ಕೋಲಾರ/ಬೆಂಗಳೂರು: ಕಳೆದ ಶನಿವಾರ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಐಫೋನ್ ಘಟಕದ ವಿವಾದ ಕೊನೆಗೂ ಒಂದು ಹಂತಕ್ಕೆ ಬಂದಿದ್ದು, ವೇತನ ನೀಡಿಕೆಯಲ್ಲಿ ತನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದೆ.
ಒಂದೆಡೆ, ಇಡೀ ಘಟನೆಯ ಬಗ್ಗೆ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಇದೇ ವೇಳೆ ಆ್ಯಪಲ್ ಕಂಪನಿಯು ತನ್ನ ಪ್ರತಿನಿಧಿಗಳನ್ನು ಕಳಿಸಿ ಸ್ವತಂತ್ರ ತನಿಖೆಗೆ ಮುಂದಾಗಿತ್ತು. ಇವೆಲ್ಲ ಬೆಳವಣಿಗೆಗಳಿಂದ ಮುಂದೆ ಆಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲ ವಿಸ್ಟ್ರಾನ್ ಕಂಪನಿಯೇ ಇದೀಗ ತಪ್ಪೊಪ್ಪಿಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಇದರ ಬೆನ್ನಲ್ಲೇ ಕಂಪನಿಯ ಭಾರತೀಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನು ಕೆಲಸದಿಂದ ವಜಾ ಮಾಡುವುದಾಗಿ ತಿಳಿಸಿದೆ. ಇಷ್ಟಾದರೂ ವಿಸ್ಟ್ರಾನ್‌ಗೆ ನೀಡಿರುವ ಬೇಡಿಕೆ ಆದೇಶವನ್ನು ಆ್ಯಪಲ್ ಸಂಸ್ಥೆ ಮುಂದುವರಿಸುತ್ತದಾ? ಅಥವಾ ವಾಪಸ್ ಪಡೆಯುತ್ತದಾ? ಎಂಬ ಬಗ್ಗೆ ಇನ್ನು ಖಚಿತ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ಆ ಸಂಸ್ಥೆಯ ಚಪ್ರತಿನಿಧಿಗಳು ವಿಸ್ಟ್ರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೂಲಂಕಶವಾಗಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಕಂಪನಿ ಹೇಳಿದ್ದೇನು?
“ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ವಿಸ್ಟ್ರಾನ್ ಘಟಕವು ಹೊಸದು. ಅದನ್ನು ಸ್ಥಾಪಿಸುವ ಮತ್ತು ವಿಸ್ತರಣೆ ಮಾಡುವ ಪ್ರಕ್ರಿಯೆಯಲ್ಲಿ ಕೆಲವು ಲೋಪಗಳಾಗಿವೆ. ಲೇಬರ್ ಏಜೆನ್ಸಿಗಳು ಹಾಗೂ ವೇತನ ಪಾವತಿ ಮಾಡುವಲ್ಲಿ ತಪ್ಪುಗಳಾಗಿವೆ. ಆ ವ್ಯವಸ್ಥೆ ಇನ್ನೂ ಸಮರ್ಪಕವಾಗಬೇಕಾಗಿದೆ. ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಲು ಶಿಸ್ತು ಕ್ರಮಗಳನ್ನೂ ಸೇರಿದಂತೆ ಹಲವಾರು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ವಿಸ್ಟ್ರಾನ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವೇಳೆ ಭಾರತದಲ್ಲಿ ತನ್ನ ಕಾರ್ಯಭಾರವನ್ನು ನಿರ್ವಹಣೆ ಮಾಡುತ್ತಿದ್ದ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನ ಮನೆಗೆ ಕಳಿಸಯವ ನಿರ್ಧರವನ್ನು ಕಂಪನಿ ಕೈಗೊಂಡಿದೆ. .
