌ಲೈನ್‌ನಲ್ಲೂ ಈ ಮೂಲಕ ಕಲಿಯಬಹುದು. ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಕಲಿಯಬಹುದು. ಯಾವುದೇ ಸಂದರ್ಭದಲ್ಲಿ, ಎಲ್ಲೇ ಇದ್ದರೂ ತಮ್ಮ ವ್ಯಾಸಂಗವನ್ನು ಮುಂದುವರಿಸಬಹುದು. ಡೆಸ್ಕ್‌ಸ್ಟಾಪ್, ಆಂಡ್ರಾಯ್ಡ್, ಐಒಎಸ್‌ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಲಾಗಿದೆ. ಇದೆಷ್ಟು ಪರಿಣಾಮಕಾರಿ ಎಂದರೆ, ದಿನಿತ್ಯದ ಕಂಟೆಂಟ್ ನೀಡಿಕೆಯ ಜತೆಗೆ, ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಮಾಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹದು ಎಂದರು ಉಪ ಮುಖ್ಯಮಂತ್ರಿ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್, ಕಲಿಕಾ ನಿರ್ವಹಣಾ ಪದ್ಧತಿಯ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದರು. ನೂತನ ಕಲಿಕಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ವಿವಿಧ ಕಾಲೇಜುಗಳ ಅಧ್ಯಾಪಕರು, ತಾಂತ್ರಿಕ ನಿಪುಣರನ್ನು ಇದೇ ವೇಳೆ ಸಿಎಂ ಗೌರವಿಸಿದರು.
ಎಲ್‌ಎಂಎಸ್ ಪೋರ್ಟಲ್‌ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು.