ಬೆಂಗಳೂರು: ಮಾಜಿ ಸಚಿವ ಎಚ್.ವಿಶ್ವನಾಥ್ ಸಿಡಿಸಿದ ಹೊಸ ಬಾಂಬ್ ಅದೆಷ್ಟರ ಮಟ್ಟಿಗೆ ಬಿಜೆಪಿಯನ್ನು ತಲ್ಲಣಗೊಳಿಸಿದೆ. ಮಂಗಳವಾರ ಬೆಳಗ್ಗೆಯಿಂದ ಸಾ.ರಾ.ಮಹೇಶ್ ಜತೆ ಮಾತಿನ ಯುದ್ಧ ನಡೆಸಿದ್ದ ಅವರು, ಅಹರಾಹ್ನ ಮಾಡಿದ ಪ್ರೆಸ್ಮೀಟ್ ಎಲ್ಲರಿಗೂ ಶಾಕ್ ನೀಡಿದೆ.
“ಹುಣಸೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸೋಲಲು ಪಕ್ಷದ ನಾಯಕರು ದ್ರೋಹ ಮಾಡಿದ್ದೇ ಕಾರಣ. ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಮಾಡಿದ ದ್ರೋಹವು ಬಹುಮುಖ್ಯ ಕಾರಣ” ಎಂದು ಪತ್ರಿಕಾಗೋಷ್ಠಿಯಲ್ಲೇ ವಿಶ್ವನಾಥ್ ನೇರ ಆರೋಪ ಮಾಡುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ದೊಡ್ಡ ಕಂಪನವೊಂದು ಎದ್ದುಬಿಟ್ಟಿತು. ಮೊದಲೇ ರಾಜ್ಯದ ಎಲ್ಲ ಆಗುಹೋಗುಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್‌ವರೆಗೂ ಹಳ್ಳಿಹಕ್ಕಿಯ ಶಾಕಿಂಗ್ ಪ್ರೆಸ್‌ಮೀಟ್‌ನ ಬ್ರೇಕಿಂಗ್ ನ್ಯೂಸ್ ತಲುಪಿದೆ.
ಮಂಗಳವಾರದ ವಿಶ್ವನಾಥರ ಇಡೀ ಎಪಿಸೋಡಿನೊಂದಿಗೆ ಬಿಜೆಪಿ ಸರಕಾರದ ಸಂಪುಟ ಸಂಕಟ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುತ್ತ ವಿಗೂಢವಾಗಿರುವ ಆಡಳಿತದೊಳಗಿನ ಒಳಸುಳಿಗಳನ್ನು ಬೆತ್ತಲುಗೊಳಿಸಿದೆ. ಎಚ್.ವಿಶ್ವನಾಥ್ ಅವರ ಪತ್ರಿಕಾಗೋಷ್ಠಿಯಂತೂ ಅದೆಲ್ಲಕ್ಕೂ ಪರಾಕಾಷ್ಠೆ ಎನ್ನುವಂತೆ ಆಗಿಬಿಟ್ಟಿತು. ಹಾಗಾದರೆ ಬೆಳಗ್ಗೆಯಿಂದ ಆಗಿದ್ದೇನು? ಇಡೀ ಎಪಿಸೋಡನ್ನು ನೋಡೋಣ.
ಹೈಕೋರ್ಟ್ ತೀರ್ಪು
ನೇರ ಚುನಾವಣೆಯಲ್ಲಿ ಆಯ್ಕೆಯಾಗದ ವಿಶ್ವನಾಥ್ ಪ್ರಸಕ್ತ ವಿಧಾನಸಭೆ ಅಸ್ತಿತ್ವದಲ್ಲಿರುವ ತನಕ ಮುಖ್ಯಮಂತ್ರಿ ಆಗುವಂತಿಲ್ಲ ಎಂದು ಹೈಕೋರ್ಟ್, ಸೋಮವಾರದಂದು ನೀಡಿದ ತೀರ್ಪು ಇಡೀ ಎಪಿಸೋಡಿಗೆ ನಾಂದಿ ಹಾಡಿತು. ನ್ಯಾಯಾಲಯ ಕೊಟ್ಟ ತೀರ್ಪಿಗೆ ಅತ್ಯುತ್ಸಾಹದಿಂದಲೇ ಪ್ರತಿಕ್ರಿಯಿಸಿದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್, ಮಂಗಳವಾರ ಬೆಳಗ್ಗೆಯೇ ಚಾಮುಂಡಿಬೆಟ್ಟಕ್ಕೆ ಹೋಗಿ ಅಮ್ಮನವರಿಗೆ ಪೂಜೆ ಸಲ್ಲಿದರು.
