• About
  • Advertise
  • Careers
  • Contact
Monday, June 15, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಪಿ.ವಿ.ನರಸಿಂಹರಾವ್‌ಗೆ ಪತ್ರಿಕೆಗಳ ಇನ್ನೊಂದು ಫೇಸೂ ಗೊತ್ತಿತ್ತು! ಬಾಂಬೆ ನ್ಯೂಸ್‌ ಪೇಪರ್‌ನಲ್ಲಿ ಬಾಂಬೆಯವರ ಪರ ಬರೆಯದೇ ಹೈದರಾಬಾದ್‌ನವರ ಪರ ಬರೆಯುತ್ತಾರಾ ಎಂದಿದ್ದರು!!

cknewsnow desk by cknewsnow desk
January 1, 2021
in GUEST COLUMN, STATE
Reading Time: 2 mins read
0
ವಂಶಪಾರಂಪರ್ಯದ ಸುಳಿಗೆ ಸಿಕ್ಕಿ ಕುಸಿಯುತ್ತಿರುವ ಕಾಂಗ್ರೆಸ್; ನೆನಪಾಗುತ್ತಿರುವ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
922
VIEWS
FacebookTwitterWhatsuplinkedinEmail

1991ರಲ್ಲಿ ದಿವಾಳಿಯ ಅಂಚಿನಲ್ಲಿದ್ದ ಭಾರತವನ್ನು ಆ ಸಂಕಷ್ಟದಿಂದ ಪಾರು ಮಾಡಿದ ಸಾಹಸಿಯೆಂದರೆ, ಪಿ.ವಿ.ನರಸಿಂಹರಾವ್. ನೆಹರು-ಗಾಂಧಿ ಕುಟುಂಬದ ಕುಡಿಯಲ್ಲದ ಪಿವಿಎನ್, ಐದು ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ದೇಶವನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ದ ಚಾಣಾಕ್ಷ. ಆದರೆ, ಸಮಕಾಲೀನ ಚರಿತ್ರೆಯಲ್ಲಿ ಅವರಿಗೆ ಸಿಗಬೇಕಾಗಿದ್ದ ಸ್ಥಾನ ಸಿಕ್ಕಿಲ್ಲ. ಇದು ಅವರ ಜನ್ಮಶತಾಬ್ದಿಯ ವರ್ಷ. ಈ ಸಂದರ್ಭದಲ್ಲಿ ಅವರನ್ನು ಕುರಿತ ಪಿವಿಎನ್: ಪರ್ವಕಾಲದ ಪುರುಷೋತ್ತಮ ಎನ್ನುವ ಅನುವಾದಿತ ಕೃತಿ ಈಚೆಗಷ್ಟೇ ಲೋಕಾರ್ಪಣೆಗೊಂಡಿದೆ. ಸಂಜಯ ಬರೂ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವವರು ಖ್ಯಾತ ಅನುವಾದಕ ಬಿ.ಎಸ್.ಜಯಪ್ರಕಾಶ ನಾರಾಯಣ. ಈ ಗಮನಾರ್ಹ ಕೃತಿಯ ಒಂದು ಅಧ್ಯಾಯದ ಆಯ್ದ ಭಾಗವು ಸಿಕೆನ್ಯೂಸ್‌ ನೌ ಓದುಗರಿಗಾಗಿ ಇಲ್ಲಿದೆ. ಅಧ್ಯಾಯವು ದೀರ್ಘವಾಗಿರುವುದರಿಂದ ಅದನ್ನು ಕೆಲ ಕಂತುಗಳನ್ನಾಗಿ ವಿಭಜಿಸಿ ಪ್ರಕಟಿಸಲಾಗುತ್ತಿದೆ. ಇದು ಎರಡನೇ ಕಂತು.


