ಕೋಲಾರ: ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಮೊದಲು ವಿರೋಧಿಸಿದ್ದು ನಿಜ. ಆಮೇಲೆ, ನಮ್ಮ ಪಕ್ಷದಿಂದ ಕೆಲವು ತಿದ್ದುಪಡಿಗಳನ್ನು ಸೂಚಿಸಿದೆವು. ಸರಕಾರ ಆ ಸಲಹೆಗಳನ್ನು ಸ್ವೀಕರಿಸಿ ಮತ್ತೆ ಪರಿಷ್ಕೃತ ಮಸೂದೆಯನ್ನು ಮಂಡಿಸಿತು. ಅದಕ್ಕೆ ನಾವು ಬೆಂಬಲ ನೀಡಿದೆವು ಎಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
ಕೋಲಾರದಲ್ಲಿ ಬುಧವಾರ ಈ ಮಸೂದೆ ಹಿನ್ನೆಲೆ ಕಾಂಗ್ರೆಸ್ ಪಕ್ಷ, ರೈತ ನಾಯಕರು, ಕನ್ನಡ ಹೋರಾಟಗಾರರು ಮಾಡಿರುವ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಅವರು, ನನ್ನ ಬಗ್ಗೆ ಲಘುವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನಾನು ಕೇರ್ ಮಾಡುವುದಿಲ್ಲ. ಹೊಟ್ಟೆಪಾಡಿನ ರಾಜಕೀಯ ನನ್ನದಲ್ಲ. ಆದರೆ ರೈತರ ಹೆಸರಿನಲ್ಲಿ ಡೋಂಗೀತನ ಪ್ರದರ್ಶಿಸಬಾರದು ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದರು.
“ಕುಮಾರಸ್ವಾಮಿ ಅವರದ್ದು ಪುಟಗೋಸಿ ರಾಜಕಾರಣ. ಅವರು ಡೀಲ್ ಮಾಸ್ಟರ್” ಎಂದ ಹೇಳಿದ್ದ ಕೋಡಿಹಳ್ಳಿ ವಿರುದ್ಧ ಟೀಕಾಪ್ರಕಾರ ನಡೆಸಿದ ಎಚ್‌ಡಿಕೆ, ರೈತರ ಹೆಸರಿನಲ್ಲಿ ಯಾರು ಏನೆಲ್ಲ ಮಾಡಿದ್ದಾರೆ, ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಬಿಚ್ಚಿದರೆ ಅವರದ್ದೂ ದೊಡ್ಡ ಕಥೆ ಇದೆ ಎಂದು ಟಾಂಗ್ ನೀಡಿದರು.
ನನ್ನ ಬಳಿ ನಿಮ್ಮ ಆಟ ನಡೆಯುವುದಿಲ್ಲ. ಮೊದಲು ನಿಮ್ಮ ಹುಳುಕುಗಳನ್ನು ಸರಿ ಮಾಡಿಕೊಳ್ಳಿ. ಜನರಿಗೆ ಬೆಳಗ್ಗೆ ನೀರು ಕೊಟ್ಟು ರಾತ್ರಿ ವಿಷ ಕೊಡುವ ಕೆಲಸ ಮಾಡುತ್ತಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ದೇವೇಗೌಡರಿಗೆ ವಿಷವಿಕ್ಕಿದವರು ಯಾರು? ಅವರು ರೈತರಿಗೆ ಮಾಡಿದ ಅನ್ಯಾಯವಾದರೂ ಏನು? ದಾರಿಯಲ್ಲಿ ಹೋಗುವ ಚಿಲ್ಲರೆಗಳಿಗೆಲ್ಲಾ ನಾನು ಉತ್ತರ ಕೊಡಲಿಕ್ಕಾಗದು. ರಕ್ಷಣಾ ವೇದಿಕೆ ನಾರಾಯಣಗೌಡ ಯಾರೆಂದು ನನಗೆ ಗೊತ್ತಿಲ್ಲ. ಅವರೆಲ್ಲಾ ದೊಡ್ಡ ವ್ಯಕ್ತಿಗಳು. ಅವರ ಮುಂದೆ ನಾನು ತೀರಾ ಸಣ್ಣವನು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಲ್ಲ
