ಸುದ್ದಿ ವಿಶ್ಲೇಷಣೆ
ತೆಲುಗು, ತಮಿಳು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸಿನಿಮಾರಂಗದಲ್ಲಿ ಪೀಕ್‌ನಲ್ಲಿ ಇದ್ದಾಗಲೇ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಅವರ ಸಮ್ಮುಖದಲ್ಲಿ ಭಾರತೀಯ ಜನತಾಪಕ್ಷವನ್ನು ಸೇರಿದ್ದ ಹಿರಿಯ ಚಿತ್ರನಟಿ ವಿಜಯಶಾಂತಿ ಮತ್ತೆ ಅಲ್ಲಿಗೇ ಬಂದು ನಿಂತಿದ್ದಾರೆ. ಅಂದರೆ; ಬಿಜೆಪಿಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ತೆಲಂಗಾಣ ಚಳವಳಿ ಹೆಸರೇಳಿಕೊಂಡು ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಧಿಕ್ಕರಿಸಿ, ಅದೇ ಆಂಧ್ರಪ್ರದೇಶದ ಆವತ್ತಿನ ಪಕ್ಷದ ಹಿರಿಯ ನಾಯಕರಾದ ಬಂಡಾರು ದತ್ತಾತ್ರೇಯ, ವಿದ್ಯಾಸಾಗರ ರಾವ್ ಮುಂತಾದವರ ಬುದ್ಧಿಮಾತಿಗೆ ಕವಡೆಕಾಸಿನ ಕಿಮ್ಮತ್ತೂ ಕೊಡದೆ ಬಿಜೆಪಿ ಬಿಟ್ಟು ʼತಲ್ಲಿ ತೆಲಂಗಾಣʼ ಪಕ್ಷ ಸ್ಥಾಪನೆ ಮಾಡಿದ್ದ ವಿಜಯಶಾಂತಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಲೇಡಿ ಅಮಿತಾಭ್ ಎಂತಲೂಮ ಮತ್ತೂ ಲೇಡಿ ಸೂಪರ್‌ಸ್ಟಾರ್ ಎಂತಲೂ ಹೆಸರಾಗಿದ್ದರು. ಆ ಇಮೇಜಿನ ಉಮೇದಿನಲ್ಲೇ ರಾಜಕೀಯಕ್ಕೆ ಸಡನ್ ಆಗಿ ಎಂಟ್ರಿ ಕೊಟ್ಟ ಅವರು ತಮ್ಮ ಸ್ಟಾರ್‌ಗಿರಿ ಮೂಲಕ ತಮಗೆ ಬುದ್ಧಿ ಹೇಳಿದ್ದ ನಾಯಕರನ್ನೇ ಮೀರಿ ಬೆಳೆಯಲು ಯತ್ನಿಸಿ ಮುಗ್ಗರಿಸಿದ್ದರು.
ಹಾಗಂತ ಬಿಜೆಪಿಯೇನೂ ಅವರನ್ನು ಕಡೆಗಣಿಸಿರಲಿಲ್ಲ. ಅವರ ವಯಸ್ಸು, ಶಕ್ತಿಗೂ ಮೀರಿ ಚಾನ್ಸ್ ನೀಡಿತ್ತು. ಇನ್ನು ಅವಗೋ ಮಹತ್ವಾಕಾಂಕ್ಷೆ ಎಂಬುದು ಕೊಂಚ ಜಾಸ್ತಿ. 1998ರಲ್ಲಿ ಪಕ್ಷಕ್ಕೆ ಬರುತ್ತಿದ್ದಂತೆಯೇ ಅವರನ್ನು ಬಿಜೆಪಿಯ ರಾಷ್ಟ್ರೀಯ ಮಹಿಳಾ ವಿಭಾಗದ (ಭಾರತೀಯ ಮಹಿಳಾ ಮೋರ್ಚಾ) ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಅದೇ ಜೋಶ್‌ನಲ್ಲಿಯೇ ನೆಲ್ಲೂರಿನಲ್ಲಿ ಅದೇ ಮೋರ್ಚಾದ ದೊಡ್ಡ ಸಭೆಯೊಂದು ಆಯೋಜನೆಯಾಗಿ, ಅದರ ನೇತೃತ್ವವನ್ನು ವಿಜಯಶಾಂತಿ ಅವರೇ ವಹಿಸಿದ್ದರು. ಅವರ ಸ್ಟಾರ್‌ಗಿರಿಯ ಕಾರಣಕ್ಕೆ ಆವತ್ತು ನೆಲ್ಲೂರು ನಗರದ ತುಂಬಾ ಕೇಸರಿ ಬಾವುಟಗಳು ರಾರಾಜಿಸಿದ್ದವು.
