- 1991ರಲ್ಲಿ ದಿವಾಳಿಯ ಅಂಚಿನಲ್ಲಿದ್ದ ಭಾರತವನ್ನು ಆ ಸಂಕಷ್ಟದಿಂದ ಪಾರು ಮಾಡಿದ ಸಾಹಸಿಯೆಂದರೆ, ಪಿ.ವಿ.ನರಸಿಂಹರಾವ್. ನೆಹರು-ಗಾಂಧಿ ಕುಟುಂಬದ ಕುಡಿಯಲ್ಲದ ಪಿವಿಎನ್, ಐದು ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ದೇಶವನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ದ ಚಾಣಾಕ್ಷ. ಆದರೆ, ಸಮಕಾಲೀನ ಚರಿತ್ರೆಯಲ್ಲಿ ಅವರಿಗೆ ಸಿಗಬೇಕಾಗಿದ್ದ ಸ್ಥಾನ ಸಿಕ್ಕಿಲ್ಲ. ಇದು ಅವರ ಜನ್ಮಶತಾಬ್ದಿಯ ವರ್ಷ. ಈ ಸಂದರ್ಭದಲ್ಲಿ ಅವರನ್ನು ಕುರಿತ ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎನ್ನುವ ಅನುವಾದಿತ ಕೃತಿ ಈಚೆಗಷ್ಟೇ ಲೋಕಾರ್ಪಣೆಗೊಂಡಿದೆ. ಸಂಜಯ ಬರೂ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವವರು ಖ್ಯಾತ ಅನುವಾದಕ ಬಿ.ಎಸ್.ಜಯಪ್ರಕಾಶ ನಾರಾಯಣ. ಈ ಗಮನಾರ್ಹ ಕೃತಿಯ ಒಂದು ಅಧ್ಯಾಯದ ಆಯ್ದ ಭಾಗವು ಸಿಕೆನ್ಯೂಸ್ ನೌ ಓದುಗರಿಗಾಗಿ ಇಲ್ಲಿದೆ. ಅಧ್ಯಾಯವು ದೀರ್ಘವಾಗಿರುವುದರಿಂದ ಅದನ್ನು ಕೆಲ ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಇದು ಮೊದಲ ಕಂತು..
ಅದು 1991ರ ಮಾರ್ಚ್ 21. ದೇಶದಲ್ಲಿ ಅಷ್ಟು ಹೊತ್ತಿಗಾಗಲೇ ಮಹಾಚುನಾವಣೆ ಘೋಷಣೆಯಾಗಿ, ಹಿಂದಿನ ದಿನ -ಅಂದರೆ ಮಾರ್ಚ್ 20ರಂದು- ಮೊದಲನೇ ಹಂತದ ಮತದಾನವೂ ನಡೆದಿತ್ತು. ರಾಜೀವ್ ಗಾಂಧಿಯವರು ಎರಡನೇ ಹಂತದ ಚುನಾವಣಾ ಪ್ರಚಾರಾರ್ಥವಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಅನೇಕ ಸಭೆಗಳಲ್ಲಿ ಅಂದು ಮಾತನಾಡಿ, ತಡರಾತ್ರಿ ಹೊತ್ತಿಗೆ ಶ್ರೀಪೆರಂಬುದೂರನ್ನು ತಲುಪಿದರು. ಅಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಬೇಕಾಗಿತ್ತು. ಅಷ್ಟರಲ್ಲಿ ರಾಜೀವ್ ಗಾಂಧಿಯವರ ಹತ್ತಿರ ಧಾವಿಸಿದ ಪ್ರಾಯದ ಮಹಿಳೆಯೊಬ್ಬಳು ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಶಕ್ತಿಶಾಲಿ ಬಾಂಬನ್ನು ಕ್ಷಣಾರ್ಧದಲ್ಲಿ ಸ್ಫೋಟಿಸಿದಳು. ಪರಿಣಾಮವಾಗಿ, ರಾಜೀವ್ ಗಾಂಧಿ ಅವರ ದೇಹ ಛಿದ್ರಛಿದ್ರವಾಗಿ, ರಕ್ತದ ಮಡುವಿನಲ್ಲಿ ಅವರು ಅಸು ನೀಗಿದರು. ಈ ಘೋರ ದುರಂತದಲ್ಲಿ ಇನ್ನೂ ಹದಿನಾಲ್ಕು ಮಂದಿ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು; ಇನ್ನೂ ಎಷ್ಟೋ ಜನ ಗಾಯಗೊಂಡರು. ರಾಜೀವ್ ಅವರ ಸಾವಿನೊಂದಿಗೆ ನೆಹರು-ಗಾಂಧಿ ಕುಟುಂಬದ ಬಹುದೀರ್ಘವಾದ ಪ್ರಜಾತಾಂತ್ರಿಕ ಸರಪಳಿ ತುಂಡಾಯಿತು.