ಎಪಿಸೋಡಿಗೆ ಎಂಟ್ರಿ ಕೊಟ್ಟ ಸಾ.ರಾ.ಮಹೇಶ್
ಬೆಟ್ಟದ ಮೇಲೆಯೇ ಮೀಡಿಯಾ ಜತೆ ಮಾತನಾಡಿದ ಮಹೇಶ್; ವಿಶ್ವನಾಥ್‌ಗೆ ದೇವರು ಕೊಟ್ಟ ಶಿಕ್ಷೆ ಇದಾಗಿದೆ ಎಂದುಬಿಟ್ಟರು. ಅಲ್ಲಿಗೇ ಈ ವಿಷಯ ಬಿಡದೇ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು, “ನ್ಯಾಯದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ. ಎಚ್.ವಿಶ್ವನಾಥ್‌ಗೆ ಇದು ದೇವರು ಕೊಟ್ಟ ಶಿಕ್ಷೆ. ಜೆಡಿಎಸ್ ಕಾರ್ಯಕರ್ತರು, ನಾವೂ ಇದರಿಂದ ನಿಟ್ಟುಸಿರು ಬಿಟ್ಟಿದ್ದೇವೆ. ಆಣೆ ಪ್ರಮಾಣ ನಡೆದ ಒಂದೇ ವರ್ಷಕ್ಕೆ ಸತ್ಯ ಯಾವುದೆಂದು ತೀರ್ಮಾನವಾಗಿದೆ” ಎಂದರು.
“ನಾನು ದೇವಾಲಯದಲ್ಲಿ ಅಮ್ಮನವರ ಬಳಿ ತಪ್ಪು ಯಾರದ್ದು? ಸರಿ ಯಾರದ್ದು? ಎಂದು ತೋರಿಸುವಂತೆ ಹೇಳಿದ್ದೆ. ಪ್ರಸಂಗ ನಡೆದ ಒಂದೇ ವರ್ಷಕ್ಕೆ ನ್ಯಾಯಾಲಯದ ತೀರ್ಪು ಬಂದಿದೆ. ತಪ್ಪು ಮಾಡಿದರೂ ಬಂಡತನದಿಂದ ಶಕ್ತಿದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ” ಎಂದು ಸಾ.ರಾ.ಮಹೇಶ್ ಹೇಳಿದರು. “ವಿಶ್ವನಾಥ್‌ಗೆ ಇದು ದೇವರು ಕೊಟ್ಟ ಶಿಕ್ಷೆ ಹಾಗಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹರಕೆ ತೀರಿಸಿದ್ದೇನೆ” ಎಂದು ಅವರು ತಿಳಿಸಿದರು. ಇದಕ್ಕೆ ಆಮೇಲೆ ವಿಶ್ವನಾಥ್ ಬಲವಾದ ಕೌಂಟರ್ ಕೊಟ್ಟಿದ್ದಾರೆ.