ದಿನ ಕಳೆದಂತೆ ಅವಿಭಜಿತ ಆಂಧ್ರಪ್ರದೇಶದಲ್ಲಿ ವಿಜಯಶಾಂತಿ ಪ್ರಭಾವ ಅದ್ಹೇಗೆ ಶರವೇಗದಲ್ಲಿ ಹೆಚ್ಚಿತೆಂದರೆ, 1999ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಹುರಿಯಾಳಾಗಿ ಅವರನ್ನೇ ನಿಲ್ಲಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು. ಆಗ, ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿತ್ತು. ವೈ.ಎಸ್.ರಾಜಶೇಖ ರೆಡ್ಡಿ ಸಿಎಂ ಆಗಿದ್ದರು. ಹೀಗಾಗಿ ಸೋನಿಯಾ ಅವರನ್ನು ಸುರಕ್ಷಿತವಾದ ಕಡಪ ಲೋಕಸಭಾ ಕ್ಷೇತ್ರದಲ್ಲಿ ನಿಲ್ಲಿಸಿಕೊಂಡು ಗೆಲ್ಲಿಸಲು ಸ್ವತಃ ರೆಡ್ಡಿ ಅವರೇ ಪ್ಲ್ಯಾನ್ ಮಾಡಿದ್ದರು. ಆದರೆ, ಕೊನೆಕ್ಷಣದಲ್ಲಿ ಸೋನಿಯಾ ಗಾಂಧಿ ಅವರು ಕರ್ನಾಟಕದ ಬಳ್ಳಾರಿಯಲ್ಲಿ ಕಣಕ್ಕಿದರು. ಹೀಗಾಗಿ, ತಮ್ಮ ರಾಜಕೀಯ ಜೀವನದ ಅತ್ಯಂತ ಪ್ರಮುಖ ಮೈಲುಗಲ್ಲೊಂದು ಹಾಗೆ ಅವರಿಗೆ ಮಿಸ್ ಆಯಿತು. ಒಂದು ವೇಳೆ ಅವರು ಸ್ಪರ್ಧಿಸಿ ಸೋತಿದ್ದರೂ ಅವರ ಪೊಲಿಟಿಕಲ್ ಕರಿಯರ್‌ಗೆ ಆ ಚುನಾವಣೆ ದೊಡ್ಡ ಶಕ್ತಿಯಾಗುತ್ತಿತ್ತು. ಆದರೆ, ಹಾಗಾಗಲಿಲ್ಲ. ಆದರೂ ಪಕ್ಷದಲ್ಲಿ ಅವರ ಗ್ರಾಫ್ ಏರುಮುಖದಲ್ಲೇ ಇತ್ತು. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದರೂ ವಿಜಯಶಾಂತಿ ಸ್ಟಾರ್ ಪ್ರಚಾರಕಿಯಾಗಿರುತ್ತಿದ್ದರು. ಉತ್ತರದಲ್ಲೂ ಅವರ ಪ್ರಚಾರಕ್ಕೆ ಡಿಮಾಂಡ್ ಇತ್ತು. ವಾಜಪೇಯಿ, ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರಂಥ ಹಿರಿಯರೇ ಹೆಸರಿಟ್ಟು ಕರೆಯುವಷ್ಟರ ಮಟ್ಟಿಗೆ ಅವರು ಪಕ್ಷದಲ್ಲಿ ಬೆಳೆದಿದ್ದರು.
