ಇಡೀ ಘಟನೆಗೆ ಕಂಪನಿಯ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆಯೇ ಹೊಣೆ: ಜಿ.ವಿ.ಶ್ರೀರಾಮರೆಡ್ಡಿ ಆರೋಪ
ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರು ಸಿಡಿದೇಳಲು ಕಂಪನಿ ಮತ್ತು ಕಾರ್ಮಿಕ ಇಲಾಖೆಯೇ ನೇರ ಹೊಣೆ ಎಂದು ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು; ಕಂಪನಿಯವರು ಹೆಚ್ಚುವರಿ ಕೆಲಸ ಮಾಡಿಸಿಕೊಂಡು ಓಟಿ ಕೊಡುತ್ತಿಲ್ಲ. ಸರಿಯಾಗಿ ವೇತನ ಪಾವತಿ ಮಾಡುತ್ತಿಲ್ಲ. ಕಾರ್ಮಿಕರನ್ನು ದಿನಕ್ಕೆ ಹದಿನಾಲ್ಕು ಗಂಟೆ ಕೆಲಸ ಮಾಡಿಸಿಕೊಂಡು ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲೂ ದುಡಿಸಿಕೊಂಡು ಅನ್ಯಾಯ ಎಸಗಲಾಗಿದೆ. ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ಕಾನೂನಿನ ಎಲ್ಲ ಅಂಶಗಳನ್ನು ಗಾಳಿಗೆ ತೂರಿದೆ. ಕಾರ್ಮಿಕ ಇಲಾಖೆಯ ವೈಫಲ್ಯವಂತೂ ಎದ್ದು ಕಾಣಿಸುತ್ತಿದೆ ಎಂದು ದೂರಿದರು.
ಇಡೀ ಘಟನೆಯ ಬಗ್ಗೆ ಶ್ರೀರಾಮರೆಡ್ಡಿ ಅವರು ಮಾಡಿದ ಆರೋಪಗಳಿವು;
- ಕಾರ್ಮಿಕರು ತಮ್ಮ ವಿರುದ್ಧ ನಿರಂತರವಾಗಿ ನಡೆಯುತ್ತಿದ್ದ ದಬ್ಬಾಳಿಕೆ ಹಾಗೂ ಶೋಷಣೆಯನ್ನು ಸಹಿಸಿಕೊಳ್ಳಲಾಗದೇ ಸಿಡಿದೆದ್ದಾರೆ. ಇದಕ್ಕೆ ನೇರ ಹೊಣೆ ಹಾಗೂ ಮೂಲ ಕಾರಣ ಆಡಳಿತ ಮಂಡಳಿಯೇ. ಹಾಗೆಯೇ ಕಾರ್ಮಿಕ ಇಲಾಖೆ ವಿಫಲತೆಯೂ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ. ಆದ್ದರಿಂದ ಕಾರ್ಮಿಕರನ್ನು ಬಲಿಪಶುಗಳನ್ನಾಗಿ ಮಾಡುವುದು ಸರಿಯಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ.
- 7,000 ಕಾರ್ಮಿಕರ ಮೇಲೆ ಎಫ್‌ಐಆರ್ ಹಾಕಲಾಗಿದೆ. ಕೂಡಲೇ ಇದನ್ನು ವಾಪಸ್ ಪಡೆಯಬೇಕು. ಈ ಘಟನೆಯ ಒಳಗೆ ನಿಜವಾದ ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಆರೋಪ ಪಟ್ಟಿಯಲ್ಲಿ 7,000 ಜನ ಅಂತ ಹೇಳಿದ್ದಾರೆ. ಆದರೆ ಅದರಲ್ಲಿ ಒಬ್ಬನ ಹೆಸರೂ ಇಲ್ಲ. ಎ1 ಅಂತ ಇದೆ, ಅಲ್ಲಿಯೂ ಯಾರ ಹೆಸರೂ ಇಲ್ಲ. ಬೀದಿಯಲ್ಲಿ ಯಾರು ಸಿಕ್ಕಿದರೆ ಅವರನ್ನೆಲ್ಲ ಎಳೆದುಕೊಂಡು ಬಂದು ಬಂಧನದಲ್ಲಿ ಇಟ್ಟುಕೊಳ್ಳಲಾಗಿದೆ. ಇದು ಅನ್ಯಾಯದ ಪರಮಾವಧಿ. ತಕ್ಷಣ ಅವರನ್ನೆಲ್ಲ ಬಿಡುಗಡೆ ಮಾಡಬೇಕು.
- ಕಾರ್ಮಿಕರಿಗೆ ಬಾಕಿ ಇರುವ ವೇತನ, ಓಟಿ ಮೊತ್ತ, ಮತ್ತೆ ಏನೇನು ಬಾಕಿ ಇದೆಯೋ ಅದೆಲ್ಲವನ್ನೂ ಕೂಡಲೇ ಪಾವತಿ ಮಾಡಬೇಕು. ಅವರ ಕುಟುಂಬಗಳ ರಕ್ಷಣೆಗೆ ಕೂಡಲೇ ಕಾರ್ಮಿಕ ಇಲಾಖೆ ಧಾವಿಸಬೇಕು.
