ಬೆಂಗಳೂರು: ರಾಜ್ಯದಲ್ಲಿ ಏಳು ಮಂದಿಗೆ ಬ್ರಿಟೀಷ್ ವೈರಸ್, ಅಂದರೆ; ರೂಪಾಂತರಿ ಕೊರೊನ ಸೋಂಕು ತಗುಲಿದೆ ಎಂದು ಹೇಳಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊರೊನಾ ನಿವಾರಣೆಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ ಮಾಡಬೇಕು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಬ್ರಿಟನ್ನಿಂದ ದೇಶಕ್ಕೆ ಬಂದವರಲ್ಲಿ 107 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲರ ಮಾದರಿಗಳನ್ನು ಲ್ಯಾಬ್ಗಳಲ್ಲಿ ಪರೀಕ್ಷಿಸಲಾಗಿದೆ. ಈ ಪೈಕಿ 20 ಮಂದಿಗೆ ರೂಪಾಂತರಗೊಂಡ ವೈರಾಣು ಸೋಂಕು ತಗುಲಿದೆ ಎಂದು ದೃಢಪಟ್ಟಿದೆ. ದೆಹಲಿಯಲ್ಲಿ 8, ಕರ್ನಾಟಕದಲ್ಲಿ 7 ಜನರಿಗೆ ಈ ಹೊಸ ಬಗೆಯ ವೈರಾಣುವಿನ ಕೊರೊನಾ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂವರಿಗೆ ಹಾಗೂ ಶಿವಮೊಗ್ಗದಲ್ಲಿ ನಾಲ್ಕು ಜನರಿಗೆ ರೂಪಾಂತರಗೊಂಡ ವೈರಾಣು ಸೋಂಕು ಬಂದಿದೆ ಎಂದರು.
ರೂಪಾಂತರಗೊಂಡ ಕೊರೊನಾ ಸೋಂಕಿತರ 39 ಸಂಪರ್ಕಿತ ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದು, ಅವರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಆದರೆ ಯಾರಿಗೂ ಸೋಂಕು ತಗುಲಿಲ್ಲ. ಶಿವಮೊಗ್ಗದಲ್ಲಿ 7 ಸಂಪರ್ಕಿತ ವ್ಯಕ್ತಿಗಳ ಪರೀಕ್ಷೆ ಮಾಡಿದ್ದು, ಆ ಪೈಕಿ ಮೂವರಿಗೆ ಕೊರೊನಾ ಪಾಸಿಟಿವ್ ಇದೆ. ಈ ಮೂವರ ಮಾದರಿಗಳ ಸೀಕ್ವಿನ್ಸಿಂಗ್ ಮಾಡಲಾಗುತ್ತಿದೆ ಎಂದು ವಿವರಿಸಿದರು.
ರೂಪಾಂತರಿ ವೈರಾಣುಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು. ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು.
ಆಯುಷ್ ವೈದ್ಯರ ನಿಯೋಜನೆ
ಇದಕ್ಕೂ ಮೊದಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಹೋಮಿಯೋಪತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ವೈದ್ಯಕೀಯ ಸಂಶೋಧನೆಗಳು ಕಡಿಮೆಯಾಗಿವೆ. ಎಲ್ಲವನ್ನೂ ಬೇರೆ ದೇಶಗಳಿಂದ ತರಿಸಿಕೊಳ್ಳುವಂತಾಗಿದೆ. ಕೊರೊನಾ ನಿಯಂತ್ರಣಕ್ಕೆ ತರಲು ಆರ್ಸೆನಿಕ್ ಆಲ್ಬಂ ಎಂಬ ಹೋಮಿಯೋಪತಿ ಔಷಧಿ ಬಳಕೆಯಲ್ಲಿದೆ. ಆದರೆ ಕೊರೊನಾ ನಿವಾರಣೆಗೆ ಬೇರೆ ಸಂಸ್ಥೆಗಳು ಔಷಧಿ ತಯಾರಿಸುತ್ತಿರುವಂತೆ ಹೋಮಿಯೋಪತಿಯಲ್ಲೂ ಔಷಧಿ ಕಂಡು ಹಿಡಿಯಬೇಕು ಎಂದರು.
ಹೋಮಿಯೋಪತಿ ಪದ್ಧತಿ ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ತತ್ವವನ್ನು ಆಧರಿಸಿದೆ. ಟೈಫಾಯಿಡ್ ಬಂದಾಗಲೂ ಹೋಮಿಯೋಪತಿ ಬಳಕೆಯಾಗಿತ್ತು. ಇಂತಹ ಪದ್ಧತಿಗೆ ಉತ್ತೇಜನ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಗೆ ವಿಶೇಷ ಒತ್ತು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಮ್ಮ ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ಆಯುಷ್ ವೈದ್ಯರನ್ನು ನಿಯೋಜಿಸಲು ನಿರ್ಧರಿಸಿದೆ ಎಂದು ತಿಳಿಸಿದರು.