ಬೆಂಗಳೂರು: ಕೋವಿಡ್‌ನಿಂದ ಬಸವಳಿದು ಹೋಗಿದ್ದ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ನಿಧಾನವಾಗಿ ಹಳಿಗೆ ಬರುತ್ತಿದ್ದು, ಅದರ ಅಂಗವಾಗಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಕ್ಲಾಸ್‌ಗಳು ಆರಂಭವಾಗುತ್ತಿವೆ.
2021ರ ಜನವರಿ 1ನೇ ತಾರೀಖಿನಿಂದಲೇ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ನೇರ ತರಗತಿಗಳು ಶುರುವಾಗಲಿವೆ. ಹಾಗೆಯೇ; 6ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮವು ಆರಂಭವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನೊಂದೆಡೆ ವಿದ್ಯಾಗಮ ತರಗತಿಗಳ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಜತೆಯಲ್ಲೇ ಪದವಿಪೂರ್ವ ಕಾಲೇಜುಗಳ ಆರಂಭಕ್ಕೂ ಸಂಬಂಧಿತ ಇಲಾಖೆ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ.
ಕೋವಿಡ್ ಮಾರ್ಗಸೂಚಿಯಂತೆ ತರಗತಿ
ಕೋವಿಡ್ ಮಾರ್ಗಸೂಚಿ ಪ್ರಕಾರವೇ ತರಗತಿಗಳನ್ನು ನಡೆಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಪ್ರಕಾರ ಮಕ್ಕಳು ಶಾಲೆ, ಕಾಲೇಜು ಹಾಗೂ ವಿದ್ಯಾಗಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ನೀಡಬೇಕು ಹಾಗೂ ಆ ಅನುಮತಿ ಪತ್ರದಲ್ಲಿ ಆಯಾ ವಿದ್ಯಾರ್ಥಿಗೆ ಕೋವಿಡ್-19 ಸೋಂಕಿನ ಲಕ್ಷಣಗಳು ಇಲ್ಲವೆಂದು ದೃಢೀಕರಿಸಬೇಕು ಎಂದು ಸಿಎಂ ಹೇಳಿದ್ದಾರೆ.
ಜನವರಿ 1ರಿಂದ ಶಾಲೆಗಳು ಆರಂಭವಾದರೂ ಮಕ್ಕಳು ಶಾಲೆಗೆ ಬರಲೇಬೇಕೆಂದು ಕಡ್ಡಾಯವಿಲ್ಲ. ಆದರೆ, ದಾಖಲಾತಿ ಮಾಡಿಸಿಕೊಳ್ಳುವುದು ಕಡ್ಡಾಯ. ಮೊದಲಿಗೆ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. ಇದರ ಪರಿಣಾಮಗಳನ್ನು ನೋಡಿಕೊಂಡು ಒಂಭತ್ತು ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲಾಗುವುದು ಎಂದ ಯಡಿಯೂರಪ್ಪ ಅವರು, ತರಗತಿಗಳು ನಡೆಯುವ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ಮಾಸ್ಕ್ ಧರಿಸುವುದು, ದೈಹಿಕ ಅಂತರ, ಸ್ಯಾನಿಟೈಸ್ ಮಾಡಿಕೊಳ್ಲೂವುದು ಕಡ್ಡಾಯ. ಒಂದು ತರಗತಿಯಲ್ಲಿ ಹದವೈದು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದಿದ್ದಾರೆ.
ಈ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಉಮಾಶಂಕರ್ ಮುಂತಾದವರು ಉಪಸ್ಥಿತರಿದ್ದರು.