ತಲ್ಲಿ ತೆಲಂಗಾಣ ಸ್ಥಾಪನೆ
ಬಿಜೆಪಿಯಲ್ಲಿ ಹಳೆಯ ಲೀಡರುಗಳನ್ನೇ ಸೈಡಿಗೆ ತಳ್ಳಿ ಬೆಳೆಯುತ್ತಿದ್ದ ವಿಜಯಶಾಂತಿ 2009ರಲ್ಲಿ ವರಸೆ ಅದ್ಹೆಕೋ ವರಸೆ ಬದಲಿಸಿದರು. ಅದೇ ವರ್ಷ ಸೆಪ್ಟೆಂಬರ್ 2ರಂದು ಹೆಲಿಕಾಪ್ಟರ್ ದುರಂತದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಸಾವಗೀಡಾಗುತ್ತಿದ್ದಂತೆ ಆಂಧ್ರ ಪ್ರದೇಶದ ರಾಜಕೀಯದ ಚಿತ್ರಣವೇ ಬದಲಾಗಿ ಹೋಯಿತು. ಅದುವರೆಗೂ ತೀರಾ ಕ್ಷೀಣವಾಗಿದ್ದ ತೆಲಂಗಾಣ ದನಿ ಜೋರಾಗತೊಡಗಿತು. ದಿನೇದಿನೆ ಅದರ ಅಬ್ಬರವೂ ಜಾಸ್ತಿಯಾಯಿತು. ಅಷ್ಟೊತ್ತಿಗೆ ಬಿಜೆಪಿಯಲ್ಲಿ ಒಂದು ರೇಂಜಿಗೆ ಬಂದು ನಿಂತಿದ್ದ ವಿಜಯಶಾಂತಿ ತೆಲಂಗಾಣ ಸಾಧನೆ ತನ್ನಿಂದಲೇ ಸಾಧ್ಯವಾಗಬಹುದು ಎಂದು ನಂಬಿದರು. ಅಂದರೆ, ತೆಲಂಗಾಣಕ್ಕೆ ನಾನೇ ಮೊದಲ ಸಿಎಂ ಯಾಕಾಗಬಾರದು? ಎಂದು ಯೋಚಿಸಿದರು. ಆಗ ಹುಟ್ಟಿದ್ದೇ ತಲ್ಲಿ ತೆಲಂಗಾಣ (ಅಮ್ಮ ತೆಲಂಗಾಣ) ಎಂಬ ಪಕ್ಷ. ದುರದೃಷ್ಟವೆಂದರೆ, ಅವರ ಮಹತ್ವಾಕಾಂಕ್ಷೆ ಕೈಕೊಟ್ಟಿತು. ಬಿಜೆಪಿಯ ಸಂಘಟಿತ ಶಕ್ತಿಯ ನಡುವೆ ನಾಯಕಿಯಾಗಿ ಬೆಳೆದಿದ್ದ ವಿಜಯಶಾಂತಿ ಸ್ವಂತ ಪಕ್ಷ ಸ್ಥಾಪಿಸಿ ಹೈರಾಣಾಗಿಬಿಟ್ಟರು. ಅಕ್ಕಪಕ್ಕದಲ್ಲೇ ಇದ್ದವರು ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಕೆ.ಸಿ.ಚಂದ್ರಶೇಖರ ರಾವ್ ಜತೆ ಒಳಗೊಳಗೆ ಟಚ್‌ನಲ್ಲಿದ್ದರು. ಯಾರನ್ನು ನಂಬಿ ಅವರು ಪಕ್ಷವನ್ನು ಸ್ಥಾಪನೆ ಮಾಡಿದ್ದರೋ ಅವರೆಲ್ಲರೂ ಹಂತಹಂತವಾಗಿ ಕೈಕೊಟ್ಟರು. ಹೈದರಾಬಾದ್‌ನ ಯಾವುದೇ ವೇದಿಕೆಯಲ್ಲಿ ನಿಂತು ವೈಎಸ್‌ಆರ್ ಮತ್ತು ಚಂದ್ರಬಾಬು ನಾಯ್ಡು ಅವರಂಥ ಲೀಡರುಗಳನ್ನೇ ಯದ್ವಾತದ್ವಾ ಟೀಕೆ ಮಾಡುತ್ತಿದ್ದ ಅವರ ಸದ್ದು, ಟಿಆರ್‌ಎಸ್ ಎಂಬ ಒಂದು ಹೊಸ ರೀಜಿನಲ್ ಪಾರ್ಟಿಯಿಂದ ಅಡಗಿಹೋಗಿತ್ತು. ಎಲ್ಲರಿಗಿಂತ ಮೊದಲೇ ತೆಲಂಗಾಣ ಹೋರಾಟಕ್ಕೆ ರಾಜಕೀಯ ಕಾವು ಕೊಟ್ಟಿದ್ದ ಲೇಡಿ ಅಮಿತಾಭ್ ಅವರ ಸೇನೆಯನ್ನು ರಾತ್ರೋರಾತ್ರಿ ಹೈಜಾಕ್ ಮಡಿಬಿಟ್ಟಿದ್ದರು ಕೆಸಿಆರ್.
