- ಮೇಲಿನ ಚಿತ್ರ: ಮುಖ್ಯಮಂತ್ರಿ ಯಡಿಯೂರಪ್ಪ, ಕೆ.ವಿ.ನವೀನ್ ಕಿರಣ್, ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ/ಬೆಂಗಳೂರು: ಕೆಲ ದಿನಗಳ ಹಿಂದಿನವರೆಗೂ ಸಚಿವ ಡಾ.ಕೆ.ಸುಧಾಕರ್ ಅವರ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪ ಅವರ ಮೊಮ್ಮಗ ಕೆ.ವಿ.ನವೀನ್ ಕಿರಣ್ ಅವರು ಗುರುವಾರದಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಡಾ.ಸುಧಾಕರ್ ಜತೆಯಲ್ಲಿ ತಮ್ಮ ನಿವಾಸಕ್ಕೆ ಬೆಳಗ್ಗೆಯೇ ಬಂದ ನವೀನ್ ಕಿರಣ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಾರ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಘಟಕದ ಯಾವ ಪದಾಧಿಕಾರಿಯೂ ಇರಲಿಲ್ಲ.
ಕಾಂಗ್ರೆಸ್‌ನಿಂದ ಎರಡು ಅವಧಿಗೆ ಗೆದ್ದಿದ್ದ ಡಾ.ಸುಧಾಕರ್ ಹಾಗೂ ಚಿಕ್ಕಬಳ್ಳಾಪುರದಿಂದಲೇ ಶಾಸಕರಾಗಲು ಯತ್ನಿಸಿದ್ದ ನವೀನ್ ಕಿರಣ್ ನಡುವೆ ಜಿದ್ದಾಜಿದ್ದಿನ ರಾಜಕೀಯವೇ ಇತ್ತು. ಆದರೆ, ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ನವೀನ್, ಬಿಜೆಪಿಗೆ ಸೇರಿದ್ದು ಎಲ್ಲರ ಹುಬ್ಬೇರಿಸಿದೆ ಮಾತ್ರವಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲಾ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಲಿದೆ.
ಮುಖ್ಯವಾಗಿ ಡಾ.ಸುಧಾಕರ್ ಅವರು ಬಿಜೆಪಿಗೆ ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದ ಮೇಲೆ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಧ್ರುವೀಕರಣಗಳು ಈಗಾಗಲೇ ಆರಂಭವಾಗಿವೆ. ಅದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆಯಷ್ಟೇ ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ ಕಮಲ ಪಾಳಯ ಸೇರಿದ್ದರು. ಅವರ ಸೇರ್ಪಡೆಗೂ ಸುಧಾಕರ್ ಅವರೇ ಕಾರಣರಾಗಿದ್ದರು.
ಈಗ ನವೀನ್ ಕಿರಣ್ ಪಕ್ಷಕ್ಕೆ ಬಂದಿರುವುದರಿಂದ ಬಿಜೆಪಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಡಾ.ಸುಧಾಕರ್ ಹೇಳಿದ್ದಾರೆ. ಅದೇ ರೀತಿ, ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶಾಶ್ವತ ಶತ್ರುಗಳೂ ಅಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿರುವ ನವೀನ್ ಕಿರಣ್, ಬದಲಾವಣೆ ಎಂಬುದು ನಿಂತ ನೀರಲ್ಲ ಎಂದಿದ್ದಾರೆ. ಈ ಎಲ್ಲ ಹಿನ್ನೆಲೆ ನೋಡಿದರೆ ಮುಂದಿನ ದಿನಗಳಲ್ಲಿ ಸುಧಾಕರ್ ಮತ್ತು ನವೀನ್ ಕಿರಣ್ ಒಟ್ಟಾಗಿ ಬಿಜೆಪಿ ಬೆಳವಣಿಗೆಗೆ ಕೆಲಸ ಮಾಡಬೇಕಿದೆ.