ಜವಾಹರಲಾಲ್ ನೆಹರು ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ 1947ರ ಆಗಸ್ಟ್ 15ರಿಂದ ಹಿಡಿದು 1964ರ ಮೇ ತಿಂಗಳಲ್ಲಿ ತಾವು ಕೊನೆಯುಸಿರೆಳೆಯುವವರೆಗೂ ಪ್ರಧಾನಮಂತ್ರಿಯಾಗಿದ್ದರು. ನೆಹರು ಅವರ ಪುತ್ರಿ ಇಂದಿರಾ ಗಾಂಧಿ 1966ರ ಜನವರಿಯಿಂದ 1977ರ ಮಾರ್ಚ್‌ವರೆಗೆ ಒಂದು ಅವಧಿಯಲ್ಲಿ, ಮತ್ತು 1980ರ ಜನವರಿಯಿಂದ ಹಿಡಿದು 1984ರ ಅಕ್ಟೋಬರ್‌ನಲ್ಲಿ ಹಂತಕರ ಗುಂಡೇಟಿಗೆ ಸಿಕ್ಕಿ ಇಹಲೋಕ ತ್ಯಜಿಸುವವರೆಗೆ ಇನ್ನೊಂದು ಅವಧಿಗೆ ಈ ದೇಶದ ಚುಕ್ಕಾಣಿ ಹಿಡಿದಿದ್ದರು. ಇಂದಿರಾ ಅವರ ಸಾವಿನ ನಂತರ, ಒಂದು ಕಾಲದಲ್ಲಿ ಪೈಲಟ್ ಆಗಿದ್ದು ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ರಾಜೀವ್ ಗಾಂಧಿ ಈ ಹುದ್ದೆಗೇರಿದರು. ಬಳಿಕ, 1984ರ ಡಿಸೆಂಬರ್‌ನಲ್ಲಿ ಮಹಾಚುನಾವಣೆ ನಡೆಯಿತು. ಇಂದಿರಾ ಗಾಂಧಿಯವರ ದುರ್ಮರಣದಿಂದ ಸೃಷ್ಟಿಯಾದ ಅನುಕಂಪದ ಅಲೆಯ ಲಾಭ ಪಡೆದ ರಾಜೀವ್ ಗಾಂಧಿ, ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು, 1989ರ ಡಿಸೆಂಬರ್‌ವರೆಗೆ ಸಂಪೂರ್ಣ ಐದು ವರ್ಷಗಳ ಕಾಲ ಈ ದೇಶವನ್ನಾಳಿದರು. ಆದರೆ, ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿ, ರಾಜೀವ್ ಗಾಂಧಿಯವರು ಅಧಿಕಾರದಿಂದ ನಿರ್ಗಮಿಸಿದರು.