ಸಾ.ರಾ.ಮಹೇಶ್ ಕೊಚ್ಚೆ ಗುಂಡಿ ಎಂದ ವಿಶ್ವನಾಥ್
ಸಾ.ರಾ.ಮಹೇಶ್ ಮಾತಿಗೆ ಕೌಂಟರ್ ಕೊಟ್ಟಿರುವ ವಿಶ್ವನಾಥ್; ಆ ಮನುಷ್ಯ ಕೊಚ್ಚೆ ಗುಂಡಿ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಎಚ್.ವಿಶ್ವನಾಥ್‌ಗೆ ನ್ಯಾಯದೇವತೆ ಶಿಕ್ಷೆ ನೀಡಿದ್ದಾಳೆ ಎಂದು ಹೇಳಿದ್ದಾರೆ. ಸಾ.ರಾ.ಮಹೇಶ್ ಕೊಚ್ಚೆ ಗುಂಡಿಯಂತೆ. ಅದರೊಳಕ್ಕೆ ಕಲ್ಲು ಹಾಕಿ ಪದೇಪದೆ ಗಲೀಜು ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಇದರಿಂದ ನನ್ನ ಶುಭ್ರ ವಸ್ತ್ರವನ್ನು ಕೊಳೆ ಮಾಡಿಕೊಳ್ಳಲು ನಾನು ತಯಾರಿಲ್ಲ. ಯಾರ ಬಗ್ಗೆ ಏನು ಮಾತನಾಡಬೇಕು ಎಂಬ ಅರಿವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡುವವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಳಗ್ಗೆಯಿಂದ ಸಾ.ರಾ.ಮಹೇಶ್ ಮತ್ತು ವಿಶ್ವನಾಥ್ ನಡುವೆ ನಡೆದ ಮಾತಿನ ಚಕಮಕಿಯನ್ನು ನೋಡುತ್ತಲೇ ಇದ್ದ ರಾಜ್ಯದ ಜನರು, ಆಮೇಲೆ ವಿಧಾನಸೌಧ ಮುಂಭಾಗದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಗೌರವ ಸಲ್ಲಿಸಿದ ಸಿಎಂ ಯಡಿಯೂರಪ್ಪ; “ಯೋಗೀಶ್ವರ್ ಅವರನ್ನು ಮಂತ್ರಿ ಮಾಡುವುದು ನೂರಕ್ಕೆ ನೂರರಷ್ಟು ಖಚಿತ” ಎಂದುಬಿಟ್ಟರು. ಇನ್ನು; ಮಧ್ಯಾಹ್ನದ ನಂತರ ಬೆಂಗಳೂರಿನ ಶಾಸಕರ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸಿಡಿಸಿದ ಬಾಂಬುಗಳು ಬಿಜೆಪಿಯನ್ನು ಅಕ್ಷಶಃ ತಲ್ಲಣಗೊಳಿಸಿವೆ. ಕಮಲ ಪಾಳಯದಲ್ಲಿ ನಡೆಯುತ್ತಿರುವ ವಿಧ್ವಂಸಕಾರಿ ರಾಜಕೀಯಕ್ಕೆ ಇದೊಂದು ನಿದರ್ಶನ ಎಂದು ಸ್ವತಃ ವಿಶ್ವನಾಥ್ ಅವರೇ ಹೇಳಿದರು.
ನನ್ನ ಸೋಲಿಗೆ ಆ ಇಬ್ಬರೇ ಕಾರಣ
ಮೀಡಿಯಾ ಮುಂದೆ ವಿಶ್ವನಾಥ್ ಹೇಳಿದ್ದಿಷ್ಟು;
⦁ ನನ್ನ ಸೋಲಿಗೆ ಸಿ.ಪಿ.ಯೋಗೀಶ್ವರ್ ಮತ್ತು ಎನ್.ಆರ್.ಸಂತೋಷ್ ಕಾರಣ. ಹುಣಸೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದಿಂದ ಚುನಾವಣೆಯ ವೆಚ್ಚಕ್ಕಾಗಿ ನೀಡಿದ ಭಾರೀ ಮೊತ್ತದ ಹಣವನ್ನು ಸೈನಿಕನಿಗೆ (ಸಿ.ಪಿ.ಯೋಗೀಶ್ವರ್), ಎನ್.ಆರ್.ಸಂತೋಷ್ ಲಪಟಾಯಿಸಿದರು. ಆ ಹಣವನ್ನು ವಿಶ್ವನಾಥ್‌ಗೆ ಕೊಟ್ಟು ಬಾ ಅಂತ ಸ್ವತಃ ಯಡಿಯೂರಪ್ಪ ಹೇಳಿ ಕಳಿಸಿದ್ದರು. ಆ ಮೊತ್ತವನ್ನು ತೆಗೆದುಕೊಂಡು ಅವರು ಹುಣಸೂರಿಗೆ ಬರಲೇ ಇಲ್ಲ.