ರಾಜೀವ್ ಗಾಂಧಿಯವರ ಕಗ್ಗೊಲೆಯ ಪರಿಣಾಮವಾಗಿ ಮುಂದೂಡಲ್ಪಟ್ಟ ಮುಂದಿನ ಹಂತಗಳ ಚುನಾವಣೆಯು ಜೂನ್‌ನಲ್ಲಿ ನಡೆಯಿತು. ಆದರೆ, 1990ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಜನಾದೇಶ ಸಿಕ್ಕಲಿಲ್ಲ. ಆದರೂ ಕಾಂಗ್ರೆಸ್ ಪಕ್ಷವು ಅತ್ಯಂತ ಹೆಚ್ಚು ಸಂಖ್ಯಾಬಲವನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಿತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ತಾವು ಹೊಂದಿದ್ದ ಹಿರಿತನವು ಪಕ್ಷದ ಅಧ್ಯಕ್ಷಗಿರಿಯು ತಮ್ಮ ಪಾಲಾಗಲು ಪಿ.ವಿ.ನರಸಿಂಹರಾವ್ ಅವರ ನೆರವಿಗೆ ಬಂದಿತ್ತೇನೋ ಸರಿ. ಆದರೆ, ಇದೇ ಆಧಾರದ ಮೇಲೆ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬಹುದೇ ಎನ್ನುವ ಪ್ರಶ್ನೆಯು ಚುನಾವಣೆಯ ನಂತರ ಉದ್ಭವಿಸಿತು. ನೆಹರು ಅವರು ಪ್ರಧಾನಿಯಾಗಿದ್ದಾಗ -ಅಷ್ಟೇಕೆ, ಇಂದಿರಾ ಗಾಂಧಿಯವರ ಮೊದಲ ಅವಧಿಯಲ್ಲಿ ಕೂಡ- ಅವರು ಪಕ್ಷದ ಅಧ್ಯಕ್ಷರೇನೂ ಆಗಿರಲಿಲ್ಲ. ನೆಹರು ಕಾಲದಲ್ಲಂತೂ ಅವರು ತೀರಾ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಅವರೇ ಪಕ್ಷದ ಅಧ್ಯಕ್ಷರಾಗಿದ್ದರು. ಇಂದಿರಾ ಗಾಂಧಿಯವರು ಮೊದಲ ಅವಧಿಯಲ್ಲಿ ಪ್ರಧಾನಿಯಾಗಿದ್ದ 1977ನೇ ಇಸವಿಯವರೆಗೂ ಕಾಂಗ್ರೆಸ್‌ನಲ್ಲಿ ಇದೇ ಸಂಪ್ರದಾಯವಿತ್ತು. ಆದರೆ 1978ರ ನಂತರ ಇಂದಿರಾ ಗಾಂಧಿಯವರು ಎರಡೂ ಹುದ್ದೆಗಳನ್ನು ತಾವೇ ಇಟ್ಟುಕೊಂಡರು; ಬಳಿಕ ರಾಜೀವ್ ಗಾಂಧಿ ಕೂಡ ಇದೇ ಪರಿಪಾಟವನ್ನು ಮುಂದುವರಿಸಿದರು. ಸಾಮಾನ್ಯವಾಗಿ, ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವುದೇ ಪಕ್ಷವು ಅಧಿಕಾರಕ್ಕೆ ಬಂದಾಗ, ಆ ಪಕ್ಷದ ವತಿಯಿಂದ ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿಯಾಗುವವರಿಗೆ ಆ ಪಕ್ಷದ ಒಳಗೆ ಹೆಚ್ಚಿನವರ ಬೆಂಬಲ ಇರಲೇಬೇಕು. ಆದರೆ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ನೇತೃತ್ವದಲ್ಲಿನ ಕಾಂಗ್ರೆಸ್‌ನಲ್ಲಿ ಪಕ್ಷದ ಮೇಲೆ ಬಿಗಿಹಿಡಿತ ಸಾಧಿಸಬೇಕೆಂದರೆ ಸರಕಾರದಲ್ಲಿ ತಮ್ಮ ಯಜಮಾನಿಕೆ ಸ್ಥಾಪಿಸಿಕೊಳ್ಳುವುದು, ಸರಕಾರದ ಎಲ್ಲ ಇಲಾಖೆಗಳಲ್ಲೂ ತಮ್ಮ ಹಿಡಿತ ಇಟ್ಟುಕೊಳ್ಳುವುದು ಮತ್ತು ಆಯಕಟ್ಟಿನ ಜಾಗಗಳಲ್ಲಿ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಂಡು ಅದನ್ನು ಪ್ರದರ್ಶಿಸಿಕೊಳ್ಳಬೇಕಾದ್ದು ಮುಖ್ಯವಾದವು.