1989ನೇ ಇಸವಿ ಎಂದರೆ, ಅಷ್ಟು ಹೊತ್ತಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 42 ವರ್ಷಗಳಾಗಿದ್ದವು. ಈ ಕಾಲಾವಧಿಯಲ್ಲಿ ನೆಹರು-ಗಾಂಧಿ ಕುಟುಂಬದ ಮೂರು ತಲೆಮಾರು-ನೆಹರು, ಇಂದಿರಾ, ರಾಜೀವ್- ಈ ದೇಶವನ್ನು ಬರೋಬ್ಬರಿ 37 ವರ್ಷಗಳ ಕಾಲ ಆಳಿತು. ಬಳಿಕ 1991ರಿಂದ 2014ರವರೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವವರೆಗೂ ದೇಶದಲ್ಲಿ ಮೈತ್ರಿ ಸರಕಾರಗಳು ಆಳ್ವಿಕೆ ನಡೆಸಿದವು. ಮೋದಿ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ದೇಶದಲ್ಲಿ ಮತ್ತೆ ಒಂದೇ ಪಕ್ಷಕ್ಕೆ ಸ್ಪಷ್ಟ ಬಹುಮತದ ಜನಾದೇಶ ಕೊಡುವ ಸಂಪ್ರದಾಯ ಆರಂಭವಾಯಿತು.
ನಾಯಕತ್ವ ಬೇಡವೆಂದ ಸೋನಿಯಾ
ರಾಜೀವ್ ಗಾಂಧಿಯವರು ಕಗ್ಗೊಲೆಗೀಡಾದ ಮರುದಿನ -ಅಂದರೆ 1991ರ ಮೇ 22ರಂದು- ಸಭೆ ಸೇರಿದ ಕಾಂಗ್ರೆಸ್ ಕಾರ್ಯ ಸಮಿತಿಯು, ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯುವಂತೆ ಅಗಲಿದ ನಾಯಕನ ವಿಧವಾ ಪತ್ನಿಯಾದ ಸೋನಿಯಾ ಗಾಂಧಿಯವರನ್ನು ಕೇಳಿಕೊಂಡಿತು. ಆದರೆ ಸೋನಿಯಾ ಇದನ್ನು ನಿರಾಕರಿಸಿದರು. ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ ಮಖನ್‌ಲಾಲ್ ಫೋತೇದಾರ್ ಅವರ ಪ್ರಕಾರ ಹೇಳುವುದಾದರೆ, ಸೋನಿಯಾ ಗಾಂಧಿಯವರು ಆಗ “ನನಗೆ ಸಕ್ರಿಯ ರಾಜಕೀಯದಲ್ಲಿ ಆಸಕ್ತಿ ಇಲ್ಲ,” ಎಂದರಂತೆ.
ಸೋನಿಯಾ ಗಾಂಧಿ
ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುದು ಮತ್ತು ಅನೇಕ ದಶಕಗಳ ಕಾಲ ಪ್ರತಿಯೊಂದು ರಾಜ್ಯದಲ್ಲೂ ಅಧಿಕಾರದಲ್ಲಿದ್ದುದು ಎಲ್ಲವೂ ನಿಜ. ಆದರೆ, ಕಾಲಕ್ರಮೇಣ ಇದು ಊಳಿಗಮಾನ್ಯ ಸಂಸ್ಕೃತಿಯನ್ನು ರೂಢಿಸಿಕೊಂಡಿತು. ಇಂದಿರಾ ಗಾಂಧಿ ಸತ್ತ ಕೂಡಲೇ ಅವರ ಮಗ ರಾಜೀವ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿಯೂ ದೇಶದ ಪ್ರಧಾನಿಯನ್ನಾಗಿಯೂ ಕೂರಿಸಲಾಯಿತು. ಆಗ ಪ್ರಣಬ್ ಮುಖರ್ಜಿ ಅವರಂತಹ ಹಿರಿಯ ನಾಯಕರು ತಮಗೆ ಹಂಗಾಮಿ ಪ್ರಧಾನಮಂತ್ರಿಯ ಪಟ್ಟವಾದರೂ ಸಿಗಬಹುದು ಎಂದುಕೊಂಡಿದ್ದರು. ಆದರೆ, ಆ ಜಾಗದಲ್ಲಿ ರಾಜೀವ್ ಅವರ ʼಪಟ್ಟಾಭಿಷೇಕʼವಾಗಿದ್ದನ್ನು ಕಂಡು ಅವರಿಗೆಲ್ಲ ಅಚ್ಚರಿಯಾಯಿತು. ಬಳಿಕ ಮುಖರ್ಜಿಯವರನ್ನು ಸರಿಯಾಗಿ ಶಿಕ್ಷಿಸಲಾಯಿತು.
