ಕೆಲಸದಿಂದ ಸ್ಥಳೀಯರನ್ನು ತೆಗೆಯುವ ಬೆದರಿಕೆ; ಕೋವಿಡ್ ನೆಪದಲ್ಲಿ ಮನಸೋಇಚ್ಛೆ ವೇತನ ಕಡಿತ
ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೊಸ ಐಫೋನ್‌ಗಳನ್ನು ತಯಾರಿಕೆ ಮಾಡುತ್ತಿದ್ದ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಲ್ಲಿ ದಂಗೆ ಎದ್ದಿರುವ ಸುಮಾರು 8,000 ಕಾರ್ಮಿಕರು, ಶನಿವಾರ ಬೆಳಗ್ಗೆ ಉಗ್ರ ಪ್ರತಿಭಟನೆ ನಡೆಸಿದರಲ್ಲದೆ, ಕಟ್ಟಡ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಗೆ ಆಗುತ್ತಿದ್ದ ಅನ್ಯಾಯವನ್ನು ಸಹಿಸಿಕೊಂಡು ಕಳೆದ ನಾಲ್ಕು ತಿಂಗಳಿಂದ ಸುಮ್ಮನಿದ್ದ ಕಾರ್ಮಿಕರ ಆಕ್ರೋಶ, ಇಂದು ಬೆಳಗ್ಗೆ ಐದೂವರೆ ಗಂಟೆಯ ಹೊತ್ತಿಗೆ ಕಟ್ಟೆಯೊಡಿದಿದ್ದು, ಒಟ್ಟಿಗೆ ಸೇರಿದ ಎರಡು ಪಾಳಿಯ ಕಾರ್ಮಿಕರು ಕೈಗೆ ಸಿಕ್ಕ ವಸ್ತುಗಳನ್ನು, ಯಂತ್ರೋಪಕರಣಗಳನ್ನು ಹಾಗೂ ಕಟ್ಟಡದ ಗ್ಲಾಸುಗಳನ್ನು ಧ್ವಂಸ ಮಾಡಿದ್ದಾರೆ.
ಈ ಘಟನೆಯಿಂದ ನರಸಾಪುರ ಮಾತ್ರವಲ್ಲದೆ ಇಡೀ ಕೋಲಾರ ಜಿಲ್ಲೆಯೇ ಬೆಚ್ಚಿಬಿದ್ದದ್ದು, ಸ್ಥಳಕ್ಕೆ ಪೊಲೀಸರು ಬರುವ ಹೊತ್ತಿಗೆ ಇಡೀ ಕಾರ್ಖಾನೆ ಕಾರ್ಮಿಕರ ಆಕ್ರೋಶಕ್ಕೆ ಆಹುತಿಯಾಗಿತ್ತು. ‘ಡೌನ್ ಡೌನ್ ವಿಸ್ಟ್ರಾನ್ʼ ಎಂದು ಕೂಗುತ್ತಿದ್ದ ಕಾರ್ಮಿಕರು ವಾಹನಗಳಿಗೆ ಬೆಂಕಿ ಹಚ್ಚಿದರು, ಗಾಜುಗಳನ್ನು ಪುಡಿಪುಡಿ ಮಾಡಿದರು. ಎದುರಿಗೆ ಸಿಕ್ಕ ಎಲ್ಲ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಆಕ್ರೋಶಕ್ಕೆ ಕಾರಣವೇನು?
