ಬೆಂಗಳೂರು: ವೃತ್ತಿಪರ ಕೋರ್ಸುಗಳಲ್ಲಿ ಒಂದಾದ ಐಟಿಐ ಪರೀಕ್ಷೆಯ ಸುಧಾರಣೆ ಹಾಗೂ ಗ್ರಾಮೀಣ ಪ್ರದೇಶದ ಕಡುಬಡ ಮಹಿಳೆಯರಿಗೆ ಹೈನುಗಾರಿಕೆ ಮೂಲಕ ಜೀವನೋಪಾಯ ಕಲ್ಪಿಸಿಕೊಡುವ ʼಕ್ಷೀರ ಸಂಜೀವಿನಿ ಯೋಜನೆʼ ಒಪ್ಪಂದಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮಕ್ಷಮದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಸಂಬಂಧಿತ ಅಧಿಕಾರಿಗಳು ಸಹಿ ಹಾಕಿದರು.
ಯುವಜನರಿಗೆ ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿರುವ ಮಹಿಳೆಯರು ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳಲು ಇವೆರಡೂ ಒಪ್ಪಂದಗಳು ಅತ್ಯಂತ ಪರಿಣಾಮಕಾರಿಯಾಗಿ ನೆರವಾಗುತ್ತವೆ ಎಂದು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಒಪ್ಪಂದಗಳ ವಿವರ
ಐಟಿಐ ಮತ್ತು ಪರೀಕ್ಷಾ ಪ್ರಾಧಿಕಾರ
ಐಟಿಐ (ಎನ್‌ಸಿವಿಟಿ ಮತ್ತು ಎಸ್‌ಸಿವಿಟಿ) ಪರೀಕ್ಷೆಗಳನ್ನು ರಾಜ್ಯ ವೃತ್ತಿಪರ ತರಬೇತಿ ಸಂಸ್ಥೆಯ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ ನಿರ್ವಹಿಸುವುದು ಈ ಒಪ್ಪಂದದ ಉದ್ದೇಶ. ಈ ಒಪ್ಪಂದಕ್ಕೆ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಸಹಿ ಹಾಕಿ, ಉಪ ಮುಖ್ಯಮಂತ್ರಿ ಸಮಕ್ಷಮದಲ್ಲಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.
ಈವರೆಗೆ ವೃತ್ತಿಪರ ತರಬೇತಿ ಸಂಸ್ಥೆಯೇ ಐಟಿಐ ಪರೀಕ್ಷೆಯನ್ನು ನಡೆಸುತ್ತಿತ್ತು. ಆದರೆ ಆ ಪರೀಕ್ಷಾ ವಿಧಾನದ ಬಗ್ಗೆ ತೀವ್ರ ಆಕ್ಷೇಪಗಳಿದ್ದವು. ಜತೆಗೆ; ಪರೀಕ್ಷೆಯೂ ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ ಎಂಬ ದೂರುಗಳೂ ಇದ್ದವು. ಈ ಬಗ್ಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಗಮನಕ್ಕೂ ಬಂದು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದರು. ತಜ್ಞರು ಪರಿಶೀಲನೆ, ಅಧ್ಯಯನ ನಡೆಸಿ ಸಲಹೆಗಳನ್ನು ನೀಡಿದ್ದರು. ಅದರ ಫಲವಾಗಿ ಐಟಿಐ ಪರೀಕ್ಷೆ ನಡೆಸುವ ಅಧಿಕಾರವನ್ನು ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗುತ್ತಿದೆ. ಈ ಸಂಬಂಧ ಮಹತ್ವದ ಒಪ್ಪಂದವಾಗಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಮುಂದೆ ಕೈಗಾರಿಕಾ ತರಬೇತಿ ಇಲಾಖೆಯ ಸಹಕಾರದೊಂದಿಗೆ ಪರೀಕ್ಷೆ ಪ್ರವೇಶ ಪತ್ರಗಳ ಮುದ್ರಣ, ಪಟ್ಟಿ ಸಂಖ್ಯೆಗಳ ಮುದ್ರಣ, ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಆಯಾ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಇತ್ಯಾದಿ ಕಾರ್ಯಗಳನ್ನು ಪರೀಕ್ಷಾ ಪ್ರಾಧಿಕಾರವೇ ಮಾಡುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಕ್ಷೀರ ಸಂಜೀವಿನಿ ಯೋಜನೆ
ಗ್ರಾಮೀಣ ಕಡುಬಡ ಮಹಿಳೆಯರಿಗೆ ವರದಾನವಾಗಬಲ್ಲ ʼಕ್ಷೀರ ಸಂಜೀವಿನಿ ಯೋಜನೆʼಯ ಒಪ್ಪಂದವು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ-ಸಂಜೀವಿನಿ ಹಾಗೂ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ನಡುವೆ ಏರ್ಪಟ್ಟಿದೆ.