ಇದೇನೇ ಇರಲಿ, ಪಿ.ವಿ.ನರಸಿಂಹರಾವ್ ಅವರು ಪಕ್ಷದ ಅಧ್ಯಕ್ಷಗಿರಿ ಸಿಕ್ಕಿದ್ದಕ್ಕಷ್ಟೇ ತೃಪ್ತರಾಗಿದ್ದರೇ ಅಥವಾ ಪ್ರಧಾನಮಂತ್ರಿಯ ಹುದ್ದೆಯೂ ತಮಗೆ ಸಿಗಬೇಕೆಂದು ಬಯಸಿದ್ದರೇ? ಏಕೆಂದರೆ, ಆ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಈ ಹುದ್ದೆಗೆ ಹಲವರ ಹೆಸರುಗಳು ಕೇಳಿಬರುತ್ತಿದ್ದವು. ಅರ್ಜುನ್ ಸಿಂಗ್ ಅವರ ಹೆಸರು ʼಇವರು ಕಾಂಗ್ರೆಸ್‌ನಲ್ಲಿರುವ ಉತ್ತರ ಭಾರತೀಯರಲ್ಲಿ ಸಿಕ್ಕಾಪಟ್ಟೆ ಜನಪ್ರಿಯರುʼ ಎಂದು ಕೇಳಿಬರುತ್ತಿತ್ತು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಕೂಡ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದು, ತಮ್ಮ ಈ ಆಸೆಯನ್ನು ಹೊರಹಾಕಿದರು. ರಾಜೀವ್ ಗಾಂಧಿಗೆ ನಿಕಟರಾಗಿದ್ದ ನಾಯಕರು ಮುಂದಿನ ಮಾರ್ಗದರ್ಶನಕ್ಕಾಗಿ ಸೋನಿಯಾ ಗಾಂಧಿಯತ್ತ ನೋಡತೊಡಗಿದರು. ಇಷ್ಟರ ಮಧ್ಯೆ ಚುನಾಯಿತ ಲೋಕಸಭಾ ಸದಸ್ಯರು ಕೂಡ ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿತ್ತಲ್ಲವೇ? ಅವರು ಮೂಕಪ್ರೇಕ್ಷಕರಾಗಿ ಇದ್ದುಕೊಂಡು ಅಧಿಕಾರದ ದಲ್ಲಾಳಿಗಳು ಸೋನಿಯಾ ಅವರನ್ನು ಸುತ್ತುವರಿದು ತಮಗೆ ಬೇಕಾದವರನ್ನು ಪ್ರಧಾನಮಂತ್ರಿಯಾಗಿ ಮಾಡಲು ಆಸ್ಪದ ಕೊಡಬೇಕಾಗಿತ್ತೇ? ಅಥವಾ ಪಕ್ಷದ ನಾಯಕರು ತಮ್ಮ ಮಾತನ್ನೂ ಕೇಳಿಸಿಕೊಳ್ಳಬೇಕು ಎಂದು ಈ ಹೊಸ ಸಂಸದರು ಆಗ್ರಹಿಸಬೇಕಾಗಿತ್ತೇ? ಅಂತಹ ಪ್ರಸಂಗದಲ್ಲಿ ಈ ಸಂಸದರು ಯಾರತ್ತ ವಾಲುತ್ತಿದ್ದರು? ಈ ಪ್ರಶ್ನೆಗಳೆಲ್ಲ ನನ್ನ ತಲೆಯಲ್ಲಿ ಗಿರಕಿ ಹೊಡೆಯಲು ಶುರು ಮಾಡಿದವು. ಆಗ ನಾನು ಕೂಡಲೇ, ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಪಿ.ವಿ.ನರಸಿಂಹರಾವ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದೆ.