ಕಳೆದ ಹಲವು ತಿಂಗಳಿನಿಂದ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಪ್ರತಿಷ್ಠಿತ ಆಪಲ್ ಕಂಪನಿಯ ನೂತನ ಸರಣಿಯ ಐಫೋನ್‌ಗಳನ್ನು ತೈವಾನ್ ಮೂಲದ ಈ ಕಂಪನಿಯಲ್ಲಿ ತಯಾರಿಕೆ ಮಾಡಲಾಗುತ್ತಿತ್ತು. ಅದಕ್ಕಾಗಿಯೇ ಸ್ಥಳೀಯರೂ ಸೇರಿದಂತೆ ತೈವಾನ್ ಮೂಲದ ಉದ್ಯೋಗಿಗಳು ಸೇರಿ ೮ರಿಂದ 10 ಸಾವಿರ ಜನ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಪೈಕಿ ಸ್ಥಳೀಯರೇ ಎಂಟು ಸಾವಿರ ಮಂದಿ ಇದ್ದರೆನ್ನಲಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಇವರ ಶೋಷಣೆ ವಿಪರೀತವಾಗಿತ್ತು ಎಂದು ಗೊತ್ತಾಗಿದೆ. ಕಾರ್ಮಿಕ ಕಾಯ್ದೆಗಳನ್ನು ಗಾಳಿಗೆ ತೂರಿ ಗುತ್ತಿಗೆ, ದಿನಗೂಲಿ ಪ್ರಕಾರವಾಗಿ ನೇಮಿಸಿಕೊಳ್ಳಲಾಗಿದ್ದ ಕಾರ್ಮಿಕರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಮೊದಲೇ ಕೋವಿಡ್ ಮಾರಿಯ ಸುಳಿಗೆ ಸಿಕ್ಕಿ ಹತಾಶರಾಗಿದ್ದ ಕಾರ್ಮಿಕರ ವೇತನದಲ್ಲಿ ಕಡಿತ ಮಾಡುತ್ತಿದ್ದದ್ದೇ ಈ ಹಿಂಸಾಚಾರಕ್ಕೆ ಕಾರಣವಾಗಿದೆ. ಕನಿಷ್ಠ 2ರಿಂದ 6 ಸಾವಿರ ರೂಪಾಯಿವರೆಗೂ ವೇತನ ಕಡಿತ ಮಾಡಲಾಗುತ್ತಿತ್ತು ಎಂದು ಗೊತ್ತಾಗಿದ್ದು, ಎಂಟೂ ಸಾವಿರ ಕಾರ್ಮಿಕರೂ ಈ ವೇತನ ಕಡಿತಕ್ಕೆ ಒಳಗಾಗಿದ್ದರೆನ್ನಾಗಿದೆ.
“ಮೊದಲು ನನ್ನ ವೇತನದಲ್ಲಿ 2,000 ರೂ. ಕಡಿತ ಮಾಡಲಾಯಿತು. ಯಾಕೆಂದು ಕೇಳಿದರೆ ಎಲ್ಲ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದರು. ತೈವಾನ್‌ನಿಂದ ಬಂದಿರುವ ಹಿರಿಯ ಅಧಿಕಾರಿಗಳನ್ನು ಕೇಳುವಂತೆಯೇ ಇಲ್ಲ. ಆದರೆ, ಹಿರಿಯ ಹುದ್ದೆಗಳಲ್ಲಿ ಕೂತಿದ್ದ ಭಾರತೀಯ ಅಧಿಕಾರಿಗಳಿದಲೇ ತೀವ್ರ ಕಿರುಕುಳವಾಗುತ್ತಿತ್ತು. ಇದನ್ನು ಪ್ರಶ್ನಿಸಿದರೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕಲಾಗುತ್ತಿತ್ತು. ಜತೆಗೆ, ವೇತನ ಕಡಿತ ಮತ್ತೂ ಮುಂದುವರಿದಿತ್ತು. ಮಾಸಿಕ 18,000 ರೂ. ಸಂಬಳ ತೆಗೆದುಕೊಳ್ಳುವ ನನಗೆ ಕಳೆದ ತಿಂಗಳ ವೇತನದಲ್ಲಿ ಏಕಾಎಕಿ 6,000 ರೂ. ಕಡಿತ ಮಾಡಲಾಯಿತು. ಎಲ್ಲ ಕಾರ್ಮಿಕರ ಆಕ್ರೋಶಕ್ಕೆ ಇದೇ ಕಾರಣ” ಎಂದು ಹೆಸರು ಹೇಳಲಿಚ್ಚಿಸದ ಕಾರ್ಮಿಕರೊಬ್ಬರು ಹೇಳಿದ ಮಾತುಗಳಿವು.
ಈ ಬಗ್ಗೆ ಮಾನವ ಸಂಪನ್ಮೂಲ ಅಧಿಕಾರಿಗಳು ಹಾಗೂ ಕಂಪನಿಯ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಅವರು ಹಾರಿಕೆಯ ಉತ್ತರ ನೀಡುತ್ತಿದ್ದರಲ್ಲದೆ, ಹೆಚ್ಚಾಗಿ ಮಾತನಾಡಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದರೆಂದು ಹೇಳಲಾಗಿದೆ. ಈ ಎಲ್ಲ ಒತ್ತಡದಿಂದ ನಾಲ್ಕು ತಿಂಗಳಿಂದ ಸುಮ್ಮಿನಿದ್ದ ಕಾರ್ಮಿಕರ ಬೇಗುದಿ ಶನಿವಾರ ಬೆಳಗ್ಗೆ ಕಟ್ಟೆಯೊಡೆದಿದೆ ಎಂದು ಕೈಗಾರಿಕಾ ಪ್ರದೇಶದ ಮೂಲಗಳು ತಿಳಿಸಿವೆ.