ಈ ಕೃತಿಯನ್ನು ಬರೆಯುವಾಗ -2015ರ ಹೊತ್ತಿನಲ್ಲಿ- ಮುಖರ್ಜಿಯವರು ರಾಷ್ಟ್ರಪತಿಗಳಾಗಿದ್ದರು, ನಿಜ. ಆದರೆ ತಮ್ಮ ಆತ್ಮಕತೆಯಲ್ಲಿ ಅವರು, ತಾವು ಪ್ರಧಾನಿ ಹುದ್ದೆಗೆ ಆಸೆಪಟ್ಟಿದ್ದೆ ಎನ್ನುವುದನ್ನೇ ನಿರಾಕರಿಸಿದ್ದಾರೆ. 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಮುಂದಿನ ಸರಕಾರದ ನೇತೃತ್ವ ವಹಿಸಿಕೊಳ್ಳಲು ತಮ್ಮನ್ನು ಆಹ್ವಾನಿಸುವುದಾಗಿ ತಾನು ನಿರೀಕ್ಷಿಸಿದ್ದೆ ಎನ್ನುವಂತಹ ವರದಿಗಳು ಸುಳ್ಳಿನಿಂದಲೂ ದುರುದ್ದೇಶದಿಂದಲೂ ಕೂಡಿದ್ದವು ಎಂದು ಅವರು ತಳ್ಳಿಹಾಕಿದ್ದಾರೆ. ಆದರೆ, ಅಂತಹ ಆಸೆಯನ್ನು ಕೆಟ್ಟದ್ದೆಂದು ಕರೆಯುವುದೇಕೆ? ಒಬ್ಬ ಹಿರಿಯ ರಾಜಕಾರಣಿಗೆ ಇರಬಹುದಾದಂತಹ ಇಂತಹ ಆಸೆಯನ್ನು ಜಗತ್ತಿನ ಬೇರೆ ಯಾವ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲೂ ಕೆಟ್ಟದ್ದೆಂದು ಬಿಂಬಿಸುವ ಪರಿಪಾಟವಿಲ್ಲ. ಆದರೆ, ಇಂದಿರಾ ಗಾಂಧಿಯವರು ಊಳಿಗಮಾನ್ಯ ಸಂಸ್ಕೃತಿಯ ಪಡಿಯಚ್ಚಿನಲ್ಲಿ ಹಾಕಿ ಬೆಳೆಸಿದ ಕಾಂಗ್ರೆಸ್ಸಿನಲ್ಲಿ ಇಂತಹ ವದಂತಿಗಳು ರಾಜಕೀಯವಾಗಿ ಭಾರೀ ಬೆಲೆಯನ್ನು ತೆರುವಂತೆ ಮಾಡುತ್ತಿದ್ದವು.
ಪ್ರಣಬ್ ಪ್ರಧಾನಿಯಾಗಲು ಹವಣಿಸಿದ್ದರಾ?
