ಬೆಂಗಳೂರು: ಕಳೆದ ಶನಿವಾರ ಕಾರ್ಮಿಕರ ಗಲಾಟೆಯಿಂದ ಜಗತ್ತಿನಾದ್ಯಂತ ಸುದ್ದಿಯಾದ ವಿಸ್ಟ್ರಾನ್ ಘಟನೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿರುವಂತೆ, ವಿಸ್ಟ್ರಾನ್ ಘಟಕದ ಮೇಲೆ ಕಾರ್ಮಿಕರು ನಡೆಸಿದ ದಾಳಿಯ ಬಗ್ಗೆ ಮೋದಿ ತೀವ್ರ ಬೇಸರ ಮತ್ತು ಕಳವಳ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಎಲ್ಲವನ್ನೂ ಸರಿಪಡಿಸುವುದಾಗಿ ಶುಕ್ರವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾಯನಾಡುತ್ತಾ ಈ ವಿಷಯವನ್ನು ತಿಳಿಸಿದ ಸಿಎಂ, ವಿಸ್ಟ್ರಾನ್ ಮೇಲೆ ಇಂಥ ದಾಳಿ ನಡೆಯಬಾರದಿತ್ತು. ಮಾನ್ಯ ಪ್ರಧಾನಮಂತ್ರಿಗಳೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದರಲ್ಲದೆ, ವಿಸ್ಟ್ರಾನ್ ಕಂಪನಿಯನ್ನು ರಾಜ್ಯದಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕಂಪನಿಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಾಗಿದೆ. ಉತ್ಪಾದನೆಯನ್ನು ಪುನಾರಂಭ ಮಾಡುವುದಕ್ಕೆ ಬೇಕಿರುವ ನೆರವು ಕೊಡಲಾಗಿದೆ. ನಮ್ಮ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು ನಿರಂತರವಾಗಿ ಕಂಪನಿಯ ಜತೆ ಸಂಪರ್ಕದಲ್ಲಿದ್ದಾರೆ. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮೋದಿ ಕಳವಳಕ್ಕೆ ಕಾರಣವೇನು?
ವಿಸ್ಟ್ರಾನ್ ದಾಳಿಯ ಬಗ್ಗೆ ಮೋದಿ ಅವರು ಆತಂಕ, ಕಳವಳ ವ್ಯಕ್ತಪಡಿಸಿರುವುದಕ್ಕೆ ಕಾರಣವಿದೆ. ಕೈಗಾರಿಕೆ ಇಲಾಖೆಯ ಮೂಲಗಳು ಹೇಳುವ ಪ್ರಕಾರ; ಪ್ರಸಕ್ತ ಸಂದರ್ಭದಲ್ಲಿ ತೈವಾನ್ ಮೂಲದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ಹೊಂದಿವೆ. ಇದಕ್ಕೆ ಕಾರಣವೆಂದರೆ; ಜಾಗತಿಕವಾಗಿ ಭಾರತ ಮತ್ತು ತೈವಾನ್ ದೇಶಗಳು ಸಹಜ ಮಿತ್ರದೇಶಗಳಾಗಿವೆ.
ನೆರೆಯ ಚೀನಾ ಇತ್ತ ಭಾರತಕ್ಕೂ ಅತ್ತ ತೈವಾನ್‌ಗೂ ಸಮಾನ ಶತ್ರು ದೇಶವಾಗಿದೆ. ಹೀಗಾಗಿ ಜಾಗತಿಕ ಮಟ್ಟದ ಸಮೀಕರಣದಲ್ಲಿ ಇವೆರಡೂ ದೇಶಗಳು ಈಗ ತುಂಬಾ ಹತ್ತಿರವಾಗಿವೆ. ವ್ಯಾಪಾರ, ವಾಣಿಜ್ಯ, ಹೂಡಿಕೆ, ಆಮದು-ರಫ್ತು, ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.