ಪ್ರತಿಭಟನೆ ಆರಂಭವಾಗಿದ್ದು ಹೇಗೆ?
ಬೆಳಗ್ಗೆ 5.30 ಗಂಟೆಗೆ ಬೆಳಗಿನ ಪಾಳಿಯ 4,000 ಕಾರ್ಮಿಕರು ಕಂಪನಿಯ ಬಸ್ಸುಗಳಲ್ಲಿ ಕಾರ್ಖಾನೆಯನ್ನು ತಲುಪಿದ್ದಾರೆ. ಆ ವೇಳೆಗಾಗಲೇ 4,000 ಕಾರ್ಮಿಕರು ಕಾರ್ಖಾನೆಯೊಳಗೆ ಕೆಲಸ ಮಾಡುತ್ತಿದ್ದರು. ಬಸ್‌ಗಳನ್ನು ಇಳಿದು ಹೊರಬರುತ್ತಿದ್ದಂತೆ ವಿಸ್ಟ್ರಾನ್ ವಿರುದ್ಧ ಧಿಕ್ಕಾರ ಕೂಗುತ್ತಲೇ ಪ್ರತಿಭಟನೆ ಶುರು ಮಾಡಿದ ಕಾರ್ಮಿಕರ ಜತೆ ಒಳಗಿದ್ದವರೂ ಸೇರಿಕೊಂಡರು. ಭದೃತಾ ಸಿಬ್ಬಂದಿ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಪ್ರತಿಭಟನೆಯ ಕಾವು ಇಡೀ ಕಾರ್ಖಾನೆಯ ಎಲ್ಲ ವಿಭಾಗಳನ್ನೂ ವ್ಯಾಪಿಸಿಕೊಂಡಿದೆ. ಭದ್ರತಾ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತರಲ್ಲದೆ, ಸ್ಥಳೀಯರ ಜತೆ ಕೆಲಸ ಮಾಡುತ್ತಿದ್ದ ತೈವಾನ್ ಮೂಲದ ಉದ್ಯೋಗಿಗಳು ಮೂಕಪ್ರೇಕ್ಷಕರಾಗಿ ನಿಂತುಬಿಟ್ಟರು. ಕಂಪನಿಯ ಆವರಣದಲ್ಲಿ ನಿಂತಿದ್ದ ಮೂರರಿಂದ ನಾಲ್ಕು ಕಾರುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಕೆಲ ತಿಂಗಳ ಹಿಂದೆಯಷ್ಟೇ ವಿಸ್ಟ್ರಾನ್ ಸುಮಾರು 3,000 ಕೋಟಿ ರೂ.ಗಳನ್ನು ಈ ಘಟಕದಲ್ಲಿ ಹೂಡಿಕೆ ಮಾಡಿತ್ತೆನ್ನಲಾಗಿದೆ. ಆದರೆ, ಈ ಗಲಾಟೆಯಿಂದ ಉತ್ಪಾದನೆ ಸ್ಥಗಿತವಾಗಿದ್ದು, ಮತ್ತೆ ಕಾರ್ಖಾನೆಯು ಪುನಾರಂಭ ಆಗುತ್ತಾ ಇಲ್ಲವಾ ಎನ್ನುವ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ವಿಸ್ಟ್ರಾನ್ ಕಂಪನಿಯ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ನೆಲೆಸಿರುವ ತೈವಾನ್‌ನ ಕಂಪನಿಯ ಉನ್ನತ ಆಧಿಕಾರಿಗಳು ಈಗಾಗಲೇ ಖಾರ್ಖಾನೆ ಬಳಿಗೆ ಧಾವಿಸಿ ಬಂದಿದ್ದಾರೆ.