ಪ್ರಣಬ್ ಮುಖರ್ಜಿಯವರು ತಮ್ಮ ಆತ್ಮಕತೆಯಲ್ಲಿ 1984ರ ಆ ದಿನಗಳ ಬಗ್ಗೆ ಬರೆಯುವಾಗ, ಮತ್ತೊಬ್ಬ ಹಿರಿಯ ರಾಜಕಾರಣಿ ಪಿ.ಸಿ.ಅಲೆಕ್ಸಾಂಡರ್ ಅವರು ಆಡಿದ “ಮುಖರ್ಜಿಯವರು ಮಧ್ಯಾಂತರ ಪ್ರಧಾನಿಯಾಗಲು ಹವಣಿಸುತ್ತಿದ್ದಾರೆ; ಕೊನೆಗೂ ಇದರಿಂದ ಹಿಂದೆ ಸರಿಯುವಂತೆ ಮಾಡಲು ಹರಸಾಹಸ ಮಾಡಬೇಕಾಯಿತು ಎನ್ನುವ ವದಂತಿಯನ್ನು ಒಂದು ಗುಂಪಿನ ಜನ ಬೇಕೆಂದೇ ಹಬ್ಬಿಸಿದರು,” ಎನ್ನುವ ಮಾತುಗಳನ್ನು ಉಲ್ಲೇಖಿಸಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಮುಖರ್ಜಿಯವರ ವಿರುದ್ಧ ಇಂತಹ ಅಪಪ್ರಚಾರವನ್ನು ಮಾಡುತ್ತಿದ್ದವರನ್ನು ರಾಜೀವ್ ಗಾಂಧಿಯವರು ಪ್ರಾಯಶಃ ನಂಬಿದರೆನಿಸುತ್ತದೆ. ಏಕೆಂದರೆ, 1984ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆದ್ದು ಪ್ರಧಾನಿಯಾದ ಅವರು, ಮುಖರ್ಜಿಯವರನ್ನು ತಮ್ಮ ಸಂಪುಟದಿಂದ ದೂರವಿಟ್ಟರು.
@CitiznMukherjee
ಈ ಘಟನೆಯನ್ನು ಮುಖರ್ಜಿಯವರು “ನನ್ನನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎನ್ನುವ ಸಮಾಚಾರ ಗೊತ್ತಾದಾಗ ನಾನು ಆಘಾತಕ್ಕೊಳಗಾಗಿ, ದಂಗು ಬಡಿದು ಹೋದೆ. ನಿಜಕ್ಕೂ ನಾನು ಇದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಆದರೂ ನನ್ನನ್ನು ನಾನೇ ಸಮಾಧಾನ ಮಾಡಿಕೊಂಡು, ನನ್ನ ಹೆಂಡತಿಯೊಂದಿಗೆ ಕೂತು, ಅಂದು ನಡೆದ ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ದೂರದರ್ಶನದಲ್ಲಿ ನೋಡಿದೆ,” ಎಂದು ನೆನಪಿಸಿಕೊಂಡಿದ್ದಾರೆ. ಇದಾದ ಬಳಿಕ, 1986ರ ಏಪ್ರಿಲ್‌ನಲ್ಲಿ ಮುಖರ್ಜಿಯವರನ್ನು ಪಕ್ಷದಿಂದಲೇ ಹೊರಹಾಕಲಾಯಿತು. ಆದರೆ, ಎರಡು ವರ್ಷಗಳಾದ ಮೇಲೆ -1988ರಲ್ಲಿ- ಪುನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಮುಖರ್ಜಿಯವರನ್ನು ಪಕ್ಷದಿಂದ ಹೊರಹಾಕುವುದಕ್ಕೂ ಮೊದಲೇ ರಾಜೀವ್ ಜೊತೆಗಿನ ಅವರ ಸಂಬಂಧ ಹಳಸಿಕೊಂಡಿತ್ತು. ಒಟ್ಟಿನಲ್ಲಿ 1985ರ ಜನವರಿಯಿಂದ 1988ರ ಫೆಬ್ರವರಿಯವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಇವರಿಬ್ಬರೂ ಒಬ್ಬರು ಇನ್ನೊಬ್ಬರ ಮುಖವನ್ನೂ ನೋಡಲಿಲ್ಲ.
