ಇನ್ನು ಮುಂದೆ ಉದ್ಯೋಗ ಮಾರುಕಟ್ಟೆ ಡಿಮಾಂಡ್‌ಗೆ ತಕ್ಕಂತೆ ಇರಲಿದೆ ಡಿಪ್ಲೊಮೋ ಪಠ್ಯ
ಬೆಂಗಳೂರು: ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಡಿಪ್ಲೊಮೋ ಪಠ್ಯವನ್ನು ಆಮೂಲಾಗ್ರವಾಗಿ ಬದಲಾವಣೆ ಆಗಲಿದೆ. ಹಲವು ವರ್ಷಗಳಿಂದ ನಿಂತ ನೀರಿನಂತಾಗಿದ್ದ ಈ ಸಿಲೆಬಸ್‌ಗೆ ಆಮೂಲಾಗ್ರ ಟ್ರೀಟ್‌ಮೆಂಟ್ ನೀಡಲು ಮುಂದಾಗಿರುವ ಸರಕಾರ, ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆ ಸಿಗುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ವಿಷಯವನ್ನು ತಿಳಿಸಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಗೆ ಸಂಬಂಧಿಸಿದ ವಿಧಾನಪರಿಷತ್ ಸದಸ್ಯರ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸದ್ಯಕ್ಕೆ ಇರುವ ಡಿಪ್ಲೊಮೋ ಕೋರ್ಸುಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಪ್ರತೀ ವರ್ಷಕ್ಕೆ ರಾಜ್ಯದಲ್ಲಿ 40,000 ಅಂತಿಮ ವರ್ಷದ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದು, ಈ ಪೈಕಿ ಕೊನೆಪಕ್ಷ ಶೇ.20ರಷ್ಟು ವಿದ್ಯಾರ್ಥಿಗಳಿಗೂ ಉದ್ಯೋಗ ಸಿಗುತ್ತಿಲ್ಲ ಎಂದರು.
ಅದಕ್ಕೆ ಕಾರಣವಿಷ್ಟೇ; ಈಗಿರುವ ಡಿಪ್ಲೊಮೋ ಪಠ್ಯವೂ ಸಕಾಲಿಕವಾಗಿಲ್ಲ, ಇವತ್ತಿನ ಕೈಗಾರಿಕೆ ಅಗತ್ಯಗಳಿಗೆ ಅದು ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಅಗತ್ಯ ಇರುವ, ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಾಗೂ ಸದಾಕಾಲ ಕೆಲಸಕ್ಕೆ ಅರ್ಹತೆ ಕಲ್ಪಿಸಬಲ್ಲ ಪಠ್ಯವನ್ನು ಸಂಬಂಧಪಟ್ಟ ಎಲ್ಲರ ಜತೆ ಚರ್ಚಿಸಿ ರೂಪಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಡಿಪ್ಲೊಮಾ ಕೋರ್ಸ್ʼನ ಪಠ್ಯವನ್ನು ಮರುಪರಿಷ್ಕಣೆ ಮಾಡುವ ಮೂಲಕ ನ್ಯಾಷನಲ್ ಕ್ವಾಲಿಫಿಕೇಶ್ ಬಗ್ಗೆ ಬದಲಾವಣೆ ಮಾಡಲಾಗಿದೆ. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಠ್ಯವನ್ನು ಮರುರೂಪಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಯಾವುದೇ ರೀತಿಯ ಹಣಕಾಸಿನ ಹೊರೆ ಸರಕಾರದ ಮೇಲೆ ಬೀಳುತ್ತಿಲ್ಲ ಎಂದರು ಉಪ ಮುಖ್ಯಮಂತ್ರಿ.