ಕಾರ್ಖಾನೆಯ ಹೊರಗೆ ಹಾನಿಯಾಗಿರುವುದರ ಜತೆಗೆ ಒಳಗಿದ್ದ ಬೆಲೆ ಬಾಳುವ ಬಾಳುವ ತಂತ್ರಗಳೂ ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿವೆ. ಕೆಲ ದಿಮಗಳ ಹಿಂದೆಯಷ್ಟೇ ಇನ್‌ಸ್ಟಾಲ್ ಮಾಡಲಾಗಿದ್ದ ಸುಮಾರು ಎರಡರಿಂದ ಮೂರು ಕೋಟಿ ರೂ. ಬೆಲೆ ಬಾಳುವ ಹಲವು ಯಂತ್ರಗಳು ಧ್ವಂಸವಾಗಿವೆ ಎನ್ನಲಾಗಿದೆ.
ಪ್ರಕ್ಷುಬ್ಧ ಪರಿಸ್ಥಿತಿ
ಸದ್ಯಕ್ಕೆ ವಿಸ್ಟ್ರಾನ್ ಕಂಪನಿಯನ್ನು ಪೊಲೀಸರ ಭದ್ರತೆಯ ವಶದಲ್ಲಿದೆ. ಸ್ಥಳಕ್ಕೆ ಖಾಕಿ ತುಕಡಿಗಳನ್ನು ನಿಯೋಜನೆ ಮಾಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸಿ ಕಾರ್ಮಿಕರು ಆ ಭಾಗದಿಂದ ಜಾಗ ಖಾಲಿ ಮಾಡಿದ್ದಾರೆ. ಈಗಷ್ಟೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
2017ರಲ್ಲಿಯೇ ಸುಮಾರು 43 ಎಕರೆ ಪ್ರದೇಶದಲ್ಲಿ ‘ವಿಸ್ಟ್ರಾನ್ʼ ತನ್ನ ಘಟಕವನ್ನು ಇಲ್ಲಿ ಸ್ಥಾಪನೆ ಮಾಡಿತು. ಕಂಪನಿಯೂ ಈಗಾಗಲೇ 3,000 ಕೋಟಿಗೂ ಹೆಚ್ಚು ಹೂಡಿಕೆಯನ್ನು ಮಾಡಿದೆ. ಅದು ಬೆಂಗಳೂರಿನ ಪೀಣ್ಯದಲ್ಲೂ ತನ್ನ ಘಟಕವನ್ನು ಹೊಂದಿದ್ದು, ಆಲ್ಲಿ ಐಫೋನ್‌ಗಳನ್ನು ಅಸೆಂಬಲ್ ಮಾಡಲಾಗುತ್ತಿದೆ.
ಪೊಲೀಸ್ ಸರ್ಪಗಾವಲು
ಉಳಿದಂತೆ ವಿಸ್ಟ್ರಾನ್ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವೇಮಗಲ್ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಐದಾರು ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಗಲಾಟೆ ಮಾಡಿದ ಕಾರ್ಮಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಏತನ್ಮಧ್ಯೆ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತೀಕ್ ರೆಡ್ಡಿ ಸೇರಿದಂತೆ ಹರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಮತ್ತೊಂದೆಡೆ ಕಾರ್ಖಾನೆಗೆ ಆಗಿರುವ ಹಾನಿಯ ಬಗ್ಗೆ ಇನ್ನೂ ಅಂದಾಜು ಮಾಡಿಲ್ಲ. ಹಿರಿಯ ಅಧಿಕಾರಿಯೊಬ್ಬರು ಹೇಳಿದ ಪ್ರಕಾರ, ೫೦ರಿಂದ ೭೫ ಕೋಟಿಯಷ್ಟು ನಷ್ಟ ಆಗಿರಬಹುದು ಎನ್ನಲಾಗಿದೆ.
ಮಖ್ಯಮಂತ್ರಿ ಗಮನಕ್ಕೆ
ಕಾರ್ಮಿಕರ ದಂಗೆ ವಿಷಯ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಐಟಿ-ಬಿಟಿ, ತಂತ್ರಜ್ಞಾನ ಖಾತೆ ಸಚಿವರೂ ಆದ ಡಾ.ಸಿಎ.ಎನ್.ಅಶ್ವತ್ಥನಾರಾಯಣ ಅವರ ಗಮನಕ್ಕೆ ಬಂದಿದೆ. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದಿದ್ದಾರೆಂದು ಗೊತ್ತಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.
ಕೋವಿಡ್‌ನಿಂದ ಈಗಷ್ಟೇ ರಾಜ್ಯದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು, ಈ ಘಟನೆ ನಡೆಯಬಾರದಿತ್ತು. ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.