ಕೊನೆಗೆ ಆಗಿದ್ದೇನು ಗೊತ್ತಾ? ಸೀನ್ ಕಟ್ ಮಾಡಿದರೆ ವಿಜಯಶಾಂತಿ ಅವರು ತಮ್ಮ ಪಕ್ಷ ತಲ್ಲಿ ತೆಲಂಗಾಣವನ್ನು ಟಿಆರ್‌ಎಸ್‌ನಲ್ಲಿ ವಿಧಿ ಇಲ್ಲದೇ ವಿಲೀನ ಮಾಡಿಬಿಟ್ಟರು. ಅಲ್ಲಿಗೆ ಅವರ ರಾಜಕೀಯದ ಏರುಗತಿಯ ಗ್ರಾಫ್ ಏಳುಬೀಳಿನಂತೆ ಸಾಗತೊಡಗಿತು. ಕೆಸಿಆರ್ ಬೆಳೆಯುತ್ತಾ ಹೋದರೆ, ವಿಜಯಶಾಂತಿ ಅದರ ವಿರುದ್ಧ ದಿಕ್ಕಿನತ್ತ ಚಲಿಸುತ್ತಿದ್ದರು. ಇದಕ್ಕೆ ಸಮಾನಾಂತರವಾಗಿ ಅವರು ಸಿನಿಮಾ ರಂಗದಿಂದಲೂ ಕಂಪ್ಲೀಟ್ ತೆರೆಮರೆಗೆ ಸರಿದಬಿಟ್ಟರು.
ಹೀಗೆ ಪರಮ ಮಹತ್ವಾಕಾಂಕ್ಷಿ ಚಂದ್ರಶೇಖರ ರಾವ್ ಪಾಲಿಗೆ ಏಣಿಯಾಗಿಬಿಟ್ಟ ವಿಜಯಶಾಂತಿಗೆ 2009ರ ಲೋಕಸಭೆ ಚುನಾವಣೆ ಕೈಹಿಡಿಯಿತೆನ್ನಬಹದು. ಅವರಿಗೆ ಮೇದಕ್ ಕ್ಷೇತ್ರದ ಟಿಕೆಟ್ ಸಿಕ್ಕಿತು. ಕರೀಂನಗರ್ ಕ್ಷೇತ್ರದಲ್ಲಿ ಕೆಸಿಆರ್ ಕೂಡ ಗೆದ್ದರು. ಇನ್ನು ಉಳಿದ ಎಲ್ಲ ಕಡೆಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತ್ತು. ತೆಲುಗು ದೇಶಂ ಧೂಳೀಪಟವಾಗಿತ್ತು. ಬಿಜೆಪಿ ಅಡ್ರೆಸ್ ಇಲ್ಲದಂತಾಗಿತ್ತು. ಮೇಲೆ ಹೇಳಿದಂತೆ ರಾಜಶೇಖರ ರೆಡ್ಡಿ ಅವರ ಸಾವಿನೊಂದಿಗೆ ತೆಲಂಗಾಣದ ಕಾವು ಹೆಚ್ಚಿತು. ಇತ್ತ ಹೈದರಾಬಾದ್ ಮತ್ತು ಅತ್ತ ದಿಲ್ಲಿಯಲ್ಲಿ ಹೋರಾಟಗಳೇ ನಡೆದವು. ಲೋಕಸಭೆಯಲ್ಲಿ ವಿಜಯಶಾಂತಿ ಹೋರಾಟ ನಡೆಸಿದರೆ, ಸದನದ ಹೊರಗೆ ಕೆಸಿಆರ್ ಸಂಘರ್ಷ ನಡೆಸಿದರು. ಇದರ ನಡುವೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕೆ.ರೋಶಯ್ಯ ಅವರ ಜಾಗಕ್ಕೆ ಕಿರಣ್‌ಕುಮಾರ್ ರೆಡ್ಡಿ ಬಂದರು. ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಇದೇ ಕೆಸಿಆರ್ ಅವರನ್ನು ನಂಬಿ ಕೆಟ್ಟಿತು. ಅವರು ಆಡಿದ ಜೂಜಿನಲ್ಲಿ ಹಸ್ತಪಾಳಯ ಚಿತ್ ಆಗಿ ಚಿತ್ರಾನ್ನವಾಗಿ ತೆಲಂಗಾಣದಲ್ಲಿ ಪ್ರವಾಹದಲ್ಲಿ ಕೊಚ್ಚಿಹೋದ ತರಗಲೆಯಂತಾಯಿತು. ಈಗ ಹೆಚ್ಚೂ ಕಡಿಮೆ ಕಣ್ಮರೆಯಾಗುವ ಹಂತಕ್ಕೆ ಬಂದು ನಿಂತಿದೆ.
2011ರಲ್ಲಿ ಲೋಕಸಭೆ ಸದಸ್ಯತ್ವಕ್ಕೂ ರಾಜೀನಾಮೆ ಕೊಡಲು ಮುಂದಾಗಿದ್ದ ವಿಜಯಶಾಂತಿಗೆ ಅಷ್ಟೊತ್ತಿಗೆ ಟಿಆರ್‌ಎಸ್‌ನಲ್ಲಿ ಬೆಳೆಯುತ್ತಿದ್ದ ಫ್ಯಾಮಿಲಿ ಪಾಲಿಟಿಕ್ಸ್ ಇರಿಸುಮುರಿಸು ಮಾಡುತ್ತಿತ್ತು. ಕೆಸಿಆರ್ ಜತೆಗೆ ಅವರ ಪುತ್ರ ಕೆ.ಟಿ.ರಾಮರಾವ್ (ಕೆಟಿಆರ್), ಮಗಳು ಕವಿತಾ, ಅಳಿಯ ಹರೀಶ್ ರಾವು.. ಹೀಗೆ ಸಾಲುಸಾಲಾಗಿ ಬಂದ ವಂಶದ ಕುಡಿಗಳು ಇಡೀ ಪಕ್ಷವನ್ನು ಹೈಜಾಕ್ ಮಾಡುವ ಹಂತಕ್ಕೆ ಬಂದು ಮುಟ್ಟಿದವು. ಮೊದಲೇ ಲೇಡಿ ಅಮಿತಾಭ್, ಪಕ್ಷದ ವೇದಿಕೆಗಳಲ್ಲಿ ದನಿ ಎತ್ತಿದರು. ಒಳಲೆಕ್ಕದ ಮನುಷ್ಯ ಕೆಸಿಆರ್ ಮಹೂರ್ತ ಇಟ್ಟು ಪ್ರತಿಯೊಂದಕ್ಕೂ ನುಗ್ಗಿ ನಡೆಯುವ ವಿಜಯಶಾಂತಿ ಅವರನ್ನು ಪಕ್ಷದಿಂದ ಹೊರಹಾಕಿಯೇಬಿಟ್ಟರು.
ನಲವತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ತೆಲಂಗಾಣ ರಾಜ್ಯವೇನೋ ಘೋಷಣೆಯಾಯತು. ಸಂಸತ್ತಿನಲ್ಲಿ ರಾಜ್ಯ ವಿಭಜನೆ ಮಸೂದೆ ಪಾಸಾದ ದಿನದ ರಾತ್ರಿಯೇ (2 ಜೂನ್ 2014) ವಿಜಯಶಾಂತಿ ಅವರ ಟಿಆರ್‌ಎಸ್ ಸಂಬಂಧ ಕಡಿದುಹೋಯಿತು. ಪ್ರತ್ಯೇಕ ರಾಜ್ಯದ ಸಾಧನೆಯಲ್ಲಿ ಕೆಸಿಆರ್ ಅವರಷ್ಟೇ ಕ್ರೆಡಿಟ್ ಕ್ಲೈಮು ಮಾಡುವ ನ್ಯಾಯಯುತ ಹಕ್ಕು ಹೊಂದಿದ್ದ ವಿಜಯಶಾಂತಿ ಸಂಭ್ರಮಿಸಬೇಕಾದ ಹೊತ್ತಿನಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿಬಿಟ್ಟರು. ಟಿಆರ್‌ಎಸ್ ಪಾಳಯದಲ್ಲಿ ಸಿಹಿ, ಪಟಾಕಿ, ವಿಜಯೋತ್ಸವ ನಡೆದಿದ್ದರೆ, ಪಕ್ಷದಲ್ಲಿ ತಮ್ಮ ವಿರುದ್ಧ ನಡೆದ ಬ್ರೂಟಸ್ ರೂಪಿ ಪಾಲಿಟಿಕ್ಸ್‌ನಿಂದ ಅವರು ತೀವ್ರ ಆಘಾತಕ್ಕೀಡಾಗಿದ್ದರು.
ಕಷ್ಟದಲ್ಲಿ ಕೈ ಹಿಡಿಯಿತು ಕಾಂಗ್ರೆಸ್
ಹೀಗೆ ಅಪಮಾನಗೊಂಡು ರಾಜಕೀಯ ವನವಾಸದಲ್ಲಿದ್ದ ವಿಜಯಶಾಂತಿ ಶಕ್ತಿಯನ್ನು ಮತ್ತೆ ಗುರುತಿಸಿದ್ದು ಕಾಂಗ್ರೆಸ್. 2014ರಲ್ಲಿ ಅವರು ಕಾಂಗ್ರೆಸ್ ಸೇರಿದರು. ಅದೇ ಮೇದಕ್ ಅಸೆಂಬ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ತಮ್ಮ ಕಡುವಿರೋಧಿ ಟಿಅರ್‌ಎಸ್ ಅಭ್ಯರ್ಥಿ ಎದುರೇ ಸೋತರು. ಮತ್ತಷ್ಟು ಐಸೋಲೇಟ್ ಆದ ಅವರು ಕೆಲ ವರ್ಷ ಹೊರಗೆ ಕಾಣಿಸಿಕೊಳ್ಳಲೇ ಇಲ್ಲ. 2018ರಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮೇಲೆ ವಿಜಯಶಾಂತಿ ಅವರನ್ನು ಪಕ್ಷದ ಸ್ಟಾರ್ ಪ್ರಚಾರಕಿಯನ್ನಾಗಿ ಮಾಡಿದರು. ತೆಲಂಗಾಣ ಚುನಾವಣಾ ಸಮಿತಿಯ ಸಲಹೆಗಾರ್ತಿಯನ್ನಾಗಿ ನೇಮಿಸಿದರು. ಮೊದಲೇ ಕುಗ್ಗಿದ್ದ ಪಕ್ಷಕ್ಕೆ ಅವರ ಸಲಹೆಗಳು ಯಾವ ಪ್ರಯೋಜನವನ್ನೂ ತರಲಿಲ್ಲ. ಕಾಂಗ್ರೆಸ್ ಪಕ್ಷವೂ ಚೇತರಿಸಿಕೊಳ್ಳಲಿಲ್ಲ. ಆದರೆ, ಮಾನಸಿಕವಾಗಿ ಹಸ್ತಪಕ್ಷದಿಂದ ದೂರ ಸರಿಯತೊಡಗಿದ್ದರು.