ಮುಖ್ಯವಾಗಿ ದಕ್ಷಿಣ ಆಸಿಯಾ ಸಮುದ್ರದಲ್ಲಿ ಚೀನಾ ಉಪಟಳದಿಂದ ಬೇಸತ್ತಿರುವ ದಕ್ಷಿಣ ಕೊರಿಯಾ, ಜಪಾನ್, ವಿಯೆಟ್ನಾಂ, ತೈವಾನ್ ಸೇರಿದಂತೆ ಆ ಭಾಗದ ಬಹುತೇಕ ಎಲ್ಲ ದೇಶಗಳು ಭಾರತದ ಜತೆಗೆ ಸಂಬಂಧ ಬಲಪಡಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿವೆ. ಅದೇ ರೀತಿ ಆ ದೇಶಗಳ ಜತೆ ವ್ಯೂಹಾತ್ಮಕ ಸಂಬಂಧ ಹೊಂದುವುದು ಭಾರತಕ್ಕೂ ಅಗತ್ಯವಿದೆ. ಜಾಗತಿಕ ಉತ್ಪಾದನಾ ಮಾರುಕಟ್ಟೆಯಲ್ಲಿ ಚೀನಾವನ್ನು ಬಲವಾಗಿ ಎದುರಿಸಬೇಕಾದರೆ ಭಾರತಕ್ಕೆ ಆಸಿಯಾನ್ ದೇಶಗಳ ಸಹಕಾರ ಬೇಕೆಬೇಕು. ಅದರಲ್ಲೂ ತೈವಾನ್ ಮತ್ತು ಚೀನಾ ಸಂಬಂಧ ಹಾವು-ಮುಂಗುಸಿಯಂತೆ ಆಗಿದೆ. ತೈವಾನ್ ತನ್ನ ಭೂಭಾಗ ಎಂದು ಚೀನಾ ಹೇಳುತ್ತಿದೆಯಾದರೂ ಇಡೀ ಅಂತಾರಾಷ್ಟ್ರೀಯ ಸಮುದಾಯ ತೈವಾನ್ ಪರವೇ ನಿಂತಿದೆ. ಇಂಥ ಸಮಯದಲ್ಲಿ ಏಷ್ಯಾದಲ್ಲಿ ಚೀನಾಕ್ಕೆ ಸರಿಸಮನಾಗಿ ಬೆಳೆಯುತ್ತಿರುವ ಭಾರತದ ಬೆಂಬಲ ತೈವಾನ್‌ಗೆ ಅನಿವಾರ್ಯ. ಅದೇ ರೀತಿ, ಚೀನಾಕ್ಕೆ ಸದಾ ಚುರುಕು ಮುಟ್ಟಿಸಲು ಭಾರತಕ್ಕೆ ತೈವಾನ್ ದೇಶವೂ ಅಗತ್ಯ. ಈ ಕಾರಣಕ್ಕಾಗಿ ತೈವಾನ್ ಹೂಡಿಕೆಯನ್ನು ಭಾರತ ಉತ್ತೇಜಿಸುತ್ತಿದೆ ಎನ್ನುತ್ತವೆ ಆ ಮೂಲಗಳು.
7.2 ಬಿಲಿಯನ್ ಡಾಲರ್ ವ್ಯವಹಾರ
ತೊಂಭತ್ತರ ದಶಕದ ನಂತರ ಭಾರತ-ತೈವಾನ್ ಸಂಬಂಧದಲ್ಲಿ ಬಹಳಷ್ಟು ಸುಧಾರಣೆ ಕಂಡು ಬಂದಿದೆ. ಎರಡೂ ದೇಶಗಳ ನಡುವೆ ಮಾಹಿತಿ ತಂತ್ರಜ್ಞಾನ, ಇಂಧನ, ಟೆಲಿಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಯಾಗಿದೆ. ತೈವಾನ್ ಕಂಪನಿಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ನೋಯ್ಡಾ ಸೇರಿ ದೇಶಾದ್ಯಂತ ಅನೇಕ ಕಡೆ ಹೂಡಿಕೆ ಮಡಿವೆ. 2019ರ ಹೊತ್ತಿಗೆ ಭಾರತ-ತೈವಾನ್ ನಡುವಿನ ವ್ಯವಹಾರ 7.2 ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ಭಾರತವು ತೈವಾನ್‌ಗೆ ಕಚ್ಛಾತೈಲ, ನಾಫ್ತಾ, ಹತ್ತಿ, ನಿಸರ್ಗದತ್ತ ರಾಸಾಯನಿಕಗಳು, ಕಂಚು, ಅಲ್ಯೂಮೀನಿಯಂ, ಆಹಾರ ಪೂರಕ ಪದಾರ್ಥಗಳನ್ನು ರಫ್ತು ಮಾಡುತ್ತಿದೆ. ಹಾಗೆಯೇ ತೈವಾನ್‌ನಿಂದ ಭಾರತ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು, ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತದೆ. ಮುಖ್ಯವಾಗಿ ತೈವಾನ್ ಕಂಪನಿಗಳು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಬಿಟಿ, ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ. ಸದ್ಯಕ್ಕೆ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ 80ರಿಂದ 100 ತೈವಾನ್ ಮೂಲದ ಕಂಪನಿಗಳು ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಹಾಗೆಯೇ, ಎರಡೂ ದೇಶಗಳು ಪರಸ್ಪರ ತೆರಿಗೆ ರಿಯಾಯಿತಿಗಳನ್ನು ಹೊಂದಿವೆ.