ಅಡ್ಜಸ್ಟ್‌ಮೆಂಟ್ ರಾಜಕಾರಣ ವ್ಯಕ್ತಿ ನಾನಲ್ಲ. ಅಂಥ ರಾಜಕೀಯ ಮಾಡುವ ಕರ್ಮವೂ ನನಗಿಲ್ಲ. ರೈತರ ಸಾಲ ಮನ್ನಾ ಮಾಡುವಗಲೇ ದ್ರಾಕ್ಷಿ ಬೆಳೆಗಾರರಿಗೂ ೧೫೦ ಕೋಟಿ ರೂ. ನೀಡಿದ್ದೆ. ಆ ಹಣ ಇನ್ನೂ ಬಿಡುಗಡೆ ಆಗಿಲ್ಲ. ಅದನ್ನು ಕೇಳುವ ತಾಕತ್ತು ನನ್ನನ್ನು ಟೀಕೆ ಮಾಡುವ ಜನರಿಗೆ ಇಲ್ಲ. ಆದರೆ, ನಾನು ಹೋಗಿ ಯಡಿಯೂರಪ್ಪ ಅವರತ್ರ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ತಾ ಇದೀನಿ ಅಂತ ಹೇಳ್ತಿದ್ದಾರೆ. ಆ ಮಸೂದೆಯಲ್ಲಿದ್ದ ದೋಷಗಳ ಬಗ್ಗೆ ದೋಷಗಳು, ನಮ್ಮಂದ ಆದ ಬದಲಾವಣೆಗಳ ಬಗ್ಗೆ ಇವರಿಗೇನು ಗೊತ್ತಿದೆ ಎಂದು ಪ್ರಶ್ನಿಸಿದರು ಎಚ್‌ಡಿಕೆ.
ಈ ಮಸೂದೆಯಲ್ಲಿ ರೈತರಿಗೆ ತೊಂದರೆ ಆಗುವ ಯಾವ ಅಂಶವೂ ಇಲ್ಲ. ಕೇವಲ ವಿರೋಧ ಮಾಡಬೇಕೂಂತ ವಿರೋಧ ಮಾಡುತ್ತಿದ್ದಾರೆ. ಇದು ತಪ್ಪು. ಈಗ ರೈತರ ಮುಖವಾಡ ಹಾಕಿಕೊಂಡಿರುವ ಕೆಲವರು ರಸ್ತೆಯಲ್ಲಿ ನಿಂತು ಬಾರುಕೋಲು ಚಳುವಳಿ ಮಾಡುತ್ತಿದ್ದಾರೆ. 1994ರಲ್ಲಿಯೇ ಶಾಸಕರಾಗಿದ್ದ ಪ್ರೊ.ನಂಜುಂಡಸ್ವಾಮಿ ಅವರು 79(ಎ),79(ಬಿ) ಕಿತ್ತೆಸೆಯಬೇಕು ಎಂದು ಸದನದಲ್ಲಿಯೇ ಹೇಳಿದ್ದರು. ಬೇಕಾದರೆ ಇವರು ಹೋಗಿ ದಾಖಲೆಗಳನ್ನು ನೋಡಿಕೊಳ್ಳಲಿ ಎಂದು ಕುಮಾರಸ್ವಾಮಿ ಛೇಡಿಸಿದರು.
ಕಾಂಗ್ರೆಸ್ ಮುಸ್ಲೀಮರಿಗೆ ಏನೂ ಮಾಡಿಲ್ಲ
ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಮುಸ್ಲೀಮರ ಬಗ್ಗೆ ಮಾತನಾಡಿಕೊಂಡೇ ರಾಜಕೀಯ ಮಾಡಿದೆ. ಆದರೆ, ಆ ಪಕ್ಷದಿಂದ ಆ ಸಮುದಾಯಕ್ಕೆ ಆಗಿರುವ ಲಾಭ ಶೂನ್ಯ ಎಂದು ಕುಮಾರಸ್ವಾಮಿ ಹೇಳಿದರು.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯಕ್ಕೆ ನಿಜವಾಗಿಯೂ ರಾಜಕೀಯವಾಗಿ ಶಕ್ತಿ ತುಂಬಿದವರು ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ ಎಂದರು.
ಈ ಸಂದರ್ಭದಲ್ಲಿ ಕೋಲಾರ ಶಾಸಕ ಶ್ರೀನಿವಾಸಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾ ರೆಡ್ಡ, ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೌಡರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.