Lead photo: CKPhotography ಸಿಕೆಪಿ@ckphotographi
ಬೆಂಗಳೂರು: ಬಿಜೆಪಿ ಸರಕಾರ ಅಂದುಕೊಂಡಿದ್ದೆಲ್ಲವನ್ನೂ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆ ಆಯಿತು. ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ!!
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿಕೊಂಡು ಅಂಗೀಕಾರ ಮಾಡಿಕೊಳ್ಳುವಲ್ಲಿ ಯಡಿಯೂರಪ್ಪ ಸರಕಾರ ಯಶಸ್ವಿಯಾಗಿದೆ. 2020ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಪಶುಸಂಗೋಪನಾ ಖಾತೆ ಮಂತ್ರಿ ಪ್ರಭು ಚೌವ್ಹಾಣ್ ಮಂಡಿಸಿದರು.
ಗೋಹತ್ಯೆ ಮತ್ತು ಲವ್ ಜಿಹಾದ್ ಕುರಿತ ಮಸೂದೆಗಳನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಹೇಳಿದ್ದ ಸರಕಾರ, ಬುಧವಾರ ಇದ್ದಕ್ಕಿದ್ದ ಹಾಗೆ ಗೋಹತ್ಯೆ ಮಸೂದೆ ಮಂಡಿಸಿ ಪ್ರತಿಪಕ್ಷಗಳು ಹೌಹಾರುವಂತೆ ಮಾಡಿತು.
ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಮುಂದಾಗುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ʼಸದನ ಸಲಹಾ ಸಮಿತಿ ಸಭೆಯಲ್ಲಿ ಹೊಸ ವಿಧೇಯಕ ಮಂಡನೆ ಮಾಡಬಾರದು ಎಂದು ನಿರ್ಧಾರವಾಗಿತ್ತು. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇಯಕಗಳನ್ನು ಮಾತ್ರ ಮಂಡಿಸಬೇಕು ಎಂಬ ತೀರ್ಮಾನವಾಗಿದೆ. ಈಗ ನೋಡಿದರೆ, ಇದ್ದಕ್ಕಿದ್ದಂತೆ ಹೊಸ ವಿಧೇಯಕವನ್ನು ಮಂಡಿಸಲಾಗುತ್ತಿದೆʼ ಎಂದು ದೂರಿದರು. ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಬಾಗಕ್ಕೆ ಬಂದು ಪ್ರತಿಭಟಿಸಲು ಮುಂದಾದರೂ, ಲೆಕ್ಕಿಸದ ಚೌವ್ಹಾಣ್ ವಿಧೇಯಕವನ್ನು ಮಂಡಿಸಿಯೇಬಿಟ್ಟರು.
ಪ್ರತಿಪಕ್ಷ ಸದಸ್ಯರಿಗೆ ತಿರುಗೇಟು ಕೊಟ್ಟ ಆಡಳಿತ ಪಕ್ಷ ಸದಸ್ಯರು, ನಿಮ್ಮನ್ನು ಕೇಳಿ ವಿಧೇಯಕ ಮಂಡಿಸಬೇಕಾಗಿಲ್ಲ. ಬೇಕಿದ್ದರೆ ಚರ್ಚೆ ಮಾಡಿʼ ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ಪರಸ್ಪರ ಧಿಕ್ಕಾರ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಸ್ಪೀಕರ್ ಕಚೇರಿ ಬಿಜೆಪಿ ಕಚೇರಿಯಾಗುತ್ತಿದೆ” ಎಂದು ದೂರಿದರು. ಕೊನೆಗೆ ಚರ್ಚೆಯೇ ಇಲ್ಲದೇ ಮಸೂದೆ ಅಂಗೀಕಾರವಾಯಿತು.
ಗೋ ಹತ್ಯೆ ನಿಷೇಧ ಮಸೂದೆಯಲ್ಲಿ ಏನಿದೆ?
- ಹಸು, ಕರು, ಎಮ್ಮೆ, ಎತ್ತು ಹಾಗೂ 13 ವರ್ಷದೊಳಗಿನ ಕೋಣ ಹತ್ಯೆ ನಿಷೇಧ
- ಕಾನೂನು ಮೀರಿ ಯಾರಾದರೂ ಹತ್ಯೆ ಮಾಡಿದರೆ ಅವರಿಗೆ 3ರಿಂದ 7 ವರ್ಷದವರೆಗೆ ಜೈಲುಶಿಕ್ಷೆ
- ಪ್ರತಿ ಒಂದು ಗೋವಿನ ಹತ್ಯೆ ಮಾಡಿದರೆ 50,000 ದಿಂದ 5 ಲಕ್ಷ ರೂ. ದಂಡ
- ಪದೇಪದೆ ತಪ್ಪು ಮಾಡಿದರೆ 1 ಲಕ್ಷದಿಂದ 10 ಲಕ್ಷ ರೂ.ವರೆಗೆ ದಂಡ. ಜತೆಗೆ ಏಳು ವರ್ಷ ಜೈಲುಶಿಕ್ಷೆ
- ಗೋವಿನ ಹತ್ಯೆ ಉದ್ದೇಶಕ್ಕಾಗಿ ಅಂತಾರಾಜ್ಯ ಮತ್ತು ರಾಜ್ಯದ ಒಳಗಡೆ ಗೋವಿನ ಸಾಗಾಟ ಪೂರ್ಣ ನಿಷೇಧ
- ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕೂ ಗೋವಿನ ಸಾಗಾಟ ಮಾಡಬೇಕಾದರೆ ಅಧಿಕಾರಿಗಳ ಅನುಮತಿ ಅಗತ್ಯ
- ಗೋವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡಬೇಕೆಂದರೆ ಕೇಂದ್ರ ಸರಕಾರದ ನಿಯಮಗಳ ಪ್ರಕಾರವೇ ಮಾಡಬೇಕು
- ಸಾಗಾಟ ನಿಯಮ ಉಲ್ಲಂಘಿಸಿದರೂ 3 ವರ್ಷದಿಂದ 5 ವರ್ಷದವರೆಗೆ ಜೈಲುಶಿಕ್ಷೆ
- ಸಬ್ ಇನಸ್ಪೆಕ್ಟರ್ ಶ್ರೇಣಿಯ ಅಥವಾ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಮುಟ್ಟುಗೋಲು ಮಾಡಲು ಮಾತ್ರ ಅಧಿಕಾರ
- ಗೋವುಗಳನ್ನು ಮುಟ್ಟುಗೋಲು ಹಾಕಿಕೊಂಡ ಕೂಡಲೇ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಗೆ ವರದಿ ಮಾಡಿಕೊಳ್ಳಬೇಕು
- ಗೋವಿನ ಹತ್ಯೆಗೆ ಸಂಬಂಧಿಸಿದಂತೆ ಸಾಗಾಣಿಕೆ ಮಾಡಿದ ವಾಹನಗಳು, ಬಳಸಿದ ಸಲಕರಣೆಗಳನ್ನು ಆರೋಪಿಗಳಿಗೆ ವಾಪಸ್ ನೀಡಲು ಬ್ಯಾಂಕ್ ಖಾತರಿ ಅಗತ್ಯ
- ಗೋವುಗಳ ಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ
- ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶದ ಗೋವುಗಳಿಗೆ ಕಾಯ್ದೆಯಿಂದ ವಿನಾಯಿತಿ
- ಪಶು ವೈದ್ಯಾಧಿಕಾರಿ ದೃಢೀಕರಿಸಿದ ಗೋವುಗಳನ್ನು ಹತ್ಯೆ ಮಾಡಬಹುದು
- ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೂ ಅವಕಾಶ