ಕಂಪನಿಯ ಹೇಳಿಕೆಯಲ್ಲಿ ಇನ್ನಷ್ಟು ಅಂಶಗಳ ಬಗ್ಗೆ ತಿಳಿಸಲಾಗಿದೆ, ಅವು ಹೀಗಿವೆ;
“ನಮ್ಮ ಕಂಪನಿಯ ಭಾರತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಉಪಾಧ್ಯಕ್ಷರನ್ನು ಕೆಲಸದಿಂದ ತೆಗೆದುಕಾಕಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆಗಳು ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ. ನಮ್ಮ ವ್ಯವಸ್ಥೆಯನ್ನು ಉತ್ತಮಪಡಿಸಿಕೊಳ್ಳುತ್ತೇವೆ. ಅಷ್ಟೇ ಅಲ್ಲದೆ, ನಮ್ಮ ಸಂಸ್ಥೆಯ ತಂಡಗಳನ್ನು ಪುನಾರಚನೆ ಮಾಡಲಾಗುವುದು” ಎಂದು ತಿಳಿಸಲಾಗಿದೆ
ಕಾರ್ಮಿಕರಿಗೆ ಹೆಲ್ಪ್‌ಲೈನ್
ಇಷ್ಟೆಲ್ಲ ಕ್ರಮಗಳ ಜತೆಗೆ, ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಸದಾ ನಿಗಾ ಇರಿಸಲು ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಕೆಲಸ ಮಾಡುವ ಕಾರ್ಮಿಕರ ಹೆಲ್ಪ್‌ಲೈನ್ ತೆರೆಯಲಾಗುತ್ತಿದೆ. ಇದರಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸೇವೆ ಲಭ್ಯವಿರುತ್ತದೆ. ಯಾರೇ ಕಾರ್ಮಿಕರು ತಮ್ಮ ಕುಂದುಕೊರತೆ ಹೇಳಿಕೊಂಡರೂ ಅವರ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು. ಯಾರೇ ಆದರೂ ಈ ವ್ಯವಸ್ಥೆಯ ಮೂಲಕ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ಹೇಳಿಕೆಯಲ್ಲಿ ಭರವಸೆ ನೀಡಲಾಗಿದೆ.
ಇದೇ ವೇಳೆ ಆ್ಯಪಲ್ ಕಂಪನಿಯ ಉನ್ನತ ತಂಡವೊಂದು ನರಸಾಪುರ ಘಟಕದಲ್ಲಿ ತನಿಖೆ ನಡೆಸುತ್ತಿರುವ ಹಂತದಲ್ಲಿಯೇ ವಿಸ್ಟ್ರಾನ್ ತಪ್ಪೊಪ್ಪಿಕೊಂಡ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇಡೀ ಘಟನೆಯನ್ನು ಆ್ಯಪಲ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದ್ದು, ಆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಉದ್ಯೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಆ್ಯಪಲ್, ತಮ್ಮ ನಿಯಾಮವಳಿ ಹಾಗೂ ಷರತ್ತುಗಳಲ್ಲಿ ವಿಸ್ಟ್ರಾನ್ ಅನೇಕ ಅಂಶಗಳನ್ನು ಉಲ್ಲಂಘನೆ ಮಾಡಿದೆ. ವೇತನ ವಿಳಂಬ ಆಗಿದೆ ಎಂಬ ಅಂಶವನ್ನು ಗುರುತಿಸಿದೆ.
ಆ್ಯಪಲ್ ಸಂಸ್ಥೆ ಎಚ್ಚರಿಕೆ
ಸದ್ಯಕ್ಕೆ ಆ್ಯಪಲ್ ವಿಷಯದಲ್ಲಿ ವಿಸ್ಟ್ರಾನ್ ಇನ್ನೂ ಪ್ರೊಬೇಷನ್ ಅಥವಾ ಪರೀಕ್ಷೆಯ ಹಂತದಲ್ಲಿಯೇ ಇದ್ದು, ಮುಂದಿನ ದಿನಗಳಲ್ಲಿ ಆ ಕಂಪನಿಗೆ ಬೇಡಿಕೆ ಆದೇಶಗಳನ್ನು ನೀಡುತ್ತಾ ಇಲ್ಲವಾ ಎಂಬುದನ್ನು ಕಾದುನೋಡಬೇಕಿದೆ. ಈ ಹಿಂದೆ ತಾನು ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಆ್ಯಪಲ್ ಕೆಲವಾರು ಪೂರೈಕೆ ಕಂಪನಿಗಳ ಬೇಡಿಕೆ ಆದೇಶಗಳನ್ನು ರದ್ದು ಮಾಡಿತ್ತು. ವಿಸ್ಟ್ರಾನ್ ವಿಷಯದಲ್ಲಿ ಏನಾಗುತ್ತದೋ ಕಾದು ನೋಡಬೇಕಿದೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..