ಬೆಂಗಳೂರು: ಎಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಕಾರ ಅನುದಾನ ನೀಡುತ್ತಿದ್ದು, ಅವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಔಷಧಿ ನೀಡಲು ಎಲ್ಲ ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ. ಎಪಿಎಲ್ ಹಾಗೂ ಬಿಪಿಎಲ್ ರೋಗಿಗಳಿಗೆ ಇದು ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮ, ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್‍ಐವಿ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು; ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆಯೊಂದಿಗೆ ಏಡ್ಸ್ ನಿಯಂತ್ರಣಕ್ಕೆ ತರಬೇಕು ಎಂದು ಈ ಬಾರಿ ಘೋಷಿಸಲಾಗಿದೆ. ಎಚ್ಐವಿ ಸೋಂಕಿತರು ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಕೋವಿಡ್ ಬಂದಾಗ, ʼರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲʼ ಎಂಬ ಸಂದೇಶ ನೀಡಲಾಯಿತು. ಈ ಸಂದೇಶ ಎಲ್ಲ ರೋಗಗಳಿಗೂ ಅನ್ವಯವಾಗುತ್ತದೆ. ಏಡ್ಸ್ ರೋಗಿಗಳನ್ನು ಅವಮಾನಕಾರಿಯಾಗಿ ನೋಡಬಾರದು ಎಂದರು.
ಉತ್ತಮ ಆರೋಗ್ಯ ಸೌಲಭ್ಯಗಳು ಇರುವುದರಿಂದ ಏಡ್ಸ್ ಪ್ರಕರಣಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. 99 ವರ್ಷದ ಎಚ್ ಐವಿ ಸೋಂಕಿತರು ಕೂಡ ಜೀವಂತವಾಗಿ ಆರೋಗ್ಯದಿಂದಿದ್ದಾರೆ. ಆ ಮಟ್ಟಿಗೆ ಆರೋಗ್ಯ ಸೌಲಭ್ಯಗಳಿವೆ. ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಉಚಿತ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದರು.
“ಎಚ್ ಐವಿ ಸೋಂಕಿತರಿಗೆ ಕೋವಿಡ್ ಕೂಡ ಬಂದರೆ ಕಷ್ಟ ಎಂದು ಮೊದಲಿಗೆ ಭಯವಾಗಿತ್ತು. ರಾಜ್ಯದಲ್ಲಿ 280 ಎಚ್ಐವಿ ಸೋಂಕಿತರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ಪೈಕಿ 275 ಮಂದಿ ಜೀವಂತವಾಗಿದ್ದು, ಅವರ ಆರೋಗ್ಯ ಸುರಕ್ಷಿತವಾಗಿದೆ “
ಕೋವಿಡ್ ಲಸಿಕೆ ಪ್ರಯೋಗ
ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಇನ್ನೂ ಪ್ರಯೋಗ ನಡೆಯುತ್ತಿದೆ. ರಾಜ್ಯದಲ್ಲಿ ವೈದೇಹಿ ವೈದ್ಯಕೀಯ ಸಂಸ್ಥೆಯಲ್ಲಿ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಲಸಿಕೆ ದೊರೆಯಲಿದೆ ಎಂದ ಸಚಿವರು; ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಸಾರ್ವಜನಿಕರಲ್ಲಿ ಇತರೆ ಸಹ ಅಸ್ವಸ್ಥಟ್ಟೆಗಳನ್ನು ಹೊಂದಿದವರಿಗೆ ಮೊದಲು ಲಸಿಕೆ ನೀಡಲಾಗುವುದು. ರಾಜ್ಯದ ಮೂಲೆಮೂಲೆಗೂ ಲಸಿಕೆ ವಿತರಣೆ ಮಾಡಲಾಗುವುದು. ಈ ಪ್ರಕ್ರಿಯೆಯಲ್ಲಿ ಯಾವುದೇ ನ್ಯೂನತೆಯಾಗುವುದಿಲ್ಲ ಎಂದರು.