ದೆಹಲಿ ಗದ್ದುಗೆಯ ಮೇಲೆ ಪವಾರ್ ಕಣ್ಣು

ಅದು 1991ರ ಜೂನ್ ತಿಂಗಳ ಮಧ್ಯಭಾಗ. ದೆಹಲಿಯಲ್ಲಿ ಬಿಸಿಲಿನ ಝಳ ಜೋರಾಗಿತ್ತು. ಜೊತೆಗೆ, ಚುನಾವಣೆಯ ಫಲಿತಾಂಶದ ಬಗ್ಗೆ ಕೂಡ ಕಾವೇರಿದ ನಿರೀಕ್ಷೆಗಳಿದ್ದವು. ಮತ ಎಣಿಕೆ ನಡೆದು, ಫಲಿತಾಂಶ ಹೊರಬರಲು ಶುರುವಾಗುತ್ತಿದ್ದಂತೆಯೇ, ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಸಿಗದೆ ಹೋದರೂ ಅದೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದು ಸ್ಪಷ್ಟವಾಯಿತು. ಇದರ ಬೆನ್ನೆಲ್ಲೇ, ʼಟೈಮ್ಸ್ ಆಫ್ ಇಂಡಿಯಾʼ ಪತ್ರಿಕೆಯು ತನ್ನ ಮುಖಪುಟದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶರದ್ ಪವಾರ್ ಅವರನ್ನು ಉಲ್ಲೇಖಿಸಿ, “ಯಾರು ಪ್ರಧಾನಮಂತ್ರಿಯಾಗಬೇಕು ಎನ್ನುವ ವಿಚಾರದಲ್ಲಿ ನಮ್ಮ ರಾಜ್ಯದ (ಮಹಾರಾಷ್ಟ್ರದ) ಸಂಸದರು ಮುಖ್ಯವಾದ ಪಾತ್ರವನ್ನು ವಹಿಸಲಿದ್ದಾರೆ,” ಎನ್ನುವ ವರದಿಯನ್ನು ಪ್ರಕಟಿಸಿತು.

ಆದರೆ, ಪವಾರ್ ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ನುಣುಚಿಕೊಂಡರು. ಈ ಬಗ್ಗೆ ಕೇಳಿದ್ದಕ್ಕೆ “ಪ್ರಧಾನಮಂತ್ರಿಯಾಗಲೂ ನನಗೂ ಇಷ್ಟವಿದೆ. ನಾನೂ ಕೂಡ ಅಖಾಡದಲ್ಲಿದ್ದೇನೆ. ಇದರಲ್ಲಿ ಮುಚ್ಚುಮರೆಯೇನೂ ಇಲ್ಲ,” ಎಂದರು. ಅಂದಂತೆ, ʼಟೈಮ್ಸ್ ಆಫ್ ಇಂಡಿಯಾʼದ ಈ ವರದಿಯನ್ನು ಬರೆದಿದ್ದು ಒಬ್ಬ ಅನಾಮಿಕ ಹಿರಿಯ ವರದಿಗಾರ! ಇದಾದ ಮರುದಿನ, ಅಂದರೆ ಜುಲೈ 18ರಂದು ಕೂಡ ಆ ಪತ್ರಿಕೆಯಲ್ಲಿ ಇಂಥದೇ ಇನ್ನೊಂದು ವರದಿ ಪ್ರಕಟವಾಯಿತು. ʼದೆಹಲಿ ಗದ್ದುಗೆಯ ಮೇಲೆ ಪವಾರ್ ಕಣ್ಣುʼ ಎನ್ನುವ ಶೀರ್ಷಿಕೆಯನ್ನು ಹೊತ್ತಿದ್ದ ಈ ವರದಿಯನ್ನು ಬರೆದಿದ್ದವರು ಆ ಪತ್ರಿಕೆಯ ಆಗಿನ ಮುಂಬಯಿ ಬ್ಯೂರೋ ಮುಖ್ಯಸ್ಥ ರಾಜದೀಪ್ ಸರ್ದೇಸಾಯಿ.