143 ಬಿಲಿಯನ್ ಡಾಲರ್ ಹೂಡಿಕೆ
ನರಸಾಪುರದಲ್ಲಿ ಘಟಕ ಸ್ಥಾಪನೆ ಮಾಡಿರುವ ವಿಸ್ಟ್ರಾನ್ ಸೇರಿದಂತೆ ಫಾಕ್ಸ್‌ಕಾನ್, ಸನ್ಯಾಂಗ್ ಕಾರ್ಪೊರೇಷನ್, ಗಿಗಾಬೈಟ್ ಟೆಕ್ನಾಲಜೀಸ್, ಕಾಂಟಿನೆಂಟಲ್ ಎಂಜನೀಯರಿಂಗ್, ಸಿಟಿಸಿಐ, ಅಪಾಚೆ-ಪೆಂಗ್ ಥೇ (ಶೋಸ್), ವಿಂಟೆಕ್ ಕಾರ್ಪೊರೇಷನ್, ಡೆಲ್ಟಾ ಎಲೆಕ್ಟ್ರಾನಿಕ್ಸ್, ಡಿ ಲಿಂಕ್, ಮೈಟಾ ಇಂಡಸ್ಟ್ರೀಯಲ್ಸ್, ಟ್ರಾನ್ಸ್‌ಕ್ಯಾಂಡ್, ಮೀಡಿಯಾ ಟೆಕ್, ಪೆಗಟ್ರಾನ್, ಸೇರಿದಂತೆ ಇನ್ನೂ ಅನೇಕ ಪ್ರತಿಷ್ಠಿತ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಹಾಗೆ ನೋಡಿದರೆ, ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಜಾಗತಿಕ ದೇಶಗಳ ಪೈಕಿ ತೈವಾನ್ 40ನೇ ಸ್ಥಾನದಲ್ಲಿ ಇದೆಯಾದರೂ, ಅದು ಪ್ರಮುಖ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ ಎನ್ನಬಹುದು.
ಕಳೆದ ಅಕ್ಟೋಬರ್‌ನಲ್ಲಿ ನರಸಾಪುರದಲ್ಲಿರುವ ವಿಸ್ಟ್ರಾನ್ 3,500 ಕೋಟಿ ರೂ. ಮೊತ್ತವನ್ನು ಹೂಡಿಕೆ ಮಾಡಿದ್ದರೆ, ಅದರ ಜತೆಯಲ್ಲೇ ಪೆಗಟ್ರಾನ್, ಫಾಕ್ಸ್‌ಕಾನ್ ಕಂಪನಿಗಳು ಸ್ಮಾರ್ಟ್‌ಫೋನ್ ತಯಾರಿಕಾ ವಲಯದಲ್ಲಿ ಭಾರೀ ಮೊತ್ತವನ್ನೇ ಹೂಡಿಕೆ ಮಾಡಿವೆ. ಕೇಂದ್ರ ಸರಕಾರದಿಂದಲೇ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ ಈ ಮೂರು ಕಂಪನಿಗಳು ಒಟ್ಟು 143 ಬಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಿವೆ. ಮುಂದಿನ ಐದು ವರ್ಷಗಳ ಕಾರ್ಯಸೂಚಿಯನ್ನು ಈ ಕಂಪನಿಗಳು ಹೊಂದಿದ್ದು, ಮತ್ತಷ್ಟು ಹೂಡಿಕೆ ಮಾಡಲು ಉದ್ದೇಶಿಸಿವೆ ಎಂಬ ಮಾಹಿತಿ ಇದೆ.
