ಬೆಂಗಳೂರು/ಚಿಕ್ಕಬಳ್ಳಾಪುರ: ಮಾಜಿ ಸಚಿವೆ ಹಾಗೂ ಚಿಕ್ಕಬಳ್ಳಾಪುರದ ಶಾಸಕಿಯೂ ಆಗಿದ್ದ ಶ್ರೀಮತಿ ರೇಣುಕಾ ರಾಜೇಂದ್ರನ್ ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷವಾಗಿತ್ತು. ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಪೂರ್ಣ ಗುಣಮುಖರಾಗಿದ್ದರು. ಆದರೆ ಬೆಳಗ್ಗೆ ಅದೇ ಆಸ್ಪತ್ರೆಯಲ್ಲೇ ಅವರು ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದು, ಅನೇಕ ಗಣ್ಯರು ಅವರಿಗಾಗಿ ಕಂಬನಿ ಮಿಡಿದಿದ್ದಾರೆ.
ದೇವರಾಜ ಅರಸು ಅವರ ಸ್ಫೂರ್ತಿಯೊಂದಿಗೆ ರಾಜಕೀಯಕ್ಕೆ ಬಂದಿದ್ದ ರೇಣುಕಾ ರಾಜೇಂದ್ರನ್ ಅವರು, 1980ರಿಂ 1983ರವರೆಗೆ ಆರ್.ಗುಂಡೂರಾವ್ ಅವರ ಸಂಪುಟದಲ್ಲಿ ರೇಷ್ಮೆ ಹಾಗೂ ಕ್ರೀಡೆ ಮತ್ತು ಯುವಜನ ಸೇವೆ, ಸಣ್ಣ ಕೈಗಾರಿಕೆಗಳ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. 1978ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್‌ನೊಂದಿಗೆ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ, 1983ರ ಚುನಾವಣೆಯಲ್ಲಿ ಸೋತಿದ್ದರು. 1989ರ ಚುನಾವಣೆಯಲ್ಲಿ ರೇಣುಕಾ ರಾಜೇಂದ್ರನ್ ಅವರು ಗೆಲುವು ಸಾಧಿಸಿದ್ದರು. 1994ರ ಚುನಾವಣೆಯ ನಂತರ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿದರು.
ಗಣ್ಯರ ಸಂತಾಪ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ರೇಣುಕಾ ರಾಜೇಂದ್ರನ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ನಾಯಕಿ, ಮಾಜಿ ಸಚಿವೆ ಶ್ರೀಮತಿ ರೇಣುಕಾ ರಾಜೇಂದ್ರನ್ ಅವರ ನಿಧನದ ಸುದ್ದಿ ತೀವ್ರ ಆಘಾತ ಮೂಡಿಸಿದೆ. ದೇವರಾಜು ಅರಸು ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯಿಂದ ರಾಜಕೀಯ ಪ್ರವೇಶಿಸಿದ ಶ್ರೀಮತಿ ರೇಣುಕಾ ಅವರು ಮೂರು ಬಾರಿ ಶಾಸಕರಾಗಿ, ಶ್ರೀ ಗುಂಡೂರಾವ್ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.