ಇದನ್ನು ನೋಡಿ ನನಗೆ, ಕೊನೆಗೂ ಒಬ್ಬ ಮರಾಠಾ ನಾಯಕ ದೆಹಲಿಯ ಗದ್ದುಗೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದೇ ಎಂದು ಅಚ್ಚರಿಯಾಯಿತು. ಏಕೆಂದರೆ, ಇತಿಹಾಸವನ್ನು ನೋಡುವುದಾದರೆ, ಶತಮಾನಗಳ ಹಿಂದೆ ಮಹಾರಾಷ್ಟ್ರದ ಪೇಶ್ವೆಗಳು ಮಾತ್ರ ದೂರದ ದೆಹಲಿಯವರೆಗೂ ದಂಡೆತ್ತಿ ಹೋಗಿ, ಮೊಘಲರಿಗೆ ಮಣ್ಣು ಮುಕ್ಕಿಸಿದ್ದರು. ಆದರೂ ಪೇಶ್ವೆಗಳು ತಮ್ಮ ಆ ವೈಭವದ ದಿನಗಳಲ್ಲೂ ದೆಹಲಿಯ ಗದ್ದುಗೆಯನ್ನೇರಲಿಲ್ಲ. ತಮ್ಮೆದುರು ಸೋತು ಸುಣ್ಣವಾದ ಮೊಘಲರನ್ನು ದೆಹಲಿಯ ಕೆಂಪುಕೋಟೆಯೊಳಗೇ ಬಿಟ್ಟ ಪೇಶ್ವೆಗಳು ಪುನಃ ಪುಣೆಗೇ ಹಿಂದಿರುಗಿದ್ದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ದೆಹಲಿ ಮಟ್ಟದಲ್ಲಿ ಅತ್ಯಂತ ಪ್ರಭಾವಿಯೆನಿಸಿಕೊಂಡಿದ್ದ ಮೊಟ್ಟಮೊದಲ ಮರಾಠಾ ನಾಯಕನೆಂದರೆ ಯಶವಂತರಾವ್ ಬಲವಂತರಾವ್ ಚವಾಣ್. 1960-62ರ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವೈ.ಬಿ.ಚವಾಣ್, ಪ್ರಧಾನಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎನಿಸಿಕೊಂಡಿದ್ದರು. 1962ರ ಯುದ್ಧದಲ್ಲಿ ಚೀನಾ ದೇಶವು ನಮ್ಮನ್ನು ಸೋಲಿಸಿದ ತರುವಾಯ ನೆಹರು ಸಂಪುಟದಲ್ಲಿ ರಕ್ಷಣಾ ಮಂತ್ರಿಯಾಗುವ ಮೂಲಕ ಅವರು ತಮ್ಮ ರಾಷ್ಟ್ರ ರಾಜಕಾರಣವನ್ನು ಆರಂಭಿಸಿದರು. ಚೀನಾದ ಎದುರು ಸೋತು, ಬಸವಳಿದಿದ್ದ ಭಾರತೀಯ ಸೇನೆಗೆ ಅಗತ್ಯವಾಗಿ ಬೇಕಾಗಿದ್ದ ನೈತಿಕ ಸೈರ್ಯವನ್ನು ಮತ್ತೆ ತುಂಬಿದ ಅವರು, ದೇಶದ ಭದ್ರತೆಗಾಗಿ ಕೇಂದ್ರ ಸರಕಾರವು ಅಗತ್ಯವಾದ ಪ್ರಮಾಣದಲ್ಲಿ ಹಣವನ್ನು ವಿನಿಯೋಗಿಸುವಂತೆ ಮಾಡಿದರು. ಇಂತಹ ಚವಾಣ್ ಅವರು ಇಂದಿರಾ ಗಾಂಧಿಯವರ ಸಂಪುಟದಲ್ಲಿ ಅತ್ಯಂತ ದಕ್ಷ ಮಂತ್ರಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. ಆದರೆ ಅವರು ಪ್ರಧಾನಮಂತ್ರಿಯಾಗುವುದು ಸಾಧ್ಯವಾಗಲಿಲ್ಲ. ಈಗ ಅವರ ಶಿಷ್ಯ ಶರದ್ ಪವಾರ್ ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದರು. ಇದರಲ್ಲಿ ಅವರು ಗೆದ್ದು, ಇತಿಹಾಸವನ್ನು ನಿರ್ಮಿಸುತ್ತಾರೆಯೇ ಎನ್ನುವ ಪ್ರಶ್ನೆ ನನ್ನಲ್ಲಿ ಸುಳಿದಾಡುತ್ತಿತ್ತು.