ಇದಾದ ಮೂರು ವರ್ಷಗಳ ಬಳಿಕ, ಅಂದರೆ 1991ರಲ್ಲಿ ರಾಜೀವ್ ಅವರ ಕಗ್ಗೊಲೆಯಾಯಿತು. ಆಗ ಪ್ರಧಾನಿ ಸ್ಥಾನಕ್ಕೆ ಮತ್ತೊಮ್ಮೆ ತಮ್ಮ ಹೆಸರು ಕೇಳಿಬರಲು ಶುರುವಾಗಿದ್ದನ್ನು ಕಂಡು, ಸ್ವತಃ ಮುಖರ್ಜಿಯವರಿಗೇ ಆಶ್ಚರ್ಯವಾಗಿರಬಹುದು. ಅಂದಿನ ಪರಿಸ್ಥಿತಿಯನ್ನೊಮ್ಮೆ ನೆನಪಿಸಿಕೊಂಡರೆ ಇದು ಸ್ಪಷ್ಟವಾಗುತ್ತದೆ. ರಾಜೀವ್ ಅವರ ಅಕಾಲಿಕ ನಿಧನದ ನಂತರ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಪಕ್ಷದ ನಾಯಕರೆಲ್ಲರೂ ಸೋನಿಯಾ ಗಾಂಧಿಯವರನ್ನು ಕರೆದರೂ ಅವರು ಅದನ್ನು ನಿರಾಕರಿಸಿ, ಮೌನಕ್ಕೆ ಜಾರಿದರು. ಆಗ ಪಕ್ಷವು ಪಿ.ವಿ.ನರಸಿಂಹರಾವ್ ಅವರನ್ನು ತನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಇದಕ್ಕೆ ಮುಖರ್ಜಿಯವರು ಎಂದೂ ಅಸಮಾಧಾನವನ್ನೇನೂ ವ್ಯಕ್ತಪಡಿಸಲಿಲ್ಲ. ಇದರ ಬಗ್ಗೆ ಅವರು ತಮ್ಮ ಆತ್ಮಕತೆಯಲ್ಲಿ ಬರೆಯುತ್ತ “ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ಚುಕ್ಕಾಣಿ ಹಿಡಿಯುವಂತೆ ಸೋನಿಯಾ ಅವರನ್ನು ಆಹ್ವಾನಿಸಿತು. ಆದರೆ, ಅವರು ಈ ಆಹ್ವಾನವನ್ನು ನಿರಾಕರಿಸಿದರು. ಇದು ಸಮಿತಿಯ ಸದಸ್ಯರಿಗೆ ತೀವ್ರವಾದ ನಿರಾಸೆಯನ್ನುಂಟು ಮಾಡಿತು. ಪತಿಯನ್ನು ಕಳೆದುಕೊಂಡ ಆ ನೋವಿನ ಸಂದರ್ಭದಲ್ಲಿ ಸೋನಿಯಾ ಅವರು ಮೌನವ್ರತವನ್ನು ಮುಂದುವರಿಸಿದರು. ಸೋನಿಯಾ ಅವರು ಒಲ್ಲೆ ಎಂದಿದ್ದರಿಂದಾಗಿ, ಸಮಿತಿಯ ಅತ್ಯಂತ ಹಿರಿಯ ಸದಸ್ಯರೂ 1976ರಿಂದ ನಿರಂತರವಾಗಿ ಸಮಿತಿಯಲ್ಲಿ ಇದ್ದವರೂ ಆದ ಪಿ.ವಿ.ನರಸಿಂಹರಾವ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಆಗ ಪಿವಿಎನ್ ಅವರು ಪಕ್ಷದ ಕೇಂದ್ರೀಯ ಚುನಾವಣಾ ಸಮನ್ವಯ ಸಮಿತಿಯ ಮುಖ್ಯಸ್ಥರೂ ಆಗಿದ್ದರು. ಒಟ್ಟಿನಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಇವರ ಆಯ್ಕೆ ಅತ್ಯಂತ ಸಹಜವಾಗಿತ್ತು,” ಎಂದು ವಿವರಿಸಿದ್ದಾರೆ.
