Lead photo: CKPhotography ಸಿಕೆಪಿ@ckphotographi
ಬೆಂಗಳೂರು: ನೈಟ್ ಕರ್ಫ್ಯೂ ಜಾರಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಹೇಳಿಕೆಯಲ್ಲಿ ಕೊಂಚ ಬದಲಾವಣೆ ಆಗಿದೆ. ಕೆಲವರ ಒತ್ತಡವೋ ಅಥವಾ ಬೇಡಿಕೆಯೋ ಗೊತ್ತಿಲ್ಲ. ಕರ್ಫ್ಯೂ ಅವಧಿ ಮಾತ್ರ ಬದಲಾಗಿದೆ!
ಬುಧವಾರದಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗುತ್ತದೆ ಎಂದು ಮಧ್ಯಾಹ್ನ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದರು. ಆದರೆ, ವರ್ಷದ ಕೊನೆಯಲ್ಲಿ ಇಂಥ ಕರ್ಫ್ಯೂ ಜಾರಿ ಮಾಡಿದರೆ ಅಬಕಾರಿ ಆದಾಯಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ನೈಟ್ ಕರ್ಫ್ಯೂ ಟೈಮ್ ಟೇಬಲ್ ಬದಲಾಗಿದೆ.
ಜತೆಗೆ; ಬಾರ್, ರೆಸ್ಟೋರೆಂಟ್, ಓಲಾ, ಉಬರ್ ಕ್ಯಾಬ್ ಸೇರಿದಂತೆ ಕ್ಯಾಬ್ ಮಾಲೀಕರ ಸಂಘ ನೈಟ್ ಕರ್ಫ್ಯೂವನ್ನು ವಿರೋಧಿಸಿದ್ದವು. ಕ್ರಿಸ್ಮಸ್, ಹೊಸ ವರ್ಷಾಚರಣೆ ವ್ಯಾಪಾರಕ್ಕೂ ಧಕ್ಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂವನ್ನು ರಾತ್ರಿ 10 ಗಂಟೆಗೆ ಬದಲಾಗಿ 11 ಗಂಟೆಗೆ ಹೇರಲಾಗುತ್ತಿದೆ. ಜತೆಗೆ, ಬುಧವಾರದ ಬದಲು ಗುರುವಾರದಿಂದ ಕರ್ಫ್ಯೂ ಹಾಕಲು ಮುಂದಾಗಿದೆ. ಈ ಮೂಲಕ ಲಿಕ್ಕರ್ ಬಿಸ್ನೆಸ್‌ಗೆ ಸರಕಾರ ದಯೆ ತೋರಿಸಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ, ಅಂದರೆ ಗುರುವಾರದಿಂದ ಈ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರಲ್ಲದೆ, ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ದಿನಾಂಕ 24.12.2020ರ ರಾತ್ರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು ಎಂದಿದ್ದಾರೆ.
ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ರಾತ್ರಿ ಕರ್ಫ್ಯೂ ಸಂಹಿತೆ ಹೀಗಿದೆ:
- ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಜನ ಸಂಚಾರವನ್ನು ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆ ರವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಟ್ರಕ್‌ಗಳು, ಸರಕು ವಾಹನ ಅಥವಾ ಖಾಲಿ ವಾಹನಗಳು ಸೇರಿದಂತೆ ಯಾವುದೇ ಸರಕು ವಾಹನಗಳ ಮೂಲಕ ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ.
- ರಾತ್ರಿಯಲ್ಲಿ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳಿಗೆ 50% ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತಹ ಸಂಸ್ಥೆಯ ನೌಕರರು ಸಂಚರಿಸುವಾಗ ಆಯಾ ಸಂಸ್ಥೆ ನೀಡುವ ಗುರುತಿನ ಚೀಟಿಯನ್ನು ಹೊಂದಿರಬೇಕು.
- ದಿನದ ಇಪ್ಪತ್ತನಾಲ್ಕು ಗಂಟೆ ಕಾಲ ಕಾರ್ಯಾಚರಣೆ ಮಾಡುವ ಕೈಗಾರಿಕೆಗಳಿಗೆ ಯಾವುದೇ ನಿರ್ಬಂಧಗಳಿಲ್ಲ.
- ದೂರದ ಪ್ರಯಾಣ ಮಾಡಲು ರಾತ್ರಿ ವೇಳೆಯಲ್ಲಿ ಬಸ್, ರೈಲು ಮತ್ತು ವಿಮಾನ ಸಂಚಾರಕ್ಕೆ ಅನುಮತಿ ಇದೆ.
- ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುವ ಕ್ಯಾಬ್, ಆಟೋ ಸೇವೆಗೆ ಅವಕಾಶವಿದೆ. ಹೀಗೆ ಸಂಚಾರ ಮಾಡುವ ಜನರು ತಾವು ಕಾದಿರಿಸಿದ ಟಿಕೆಟ್‌ಗಳನ್ನು ತೋರಿಸಬೇಕಾಗುತ್ತದೆ.
- ದಿನಾಂಕ 24.12.2020ರ ರಾತ್ರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು.
- ಕ್ರಿಸ್ಮಸ್ ಮತ್ತು ಹೊಸ ವರ್ಷಾರಣೆಯು 17-12-2020ರಂದು ಹೊರಡಿಸಿರುವ ಆದೇಶದ (Order No RD 465 TNR 2020) ಮಾರ್ಗಸೂಚಿಗಳ ಪ್ರಕಾರ ಇರಬೇಕು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…