ಅದು ಬಾಂಬೆ ಪೇಪರ್ ಕಣಯ್ಯ

ಜೂನ್ 20ರಂದು ನಾನು ನನ್ನ ಫಿಯಟ್ ಕಾರನ್ನು ಚಲಾಯಿಸಿಕೊಂಡು, ಬೆಳಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ, ಹೊಸದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿದ್ದ ಪಿವಿಎನ್ ಅವರ ಬಂಗಲೆಯನ್ನು ಪ್ರವೇಶಿಸಿದೆ. ಕಣ್ಣಾಡಿಸಿದರೆ ಬಂಗಲೆಯ ಆವರಣದಲ್ಲಿ ಒಂದು ನರಪಿಳ್ಳೆಯೂ ಇರಲಿಲ್ಲ. ನಾನು ಕಾರಿನಿಂದ ಇಳಿಯುತ್ತಿದ್ದಂತೆಯೇ ಅಲ್ಲಿಗೆ ಬಂದ ನರಸಿಂಹರಾವ್ ಅವರ ಆಪ್ತ ಕಾರ್ಯದರ್ಶಿ ರಾಮ್ ಖಾಂಡೇಕರ್ ಅವರು ನನ್ನನ್ನು ಬರಮಾಡಿಕೊಂಡು, ಒಳಕ್ಕೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಪಿವಿಎನ್ ಅವರು ತಮ್ಮ ರೂಮಿನಲ್ಲಿ ಎಂದಿನಂತೆ ಬಿಳಿಬಣ್ಣದ ಕಾಟನ್ ಲುಂಗಿ ಮತ್ತು ನಡುವಂಗಿ ತೊಟ್ಟುಕೊಂಡು, ಕಾಂಗ್ರೆಸ್ಸಿನಲ್ಲಿನ ತಮ್ಮ ಜೊತೆಗಾರರೂ ಬಿಹಾರದ ಮಾಜಿ ಮುಖ್ಯಮಂತ್ರಿಯೂ ಆದ ಭಗವತ್ ಝಾ ಆಜಾದ್ ಅವರೊಂದಿಗೆ ಮಾತನಾಡುತ್ತ ಕೂತಿದ್ದರು. ಈ ಆಜಾದ್ ಅವರು ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಆಜಾದ್ ಅವರ ತಂದೆ.

ಒಳಹೊಕ್ಕ ನಾನು ಪಿವಿಎನ್ ಅವರಿಗೆ ಎಂದಿನಂತೆ ʼಸರ್, ನಮಸ್ಕಾರ,ʼ ಎಂದೆ. ಅವರು ಅಲ್ಲೇ ಇದ್ದ ಕುರ್ಚಿಯಲ್ಲಿ ಕೂತುಕೊಳ್ಳುವಂತೆ ಹೇಳಿದರು. ಇದಾದ ಒಂದೆರಡು ನಿಮಿಷಗಳಲ್ಲಿ ಚಹಾ ಬಂತು. ನಾನು ಆಗ ʼಸರ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಶರದ್ ಪವಾರ್ ಅವರೇ ಮುಂದಿನ ಪ್ರಧಾನಿ ಅಂತೆಲ್ಲ ಬರ್ತಾ ಇದೆಯಲ್ಲ, ಇದರ ಬಗ್ಗೆ ನೀವೇನು ಹೇಳ್ತೀರ?ʼಎಂದೆ.

