ಬೆಂಗಳೂರು/ಬಳ್ಳಾರಿ: ಕೇರಳದ ದೇವಾಲಯವೊಂದಕ್ಕೆ ತಮಿಳುನಾಡಿನ ಮಾಜಿ ಸಿಎಂ ಒಬ್ಬರು ಆನೆ ದಾನ ಮಾಡಿದ್ದನ್ನು ಕೇಳಿದ್ದೇವೆ. ಬಳ್ಳಾರಿಯ ಗಣಿ ಧಣಿಯೊಬ್ಬರು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ರತ್ನಖಚಿತ ಕಿರೀಟ ಮಾಡಿಸಿ ಕೊಟ್ಟಿದ್ದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಭಗವಂತನಿಗೇ ಹೆಲಿಕಾಪ್ಟರ್ ಮಾಡಿಸಿಕೊಟ್ಟಿದ್ದಾರೆ!!
ಇದೇನೆಂದು ಗಾಬರಿಯಾಗಬೇಡಿ. ಭಗವಂತನೂ ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಾರಾ ಎಂದು ಹುಬ್ಬೇರಿಸಬೇಡಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಬೆಳ್ಳಿ ಹೆಲಿಕಾಪ್ಟರ್ ಮಾಡಿಸಿಕೊಟ್ಟು ಹರಕೆಯೊಂದನ್ನು ತೀರಿಸಿಕೊಂಡಿದ್ದಾರೆ.
ಬೆಳ್ಳಿ ಹೆಲಿಕಾಪ್ಟರ್ ಯಾಕೆ?
ಮೂರು ವರ್ಷಗಳ ಹಿಂದಿನ ಮಾತು. ಹೆಲಿಕಾಪ್ಟರ್‌ನಲ್ಲಿ ಬಳ್ಳಾರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಡಿಕೆಶಿ ಅವರು, ತಮಗೆ ಅರಿವಿಲ್ಲದಂತೆಯೇ ಶ್ರೀ ಮೈಲಾರಲಿಂಗೇಶ್ವರ ದೇವಾಲಯದ ಮೇಲೆ ಆಕಾಶದಲ್ಲಿ ಹಾದು ಹೋಗಿದ್ದರು. ಇದಾದ ಮೇಲೆ ಅವರಿಗೆ ಸರಣಿ ಸಂಕಷ್ಟಗಳೇ ಎದುರಾಗಿದ್ದವು. ಐಟಿ, ಇಡಿ, ಸಿಬಿಐ ದಾಳಿಗಳು ಸೇರಿದಂತೆ ಹಲವಾರು ಉಪದ್ರವಗಳನ್ನು ಅವರು ಎದುರಿಸಬೇಕಾಯಿತು. ಕೊನೆಗೆ, ಪಂಡಿತರೊಬ್ಬರ ಮಾತಿನಂತೆ ದೇವರಿಗೆ ಅಪಚಾರ ಎಸಗಿರುವುದು ಮನಗಂಡು ಇದೀಗ ಹರಕೆ ತೀರಿಸಿ ಭಗವಂತನಲ್ಲಿ ಕ್ಷಮೆ ಕೇಳಿದ್ದಾರೆಂದು ಡಿಕೆಶಿ ಆಪ್ತರೊಬ್ಬರು ತಿಳಿಸಿದರು.
ಶುಕ್ರವಾರ ಬೆಳಗ್ಗೆಯೇ ದೇವಾಲಯಕ್ಕೆ ಬಂದ ಡಿಕೆಶಿ, ದೇಗುಲದ ನಿಯಮಗಳು, ಧಾರ್ಮಿಕ ನಂಬಿಕೆಯಂತೆ ಮಡಿಯಲ್ಲಿಯೇ ವಿಶೇಷ ಪೂಜೆಯನ್ನು ನೆರೆವೇರಿಸಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಬೆಳ್ಳಿ ಹೆಲಿಕಾಪ್ಟರ್ ಅನ್ನು ಸಮರ್ಪಿಸಿದರು. ಇದಕ್ಕೆ ಅಲ್ಲಿ ನೆರೆದಿದ್ದ ಭಕ್ತರು, ಅರ್ಚಕರು, ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕರಾದ ಪಿ.ಟಿ ಪರಮೇಶ್ವರ್ ನಾಯ್ಕ್, ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಾಕ್ಷಿಯಾದರು.
photos courtesy: dk shivakumar facebook page
ಅಪಚಾರವಾಗಿದ್ದು ಗೊತ್ತಾಗಿರಲಿಲ್ಲ
ಮೂರು ವರ್ಷಗಳ ಹಿಂದೆ ನಾನು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಸ್ವಾಮಿಯ ದೇಗುಲದ ಮೇಲೆ ಹಾದು ಹೋಗಿತ್ತು ಎಂದು ಬಹಳ ದಿನಗಳ ನಂತರ ತಿಳಿಯಿತು. ನನ್ನಿಂದ ಅಪಚಾರವಾಗಿದೆ ಎಂಬ ಅರಿವಾಯಿತು. ನಾನು ಯಾವತ್ತೂ ದೈವದಲ್ಲಿ ಶ್ರದ್ಧಾಭಕ್ತಿಯಿಂದಲೇ ನಡೆದುಕೊಳ್ಳುತ್ತೇನೆ. ಕೊನೆಗೆ ಹಿರಿಯರ ಸಲಹೆಯಂತೆ ದೇವರಿಗೆ ಬೆಳ್ಳಿ ಹೆಲಿಕಾಪ್ಟರ್ ಸಮರ್ಪಿಸಿದ್ದೇನೆ ಮತ್ತೂ ಅಪಚಾರಕ್ಕಾಗಿ ದೇವರಲ್ಲಿ ಕ್ಷಮೆಯನ್ನೂ ಕೇಳಿದ್ದೇನೆ ಎಂದು ತಿಳಿಸಿದ್ದಾರೆ ಡಿಕೆಶಿ.