ಮೈಸೂರು: ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆಗಾಗಿ ಐದು ಮಿಲಿಲೀಟರ್ ಪ್ರಮಾಣದ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿಗೆ (ಇಂಕ್) ಬೇಡಿಕೆ ಸಲ್ಲಿಸಿದೆ ಎಂದು ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ (ಮೈಲ್ಯಾಕ್) ಅಧ್ಯಕ್ಷ ಎನ್.ವಿ.ಫಣೀಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ವಿಷಯ ತಿಳೀಸಿದ ಅವರು, ಶಾಯಿಯ ಜತೆಗೆ ಆಯೋಗವು 6,580 ಪ್ಯಾಕೇಟ್ ಸೀಲಿಂಗ್ ವ್ಯಾಕ್ಸಿಗೂ ಬೇಡಿಕೆ ಸಲ್ಲಿಸಿದೆ ಎಂದ ಅವರು, ಇವೆರಡರ ಬೇಡಿಕೆಯ ಮೊತ್ತ 1.15 ಕೋಟಿ ರೂ. ಆಗಲಿದೆ ಎಂದಿದ್ದಾರೆ.
2020-21ನೇ ಸಾಲಿಗೆ 20 ಕೋಟಿ ರೂ. ವಹಿವಾಟಿನ ಗುರಿ ಹೊಂದಿದ್ದು ನವೆಂಬರ್ ಅಂತ್ಯಕ್ಕೆ 12.25 ಕೋಟಿ ರೂ. ವಹಿವಾಟು ನಡೆಸಲಾಗಿದೆ. 2019-20 ನೇ ಸಾಲಿನಲ್ಲಿ ಕಂಪನಿ ಒಟ್ಟು 21.52 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ 4.59 ಕೋಟಿ ರೂ. ಪೇಯಿಂಟ್ಸ್ ವಹಿವಾಟು ಆಗಿದ್ದರೆ, 16.93 ಕೋಟಿ ರೂ. ಅಳಿಸಲಾಗದ ಶಾಯಿಯದ್ದು. ಹಿಂದಿನ ಆರ್ಥಿಕ ವರ್ಷದಲ್ಲಿ 2.17 ಕೋಟಿ ರೂ. ಮೌಲ್ಯದ ಅಳಿಸಲಾಗದ ಶಾಯಿ ರಫ್ತು ವಹಿವಾಟು ಕಂಪನಿ ನಡೆಸಿದೆ ಎಂದವರು ತಿಳಿಸಿದರು.
ಮಹಾರಾಜರು ಸ್ಥಾಪಿಸಿದ್ದ ಕಂಪನಿ
ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಮೈಸೂರಿನಲ್ಲಿರುವ ಕಂಪನಿಯಾಗದ್ದು, ಚುನಾನಣೆಗಳಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿಯನ್ನು ಉತ್ಪಾದಿಸುವ ಭಾರತದ ಏಕೈಕ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಣಚಿತ್ರ. / courtesy: Wikipedia
1937ರಲ್ಲಿ ಕಾರ್ಖಾನೆಯನ್ನು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ʼಮೈಸೂರು ಲ್ಯಾಕ್ ಫ್ಯಾಕ್ಟರಿʼ ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸದಾಶಯದೊಂದಿಗೆ ಅಂದು ಅರಣ್ಯದಲ್ಲಿ ಹೇರಳವಾಗಿ ಸಿಗುತ್ತಿದ್ದ ʼಅಂಟುʼ ಎಂಬ ಕಚ್ಚಾಸಾಮಗ್ರಿಯಿಂದ ʼಸೀಲಿಂಗ್ ವ್ಯಾಕ್ಸ್ʼ ತಯಾರಿಸಿ ಸ್ಥಳೀಯ ಸರಕಾರಿ ಇಲಾಖೆಗಳಿಗೆ, ಖಜಾನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. 