ಕೂಡಲೇ ಪಿವಿಎನ್ ಅವರು ತಣ್ಣಗೆ ʼಹೇ ಬರೂ, ಅದೊಂದು ಬಾಂಬೆ ಪೇಪರ್ ಕಣಯ್ಯ,ʼಎಂದರು. ಆಗಿನ್ನೂ ಬಾಂಬೆಯು ಮುಂಬೈ ಆಗಿರಲಿಲ್ಲ. ಮಾಧ್ಯಮ ವಲಯದಲ್ಲೂ ಅಷ್ಟೆ, ʼಟೈಮ್ಸ್ ಆಫ್ ಇಂಡಿಯಾʼ ಪತ್ರಿಕೆಗೆ ʼಬಾಂಬೆ ಪೇಪರ್ʼ ಎನ್ನುವ ಹಣೆಪಟ್ಟಿ ಇತ್ತು. ಏಕೆಂದರೆ, ಹೊಸದೆಹಲಿಯಲ್ಲೇನಿದ್ದರೂ ʼಹಿಂದೂಸ್ತಾನ್ ಟೈಮ್ಸ್ʼ ಪತ್ರಿಕೆಯದೇ ದರಬಾರು!

ನರಸಿಂಹರಾವ್ ಅವರು ಮಾತು ಮುಂದುವರಿಸುತ್ತ ʼನೋಡಯ್ಯ ಬರೂ, ಅದರ ಸಂಪಾದಕ (ದಿಲೀಪ್ ಪಡಗಾಂವ್ಕರ್) ಕೂಡ ಮಹಾರಾಷ್ಟ್ರದವನು. ಆ ಪತ್ರಿಕೆಯ ರಾಜಕೀಯ ವರದಿಗಾರಿಕೆ ವಿಭಾಗದ ಮುಖ್ಯಸ್ಥ (ಸುಭಾಷ್ ಕಿರ್ಪೇಕರ್) ಕೂಡ ಮಹಾರಾಷ್ಟ್ರದವನೇ. ಇನ್ನು ಪ್ರಧಾನಮಂತ್ರಿ ಸ್ಥಾನದ ಬಗ್ಗೆ ಅದರಲ್ಲಿ ಬರುತ್ತಿರುವ ಸುದ್ದಿಗಳೆಲ್ಲವೂ ಬರ‍್ತಾ ಇರೋದು ಕೂಡ ಬಾಂಬೆಯಿಂದಲೇ. ಹೀಗಾಗಿ ಇವರೆಲ್ಲ ಬೇರೇನನ್ನು ಬರೆಯೋಕೆ ಸಾಧ್ಯ?ʼಎಂದರು.

ಈ ಮಾತನ್ನು ಕೇಳಿ ಆಜಾದ್ ಜೋರಾಗಿ ನಕ್ಕರು; ಪಿವಿಎನ್ ಸಣ್ಣಗೆ ತಮ್ಮಷ್ಟಕ್ಕೆ ತಾವು ನಗೆ ಸೂಸಿದರು; ನನಗೆ, ನನ್ನ ಪ್ರಶ್ನೆಗೆ ಬೇಕಾದ ಉತ್ತರ ಸಿಕ್ಕಿತ್ತು!

