ಬೆಂಗಳೂರು: ಉದ್ಯಮಿ, ಸಮಾಜ ಸೇವಕ ಹಾಗೂ ಆರ್‌ಎನ್ಎಸ್ ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸಂಸ್ಥಾಪಕರೂ ಆದ ಆರ್.ಎನ್. ಶೆಟ್ಟಿ (92) ಅವರು ಗುರುವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪ್ರಖ್ಯಾತ ಧಾರ್ಮಿಕ ತಾಣವಾದ ಮುರುಡೇಶ್ವರದಲ್ಲಿ ಬೃಹತ್ ಶಿವನಮೂರ್ತಿ ಹಾಗೂ ಅತಿ ಎತ್ತರದ ರಾಜಗೋಪುರವನ್ನು ಅವರು ನಿರ್ಮಾಣ ಮಾಡಿದ್ದರು. ಶಿವನ ಮೂರ್ತಿ 123 ಅಡಿ ಎತ್ತರವಿದ್ದು, ಜಗತ್ತಿನಲ್ಲಿಯೇ ಎರಡನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇದಕ್ಕಾಗಿ ಶೆಟ್ಟಿ ಅವರು ಐವತ್ತು ದಶಲಕ್ಷಕ್ಕೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದರು. ಹಾಗೆಯೇ, ಶಿವನಿಗೆ ಸಮರ್ಪಣೆಯಾಗಿ ೨೦ ಅಂತಸ್ತುಗಳ 249 ಅಡಿ ಎತ್ತರದ ರಾಜಗೋಪುರವೂ ಅತ್ಯಂತ ಪ್ರಮುಖ ಆಕರ್ಷಣೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲಾಗಿರುವ ಈ ಗೋಪುರದಲ್ಲಿ ಲಿಫ್ಟ್ ಇದ್ದು, ಗೋಪುರದ ತುತ್ತತುದಿಯಿಂದ ಶಿವನ ಮೂರ್ತಿಯನ್ನು ನೋಡವುದೇ ಪರಮಾನಂದ.
ಆರ್.ಎನ್. ಶೆಟ್ಟಿ ಸ್ಥಾಪಿಸಿದ ಮುರಡೇಶ್ವರದಲ್ಲಿನ ರಾಜಗೋಪುರ.
Murdeshwar photos: CKPhotography ಸಿಕೆಪಿ@ckphotographi
ಈ ಮೂಲಕ ಅವರು ಮುರುಡೇಶ್ವರವನ್ನು ಒಂದು ಪವಿತ್ರ ಪುಣ್ಯತಾಣ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಯೂ ಪರಿವರ್ತಿಸಿದ್ದಾರೆ. ನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಅಭಿವೃದ್ಧಿಪಡಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ರಾಜ್ಯದ ಮತ್ತು ದೇಶದ ಪ್ರಗತಿಗೆ ತಮ್ಮದೇ ಕೊಡುಗೆ ನೀಡಿದ್ದ ಹೆಸರಾಂತ ಉದ್ಯಮಿ. ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿ ವಿವಿಧ ರಂಗಗಳಲ್ಲಿ ಆರ್.ಎನ್. ಶೆಟ್ಟಿ ಅವರು ಛಾಪು ಮೂಡಿಸಿದ್ದರು. ಕರ್ನಾಟಕದ ಅಭಿವೃದ್ಧಿಗೂ ಅವರು ನೀಡಿರುವ ಕೊಡುಗೆ ಅಸಾಧಾರಣ.
1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೆ.ಎಲ್.ಇ. ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವೇ ಮೊದಲಾದ ಹತ್ತು ಹಲವು ಮಹತ್ವದ ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮೈಲುಗಲ್ಲಿನ ಸಾಧನೆ ಮಾಡಿದ್ದಾರೆ.
ಆರ್.ಎನ್.ಶೆಟ್ಟಿ ಟ್ರಸ್ಟ್ ವತಿಯಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ. ಅವರಿಗೆ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದ ಕೈಗಾರಿಕಾ ರತ್ನ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಗೌರವಗಳು ಸಂದಿವೆ.
ಆರ್.ಎನ್. ಶೆಟ್ಟಿ ಅವರು ಇತ್ತೀಚೆಗಷ್ಟೇ ಕೋವಿಡ್ ಸಂದರ್ಭದಲ್ಲಿ ಪಿಎಂ ಕೇರ್ಸ್ʼಗೆ 2.4 ಕೋಟಿ ರೂಪಾಯಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ 5 ಲಕ್ಷ ರೂಪಾಯಿ ಸೇರಿ ಒಟ್ಟು 3 ಕೋಟಿ 9 ಲಕ್ಷ ರೂ. ದೇಣಿಗೆ ನೀಡಿದ್ದರು.