ಈ ಒಪ್ಪಂದಕ್ಕೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ-ಸಂಜೀವಿನಿಯ ನಿರ್ದೇಶಕಿ ಚಾರುಲತಾ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅವರು ಸಹಿ ಹಾಕಿ, ಉಪ ಮುಖ್ಯಮಂತ್ರಿಗಳ ಎದುರಿನಲ್ಲಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.
ಈಗಾಗಲೇ ಈ ಯೋಜನೆಯ ಮೊದಲ ಹಂತವು ಜಾರಿಯಾಗಿದ್ದು, ಇದೀಗ ಎರಡನೇ ಹಂತಕ್ಕಾಗಿ ಒಡಂಬಡಿಕೆ ಆಗಿದೆ. ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಹತ್ತು ಸಾವಿರದಷ್ಟು ಬಡ ಮತ್ತು ಕಡುಬಡ ಕುಟುಂಬಗಳ ಮಹಿಳೆಯರನ್ನು ಗುರುತಿಸಿ 250 ಮಹಿಳಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಮೂಲಕ ಸಂಘಟಿಸಿ ಈ ಎಲ್ಲ ಮಹಿಳೆಯರಿಗೆ ಹೈನುಗಾರಿಕೆ ಕುರಿತಂತೆ ವಿವಿಧ ಬಗೆಯ ತಾಂತ್ರಿಕ ತರಬೇತಿ, ಶೈಕ್ಷಣಿಕ ಪ್ರವಾಸ, ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದು ಮತ್ತು 9,945 ಆರೋಗ್ಯವಂತ ಹೈನು ರಾಸುಗಳನ್ನು ಖರೀದಿಸಿ ವಿಮೆ ಮಾಡಿ ಮಾಡಿಸಲಾಗಿದೆ ಎಂದು ಇದೇ ವೇಳೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ದುರ್ಬಲ ವರ್ಗದ ಮಹಿಳೆಯರಿಂದ 9,945 ಹೈನುರಾಸುಗಳ ಖರೀದಿ ಮತ್ತು ವಿಮೆ ಸೌಲಭ್ಯ, ಶೇ. 99%ರಷ್ಟು ಮಹಿಳೆಯರಿಗೆ ವಿವಿಧ ಬಗೆಯ ತರಬೇತಿಗಳ ಮೂಲಕ ತಾಂತ್ರಿಕ ಮತ್ತು ವೈಜ್ಞಾನಿಕ ಸಾಮರ್ಥ್ಯ ಬಲವರ್ಧನೆಗೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಸುಮಾರು 500 ಮಹಿಳಾ ಸ್ವಸಹಾಯ ಗುಂಪುಗಳಿಂದ 2,70,00,000 ರೂ. ಉಳಿತಾಯ ಮಾಡಲಾಗಿದೆ. ಅಂದರೆ; ಸರಾಸರಿ 54,000 ರೂ.ಗಳನ್ನು ಉಳಿತಾಯ ಮಾಡಿಸಲಾಗಿದೆ ಎಂದರು.
ಹಾಗೆಯೇ; ಹಾಲು ಉತ್ಪಾದನೆಯಲ್ಲೂ ಶೇ.27%ರಷ್ಟು ಹೆಚ್ಚಳವಾಗಿದ್ದು, ತಲಾ ಒಬ್ಬ ಸದಸ್ಯೆಯೂ ಸಾಕುತ್ತಿರುವ ರಾಸುವಿನಿಂದ ಪ್ರತಿದಿನಕ್ಕೆ 9 ಲೀಟರ್ ಪೂರೈಕೆಯಾಗುತ್ತಿದೆ. ಪ್ರತಿದಿನಕ್ಕೆ ಸರಾಸರಿ 250 ರೂ. ನಿವ್ವಳ ಲಾಭವನ್ನು ಅವರು ಗಳಿಸುತ್ತಿದ್ದಾರೆಂದು ಹೇಳಿದರು ಡಿಸಿಎಂ.
- ಮೇಲಿನ ಚಿತ್ರ: ಐಟಿಐ ಮತ್ತು ಉನ್ನತ ಶಿಕ್ಷಣ ಒಪ್ಪಂದಕ್ಕೆ ಸಹಿ ಹಾಕಿದ ಹಿರಿಯ ಅಧಿಕಾರಿಗಳಾದ ಸೆಲ್ವಕುಮಾರ್ ಮತ್ತು ಕುಮಾರ ನಾಯಕ್. ಜತೆಯಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇದ್ದರು.