Lead photo: BNMK photographs
ಬೆಂಗಳೂರು: ಹತ್ತು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಸದಸ್ಯರು ಅಂಗಿ ಹರಿದುಕೊಂಡು ಮೇಜು ಹತ್ತಿಕೂಗಾಡಿದ್ದ ಘಟನೆ ಇನ್ನು ರಾಜ್ಯದ ಜನಮಾನಸದಿಂದ ಮಾಸಿಲ್ಲ. ಆದರೆ, ಅದೇ ರೀತಿ ಸಂಸದೀಯ ವ್ಯವಸ್ಥೆಯನ್ನೇ ಅಲುಗಾಡಿಸುವಂತಹ ಮತ್ತೊಂದು ಕಹಿ ಘಟನೆಗೆ ನೂರಹತ್ತು ವರ್ಷಗಳ ಇತಿಹಾಸವಿರುವ ವಿಧಾನಪರಿಷತ್ ಮಂಗಳವಾರ ಸಾಕ್ಷಿಯಾಯಿತು.
ಅಕ್ಷರಶಃ ರಣಾಂಗಣವಾದ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ಯುದ್ಧ, ನೂಕಾಟ-ತಳ್ಳಾಟ, ಕೈಕೈ ಮಿಲಾಯಿಸಿಕೊಳ್ಳುವುದು ನಡೆಯಿತು. ಹಿರಿಯರ ಮನೆಯಲ್ಲಿ ಮನೆಯಲ್ಲಿ ನಡೆದ ಈ ಗಲಾಟೆಯನ್ನು ಕಂಡ ರಾಜ್ಯ ಜನತೆ ಬೆಚ್ಚಿಬಿದ್ದರು.
courtesy: @karthikrishaBJP
ಗದ್ದಲ ಶುರುವಾಗಿದ್ದು ಹೇಗೆ?
ಬೆಳಗ್ಗೆ ೧೧.೧೦ಕ್ಕೆಲ್ಲ ಕಲಾಪ ಆರಂಭವಾಗುತ್ತಿದ್ದಂತೆಯೇ ಗದ್ದಲ ಶುರುವಾಯಿತು. ಆಗ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿಯೂ ಆಗಿರುವ ಜೆಡಿಎಸ್‌ನ ಧರ್ಮೇಗೌಡರು ಕೂತಿದ್ದರು. ಆ ದೃಶ್ಯವನ್ನು ಕಂಡ ಕೂಡಲೇ ಸಿಟ್ಟಾದ ಕಾಂಗ್ರೆಸ್ ಸದಸ್ಯರು, ಸಭಾಪತಿ ಪೀಠದತ್ತ ನುಗ್ಗಿಬಂದರಲ್ಲದೆ, ಧರ್ಮೇಗೌಡರನ್ನು ಎಬ್ಬಸಿ ಎಳೆಯೊಯ್ದರು. ಇದನ್ನು ಕಂಡ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೂಡ ಆಕ್ರೋಶಗೊಂಡರು. ಈ ಸಂದರ್ಭದಲ್ಲಿ ತೀವ್ರ ನೂಕಾಟ, ತಳ್ಳಾಟ ನಡೆಯಿತು. ಕೊನೆಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರ್ಮೇಗೌಡರನ್ನು ಸಭಾಪತಿ ಪೀಠದತ್ತ ಕರೆಕೊಂಡು ಬರುವಷ್ಟರಲ್ಲಿ ಪೀಠದ ಮೇಲೆ ಕಾಂಗ್ರೆಸ್ಸಿನ ಸದಸ್ಯರೊಬ್ಬರು ಕೂತಿದ್ದರು. ಅವರ ಸುತ್ತ ಕಾಂಗ್ರೆಸ್ ಸದಸ್ಯರು ಕೋಟೆಯಂತೆ ನಿಂತಿದ್ದರು. ಇದರಿಂದ ಬಿಜೆಪಿ ಸದಸ್ಯರು ಮತ್ತಷ್ಟು ಕೆರಳಿದರು.
ಗಲಾಟೆಯ ನಡುವೆಯೇ ಕಲಾಪ ಮುಂದಕ್ಕೆ
ಇದೇ ವೇಳೆ ಗಲಾಟೆ ಇನ್ನೂ ತಾರಕ್ಕೇರಿತಲ್ಲದೆ, ಯಾರು ಏನು ಹೇಳುತ್ತಿದ್ದಾರೆಂಬುದು ಸ್ಪಷ್ಟವಾಗಿ ಕೇಳಿಸದಾಯಿತು. ಆಗಲೂ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಬಗ್ಗೆ ಚರ್ಚೆಯಾಗಬೇಕು ಎಂದು ಕೂಗಿದರು. ಸದನದಲ್ಲಿ ಫುಲ್ ಕೋರಂ ಇತ್ತು. ಮಾರ್ಷಲ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರು. ಇದೇ ವೇಳೆ, ಸಭಾಪತಿ ಪೀಠಕ್ಕೆ ಬಂದ ಪ್ರತಾಪ್‌ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷಾವಧಿಗೆ ಮುಂದೂಡಿಬಿಟ್ಟರು.
