Photo by cottonbro from Pexels
ಬೆಂಗಳೂರು: ಹೊಸ ವರ್ಷಾಚರಣೆಯನ್ನು ಸರಳ ಹಾಗೂ ಅರ್ಥಗರ್ಭಿತವಾಗಿ ಆಚರಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸಲು ಚರ್ಚೆಯಾಗಿದ್ದು, ಗೃಹ ಇಲಾಖೆಯಿಂದಲೇ ಮಾರ್ಗಸೂಚಿ ಬರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆಯಾಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಹೊಸ ವರ್ಷಾಚರಣೆಯನ್ನು ಸರಳ ಹಾಗೂ ಅರ್ಥಗರ್ಭಿತವಾಗಿ ಆಚರಿಸಬೇಕಿದೆ. ಕೋವಿಡ್ ಇರುವ ಸಂದರ್ಭದಲ್ಲಿ ಆಚರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಅಗತ್ಯವಿದ್ದು, ಈ ಕುರಿತು ಚರ್ಚಿಸಲಾಗಿದೆ. ಗೃಹ ಇಲಾಖೆಯಿಂದಲೇ ಮಾರ್ಗಸೂಚಿ ನೀಡಲಾಗುತ್ತದೆ. ಬೆಂಗಳೂರು ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಯುನೈಟೆಡ್ ಕಿಂಗ್ ಡಮ್ ನಿಂದ ಹಿಂದಿರುಗಿದವರಲ್ಲಿ ಸಂಪರ್ಕಕ್ಕೆ ಸಿಗದವರನ್ನು ಕೂಡಲೇ ಪತ್ತೆ ಮಾಡಿ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಎಲ್ಲ ಬಗೆಯ ಮಾಹಿತಿ ಒದಗಿಸಿದ್ದು, ಎರಡು ದಿನಗಳಲ್ಲಿ ಯು.ಕೆ.ಯಿಂದ ಬಂದವರೆಲ್ಲರನ್ನೂ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.
ಕೆಲವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗುತ್ತಿಲ್ಲ. ಪರೀಕ್ಷೆ ಮಾಡಿಸಿಕೊಳ್ಳದೆ ಸಂಪರ್ಕಕ್ಕೆ ಸಿಗದಿರುವುದು ಒಂದು ಅಪರಾಧ. ಯು.ಕೆ.ಯಿಂದ ಬಂದವರಲ್ಲಿ 26 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಇವರ ಮಾದರಿಯನ್ನು ನಿಮ್ಹಾನ್ಸ್ ಗೆ ಕಳುಹಿಸಿದ್ದು, ಅಧ್ಯಯನ ನಡೆಯುತ್ತಿದೆ ಎಂದರು.
ಹಾಸ್ಟೆಲ್ ಕಟ್ಟಡಕ್ಕೆ ಭೂಮಿಪೂಜೆ
ಮಾಗಡಿ ರಸ್ತೆ ಬಳಿ ಹೋಮಿಯೋಪತಿ ಮತ್ತು ಯುನಾನಿ ಮಹಾವಿದ್ಯಾಲಯದ ವಸತಿನಿಲಯ ನಿರ್ಮಾಣಕ್ಕೆ ಸಚಿವ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಯುನಾನಿ ಮತ್ತು ಹೋಮಿಯೋಪತಿಗೆ ಬೇಡಿಕೆ ಹೆಚ್ಚಿದೆ. ಅನೇಕ ವರ್ಷಗಳಿಂದಿರುವ ಈ ವೈದ್ಯ ಪದ್ಧತಿಗಳು ಜನಪ್ರಿಯವಾಗಲು ವಿದ್ಯಾರ್ಥಿಗಳು ಶ್ರಮಿಸಬೇಕು. ಆಯುಷ್ ಇಲಾಖೆಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಉನ್ನತೀಕರಣ ಮಾಡುವ ಗುರಿ ಇದ್ದು, ಇಲ್ಲಿ ಆಯುಷ್ ವೈದ್ಯರಿಗೂ ಅವಕಾಶ ಮಾಡಿಕೊಡುವ ಪ್ರಸ್ತಾವ ಇದೆ. ಎಲ್ಲ ವೈದ್ಯ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಚಿಕಿತ್ಸೆ ನೀಡಬೇಕು ಎಂದು ಕಿವಿಮಾತು ಹೇಳಿದರು.