Lead photo: CKPhotography ಸಿಕೆಪಿ@ckphotographi
ಬೆಂಗಳೂರು: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ರಾತ್ರಿ ಕರ್ಫ್ಯೂನ್ನು ಬುಧವಾರ ರಾತ್ರಿಯಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಅಂದರೆ, ಇಂದು ರಾತ್ರಿಯಿಂದಲೇ ಯಾರೂ ಹಬ್, ಬಾರ್‌ಗಳಲ್ಲಿ ಗುಂಪು ಗುಂಪಾಗಿ ಸೇರುವಂತಿಲ್ಲ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮುಂದಿನ 9 ದಿನಗಳ ಕಾಲ, ಅಂದರೆ ಜನವರಿ 2ರ ಬೆಳಗ್ಗೆ 6 ಗಂಟೆವರೆಗೆ ಈ ರಾತ್ರಿ ಕರ್ಫ್ಯೂನ್ನು ಹೇರಲಾಗಿದೆ. ರೂಪಾಂತರಗೊಂಡಿರುವ ಕೋವಿಡ್ ವೈರಾಣುವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರದ ಹಿನ್ನೆಲೆಯಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಬೆಂಗಳೂರಿನಲ್ಲಿ ನಗರ ಸಾರಿಗೆ (ಬಿಎಂಟಿಸಿ), ಮೆಟ್ರೋ ಹಾಗೂ ಕೆಎಸಾರ್ಟಿಸಿ ಬಸ್ ಸಂಚಾರ ಇರುವುದಿಲ್ಲ. ಯಾವುದೇ ಹೋಟೆಲ್, ಹಬ್, ಬಾರ್ ತೆರೆದಿರುವುದಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ರಾತ್ರಿ ಕರ್ಫ್ಯೂ ಇರುತ್ತದೆ. ಇವತ್ತು ಸಂಜೆ ಹೊತ್ತಿಗೆ ಈ ಕುರಿತ ಮಾರ್ಗಸೂಚಿ ಹೊರಬೀಳಲಿದೆ.
ಈಗಾಗಲೇ ಮುಂಬಯಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇದೀಗ ಬೆಂಗಳೂರಿನಲ್ಲೂ ಜಾರಿಯಾಗುತ್ತಿದೆ. ಹೊರ ದೇಶದಿಂದ ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬರುವ ಪ್ರತಿಯೊಬ್ಬರೂ ಆರ್‌ಟಿಪಿಸಿಆರ್ ನೆಗೆಟೀವ್ ಸರ್ಟಿಪೀಕೇಟ್ ಇಟ್ಟುಕೊಂಡು ಪ್ರಯಾಣ ಮಾಡುವುದು ಕಡ್ಡಾಯ. ವಿಮಾನ ನಿಲ್ದಾಣದಲ್ಲಿ ನಗರಕ್ಕೆ ಬರುವ ಎಲ್ಲ ಹೊರಗಿನ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಕೋವಿಡ್ ಪರೀಕ್ಷೆಗೆ ಒಳಪಡಲೇಬೇಕು. ಅದಕ್ಕೆ ಬೇಕಾದ ಎಲ್ಲ ತುರ್ತು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.
ಹೊಸ ವರ್ಷಾಚಣೆ, ಕ್ರಿಸ್ಮಸ್ ಸಂಭ್ರಮಕ್ಕೆ ಬ್ರೇಕ್
ರಾತ್ರಿ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ನಡೆಯುವುದಿಲ್ಲ. ಪ್ರತಿ ವರ್ಷದಂತೆ ಈ ವರ್ಷ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಇತ್ಯಾದಿ ಪಾರ್ಟಿ ಏರಿಯಾಗಳಲ್ಲಿ ಯಾವುದೇ ಸಂಭ್ರಮವೂ ಇರುವುದಿಲ್ಲ. ಹಾಗೆಯೇ; ಕ್ರಿಸ್ಮಸ್ ಸಂಭ್ರಮವೂ ಮನೆಗೆ ಮಾತ್ರ ಸೀಮಿತವಾಗಲಿದೆ. ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿಗಳು ರಾತ್ರಿ ಹತ್ತು ಗಂಟೆಯ ನಂತರವೂ ತೆರೆದಿರುತ್ತವೆ.
ಜತೆಗೆ; ಬೆಂಗಳೂರು ನಂತರದ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮುಂತಾದ ಕಡೆಗೂ ರಾತ್ರಿ ಕರ್ಫ್ಯೂ ಅನ್ವಯವಾಗುತ್ತದೆ ಎಂದು ಸಿಎಂ ಹೇಳಿದರು.
ಜನರು ಸಂಪೂರ್ಣ ಸಹಕಾರ ನೀಡಬೇಕು. ರಾತ್ರಿ ಹತ್ತರ ನಂತರ ಯಾರೂ ಹೊರಗೆ ಓಡಾಡಬಾರದು. ಯಾವುದೇ ಸೌಲಭ್ಯ ಇರುವುದಿಲ್ಲ. ಬಸ್, ಮೆಟ್ರೋ, ಆಟೋ, ಕ್ಯಾಬ್ ಯಾವ ಸೌಲಭ್ಯ ಇರುವುದಿಲ್ಲ. ಹೊಟೇಲುಗಳು ಬಂದ್ ಆಗುವುದರಿಂದ ಆಹಾರವೂ ಸಿಗುವುದಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್ ಕಡ್ಡಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.