ಈಗಾಗಲೇ ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಚೌಕಟ್ಟಿನ ಒಪ್ಪಂದ (tifa), ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (bit), ಆದ್ಯತೆಯ ವ್ಯಾಪಾರ ಒಪ್ಪಂದ (pta), ಮುಕ್ತ ವ್ಯಾಪಾರ ಒಪ್ಪಂದ (fta), ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (cepa) ಹಾಗೂ ಸಾಮಾನ್ಯ ಮಾರುಕಟ್ಟೆ ಒಪ್ಪಂದಗಳಾಗಿವೆ.
ಈ ಕಾರಣಗಳಿಂದ ವಿಸ್ಟ್ರಾನ್ ಮೇಲೆ ನಡೆದ ದಾಳಿಯನ್ನು ಪ್ರಧಾನಿ ಮೋದಿ ಅವರು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ ಮಾತ್ರವಲ್ಲದೆ, ಮುಂದೆ ಇಂಥ ಘಟನೆಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದ್ದಾರೆ. ಇದರ ಜತೆಗೆ, ಗಾಲ್ವಾನ್ ಕಣಿವೆ ಗಲಾಟೆಯಾದ ಮೇಲೆ ಭಾರತ-ಚೀನಾ ಸಂಬಂಧ ಸಂಪೂರ್ಣವಾಗಿ ಹಳಸಿದೆ. ಈ ಹೊತ್ತಿನಲ್ಲಿ ಭಾರತ-ತೈವಾನ್ ದೇಶಗಳು ಮತ್ತಷ್ಟು ಹತ್ತಿರವಾಗಿವೆ. ಈ ಕಾರಣಕ್ಕಾಗಿಯೇ ವಿಸ್ಟ್ರಾನ್ ಪ್ರಸಂಗವನ್ನು ಕೇಂದ್ರ ಸರಕಾರ ಸೀರಿಯಸ್ಸಾಗಿ ತೆಗೆದುಕೊಂಡಿದ್ದು, ಅದನ್ನು ಸರಿಪಡಿಸಲು ತಾನೇ ಮುಂದಾಗಿದೆ.
ಚೀನಾ ವಿರೋಧ
ಇನ್ನೊಂದೆಡೆ ಭಾರತ ಮತ್ತು ತೈವಾನ್ ಹತ್ತಿರವಾಗುತ್ತಿರುವುದು ಚೀನಾಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒನ್ ಚೀನಾ ನೀತಿ ಅನುಸಾರ ತೈವಾನ್ ಜತೆ ಯಾವುದೇ ಮಾತುಕತೆಯಾಗಲಿ ಅಥವಾ ವಾಣಿಜ್ಯ-ವ್ಯವಹಾರ ಮಾಡುವಂತಿಲ್ಲ ಎಂದು ಈ ಹಿಂದೆಯೇ ಭಾರತಕ್ಕೆ ಹೇಳುವ ಪ್ರಯತ್ನ ಮಾಡಿತ್ತು ಚೀನಾ. ಹೀಗಾಗಿ ದಿಲ್ಲಿ-ತೈಪೆ ನಡುವಿನ ಸಂಬಂಧ ಕೆಡಲಿ ಎಂದೇ ಬೀಜಿಂಗ್ ಬಯಸುತ್ತಿದೆ. ವಿಸ್ಟ್ರಾನ್ ಘಟನೆಯಿಂದ ಹಾಗೆ ಆಗಬಹುದೇನೋ ಎಂದು ಚೀನಾ ಭಾವಿಸಿತ್ತು. ಆ ದೇಶದ ಸರಕಾರಿ ಪ್ರಾಯೋಜಿತ ಮಾಧ್ಯಮಗಳು ಕೂಡ ಅದೇ ನಿರೀಕ್ಷೆಯನ್ನು ಹೊಂದಿದ್ದವು. ಆದರೆ, ಮೋದಿ ಅವರ ಮಧ್ಯಪ್ರವೇಶ ಹಾಗೂ ಭಾರತ-ತೈವಾನ್ ಅಧಿಕಾರಿಗಳ ಮಾತುಕತೆಯಿಂದ ಅಂಥ ಸಾಧ್ಯತೆಗಳು ತಪ್ಪಿಹೋಗಿವೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..