ಹೈದರಾಬಾದ್: ಅಧಿಕ ರಕ್ತದೊತ್ತಡದ ಕಾರಣಕ್ಕೆ ಸೂಪರ್ಸ್ಟಾರ್ ರಜನೀಕಾಂತ್ ಹೈದರಾಬಾದ್ನ ಜೂಬ್ಲಿಹಿಲ್ಸ್ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಜನೀಕಾಂತ್ ದಾಖಲಾದ ಕೂಡಲೇ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡಿರುವ ವೈದ್ಯರು ಗಾಬರಿ ಪಡುವಂಥದ್ದು ಏನೂ ಇಲ್ಲ ಎಂದಿದ್ದಾರೆ. ಜತೆಗೆ, ಅಪೊಲೋ ಆಸ್ಪತ್ರೆ ಕೂಡ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಸೂಪರ್ಸ್ಟಾರ್ ಆರಾಮಾಗಿದ್ದಾರೆ ಎಂದು ತಿಳಿಸಿದೆ.
ʼಅನ್ನಾತ್ತೆʼ ಚಿತ್ರದ ಶೂಟಿಂಗ್ಗಾಗಿ ಕಳೆದ ಹತ್ತು ದಿನಗಳಿಂದ ರಜನಿ ಅವರು ಹೈದರಾಬಾದ್ನಲ್ಲೇ ಇದ್ದಾರೆ. ಆದರೆ, ಚಿತ್ರತಂಡದ ಎಂಟಕ್ಕೂ ಹೆಚ್ಚು ಜನರಿಗೆ ಕೋವಿಡ್ ಪಾಸಿಟೀವ್ ಬಂದ ಕಾರಣಕ್ಕೆ ಶೂಟಿಂಗ್ ನಿಲ್ಲಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮೂರು ದಿನಗಳಿಂದ ರಜನಿ ಅವರು ಕ್ವಾರಂಟೈನ್ನಲ್ಲಿದ್ದರು. ಮಂಗಳವಾರವೇ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರಲ್ಲದೆ, ಅವರಿಗೆ ನೆಗೆಟೀವ್ ಬಂದಿತ್ತು.
ಆದಾಗ್ಯೂ ಹೈ-ಬೀಪಿಯಿಂದ ಆಸ್ಪತ್ರೆ ಸೇರಿರುವ ರಜನೀಕಾಂತ್ ಅವರ ಆರೋಗ್ಯ ಚೆನ್ನಾಗಿದೆ. ಅವರಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೊಂದೆಡೆ, ಅಭಿಮಾನಿಗಳು ಗಾಬರಿಪಡಬೇಕಾದ ಅಗತ್ಯವಿಲ್ಲ ಎಂದು ಅವರ ಕುಟುಂಬದವರು ಮನವಿ ಮಾಡಿದ್ದಾರೆ. ಅವರ ಪುತ್ರಿ ಐಶ್ವರ್ಯಾ ಈಗಾಗಲೇ ಆಸ್ಪತ್ರೆಗೆ ಧಾವಿಸಿದ್ದಾರೆ.
ಇನ್ನೊಂದೆಡೆ ಟಾಲಿವುಡ್ನ ಅನೇಕ ಸ್ಟಾರ್ಗಳು ರಜನಿ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಶಾಕ್ ಆಗಿದ್ದರೂ, ಅವರು ಆದಷ್ಟು ಬೇಗ ಆಸ್ಪತ್ರೆಯಿಂದ ಹೊರಬರುತ್ತಾರೆಂದು ಹೇಳಿದ್ದಾರೆ. ಸ್ಟಾರ್ ನಟ ಪವನ್ ಕಲ್ಯಾಣ್ ಹೇಳಿಕೆ, ರಜನಿ ಅವರು ಆಸ್ಪತ್ರೆಗೆ ಸೇರಿದ್ದಾರೆಂಬ ಸುದ್ದಿ ಕೇಳಿ ನೋವಾಯಿತು. ಅಧ್ಯಾತ್ಮದಲ್ಲಿ ತೊಡಗಿರುವ ಅವರಿಗೆ ಮಾನಸಿಕ ಸದೃಢತೆ ಹೆಚ್ಚು. ಅವರು ನಂಬುವ ಮಹಾವತಾರ್ ಬಾಬಾ ಅವರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖರಾಗಿ ಬರುತ್ತಾರೆ ಎಂದಿದ್ದಾರೆ ಪವನ್.
ಇದೇ ವೇಳೆ ಅವರ ಬೀಪಿ ಕಂಟ್ರೋಲಿಗೆ ಬಂದರೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅವರನ್ನು ಡಿಸ್ಚಾರ್ಜ್ ಮಾಡಬಹುದು. ಇಲ್ಲವಾದರೆ ಇನ್ನೂ ಕೆಲ ದಿನ ಅವರು ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ.
ಇನ್ನೊಂದೆಡೆ ಅಭಿಮಾನಿಗಳು ರಜನಿ ಆರೋಗ್ಯಕ್ಕಾಗಿ ಎಲ್ಲಡೆ ಪ್ರಾರ್ಥನೆ ಮಾಡುತ್ತಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣ ಮುಂತಾದ ಕಡೆಗಳಲ್ಲಿ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಇದೇ ಡಿಸೆಂಬರ್ 31ರಂದು ರಜನೀಕಾಂತ್ ಅವರು ತಮ್ಮ ರಾಜಕೀಯ ಪಕ್ಷ ಹೆಸರಿನ ಬಗ್ಗೆ ಮಹತ್ವದ ಪ್ರಕಟಣೆ ಹೊರಡಿಸಬೇಕಾಗಿದೆ. ಈಗ ನೋಡಿದರೆ ಅವರು ಆಸ್ಪತ್ರೆಗೆ ದಾಖಲಾದ ಕಾರಣಕ್ಕೆ ಪಕ್ಷದ ಕುರಿತ ಘೋಷಣೆ ಇರುತ್ತಾ? ಇಲ್ಲವಾ? ಎನ್ನುವ ಬಗ್ಗೆ ಪ್ರಶ್ನೆ ಮೂಡಿದೆ.
lead photo courtesy: Wikipedia
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..