ಬೆಲ್ ಆಗುವ ಮುನ್ನವೇ ಕೂತಿದ್ದ ಧರ್ಮೇಗೌಡರು
ಸಾಮಾನ್ಯವಾಗಿ ಕಲಾಪ ಪ್ರಾರಂಭಿಸಲು ಬೆಲ್ ಮಾಡಲಾಗುತ್ತದೆ. ಆ ಬೆಲ್ ಸದ್ದು ನಿಂತರ ಮಾರ್ಷಲ್‌ಗಳು ʼಬಂದು ಮಾನ್ಯ ಸಭಾಪತಿಗಳು..ʼ ಎಂದು ಹೇಳಿದ ಮೇಲೆ ಸಭಾಪತಿಗಳು ಬಂದು ಆಸೀನರಾಗುವುದು ರೂಢಿ. ಆದರೆ, ಬೆಲ್ ಆಗುವುದಕ್ಕೆ ಮೊದಲೇ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಲಾಯಿತು. ಕಲಾಪ ಆರಂಭವಾಗುವ ಸಮಯದಲ್ಲಿ ಪಾಲಿಸಿರಲಿಲ್ಲ. ಕಲಾಪ ಆರಂಭವಾಗುವುದಕ್ಕೆ ಮೊದಲೇ ಧರ್ಮೇಗೌಡರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿ ಕಲಾಪವನ್ನು ಆರಂಭಿಸುವ ಪ್ರಯತ್ನ ನಡೆಸಲಾಯಿತು. ತನ್ಮೂಲಕ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪೀಠದತ್ತ ಬರದಂತೆ ತಡೆಯುವುದು ಆಡಳಿತಾರೂಢ ಬಿಜೆಪಿ ಉದ್ದೇಶವಾಗಿತ್ತು. ನಿಜಕ್ಕೆ ಕಾಂಗ್ರೆಸ್ ಸದಸ್ಯರು ಸಿಟ್ಟಿಗೇಳಲು ಇದೇ ಕಾರಣವಾಯಿತು.
ಇಂಥ ಪ್ರಸಂಗ ಎದುರಾಗುತ್ತದೆ ಎಂದು ಊಹಿಸದ ಕಾಂಗ್ರೆಸ್ ಸದಸ್ಯರು, ಈ ಅನಿರೀಕ್ಷಿತ ನಡೆಯಿಂದ ಅವಾಕ್ಕಾದರು. ಕೂಡಲೇ ಮುಖ್ಯ ಸಚೇತಕ ನಾರಾಯಸ್ವಾಮಿ, ಸದಸ್ಯ ಹರಿಪ್ರಸಾದ್ ಸಭಾಪತಿ ಪೀಠದತ್ತ ನುಗ್ಗಿಬಂದರು. ಪ್ರತಿಪಕ್ಷ ಸದಸ್ಯರು ಪೀಠದ ಮೇಲೆ ಹತ್ತಿಯೇ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕೂಡ ಪ್ರತಿಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು. ಈ ನಡುವೆ ಪೀಠದಿಂದ ಎದ್ದುಬರುವಂತೆ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಅದಕ್ಕೆ ಧರ್ಮೇಗೌಡರು ಒಪ್ಪಲಿಲ್ಲ. ಆಗ ಕೆಲವರು ಉಪ ಸಭಾಪತಿಗಳನ್ನು ಕೆಳಗೆಳೆದರು. ಅವರನ್ನು ಸದನದಿಂದ ಹೊರಕ್ಕೆ ಹೊತ್ತೊಯ್ಯಲಾಯಿತು. ಈ ಸಂದರ್ಭದಲ್ಲಿ ಕೆಲ ಸದಸ್ಯರು ಧರ್ಮೇಗೌಡರ ರಕ್ಷಣೆಗೆ ಧಾವಿಸಿದರು.
ಬಾಗಿಲು ಮುಚ್ಚಿದ ಬಿಜೆಪಿ ಸದಸ್ಯರು
ಇನ್ನೊಂದೆಡೆ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಸದನದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವ ಪ್ರಯತ್ನವನ್ನೂ ಬಿಜೆಪಿ ಮಾಡಿತು. ಅದಕ್ಕಾಗಿ ಆ ಪಕ್ಷದ ಸದಸ್ಯರು ಬಾಗಿಲು ಮುಚ್ಚಿ ಬಾಗಿಲು ಬಳಿಯೇ ಕಾವಲು ಕೂತರು. ಇದರಿಂದ ಗಲಾಟೆ ಮತ್ತಷ್ಟು ಹೆಚ್ಚಾಯಿತಲ್ಲದೆ, ಕಾಂಗ್ರೆಸ್ ಸದಸ್ಯರಾದ ಹರಿಪ್ರಸಾದ್ ಮತ್ತು ನಜೀರ್ ಅಹಮದ್ ಅವರು ಬಾಗಿಲನ್ನು ಒದ್ದರಲ್ಲದೆ, ಬಾಗಿಲು ತಳ್ಳಲು ಯತ್ನಿಸಿದರು. ಇದರಿಂದಾಗಿ ಸಭಾಪತಿ ಸ್ವಲ್ಪಹೊತ್ತು ಸದನದ ಒಳಕ್ಕೆ ಬರಲು ಸಾಧ್ಯವಾಗಲಿಲ್ಲ.
ಕೊನೆಗೆ, ಮಾರ್ಷಲ್‌ಗಳು ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು ಸದನಕ್ಕೆ ಕರೆಕೊಂಡು ಬಂದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಅಂತಿಮವಾಗಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷಾವಧಿಗೆ ಮುಂದೂಡಿದರು. ಅಲ್ಲಿಗೆ ಸದನದಲ್ಲಿ ನಡೆದಿದ್ದ ಗಲಾಟೆ ತಣ್ಣಗಾಗಿ, ಸದನದ ಹೊರಗೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಯಿತು.
- ನಟ್ಟಿಗರೊಬ್ಬರು ಮಾಡಿರುವ ವಿಡಂಬತಾತ್ಮಕ ಟ್ವೀಟ್ / courtesy: @twitter