ಚಿಕ್ಕಬಳ್ಳಾಪುರ: ಕೋವಿಡ್ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಡಿಸೆಂಬರ್ 30ರ ಬೆಳಗ್ಗೆ 6 ಗಂಟೆಯಿಂದ ಜನವರಿ 2ರ ಬೆಳಗ್ಗೆ 6 ಗಂಟೆವರೆಗೆ ಗಿರಿಧಾಮಕ್ಕೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶದ ಜತೆಗೆ ಯಾವುದೇ ಎಲ್ಲ ರೀತಿಯ ವಾಹನ ಪ್ರವೇಶವನ್ನೂ ನಿಷೇಧ ಮಾಡಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷದ ಮೊದಲ ದಿನ ನಂದಿಬೆಟ್ಟದ ಮೇಲೆ ಮುಂಜಾನೆ ಚುಮು ಚುಮು ಚಳಿ, ಪ್ರಕೃತಿ ಸೌಂದರ್ಯದ ನಡುವೆ ಹೊಸ ವರ್ಷಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಪ್ರವಾಸಿಗರಿಗೆ ಜಿಲ್ಲಾಡಳಿತ ಶಾಕ್ ಕೊಟ್ಟಿದೆ. ಪ್ರತೀ ವರ್ಷ ಜನವರಿ 1ರಂದು ಬೆಳಗ್ಗೆಯೇ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಗಿರಿಧಾಮಕ್ಕೆ ಬಂದು ಹೊಸ ವರ್ಷದ ಸಂಭ್ರಮ ಸವಿಯುವ ಪರಿಪಾಠವನ್ನು ಅನೇಕರು ಇಟ್ಟುಕೊಂಡಿದ್ದರು. ಪ್ರೇಮಿಗಳಂತೂ ವಿಶೇಷವಾಗಿ ಅದೇ ದಿನ ಗಿರಿಯ ಮೇಲೆ ತಮ್ಮ ನಡುವಲ್ಲೇ ಹಿತವಾಗಿ ಹಾದು ಹೋಗುವ ಮೋಡಗಳ ನಡುವೆ ಪ್ರೇಮ ನಿವೇದನೆ ಮಾಡುವುದೂ ನಡೆಯುತ್ತಿತ್ತು. ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.
ಜತೆಗೆ. ಹೊಸ ವರ್ಷದ ಹುಮ್ಮಸ್ಸಿನಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಕಾರಣದಿಂದಲೂ ಜಿಲ್ಲಾ ಪೊಲೀಸರು ವಾಹನ ಸಂಚಾರ ನಿಷೇಧ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಪ್ರಸ್ತಾವನೆ ಇಟ್ಟಿದ್ದರು. ಜಿಲ್ಲಾಧಿಕಾರಿಗಳು ಈ ಅಂಶವನ್ನು ಕೂಡ ಪರಿಗಣಿಸಿದ್ದಾರೆ.
ಸಾಮಾನ್ಯವಾಗಿ ಹೊಸ ವರ್ಷದ ವೇಳೆಯಲ್ಲಿ ನಂದಿ ಗಿರಿಧಾಮದ ಮೇಲೆ ಸಿಕ್ಕಾಪಟ್ಟೆ ಜನದಟ್ಟಣಿ ಉಂಟಾಗುತ್ತದೆ. ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲೂ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
Lead photo courtesy: Wikipedia