ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ. ಮಂಜಮ್ಮ ಜೋಗತಿ ಅವರು ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಿರುವ ಪಟ್ಟಿ ಪ್ರಕಟಿಸಿದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಬೆಂಗಳೂರು: ಎಂ.ಕೆ.ಸಿದ್ದರಾಜು-ಜಾನಪದ ಗಾಯನ
- ಬೆಂಗಳೂರು ಗ್ರಾಮಾಂತರ: ಹೊನ್ನ ಗಂಗಮ್ಮ-ಸೋಬಾನೆಪದ
- ರಾಮನಗರ: ತಿಮ್ಮಯ್ಯ-ತಮಟೆವಾದನ
- ಕೋಲಾರ: ಕೆ.ಎನ್.ಚಂಗಪ್ಪ-ಭಜನೆ ತತ್ತ್ವಪದ
- ಚಿಕ್ಕಬಳ್ಳಾಪುರ: ನಾರಾಯಣಪ್ಪ-ಕೀಲು ಕುದುರೆ
- ತುಮಕೂರು: ಸಿ.ವಿ.ವೀರಣ್ಣ-ವೀರಭದ್ರನ ಕುಣಿತ
- ದಾವಣೆಗೆರೆ:ಭಾಗ್ಯಮ್ಮ-ಸೋಬಾನೆ ಹಾಡುಗಾರಿಕೆ
- ಚಿತ್ರದುರ್ಗ: ಕೆಂಚಮ್ಮ-ಮದುವೆ ಹಾಡು
- ಶಿವಮೊಗ್ಗ: ಕೆ.ಯುವರಾಜು-ಜಾನಪದ ಹಾಡುಗಾರಿಕೆ
- ಮೈಸೂರು: ಕುಮಾರಸ್ವಾಮಿ-ಕಂಸಾಳೆ ಹಾಡುಗಾರಿಕೆ
- ಮಂಡ್ಯ: ಭೂಮಿಗೌಡ-ಕೋಲಾಟ
- ಹಾಸನ: ಗ್ಯಾರಂಟಿ ರಾಮಣ್ಣ-ಹಾಡುಗಾರಿಕೆ
- ಚಿಕ್ಕಮಗಳೂರು: ಎಂ.ಸಿಭೋಗಪ್ಪ-ಚೌಡಿಕೆ ಪದ
- ದಕ್ಷಿಣ ಕನ್ನಡ: ಗೋಪಾಲಕೃಷ್ಣ ಬಂಗೇರಾಮಧ್ವ-ಗೊಂಬೆ ಕುಣಿತ
- ಉಡುಪಿ: ರಮೇಶ್ ಕಲ್ಮಾಡಿ-ಕರಗ ಕೋಲಾಟ
- ಕೊಡಗು: ಕೆ.ಕೆ.ಪೊನ್ನಪ್ಪ-ಬೋಳೋಪಾಟ್
- ಚಾಮರಾಜನಗರ: ಹೊನ್ನಮ್ಮ-ಸೋಬಾನೆ ಪದ
- ಬೆಳಗಾವಿ: ಮುತ್ತಪ್ಪ ಅಲ್ಲಪ್ಪ ಸವದಿ-ತತ್ತ್ವಪದ
- ಧಾರವಾಡ: ಮಲ್ಲೇಶಪ್ಪ ಫಕ್ಕೀರಪ್ಪತಡಸದ-ತತ್ತ್ವಪದ
- ವಿಜಯಪುರ: ಸುರೇಶ ರಾಮಚಂದ್ರ ಜೋಶಿ-ಡೊಳ್ಳಿನ ಹಾಡುಗಾರಿಕೆ
- ಬಾಗಲಕೋಟೆ: ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ-ತತ್ತ್ವಪದ ಮತ್ತು ಭಜನೆ
- ಉತ್ತರ ಕನ್ನಡ: ಸಹದೇವಪ್ಪ ಈರಪ್ಪ ನಡಗೇರಾ-ಲಾವಣಿ ಪದ
- ಹಾವೇರಿ: ಬಸವರಾಜ ತಿರುಕಪ್ಪ ಶಿಗ್ಗಾಂವಿ-ತತ್ತ್ವಪದ
- ಗದಗ: ಮುತ್ತಪ್ಪ ರೇವಣಪ್ಪ ರೋಣದ-ಪುರುವಂತಿಕೆ
- ಕಲಬುರಗಿ: ಸಾಯಬಣ್ಣ-ಹಲಗೆವಾದನ
- ಬೀದರ: ವೈಜಿನಾಥಯ್ಯ ಸಂಗಯ್ಯಸ್ವಾಮಿ-ಚಕ್ರಿ ಭಜನೆ
- ರಾಯಚೂರು: ಜಂಬಣ್ಣ-ಹಗಲುವೇಷ
- ಕೊಪ್ಪಳ: ತಿಪ್ಪಣ ಅಂಬಾಜಿ ಸುಗತೇಕರ-ಗೋಂದಲಿಗರು
- ಬಳ್ಳಾರಿ: ಗೋಂದಳಿ ರಾಮಪ್ಪ-ಗೋಂದಳಿಪದ
- ಯಾದವಗಿರಿ: ಗೋಗಿ ಬಸವ ಲಿಂಗಮ್ಮ-ಮದುವೆ ಹಾಡು
ವಾರ್ಷಿಕ ಗೌರವ ಜಾನಪದ ತಜ್ಞ ಪ್ರಶಸ್ತಿ
ಜಾನಪದ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಅವರು ಡಾ. ಜೀ.ಶಂ. ಪಶಸ್ತಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಬಸವರಾಜು ಸಬರದ ಅವರು ಡಾ. ಗದ್ದಗೀಮಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಾನಪದ ಕಲಾವಿದರಿಗೆ ತಲಾ 25 ಸಾವಿರ ರೂ. ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ. ತಜ್ಞ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ನೀಡಿ ಗೌರವಿಸಲಾಗುತ್ತದೆ ಎಂದು ಮಾತಾ ಬಿ.ಮಂಜಮ್ಮ ಜೋಗತಿ ಅವರು ತಿಳಿಸಿದರು.
ಜಾನಪದ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಾಮರಾಜನಗರದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಆಯೋಜಿಸಲಾಗುವುದು. ಸಮಾರಂಭದ ದಿನಾಂಕ ನಿಗದಿಯಾಗಬೇಕಿದೆ. ಸಮಾರಂಭಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯವೆಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ಮಾತನಾಡಿ ಜಾನಪದ ಕಲೆಗೂ ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ಸಂಬಂಧ ಇದೆ. ಜಾನಪದ ಕಲೆಗಳ ತವರೂರೆಂದೇ ಕರೆಯಲ್ಪಡುವ ಚಾಮರಾಜನಗರ ಜಿಲ್ಲೆ ಕನ್ನಡ ಸಾಹಿತ್ಯ, ಭಾಷೆ, ವೈವಿಧ್ಯತೆಯಲ್ಲಿ ನಿಜವಾದ ಸೊಗಡು ಉಳಿಸಿಕೊಂಡು ಬಂದಿದೆ ಎಂದರು.
ಅಪಾರವಾದ ಜಾನಪದ ಸಂಪತ್ತು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿಯೇ ಕರ್ನಾಟಕ ಜಾನಪದ ಅಕಾಡೆಮಿ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಜನತೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ತಿಳಿಸಿದರು.
ಜಾನಪದ ಅಕಾಡೆಮಿಯ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಕೆ ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.