ಲಂಡನ್: ಕೋವಿಡ್ ಹೆಮ್ಮಾರಿ ಹುಟ್ಟಿದ ಬರೋಬ್ಬರಿ ವರ್ಷದ ನಂತರ ಲಸಿಕೆ ಸಿಕ್ಕಿದ್ದಕ್ಕೆ ಇಡೀ ಜಗತ್ತೇ ಥ್ರಿಲ್ ಆಗಿದೆ, ಮಾತ್ರವಲ್ಲದೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಅಮೆರಿಕ ಮೂಲದ ಫಿಜರ್ ಮತ್ತು ಜರ್ಮನಿಯ ಬಯೋಟೆಕ್ ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್‌ನ ಬೊರೀಸ್ ಜಾನ್ಸನ್ ನೇತೃತ್ವದ ಸರಕಾರ ಒಪ್ಪಿಗೆ ನೀಡಿದ್ದು, ಬಹುತೇಕ ಮುಂದಿನ ವಾರದೊಳಗೆ ಬಿಡುಗಡೆಯಾಗಲಿದೆ. ಭಾರತವೂ ಸೇರಿ ಜಗತ್ತಿನ ಎಲ್ಲ ಪ್ರಮುಖ ದೇಶಗಳಲ್ಲೂ ಕೋವಿಡ್ ಲಸಿಕೆ ಆವಿಷ್ಕಾರ ಯತ್ನಗಳು ನಡೆಯುತ್ತಿದ್ದು, ಸಂಭವನೀಯ ಲಸಿಕೆಗಳು ವಿವಿಧ ಹಂತಗಳ ಪರೀಕ್ಷೆಯ ಮಟ್ಟದಲ್ಲೇ ಇವೆ. ಆದರೆ, ಹೆಸರಿಗೆ ತಕ್ಕಂತೆ ಗ್ರೇಟ್ ಬ್ರಿಟನ್ ಇತರೆ ದೇಶಗಳಿಗಿಂತ ಮುಂದಿದ್ದು ಲಸಿಕೆಯನ್ನು ಇನ್ನೇನು ಜನರಿಗೆ ತಲುಪಿಸಲಿದೆ.
ಪ್ರಧಾನಮಂತ್ರಿ ಬೊರೀಸ್ ಜಾನ್ಸನ್ ಈ ಬಗ್ಗೆ ಟೀಟ್ ಮಾಡಿದ್ದು, ಮುಂದಿನ ವಾರದೊಳಗೆ ಲಸಿಕೆ ಸಿಗುತ್ತದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಲಸಿಕೆ ಹಂಚಿಕೆಗೆ ಬ್ರಿಟನ್ ನೀಡಿರುವ ಒಪ್ಪಿಗೆಯನ್ನು ಯುರೋಪಿನ ಅನೇಕ ದೇಶಗಳು ಗಮನಿಸುತ್ತಿವೆ.
ಪ್ರಧಾನಿ ಜಾನ್ಸನ್ ಅವರು ಲಸಿಕೆ ಬ್ರಿಟನ್‌ನ ಎಲ್ಲೆಡೆ ತಲುಪಿಸುವ ಬಗ್ಗೆ ಈಗಾಗಲೇ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಪ್ರತಿಯೊಂದು ಅಂಶವನ್ನೂ ಸ್ವತಃ ಜಾನ್ಸನ್ ಅವರೇ ಪರಿವೇಕ್ಷಣೆ ಮಾಡುತ್ತಿದ್ದಾರೆ. ಅವರ ಮಾತಿನಂತೆ ಮುಂದಿನ ವಾರದ ಹೊತ್ತಿಗೆ ಲಸಿಕೆ ಹೊರಬರಲಿದ್ದು, ಇತರೆ ಎಲ್ಲ ದೇಶಗಳಿಗಿಂತ ಬ್ರಿಟನ್ ತನ್ನ ಪ್ರಜೆಗಳಿಗೆ ಕೋವಿಡ್ ಲಸಿಕೆ ಹಾಕಿಸಿದ ಮೊದಲ ದೇಶವಾಗಿ ಹೊರಹೊಮ್ಮಲಿದೆ.
ಬಹುಶಃ ಬ್ರಿಟನ್ ಸೇರಿದಂತೆ ಇತರೆ ದೇಶಗಳಲ್ಲೂ ಕೋವಿಡ್ ಲಸಿಕೆ ತಯಾರಿ ಅಂತಿಮ ಹಂತದಲ್ಲಿದ್ದು, ಆ ದೇಶಗಳು ತಮ್ಮ ಪ್ರಜೆಗಳಿಗೆ ಲಸಿಕೆ ನೀಡಲು ಮುಂದಾಗುವ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ; ಬ್ರಿಟನ್ ದೇಶವು ಸುಮಾರು 20 ದಶಲಕ್ಷ ಪ್ರಜೆಗಳಿಗೆ ಸಾಕಾಗುವಷ್ಟು ಫಿಜರ್ ಲಸಿಕೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ವಿಶೇಷವೆಂದರೆ; ತನ್ನ ನೆರೆ ದೇಶ ಜರ್ಮನಿಯ ಬಯೋಟೆಕ್ ಸಂಸ್ಥೆಯಿಂದಲೇ ಬ್ರಿಟನ್ ಲಸಿಕೆ ಖರೀದಿ ಮಾಡುತ್ತಿದೆ.