ಇಂದಿರಾ ಗಾಂಧಿಯವರ ಉತ್ತರಾಧಿಕಾರಿಯಾಗಿ ರಾಜೀವ್ ಗಾಂಧಿಯವರನ್ನು ಆಯ್ಕೆ ಮಾಡುವುದಕ್ಕೂ, ರಾಜೀವ್ ಗಾಂಧಿಯವರ ವಾರಸುದಾರರಾಗಿ ವಿದೇಶಿ ಮೂಲದ ಅವರ ವಿಧವಾ ಪತ್ನಿ ಸೋನಿಯಾ ಗಾಂಧಿಯವರನ್ನು ಆಯ್ಕೆ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿತ್ತು. ಇಂದಿರಾ ಗಾಂಧಿಯವರು ಹತ್ಯೆಗೀಡಾಗುವ ಸಮಯಕ್ಕಾಗಲೇ ರಾಜೀವ್ ಗಾಂಧಿಯವರು ಸಕ್ರಿಯ ರಾಜಕಾರಣದಲ್ಲಿದ್ದರಲ್ಲದೆ, ಪಕ್ಷದ ನಾಯಕನಾಗಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಆದರೆ, ರಾಜೀವ್ ಬದುಕಿರುವವರೆಗೂ ಸೋನಿಯಾ ಗಾಂಧಿ ಯಾವತ್ತೂ ರಾಜಕಾರಣಕ್ಕೆ ಕಾಲಿಟ್ಟಿರಲಿಲ್ಲ; ಹಾಗೆಯೇ ಪಕ್ಷದ ಚಟುವಟಿಕೆಗಳಲ್ಲೂ ಪಾಲ್ಗೊಂಡಿರಲಿಲ್ಲ. ಇದಕ್ಕಿಂತ ಹೆಚ್ಚಾಗಿ, 1984ರ ಚುನಾವಣೆಯಲ್ಲಿ ಪಕ್ಷದ ನಾಯಕಗಣದಲ್ಲಿ ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಗೆ ನಿಷ್ಠೆಯನ್ನು ತೋರಿದ್ದವರೇ ತುಂಬಿತುಳುಕುತ್ತಿದ್ದರು. ಏಕೆಂದರೆ, 1980ರ ಚುನಾವಣೆಯಲ್ಲಿ ವಿಜಯಿಯಾಗಿ, ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿಯವರು ತಮಗೆ ನಿಷ್ಠರಾಗಿದ್ದ ಅರ್ಜುನ್ ಸಿಂಗ್, ಎ.ಕೆ.ಆ್ಯಂಟನಿ, ಪ್ರಣಬ್ ಮುಖರ್ಜಿ, ಪಿ.ವಿ.ನರಸಿಂಹರಾವ್ ಮತ್ತು ಇನ್ನೂ ಮುಂತಾದ ನಾಯಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಹೀಗಾಗಿ, ತಮ್ಮ ನೆಚ್ಚಿನ ಅಧಿನಾಯಕಿ ಕೊನೆಯುಸಿರೆಳೆದ ನಂತರ, ಅವರ ಮಗನಾಗಿದ್ದ ರಾಜೀವ್ ಗಾಂಧಿಯೇ ಅವರ ಉತ್ತರಾಧಿಕಾರಿಯಾಗಬೇಕೆಂದು ಇವರೆಲ್ಲರೂ ಬಯಸಿದರೆನಿಸುತ್ತದೆ.