ಕಟೀಲ್ ಗಮನಕ್ಕೆ ಬಾರದ ಸೇರ್ಪಡೆ
ನವೀನ್ ಕಿರಣ್ ಪಕ್ಷ ಸೇರ್ಪಡೆ ಸಂಗತಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಗಮನಕ್ಕೆ ಬಂದಿಲ್ಲ ಎಂದು ಪಕ್ಷದ ಕೆಲ ಮೂಲಗಳು ಖಚಿತಪಡಿಸಿವೆ. ನವೀನ್ ಅವರನ್ನು ನೇರವಾಗಿ ಸಿಎಂ ನಿವಾಸಕ್ಕೇ ಕರೆದುಕೊಂಡು ಬಂದು ಅವರ ಮೂಲಕವೇ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ತಾಲ್ಲೂಕು, ಜಿಲ್ಲಾ ಸಮಿತಿಗೂ ಈ ಸೇರ್ಪಡೆಯ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಗೊತ್ತಾಗಿದೆ.
ನಿಲ್ಲದು ಆಪರೇಷನ್ ಕಮಲ
ಇನ್ನೊಂದೆಡೆ, ಜಿಲ್ಲೆಯಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಮಾಡಲೇಬೇಕು ಎಂದು ನಿರ್ಧರಿಸಿರುವ ಡಾ.ಸುಧಾಕರ್, ಅನ್ಯ ಪಕ್ಷಗಳ ನಾಯಕರಿಗೆ ಬಲೆ ಬೀಸುವುದನ್ನು ಮುಂದುವರಿಸಿದ್ದಾರೆ. ಬಿಜೆಪಿಯ ಒಳಗಿನ ಮೂಲಗಳು ಹೇಳುವ ಪ್ರಕಾರ, ಸುಧಾಕರ್ ಜಿಲ್ಲೆಯ ಇನ್ನಷ್ಟು ಪ್ರಮುಖ ನಾಯಕರಿಗೂ ಗಾಳ ಹಾಕಿದ್ದಾರೆಂದು ಗೊತ್ತಾಗಿದೆ. ಕಳೆದ ಚುನಾವಣೆಯಲ್ಲಿ ತಮ್ಮ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಬಲಿಷ್ಠ ನಾಯಕರೊಬ್ಬರೂ ಕಮಲ ಹಿಡಿಯಲಿದ್ದಾರೆಂದು ಆ ಮೂಲಗಳು ತಿಳಿಸಿವೆ. ಶಿಡ್ಲಘಟ್ಟದ ರಾಜಣ್ಣ, ಅದಕ್ಕೂ ಮೊದಲು ಕೆ.ವಿ.ನಾಗರಾಜ್ ಕೂಡ ಬಿಜೆಪಿಗೆ ಹಾರಿದ್ದರು. ಒಂದು ಕಾಲದಲ್ಲಿ ಜೆಡಿಎಸ್‌ನ ಎಚ್.ಡಿ.ರೇವಣ್ಣ ಪರಮಾಪ್ತರಾಗಿದ್ದ ಕೆ.ವಿ.ನಾಗರಾಜ್ ಇದೀಗ ಬಿಜೆಪಿ ಬಂದು ರಾಜ್ಯ ಮಾವು ಮಹಾಮಂಡಳಿ ಅಧ್ಯಕ್ಷರಾಗಿದ್ದು ಉಳಿದ ನಾಯಕರು ಸುಧಾಕರ್ ಕಡೆ ವಾಲಲು ಪ್ರೇರಣೆ ನೀಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ನವೀನ್ ಕಿರಣ್‌ಗೆ ಬಾಗೇಪಲ್ಲಿ ಟಿಕೆಟ್
ನವೀನ್ ಕಿರಣ್ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಭರವಸೆ ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ಹೇಳಿಕೇಳಿ ನವೀನ್ ಕಿರಣ್ ಅವರ ತಾತಾ ಸಿ.ವಿ.ವೆಂಕಟರಾಯಪ್ಪ ಅವರು 1989ರಲ್ಲಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಪಕ್ಷದಿಂದ ಕಣಕ್ಕಿಳಿದಿದ್ದ ಚಿತ್ರನಟ ಸಾಯಿಕುಮಾರ್ ಅವರಿಂದ ಗೆಲವು ಸಿಗದ ಕಾರಣ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅನ್ನು ಸಾಯಿಕುಮಾರ್ ಬದಲಿಗೆ ನವೀನ್ ಕಿರಣ್‌ಗೆ ಕೊಡಿಸುವ ಬಗ್ಗೆ ಡಾ.ಸುಧಾಕರ್ ಉತ್ಸುಕರಾಗಿದ್ದಾರೆಂದು ಮಾಹಿತಿ ಸಿಕ್ಕಿದೆ.