ಅದಾದ ಎರಡು ವರ್ಷಗಳ ನಂತರ, ಅಂದರೆ; ಈಗ. ಬಿಜೆಪಿ ಸೇರಿದ್ದಾರೆ ವಿಜಯಶಾಂತಿ (7 ಡಿಸೆಂಬರ್ 2020). ಗ್ರೇಟರ್ ಹೈದರಾಬಾದ್ ಮುನಿಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿ 49 ಸೀಟು ಗೆದ್ದ ಉಮೇದಿನಲ್ಲಿದ್ದು, ಅದೇ ವೇಳೆ ಅಮಿತ್ ಶಾ ನಿರ್ದೇಶನದಂತೆ ತೆಲಂಗಾಣದಲ್ಲಿ ʼಆಪರೇಷನ್ ಆಕರ್ಷ್ʼ ಶುರುವಾಗಿದೆ. ʼಆಪರೇಷನ್ ಆಕರ್ಷ್ʼ ಎಂದರೆ, ಕರ್ನಾಟಕದಲ್ಲಿ ನಡೆದ ʼಆಪರೇಷನ್ ಕಮಲʼದ ಡಿಟೋ ಪಾಲಿಟಿಕ್ಸ್. ಅದರ ಒಂದು ಭಾಗವಾಗಿ ವಿಜಯಶಾಂತಿ ಬಿಜೆಪಿ ಸೇರಿದ್ದಾರೆ. ನಮ್ಮ ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಕೆಗೆ ಸದಸ್ಯತ್ವದ ರಶೀದಿ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಅಲ್ಲಿಗೆ ಅವರು ಕಮಲ ಪಾಳಯ ಸೇರಿದ ಅಂಕಕ್ಕೆ ತೆರೆಬಿದ್ದಿದೆ.
ಇನ್ನು; ರಿಯಲ್ ಸಿನಿಮಾ ಶುರುವಾಗುವುದು ಹೈದರಾಬಾದ್‌ನಲ್ಲಿ. ಹೆಗಲ ಮೇಲೆ ಕೇಸರಿ ಶಾಲು ಬಿದ್ದ ಕೂಡಲೇ ಕೆಸಿಆರ್‌ಗೆ ದಿಲ್ಲಿ ಬಿಜೆಪಿ ಆಫೀಸ್‌ನಲ್ಲೇ ಒಂದು ರೌಂಡ್ ಕೋಟಿಂಗ್ ಕೊಟ್ಟರು. ಇನ್ನು, ನಾಳೆ ಅಥವಾ ನಾಡಿದ್ದೋ ಹೈದರಾಬಾದ್‌ಗೆ ಬಂದು ತೆಲಂಗಾಣ ಸಿಎಂ ಮೇಲೆ ನಿರಂತರ ಮಾತಿನ ದಾಳಿ ನಡೆಸುವುದು ಖಂಡಿತಾ. ಇದುವರೆಗೂ ಸದ್ಯಕ್ಕೆ ಕೇಂದ್ರ ಗೃಹಖಾತೆ ಸಹಾಯಕ ಮಂತ್ರಿ ಆಗಿರುವ ಕಿಶನ್ ರೆಡ್ಡಿ ಒಬ್ಬರೇ ತೆಲಂಗಾಣದ ಮುಂದಿನ ಸಿಎಂ ಕ್ಯಾಂಡಿಡೇಟು ಎನ್ನುವಂತಿತ್ತು. ಅಮಿತ್ ಶಾ ಆಪ್ತ ಬಳಗದಲ್ಲಿರುವ ಕಿಶನ್ ಕೂಡ ಅದೇ ಲೆವೆಲ್ ಫಾಲೋ ಮಾಡುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ಗ್ರೇಟರ್ ಹೈದರಾಬಾದ್ ಚುನಾವಣೆಯಲ್ಲಿ ಸೈಲಂಟ್ ಸಿಂಹವಾಗಿ ಪಕ್ಷವನ್ನು ಮುನ್ನಡೆಸಿದ ಬಂಡಿ ಸಂಜಯ್ ಎಂಟ್ರಿಯಾಗಿದ್ದಾರೆ. ಇವರಿಬ್ಬರ ಜತೆಗೆ ವಿಜಯಶಾಂತಿ ರಂಗಪ್ರವೇಶವಾಗಿದೆ.