ಮಧ್ಯಯುಗೀನ ಮನಃಸ್ಥಿತಿಯಲ್ಲಿದ್ದ ಕಾಂಗ್ರೆಸ್ಸಿಗರು
1991ರಲ್ಲಿ ಕೂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿದ್ದ ಕೆಲವರ ಮೇಲೆ ರಾಜೀವ್ ಗಾಂಧಿಯ ಋಣವಿತ್ತು. ಹಾಗೆ ನೋಡಿದರೆ, 1984ರಲ್ಲಿ ಪಕ್ಷಕ್ಕೆ ಸಿಕ್ಕಿದ್ದ ಭರ್ಜರಿ ಜನಾದೇಶವನ್ನು ರಾಜೀವ್ ಅವರು 1989ರ ಚುನಾವಣೆಯ ಹೊತ್ತಿಗೆ ಹಾಳು ಮಾಡಿಕೊಂಡಿದ್ದರು. ನಂತರವೂ ಅಷ್ಟೆ, 1989-91ರ ನಡುವೆ ಅವರು ಪಕ್ಷವನ್ನು ಬಲಪಡಿಸಲು ಒಂದು ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಆದರೂ ಇಡೀ ಒಂದು ತಲೆಮಾರಿನ ಕಾಂಗ್ರೆಸ್ ನಾಯಕರು ಇನ್ನೂ ಮಧ್ಯಯುಗೀನ ಮನಃಸ್ಥಿತಿಯಲ್ಲಿದ್ದರು. ಹೀಗಾಗಿಯೇ ಇವರೆಲ್ಲರೂ ಸೇರಿಕೊಂಡು, ರಾಜೀವ್ ಗಾಂಧಿಯವರ ಜಾಗಕ್ಕೆ ಸೋನಿಯಾ ಗಾಂಧಿಯವರನ್ನು ತಂದು, ಅವರಿಗೆ ಪಟ್ಟಾಭಿಷೇಕ ನೆರವೇರಿಸಲು ಹವಣಿಸಿದರು. ಈ ಜನರಿಗೆ ಬೇರೆ ಆಯ್ಕೆಗಳೂ ಇರಲಿಲ್ಲ. ಏಕೆಂದರೆ, ಇಂತಹ ನಾಯಕರ ರಾಜಕೀಯ ಯಶಸ್ಸಿಗೆ ಇವರೆಲ್ಲರೂ ನೆಹರು-ಗಾಂಧಿ ಕುಟುಂಬಕ್ಕೆ ತೋರಿದ ಕುರುಡುನಿಷ್ಠೆಯೂ ಒಂದು ಕಾರಣವಾಗಿತ್ತು.
ಇಷ್ಟರ ಮಧ್ಯೆಯೂ ಯಾರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯಬೇಕೆನ್ನುವ ವಿಚಾರದಲ್ಲಿ ಪಕ್ಷದಲ್ಲಿ ಎರಡು ಬಗೆಯ ಅಭಿಪ್ರಾಯಗಳು ಲಾಗಾಯ್ತಿನಿಂದಲೂ ಇವೆ. ಈ ಪೈಕಿ ಒಂದು ಗುಂಪು, ʼಪಕ್ಷವು ನೆಹರು-ಗಾಂಧಿ ಕುಟುಂಬದ ಹಿಡಿತದಿಂದ ಹೊರಬರಬೇಕು,ʼ ಎಂದು ಪ್ರತಿಪಾದಿಸಿಕೊಂಡು ಬರುತ್ತಿದ್ದರೆ, ಇನ್ನೊಂದು ಗುಂಪು, ʼನೆಹರು-ಗಾಂಧಿ ಕುಟುಂಬದವರನ್ನು ಹೊರತುಪಡಿಸಿ, ಬೇರೆಯವರು ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ,ʼಎಂದೇ ವಾದಿಸುತ್ತಿದೆ.
***
- ಮುಂದುವರಿಯುವುದು
- ಈ ಲೇಖನ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಬಿ.ಎಸ್. ಜಯಪ್ರಕಾಶ ನಾರಾಯಣ
- ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡದಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವೀರ ಸಾವರ್ಕರ್ ಅವರನ್ನು ಕುರಿತ ʼಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಯಕ್ಕೆ, ಇವರು ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಕುರಿತ ಬೃಹತ್ ಗ್ರಂಥವನ್ನು ಅನುವಾದಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.