ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಹೊಸ ಬಗೆಯ ಕೊರೊನಾ ವೈರಾಣು ಕಂಡುಬಂದಿದೆ. ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದ್ದರೂ, ರೋಗದ ತೀವ್ರತೆ ಹೆಚ್ಚಿಸುವುದಿಲ್ಲ. ಆದರೂ ಅತ್ಯಂತ ಎಚ್ಚರಿಕೆ ವಹಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಸಚಿವರು ಸುದ್ದಿಗಾರರರೊಂದಿಗೆ ಮಾತನಾಡಿದರು.
ಯು.ಕೆ. ಡೆನ್ಮಾರ್ಕ್, ನೆದರ್ ಲ್ಯಾಂಡ್ ಮೊದಲಾದ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬಗೆಯ ವೈರಾಣು ಕಾಣಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಪತ್ರ ಬಂದಿದ್ದು, ನಾಳೆ ರಾತ್ರಿಯಿಂದ ಯು.ಕೆ.ಯಿಂದ ಬರುವ ವಿಮಾನಗಳ ಆಗಮನ ನಿರ್ಬಂಧಿಸಲಾಗುತ್ತದೆ. ನಿನ್ನೆ ರಾಜ್ಯಕ್ಕೆ 291 ಜನರು ಬ್ರಿಟಿಷ್ ಏ ವೇಸ್ ನಿಂದ ಬಂದಿದ್ದರು. 246 ಜನರು ಏರ್ ಇಂಡಿಯಾದಿಂದ ಬಂದಿದ್ದರು. 138 ಜನರು ನೆಗೆಟಿವ್ ವರದಿ ತಂದಿಲ್ಲ. ಇಂತಹವರನ್ನು ಒಂದು ವಾರ ಕಾಲ ಮನೆಯಲ್ಲೇ ನಿಗಾ ಇರಿಸಲಾಗುತ್ತದೆ. ನಾಳೆಯಿಂದ ವಿಮಾನ ನಿಲ್ದಾಣಗಳಲ್ಲಿ ಕಿಯೋಸ್ಕ್ ಇಟ್ಟು, ಅಲ್ಲಿ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.
ಈ ವೈರಾಣು ಹರಡುವ ವೇಗ ಹೆಚ್ಚಿದೆ. ಆದರೆ ರೋಗ ತೀವ್ರವಾಗಿರುವುದಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಹೊಸ ವರ್ಷದ ಅದ್ದೂರಿ ಆಚರಣೆಗಳನ್ನು ಕೈ ಬಿಡಬೇಕಿದೆ. ಕೆಲ ಹೋಟೆಲ್ ಗಳಲ್ಲಿ ಬುಕಿಂಗ್ ಮಾಡಿ ಆಚರಣೆ ಮಾಡಲು ಸಿದ್ಧತೆ ನಡೆಸಿರುವುದು ಕಂಡುಬಂದಿದೆ. ಹೀಗೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಾಗಿದ್ದು, ಹೊಸ ಬಗೆಯ ವೈರಾಣು ಬರುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದರು.
ಕಳೆದ 14 ದಿನಗಳಲ್ಲಿ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದವರು ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಯುನೈಟೆಡ್ ಕಿಂಗ್ ಡಮ್ ನಿಂದ ಬಂದವರು ಹಾಗೂ ಬೇರೆ ದೇಶಗಳಿಂದ ಬಂದವರಿಗೂ 7 ದಿನಗಳ ಕ್ವಾರಂಟೈನ್ ಗೆ ಒಳಪಡಿಸಬೇಕು ಎಂದು ನಿರ್ಧರಿಸಲಾಗಿದೆ. ಯು.ಕೆ.ಯಿಂದ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು ತಿಳಿಸಿದರು.
ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದಂತೆ ವಹಿಸಬೇಕಾದ ಎಚ್ಚರಿಕೆ ಕುರಿತು ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಜೀವ ಸಾರ್ಥಕತೆಯನ್ನು ಕರ್ನಾಟಕದ ಸೊಟ್ಟೊ ಆಗಿ ಗುರುತಿಸಲು ನಿರ್ಧಾರ
ಅಂಗಾಂಗ ದಾನವನ್ನು ಉತ್ತೇಜಿಸಲು ಜೀವಸಾರ್ಥಕತೆ ಕಾರ್ಯಕ್ರಮವನ್ನು ಕರ್ನಾಟಕದ ಸೊಟ್ಟೊ (SOTTO-STATE ORGAN TISSUE TRANSPLANT ORGANISATION) ಎಂದು ಗುರುತಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಅಂಗಾಂಗ ಕಸಿ ಕಾರ್ಯಕ್ರಮದ ಪ್ರಚಾರಕ್ಕೆ ಸಂಬಂಧಿಸಿದಂತೆ ಜೀವಸಾರ್ಥಕತೆಯ ಪ್ರಮುಖರೊಂದಿಗೆ ಸಭೆ ನಡೆಯಿತು. ಕೋವಿಡ್ ಪ್ರಕರಣಗಳ ಇಳಿಕೆಯೊಂದಿಗೆ ದಾನಿಗಳ ಸಂಖ್ಯೆ ಹೆಚ್ಚುತ್ತಿದೆ. 2019 ರಲ್ಲಿ 105 ಅಂಗಾಂಗ ದಾನಿಗಳಿದ್ದರು. 2020ರಲ್ಲಿ ಪೂರ್ವ ಕೋವಿಡ್ ಸಮಯದಲ್ಲಿ ಅಂದರೆ ಜನವರಿಯಿಂದ ಮಾರ್ಚ್ʼವರೆಗೆ 25 ಹಾಗೂ ಕಳೆದ ಎರಡು ತಿಂಗಳಲ್ಲಿ 9 ಅಂಗಾಂಗ ಕಸಿ ನಡೆದಿದೆ ಎಂದು ಅವರು ತಿಳಿಸಿದರು.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯವು ಜೀವಸಾರ್ಥಕತೆಯ ಬಗ್ಗೆ ವರದಿ ನೀಡಿ, ಕರ್ನಾಟಕದ ಸೊಟ್ಟೊ ಎಂದು ಗುರುತಿಸಬೇಕೆಂದು ಶಿಫಾರಸು ಮಾಡಿದ್ದು, ಇದನ್ನು ಜಾರಿ ಮಾಡಲು ನಿರ್ಧರಿಸಲಾಯಿತು. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಅಂಗಾಂಗ ಮರುಪಡೆಯುವಿಕೆಗೆ ಪರವಾನಗಿ ನೀಡಲಾಗುವುದು. ಇದಕ್ಕೆ ಮಾರ್ಗದರ್ಶನ ನೀಡಲು ಉನ್ನತ ಮಟ್ಟದ ಸಲಹಾ ಸಮಿತಿ ರಚಿಸಲಾಗುತ್ತದೆ. ಹಾಗೂ ಹೊಸದಾಗಿ ಉಪ ನಿರ್ದೇಶಕರು, ಕಚೇರಿ ಪೋಷಕ ಸಿಬ್ಬಂದಿ ಮತ್ತು 20 ಅಂಗಾಂಗ ಕಸಿ ಸಂಯೋಜಕರನ್ನು ನೇಮಿಸಲಾಗುವುದು. ಇದಕ್ಕಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಸಿ ಕುರಿತು ಜಾಗೃತಿಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಅವರು ಹೇಳಿದರು.