- ಕಂಪನಿ 437 ಕೋಟಿ ರೂ. ನಷ್ಟ ಆಗಿದೆ ಎಂದು ಹೇಳುತ್ತಿದೆಯಲ್ಲ? ಎಂಬ ಪ್ರಶ್ನೆಗೆ, ಹೌದು. ಕಂಪನಿಯವರು ಹೇಳಿದರೆ ಎಲ್ಲರೂ ಒಪ್ಪುತ್ತಾರೆ. ಆದರೆ ಬೇರೆಯವರು ಹೇಳಿದರೆ ಒಪ್ಪುವುದಿಲ್ಲ. ಎಫ್‌ಐಆರ್‌ನಲ್ಲಿಯೇ ಹೇಳಲಾಗಿದೆ, ಎಚ್‌ಆರ್ ವಿಭಾಗದ ಮೇಲೆ ಮೊದಲು ದಾಳಿ ನಡೆಯಿತು ಎಂದು. ಆ ವಿಭಾಗದಲ್ಲಿ ಏನೇನು ನಷ್ಟ ಆಗಿರುತ್ತೆ? ಅಲ್ಲೇನು ದೊಡ್ಡ ದೊಡ್ಡ ಯಂತ್ರಗಳು ಇರುತ್ತವಾ? ಅಲ್ಲಿ ನೂರಾರು ಕೋಟಿ ಬೆಲೆ ಬಾಳುವ ಆಸ್ತಿ ಏನಿರುತ್ತದೆ?
- ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರು ಸಿಡಿದೇಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳೇ ಕಾರಣ. ಇವೆರಡೂ ಸರಕಾರಗಳು ಕಾರ್ಮಿಕರಿಗೆ ರಕ್ಷಣೆ ಕೊಡುವಂಥ ಒಂದೇಒಂದು ಕಾನೂನನ್ನೂ ಮಾಡಿಲ್ಲ. ನರೇಂದ್ರ ಮೋದಿ ಹೊಸ ಕಾರ್ಮಿಕ ಕಾನೂನುಗಳನ್ನು ತರುವ ನೆಪದಲ್ಲಿ ಕಾರ್ಮಿಕರು ದನಿ ಎತ್ತುವ ಹಕ್ಕನ್ನೇ ಕಸಿದುಕೊಂಡಿದ್ದಾರೆ.
- ಪ್ರಧಾನಿಗೆ ಎಲ್ಲೋ ನರಸಾಪುರದಲ್ಲಿರುವ ವಿಸ್ಟ್ರಾನ್ ಕಂಪನಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಆದರೆ, ದಿಲ್ಲಿಯ ಅಕ್ಕಪಕ್ಕದಲ್ಲಿಯೇ ಕಳೆದ ಇಪ್ಪತ್ತು ದಿನಗಳಿಂದ ಮೈಕೊರೆಯುವ ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಬಗ್ಗೆ ಕಾಳಜಿ ಇಲ್ಲ. ಈ ಮೂಲಕ ಮೋದಿ ಕಾರ್ಪೊರೇಟ್‌ಗಳ ಪರ ಎಂಬುದು ಜಗಜ್ಜಾಹೀರಾಗಿದೆ. ಅದು ಇಲ್ಲಿ ಕಾರ್ಮಿಕರ ಪರ ಅವರ ಕಾಳಜಿ ಇಲ್ಲ. ಅದೇನಿದ್ದರೂ ಕಂಪನಿಯ ಪರ ಮಾತ್ರ.
- ಪ್ರಧಾನಿ ಯಾರ ಪರ ಇದ್ದಾರೆ ಎಂಬುದಕ್ಕೆ ಮುಚ್ಚುಮರೆ ಏನಿಲ್ಲ. ಕಂಪನಿಗಳಿಗೆ ರಕ್ಷಣೆ ಕೊಡಬೇಕು ಎಂದು ಅವರು ನೇರವಾಗಿಯೇ ಹೇಳುತ್ತಿದ್ದಾರೆ. ಅಂದರೆ ಅರ್ಥ ಏನು? ಕಾರ್ಮಿಕರಿಗೆ ರಕ್ಷಣೆ ಅಲ್ಲ, ಕಂಪನಿಗಳಿಗೆ ರಕ್ಷಣೆ ಕೊಡಬೇಕು. ದುಡಿದು ಸಂಪತ್ತನ್ನು ಸೃಷ್ಟಿ ಮಾಡುವವರಿಗೆ ರಕ್ಷಣೆ ಇಲ್ಲ. ಮಾಲೀಕರು ಮಾತ್ರ ಚೆನ್ನಾಗಿರಬೇಕು. ಇದು ಅವರ ಆಡಳಿತ.
- ಶ್ರೀರಾಮರೆಡ್ಡಿ ಅವರ ಪತ್ರಿಕಾಗೋಷ್ಠಿಯನ್ನು ಪೂರ್ಣವಾಗಿ ಕೇಳಬೇಕಾದರೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..