ಬೆಂಗಳೂರು: ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೇಲ್ಮನೆಯಲ್ಲಿ ನಮ್ಮ ಪಕ್ಷಕ್ಕೆ ಸಂಖ್ಯಾಬಲವಿದೆ. ಹೀಗಾಗಿ ಪರಿಷತ್ ಸಭಾಪತಿ ಸ್ಥಾನವೂ ಬಿಜೆಪಿಗೇ ಇರಬೇಕು ಎಂಬುದು ನಮ್ಮ ಪಕ್ಷದ ನಾಯಕರ ಆಪೇಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ನಿಶ್ಚಯಿಸಲಾಗಿದೆ ಎಂದರು.
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಸಭಾಪತಿಯನ್ನು ಕೆಳಗಿಳಿಸಿದ ಮೇಲೆ ಮುಂದಿನ ಸಭಾಪತಿ ಯಾರಾಗಬೇಕು ಎಂದು ಪಕ್ಷದ ಮುಖಂಡರು ನಿರ್ಧಾರ ಮಾಡುತ್ತಾರೆ. ಜೆಡಿಎಸ್ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದ ಅವರು, ನಿಮ್ಮ ಪಕ್ಷಕ್ಕೆ ಜೆಡಿಎಸ್‌ನಿಂದ ವಲಸೆ ಬಂದು ಮೇಲ್ಮನೆಗೆ ಆಯ್ಕೆ ಆಗಿರುವ ಪುಟ್ಟಣ್ಣ ಅವರು ಸಭಾಪತಿ ಆಗುವ ಚಾನ್ಸ್ ಇದೆಯಾ ಎಂಬ ಪ್ರಶ್ನೆಗೂ ಅವರು ನೇರವಾಗಿ ಉತ್ತರ ನೀಡಲಿಲ್ಲ.
ಬದಲಿಗೆ ಪುಟ್ಟಣ್ಣನವರೇ ಆಗ್ತಾರಾ? ಅಥವಾ ಬೇರೆಯವರು ಆಗ್ತಾರಾ? ಎಂಬುದು ಇನ್ನು ಕೆಲ ದಿನಗಳಲ್ಲೇ ಗೊತ್ತಾಗುತ್ತದೆ ಎಂದಷ್ಟೇ ಹೇಳಿದರು ಡಿಸಿಎಂ.
ಪುಟ್ಟಣ್ಣ ಪ್ರಯತ್ನಕ್ಕೆ ನೀರು-ಗೊಬ್ಬರ
ಸಭಾಪತಿ ಆಗಲು ಪುಟ್ಟಣ್ಣ ಬಹಳ ಜೋರಾಗಿಯೇ ಯತ್ನಿಸುತ್ತಿದ್ದಾರೆಂದು ಹೇಳಲಾಗಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಬೆಂಬಲವಿದೆ ಎನ್ನಲಾಗಿದೆ. ಜತೆಗೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಪುಟ್ಟಣ್ಣ ಬಗ್ಗೆಯೇ ಒಲವು ಹೊಂದಿದ್ದಾರೆಂದು ಗೊತ್ತಾಗಿದೆ.