ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಈ ವರ್ಷವೂ ನಗರದ ಹೊರವಲಯದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ಅವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ಭಾನುವಾರ ನಡೆದ ಈ ಧಾರ್ಮಿಕ ಉತ್ಸವದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಸೇರಿ ಅಕ್ಕಪಕ್ಕದ ತಾಲ್ಲೂಕುಗಳ ಸಾವಿರಾರು ಭಕ್ತರು ಪಾಲ್ಗೊಂಡು ವೀರಾಂಜನೇಯ ಸ್ವಾಮಿ ಕೃಪೆಗೆ ಪಾತ್ರರಾದರು.
ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ರಥೋತ್ಸವ, ಶ್ರೀಗಳಿಂದ ಭಜನಾ ಕಾರ್ಯಕ್ರಮ.
ಈ ಸಂದರ್ಭದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಹಾಗೂ ಗಣಪತಿ ದೇವರುಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿ ಅವರು ಇದೇ ವೇಳೆ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರು. ಸಾಂಪ್ರದಾಯದಂತೆ ಈ ವರ್ಷದ ಬೆಳೆದ ಕಡಲಡಕಾಯಿಯನ್ನು ದೇವರಿಗೆ ನೈವೇಧ್ಯವಾಗಿ ಸಮರ್ಪಿಸಿದರು. ಬಳಿಕ ಆ ಕಡಲೆಕಾಯಿಯನ್ನು ಹೊರಗೆ ಭಕ್ತರಿಗೆ ಹಂಚಿದರು. ಬಳಿಕ ಸ್ವಾಮೀಜಿ ಅವರು ವೀರಾಂಜನೇಯ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ತದ ನಂತರ ಸ್ವಾಮೀಜಿ ಅವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ ಹಾಗೂ ಮಾಜಿ ಶಾಸಕ ಬಿ.ಎನ್.ಬಚ್ಚೇಗೌಡ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಎಲ್ಲವೂ ಸರಳ
ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಈ ವರ್ಷದ ಜಾತ್ರಾ ಮಹೋತ್ಸವ, ಕಡಲೆಕಾಯಿ ಪರಿಷೆ ಸರಳವಾಗಿತ್ತು. ಅಂಗಡಿ ಮುಂಗಟ್ಟುಗಳು ಇರಲಿಲ್ಲ. ಕಡಲೆಪುರಿ, ಸಿಹಿ ಮಾರುವ ಮಳಿಗೆಗಳಿಗೆ ಅವಕಾಶ ಇರಲಿಲ್ಲ. ಪಲ್ಲಕ್ಕಿ ಉತ್ಸವವೂ ಸರಳವಾಗಿತ್ತು.