⦁ ಬೈ ಎಲೆಕ್ಷನ್ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮುನ್ನವೇ ಕೆಲವರು ಹುಣಸೂರು ಮೇಲೆ ಕಣ್ಣಿಟ್ಟಿದ್ದರು. ಅಭ್ಯರ್ಥ ಹೆಸರು ಪ್ರಕಟಿಸುವ ಮೊದಲೇ ಯೋಗೀಶ್ವರ್ ಹುಣಸೂರು ಕ್ಷೇತ್ರದ ಉದ್ದಗಲಕ್ಕೂ ಈ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಪ್ರಚಾರ ಮಾಡಿಕೊಂಡು, ಎಲ್ಲಾ ಕಡೆ ಫ್ಲೆಕ್ಸ್-ಬ್ಯಾನರ್ ಕಟ್ಟಿಕೊಂಡು ಅಬ್ಬರ ಮಾಡಿದವರು ಯಾರು? ಸೀರೆ, ಕುಕ್ಕರ್ ಹಂಚಿದವರು ಯಾರು? ಎಲ್ಲವನ್ನೂ ಬಹಿರಂಗವಾಗಿಯೇ ಮಾಡಿ ಸಿಕ್ಕಿಬಿದ್ದರು. ಮಾಧ್ಯಮಗಳಲ್ಲಿ ಇದು ಸಿಕ್ಕಾಪಟ್ಟೆ ಚರ್ಚೆಯಾಯಿತು. ನನ್ನ ಸೋಲಿಗೆ ಇದೂ ಕಾರಣವಾಯಿತು. ಈಗ ಅಂತಹ ಕಳಂಕಿತ ವ್ಯಕ್ತಿಯನ್ನು ಯಡಿಯೂರಪ್ಪ ನೂರಕ್ಕೆ ನೂರು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಜ್ಯವನ್ನು ಮುನ್ನಡೆಸುವ ಮುಖ್ಯಮಂತ್ರಿಯೇ ಪಕ್ಷಕ್ಕೆ ದ್ರೋಹ ಬಗೆದ, ಪಕ್ಷದ ಆಭ್ಯರ್ಥಿ ವಿರುದ್ಧವೇ ಷಡ್ಯಂತ್ರ ಮಾಡಿದ ವ್ಯಕ್ತಿಯನ್ನೇ ಮಂತ್ರಿ ಮಾಡುವೆ ಎಂದು ಹೇಳಿಕೆ ನೀಡಿದರೆ ಹೇಗೆ? ಹುಣಸೂರಿನಲ್ಲಿ ನನ್ನ ವಿರುದ್ಧ ನಡೆದ ಎಲ್ಲ ಷಡ್ಯಂತ್ರಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿಗೆ ಲಿಖಿತ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ. ಪಕ್ಷದ ಆಧಿಕೃತ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಇಂಥವರನ್ನು ಮಂತ್ರಿ ಮಾಡಿದರೆ ಅರ್ಥವೇನು?
⦁ ನನಗೆ ತುಂಬಾ ಆಘಾತವಾಗಿದೆ. ಯಾರು ನನ್ನಿಂದ ನೆರವು ಪಡೆದು ಸರಕಾರ ರಚಿಸಿ ಎಲ್ಲವನ್ನೂ ಅನುಭವಿಸುತ್ತಿದ್ದಾರೆಯೋ ಅವರೇ ಸಂಕಷ್ಟ ಕಾಲದಲ್ಲಿ ನನ್ನ ನೆರವಿಗೆ ಬರಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಪಕ್ಷದ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ಆ ಪಟ್ಟಿ ಬಿಡುಗಡೆ ಆದಾಗ ನನ್ನ ಹೆಸರೇ ಬಿಟ್ಟು ಹೋಗಿತ್ತು. ನನಗೆ ತೀವ್ರ ಶಾಕ್ ಆಯಿತು. ಪಕ್ಷಕ್ಕಿಂತ ಸಂಘ ಪರಿವಾರದ ಮಟ್ಟದಲ್ಲಿ ನನಗೆ ಹೆಚ್ಚು ಬೆಂಬಲ, ನೈತಿಕ ಶಕ್ತಿ ಸಿಕ್ಕಿತು. ಆದರೆ, ನಂಬಿದರೆಲ್ಲ ಕೈಕೊಟ್ಟರು. ನ್ಯಾಯಾಲಯದಲ್ಲಿ ನನ್ನ ಬಗ್ಗೆ ವಿಚಾರಣೆ ನಡೆಯುತ್ತಿದ್ದ ವೇಳೆಯಲ್ಲೂ ನನಗೆ ನಿರೀಕ್ಷಿತ ಸಹಕಾರ ಸಿಗಲೇ ಇಲ್ಲ. ಆ ಎಲ್ಲ ನೋವುಗಳು ಕಣ್ಣಿಗೆ ಕಟ್ಟಿದಂತೆ ಕಾಡುತ್ತಿವೆ.
***
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..