ಪಿವಿಎನ್ ಸ್ವಭಾವತಃ ಹೆಚ್ಚು ಮಾತನಾಡುತ್ತಿರಲಿಲ್ಲ. ಸಾಮಾನ್ಯವಾಗಿ ಅವರು ಇನ್ನೊಬ್ಬರ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ; ತಮ್ಮ ಸಹೋದ್ಯೋಗಿಗಳು ಏನನ್ನೇ ಕೇಳಿದರೂ ಬಾಯಿ ಬಿಡುತ್ತಿರಲಿಲ್ಲ. ಒಂದು ಸಲವಂತೂ ಅವರು ಈ ಬಗ್ಗೆ ಕೇಳಿದ್ದಕ್ಕೆ “ನೋಡಿ, ಎಲ್ಲ ವಿಚಾರಗಳಿಗೂ ಸಂಬಂಧಿಸಿದಂತೆ ಒಂದು ನಿರ್ಧಾರವನ್ನು ತೆಗೆದುಕೊಳ್ಳಲೇಬೇಕು ಎಂದೇನೂ ಇಲ್ಲ. ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಕೂಡ ಒಂದು ನಿರ್ಧಾರವೇ!” ಎಂದಿದ್ದರು. ಬಳಿಕ ಪಿವಿಎನ್ ಅವರ ಸ್ವಭಾವವನ್ನು ಈ ಮಾತಿನಿಂದಲೇ ಗುರುತಿಸುವುದು ವಾಡಿಕೆಯಾಗಿತ್ತು. ಅವರು ಒಂದು ಡಜನ್‌ಗೂ ಹೆಚ್ಚು ಭಾಷೆಗಳನ್ನು ಬಲ್ಲವರಾಗಿದ್ದರು; ಈ ಪೈಕಿ ಆರು ಭಾಷೆಗಳಲ್ಲಿ ಅವರು ಚೆನ್ನಾಗಿ ಓದಲೂ ಬರೆಯಲೂ ಮಾತನಾಡಲೂ ಶಕ್ತರಾಗಿದ್ದರು. ಆದರೆ, ಇಂತಹ ಒಬ್ಬ ಮನುಷ್ಯ ಮೌನಕ್ಕೆ ಶರಣಾಗುತ್ತಿದ್ದುದು ಆಶ್ಚರ್ಯದ ಸಂಗತಿ.

  • *ಮುಂದುವರಿಯುವುದು
  • ಈ ಅಧ್ಯಾಯದ ಮೊದಲ ಕಂತು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಭಾರತಕ್ಕೆ ಹೊಸ ದಿಕ್ಕು ತೋರಿದ ಮೇ ಮಹಾಚುನಾವಣೆ; ಪರ್ವ ಕಾಲದಲ್ಲಿ ದೇಶವನ್ನು ಕೈಹಿಡಿದು ಮುನ್ನಡೆಸಿದ ಪಿ.ವಿ.ನರಸಿಂಹರಾವ್‌

ಬಿ.ಎಸ್. ಜಯಪ್ರಕಾಶ ನಾರಾಯಣ
  • ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡದಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವೀರ ಸಾವರ್ಕರ್‌ ಅವರನ್ನು ಕುರಿತ ʼಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಯಕ್ಕೆ, ಇವರು ಡಾ.ಶ್ಯಾಮ‌ಪ್ರಸಾದ್ ಮುಖರ್ಜಿ ಅವರನ್ನು ಕುರಿತ ಬೃಹತ್‌ ಗ್ರಂಥವನ್ನು ಅನುವಾದಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.‌ ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.
Tags: Congressindiapv narasimha raopvn
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಈ ತಿಂಗಳಲ್ಲೇ ಕೈಸೇರಲಿದೆ ಕೋವಿಡ್-19 ಲಸಿಕೆ, ವಿತರಣೆಗೆ ರಾಜ್ಯ ರೆಡಿಯಾಗಿದೆ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಈ ತಿಂಗಳಲ್ಲೇ ಕೈಸೇರಲಿದೆ ಕೋವಿಡ್-19 ಲಸಿಕೆ, ವಿತರಣೆಗೆ ರಾಜ್ಯ ರೆಡಿಯಾಗಿದೆ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Leave a Reply Cancel reply

Your email address will not be published. Required fields are marked *

Recommended

ಕೋವಿಡ್ ಕೆಸರು; ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪಂಚಪ್ರಶ್ನೆ ಹಾಕಿದ ಎಚ್ಡಿಕೆ

“ಕಾಂಗ್ರೆಸ್ ನಾಯಕರು ಜೆಡಿಎಸ್ ಲೀಡರುಗಳ ಮನೆಗಳ ಮುಂದೆ ಬಲೆ ಹಾಕಿಕೊಂಡು ಕೂತಿದ್ದಾರೆ!”

5 years ago
ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

ಮೂಡಾದಲ್ಲಿ ಕುಮಾರಸ್ವಾಮಿಯದ್ದೂ ಸೈಟಿದೆ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ HDK

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