ಬೆಂಗಳೂರು: ವೀರಶೈವ ಲಿಂಗಾಯಿತರ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂಪಾಯಿ ಅನುದಾನ ನೀಡಿದ ಮೇಲೆ ಒಕ್ಕಲಿಗರೂ ಕೂಡ ಅಭಿವೃದ್ಧಿ ನಿಗಮ ಮಾಡಬೇಕೆಂದು ದನಿ ಎತ್ತಿದ್ದಾರೆ.
ಈಗಾಗಲೇ ಸರಕಾರದ ಮಟ್ಟದಲ್ಲಿಯೂ ಈ ಬಗ್ಗೆ ಸಮುದಾಯದ ಬೇಡಿಕೆ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆಶೋಕ್ ಹೇಳಿದ್ದಾರೆ. ಇನ್ನೊಂದೆಡೆ ಮಂಗಳವಾಋ ಬೆಳಗ್ಗೆಯಿಂದ ರಾಮನಗರದಲ್ಲಿ ಪ್ರವಾಸದಲ್ಲಿದ್ದ ಡಿಸಿಎಂ, ಒಕ್ಕಲಿಗರ ಅಭಿವೃದ್ಧಿ ನಿಗಮದ ಬಗ್ಗೆ ಮಾತನಾಡಿದ್ದಾರೆ.
ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಮುದಾಯದಿಂದ ತೀವ್ರ ಒತ್ತಾಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಮಾತನಾಡುವೆ ಎಂದು ಅಶ್ವತ್ಥನಾರಾಯಣ ಹೇಳಿದರು.
ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಅಭಿವೃದ್ಧಿ ನಿಗಮ ಆಗಲೇಬೇಕು ಎಂದು ಈಗಾಗಲೇ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ದೂರವಾಣೆ ಕರೆ ಮಾಡಿ ಒತ್ತಾಯ ಮಾಡಿದ್ದಾರೆ. ಹಾಗೆಯೇ ಸಮುದಾಯದ ಪ್ರಮುಖರು, ಹಿರಿಯರು ಪ್ರಬಲವಾಗಿ ಆಗ್ರಹ ಮಾಡುತ್ತಿದ್ದಾರೆಂದು ತಿಳಿಸಿದರು.
ಬಿಜೆಪಿಯು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರಿಸಿರುವ ಪಕ್ಷ. ಎಲ್ಲ ಜಾತಿ- ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವಂಥ ಕೆಲಸವನ್ನು ಯಡಿಯೂರಪ್ಪ ನೇತೃತ್ವದ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಹೆಚ್ಚು ಒತ್ತಾಯವಿದೆ. ಆ ಬಗ್ಗೆಯೂ ಸರಕಾರ ಗಮನಹರಿಸಲಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಬದ್ಧವಾಗಿದೆ ಎಂದರು ಡಿಸಿಎಂ.
ಕೃಷಿಯನ್ನೇ ನಂಬಿರುವ ಒಕ್ಕಲಿಗರು ಅನೇಕ ಕಾರಣಗಳಿಂದ ಹಿಂದುಳಿದಿದ್ದಾರೆ. ಸಕಾಲಕ್ಕೆ ಮಳೆಯಾಗದೆ, ಶಾಶ್ವತ ನೀರಾವರಿ ಸೌಲಭ್ಯ ಇಲ್ಲದೆ ಹಾಗೂ ಕೈಗಾರಿಕೆಗಳಿಂದ ಭೂಮಿ ಕಳೆದುಕೊಂಡು ಈ ಸಮುದಾಯ ಅತೀವ ತೊಂದರೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ನಿಗಮದ ಅಗತ್ಯವಿದೆ. ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು, ಸಮುದಾಯದ ಭಾವನೆಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.