ಪರಿಷತ್ ಸದಸ್ಯರಿಂದ ಸಲಹೆ
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈಗಾಗಲೇ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ತರಲಾಗಿದೆ. ಆ ಬಗ್ಗೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ಮುಂದೆ ಕೈಗೊಳ್ಳಬಹುದಾದ ಸುಧಾರಣೆಗಳು, ನೂತನವಾಗಿ ಜಾರಿಗೆ ಬಂದಿರುವ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‌ಎಂಎಸ್) ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪರಿಷತ್ ಸದಸ್ಯರು ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಶಿಕ್ಷಣ ನೀತಿಗೆ ಪಕ್ಷಬೇಧವಿಲ್ಲದೆ ಬೆಂಬಲ
ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಭೆಯಲ್ಲಿದ್ದ ಎಲ್ಲ ಸದಸ್ಯರು ಪಕ್ಷಬೇಧವಿಲ್ಲದೆ ಬೆಂಬಲ ಸೂಚಿಸಿದ್ದಾರೆ. ಮೂರು ದಶಕಗಳಿಗೂ ಮಿಕ್ಕಿ ಹಳೆಯದಾದ, ಪ್ರಸಕ್ತ ಸಂದರ್ಭಕ್ಕೆ ಸೂಕ್ತವಲ್ಲದ ಶಿಕ್ಷಣ ನೀತಿಯಿಂದ ಯಾವುದೇ ಪ್ರಯೋಜವಿಲ್ಲ. ಹೊಸ ನೀತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ತುಂಬಬಲ್ಲ ಅಂಶಗಳಿವೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು. ಇನ್ನು, ರಾಜ್ಯದಲ್ಲಿ ಈಗಾಗಲೇ ಉನ್ನತ ಶಿಕ್ಷಣ ಪರಿಷತ್ ಇದೆ. ಅದರ ಜತೆಗೆ, ಪ್ರಾಥಮಿಕ ಶಿಕ್ಷಣ ಪರಿಷತ್ ಸ್ಥಾಪನೆ ಮಾಡುವ ಸರಕಾರದ ಪ್ರಯತ್ನಕ್ಕೆ ಒಕ್ಕೊರಲ ಬೆಂಬಲ ಸೂಚಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಪೂರಕವಾದ ಮೂರು ಹೊಸ ಕಾನೂನುಗಳನ್ನು ಜಾರಿಗೆ ತರಬೇಕಿದೆ ಹಾಗೂ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಆದಷ್ಟು ಬೇಗ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಎಲ್ಎಂಎಸ್ ವ್ಯವಸ್ಥೆ ಜಾರಿಗೆ
ಈಗಾಗಲೇ ನೂತನ ಕಲಿಕಾ ನಿರ್ವಹಣಾ ಪದ್ಧತಿಯನ್ನು ಜಾರಿ ಮಾಡಲಾಗಿದೆ. ತಂತ್ರಜ್ಞಾನದ ಮೂಲಕ ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಐದು ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಅನುಕೂಲವಾಗುತ್ತದೆ. ಈಗಾಗಲೇ ರಾಜ್ಯದಲ್ಲಿರುವ ಒಟ್ಟು 8 ಸಾವಿರ ತರಗತಿ ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್ ರೂಮುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಮೊದಲ ಹಂತದಲ್ಲಿ 2,500 ರೂಮುಗನ್ನು ಸ್ಮಾರ್ಟ್‌ಕ್ಲಾಸ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಹೈಸ್ಪೀಡ್ ಇಂಟರ್‌ನೆಟ್, ಪವರ್ ಪಾಯಿಂಟ್ಸ್ ಪ್ರಜಂಟೇಶನ್, 2 ಕೆವಿ ಬ್ಯಾಕ್ ಅಪ್ ಬ್ಯಾಟರಿ ಸೌಲಭ್ಯಗಳನ್ನು ತರಗತಿಗಳಿಗೆ ಕಲ್ಪಸಿಲಾಗುವುದು. ಈ ಪರಿಕಲ್ಪನೆ ಬಗ್ಗೆ ಪರಿಷತ್ ಅತೀವ ಸಂತಸ ವ್ತಕ್ತಪಡಿಸಿದರು ಎಂದರು ಉಪ ಮುಖ್ಯಮಂತ್ರಿ.
ಸಭೆಯಲ್ಲಿ ಪರಿಷತ್ ಸದಸ್ಯರಾದ ಪುಟ್ಟಣ್ಣ, ಮರಿತಿಬ್ಬೇಗೌಡ, ವೈ.ಎ.ನಾರಾಯಣ ಸ್ವಾಮಿ, ಅ.ದೇವೇಗೌಡ, ಬೋಜೇಗೌಡ, ಚಿದಾನಂದ ಗೌಡ, ಅರುಣ್ ಶಹಾಪೂರ, ಸುಶೀಲ್ ನಮೋಶಿ, ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.