1947ರಲ್ಲಿ ʼಮೈಸೂರು ಲ್ಯಾಕ್ ಫ್ಯಾಕ್ಟರಿʼಯನ್ನು ಸರಕಾರದ ಸ್ವಾಮ್ಯಕ್ಕೆ ಒಳಪಡಿಸಲಾಯಿತು. ಅಂದಿನಿಂದ ಈ ಕಂಪನಿಯ ಹೆಸರನ್ನು ʼಮೈಸೂರು ಲ್ಯಾಕ್ ಅಂಡ್ ವರ್ಕ್ಸ್ ಲಿಮಿಟೆಡ್ʼ ಎಂದು ಮರುನಾಮಕರಣ ಮಾಡಲಾಯಿತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬಣ್ಣದ ಉತ್ಪಾದನೆಯನ್ನು ಆರಂಭಿಸಲಾಯಿತು. ಕ್ರಮೇಣ, ಅರಣ್ಯದಲ್ಲಿ ಸಿಗುತ್ತಿದ್ದ ಅಂಟು (ಲ್ಯಾಕ್) ಎಂಬ ಕಚ್ಛಾವಸ್ತುವಿನ ಲಭ್ಯತೆ ಕಡಿಮೆಯಾದ್ದರಿಂದ ಮತ್ತು ಸೀಲಿಂಗ್ ವ್ಯಾಕ್ಸ್ ಎಂಬ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿ, ವಾರ್ನಿಷ್ ಉತ್ಪಾದನೆಯ ಕಡೆ ಕಂಪನಿಯು ಗಮನ ಹರಿಸಿತು. ಹೀಗಾಗಿ 1989ರಲ್ಲಿ ಕಂಪನಿಯ ಹೆಸರನ್ನು ʼಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ʼ ಎಂದು ಮತ್ತೆ ಮರುನಾಮಕರಣ ಮಾಡಲಾಯಿತು. ರಾಜ್ಯ ಸರಕಾರವು ಈ ಕಂಪನಿಯಲ್ಲಿ ಶೇ 91.39ರಷ್ಟು ಪಾಲು ಬಂಡವಾಳವನ್ನು ತೊಡಗಿಸಿದ್ದು, ಉಳಿಕೆ ಬಂಡವಾಳವನ್ನು ಸಾರ್ವಜನಿಕರು ತೊಡಗಿಸಿದ್ದಾರೆ.
1962ರಿಂದ ದೇಶದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಸರಬರಾಜು ಮಾಡಲು ಈ ಕಂಪನಿ ಆರಂಭಿಸಿತು. ಭಾರತದ ಚುನಾವಣಾ ಆಯೋಗವು ನ್ಯಾಷನಲ್ ರಿಸರ್ಚ್ ಡೆವಲಪ್‍ಮೆಂಟ್ ಕಾರ್ಪೋರೇಷನ್ (ಎನ್.ಆರ್.ಡಿ.ಸಿ) ಹಾಗೂ ನ್ಯಾಷನಲ್ ಫಿಜಿಕಲ್ ಲ್ಯಾಬೋರೇಟರಿ (ಎನ್.ಪಿ.ಎಲ್) ಸಹಯೋಗದೊಡನೆ ಅಳಿಸಲಾಗದ ಶಾಯಿಯನ್ನು ದೇಶದ್ಯಾಂತ ಸರಬರಾಜು ಮಾಡಲಾಗುತ್ತಿದ್ದು, ದೇಶದ ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. 1978-79ನೇ ಸಾಲಿನಲ್ಲಿ ಅಳಿಸಲಾಗದ ಶಾಯಿಯ ಮೊದಲ ರಫ್ತು ವಹಿವಾಟನ್ನು ಕಂಪನಿಯು ಆರಂಭಿಸಿತು. ಇಲ್ಲಿಯವರೆಗೆ ಪ್ರಪಂಚದ ಇಪ್ಪತ್ತೆಂಟು ರಾಷ್ಟ್ರಗಳಿಗೂ ಹೆಚ್ಚು ನಮ್ಮ ಉತ್ಪನ್ನ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಆ ಮೂಲಕ ರಾಷ್ಟ್ರಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಹರಿದು ಬರಲು ಕಂಪನಿಯೂ ಕಾರಣಾಗಿದೆ ಎಂದು ಫಣೀಶ್ ಸಂತಸ ವ್ಯಕ್ತಪಡಿಸಿದ್ದಾರೆ.