2006ರಲ್ಲಿ ʼನಾಯುಡಮ್ಮʼ ಎಂಬ ಸಿನಿಮಾದಲ್ಲಿ ನಟಿಸಿದ್ದರು ವಿಜಯಶಾಂತಿ. ಅದಾದ ಮೇಲೆ 13 ವರ್ಷ ಅವರು ಸಿನಿಮಾಗಳತ್ತ ತಲೆ ಹಾಕಿರಲಿಲ್ಲ. ಆದರೆ, ಕಳೆದ ಜನವರಿಯಲ್ಲಿ ಪ್ರಿನ್ಸ್ ಮಹೇಶ್ ಬಾಬು ನಟಿಸಿದ್ದ ʼಸರಿಲೇರು ನೀಕೆವ್ವರುʼ ಚಿತ್ರದಲ್ಲಿ ಖಡಕ್ ಪ್ರೊಫೆಸರ್ ಪಾತ್ರದಲ್ಲಿ ನಟಿಸಿ ಕಮ್‌ಬ್ಯಾಕ್ ಆಗಿದ್ದರು. ವಿಜಯಶಾಂತಿ ಅದ್ಭುತ ನಟಿ ಎಂಬುದರಲ್ಲಿ ಎರಡು ಮಾತೇ ಇಲ್ಲ. ಕನ್ನಡದಲ್ಲಿ ವಂದೇಮಾತರಂ, ಸಿಂಹಘರ್ಜನೆ, ಕೆರಳಿದ ಹೆಣ್ಣು ಎಂಬ ಮೂರು ಚಿತ್ರಗಳಲ್ಲಿ ನಟಿಸಿದ್ದರು. ನಿಜಕ್ಕಾದರೆ, ನಟಿಯರಿಗೆ ಸ್ಟಾರ್‌ಪಟ್ಟ ತಂದುಕೊಟ್ಟ ವಿಜಯಶಾಂತಿ ಬಗ್ಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಮಕ್ಕಳು ಬಂದರೆ ರಾಜಕೀಯದಲ್ಲಿ ಸ್ವಾರ್ಥ ಬರುತ್ತದೆ ಎಂದು ನಂಬಿ ಶಾಶ್ವತವಾಗಿ ಮಕ್ಕಳನ್ನೇ ಬೇಡವೆಂದುಕೊಂಡ ಹೆಣ್ಣು ಆಕೆ. ಈ ಕಾಲದಲ್ಲಿ ಬಹಳ ವಿರಳ. ಇಂಥ ಕಾರಣಕ್ಕೆ, ತ್ಯಾಗಕ್ಕೆ ವಿಜಯಶಾಂತಿ ಇಷ್ಟವಾಗುತ್ತಾರೆ. ಜನರಿಗಾಗಿ ರಾಜಕಾರಣ ಮಾಡಿ, ಅವರಿಗಾಗಿ ಏನನ್ನಾದರೂ ಮಾಡಬೇಕೆಂದು ಪರಿತಪಿಸುವ ವಿಜಯಶಾಂತಿ, ಒಂದು ವೇಳೆ ತೆಲಂಗಾಣಕ್ಕೆ ಸಿಎಂ ಆಗುವ ಅವಕಾಶವೇನಾದರೂ ಬಂದರೆ ಬಿಜೆಪಿ ಖಂಡಿತಾ ಮೀನಾ-ಮೇಷ ಎಣಿಸಬಾರದು.