ಚಿಕ್ಕಬಳ್ಳಾಪುರ: ಕೋವಿಡ್-19 ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸಿಲುಕಿ ಹೊಯ್ದಾಟದಲ್ಲಿರುವ ಜನರಲ್ಲಿ ಆತ್ಮಸ್ಥೈರ್ಯ ತುಂಬಲು ಶನಿವಾರ ಇಲ್ಲಿ ಆದಿಚುಂಚನಗಿರಿ ಮಠದ ಪೀಠಾಧೀಶರಾದ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಸದ್ವಿಚಾರಗಳ ಸಂತ್ಸಂಗವನ್ನು ಏರ್ಪಡಿಸಲಾಗಿದೆ.
ನಗರದ ಜ್ಯೂನಿಯರ್ ಕಾಲೇಜಿನ ಸಮೀಪದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಮಠದ ಭಕ್ತರು, ಸಾರ್ವಜನಿಕರು, ಹಿತೈಷಿಗಳೆಲ್ಲರೂ ಭಾಗಿಯಾಗಲಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅವರು ತಿಳಿಸಿದ್ದಾರೆ.
ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವ, ಜನರಲ್ಲಿರುವ ಅನಗತ್ಯ ಗೊಂದಲಗಳನ್ನು ನಿವಾರಿಸಿ ಅವರಲ್ಲಿ ಸದಾಚಾರ, ಸತ್ ಚಿಂತನೆಗಳು ಮೂಡುವಂತೆ ಮಾಡುವ ನಿಟ್ಟಿನಲ್ಲಿ ಹಿರಿಯ ಶ್ರೀಗಳ ನೇತೃತ್ವದಲ್ಲಿ ಈ ಸತ್ಸಂಗವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಡೆ ಜನರು ಈಗ ಕಷ್ಟದಲ್ಲಿದ್ದಾರೆ. ಕೋವಿಡ್ ಬಂದ ಮೇಲಂತೂ ಎಲ್ಲರೂ ಮತ್ತಷ್ಟು ಕುಗ್ಗಿ ಹೋಗಿದ್ದಾರೆ. ಸದ್ವಿಚಾರಗಳ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬುದುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಮಂಗಳನಾಥ ಶ್ರೀಗಳು ಹೇಳಿದ್ದಾರೆ.
ಸಂಜೆ 5 ಗಂಟೆಗೆ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಸತ್ಸಂಗ ಕಾರ್ಯಕ್ರಮ ನಡೆಯಲಿದ್ದು, ಶ್ರೀಗಳ ಸ್ವಾಗತಕ್ಕೆ ಚಿಕ್ಕಬಳ್ಳಾಪುರ ಸಜ್ಜಾಗಿದೆ. ಸತ್ಸಂಗ, ಭಜನೆ ಕಾರ್ಯಕ್ರಮವು Facebook ನಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.