- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ನೆರೆಯ ಕೇರಳ ಮತ್ತಿತರೆ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲಾ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಿಸಿದೆ ಈ ನಡುವೆ ಗುರುವಾರದಂದು ಚಿಕ್ಕಬಳ್ಳಾಪುರ ನಗರಕ್ಕೆ ತಾಗಿಕೊಂಡಿರುವ ಗೋಪಾಲಕೃಷ್ಣ ಕೆರೆಯಲ್ಲಿ ಎರಡು ಹಕ್ಕಿಗಳು ನಿಗೂಢವಾಗಿ ಮೃತಪಟ್ಟು, ಮತ್ತೆರಡು ಹಕ್ಕಿಗಳು ತೀವ್ರ ನಿತ್ರಾಣಗೊಂಡಿವೆ. ಇದರಿಂದಾಗಿ ಈ ಭಾಗದ ಜನರಲ್ಲಿ ಇದೀಗ ಹಕ್ಕಿಜ್ವರದ ಭೀತಿ ಆವರಿಸಿದೆ.
ಇದೇ ವೇಳೆ ಜನರ ಆತಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಆರ್.ಲತಾ ಅವರು, ಸತ್ತಿರುವ ಹಕ್ಕಿಗಳಿಗೆ ಹಕ್ಕಿಜ್ವರದ ಲಕ್ಷಣಗಳು ಇಲ್ಲ. ಹೀಗಾಗಿ ಆತಂಕ ಬೇಡ ಎಂದಿದ್ದಾರೆ.
ಬಹುದಿನಗಳಿಂದ ಈ ಗೋಪಾಲಕೃಷ್ಣ ಅಮಾನಿಕೆರೆಗೆ ಹೆಚ್.ಎನ್.ವ್ಯಾಲಿ ನೀರು ಹರಿದು ಬರುತ್ತಿದ್ದು, ಕೆರೆ ತುಂಬುವ ಹಂತದಲ್ಲಿದೆ. ಈ ಹಕ್ಕಿಗಳು ಇತರೆಡೆಯಿಂದ ವಲಸೆ ಬಂದು ಹೋಗುವ ಪರಿಪಾಠವನ್ನು ರೂಢಿಸಿಕೊಂಡಿವೆ. ಈ ಮಧ್ಯೆ ಗುರುವಾರ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹೆಸರಿನ ಎರಡು ಹಕ್ಕಿಗಳು ನಿಗೂಢವಾಗಿ ಮೃತಪಟ್ಟಿದ್ದು, ರೆಡ್ ವಾಟ್ಲೆಡ್ ಲ್ಯಾಪ್‍ವಿಂಗ್ ಮತ್ತು ಗ್ರೀನ್ ವಿಂಗ್ಡ್ ಟೀಲ್ ಹೆಸರಿನ ಇನ್ನೆರಡು ಹಕ್ಕಿಗಳು ತೀವ್ರ ಅಸ್ವಸ್ಥಗೊಂಡಿವೆ. ಹಕ್ಕಿಗಳು ನಿಗೂಢವಾಗಿ ಮೃತಪಟ್ಟಿರುವ ಮಾಹಿತಿಯನ್ನು ತಿಳಿದ ಕೂಡಲೇ ಅರಣ್ಯ ಇಲಾಖೆಯ ಎಸಿಎಫ್ ಚಂದ್ರಶೇಖರ್, ತನ್ವೀರ್ ಅಹಮದ್, ಆರ್‍ಎಫ್‍ಒ ಶ್ರೀಲಕ್ಷ್ಮೀ, ಅವಿನಾಶ್ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಾಥರೆಡ್ಡಿ ಮತ್ತಿತರರು ಭೇಟಿ ನೀಡಿ ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಜೈವಿಕಾ ಸಂಸ್ಥೆಯಿಂದ ವರದಿ ಬಂದ ಬಳಿಕವೇ ಪಕ್ಷಿಗಳು ಯಾವ ಕಾರಣಕ್ಕೆ ಮೃತಪಟ್ಟಿವೆ ಎಂಬುದು ಖಾತ್ರಿಯಾಗಲಿದೆ ಎಂದು ಅರಣ್ಯ ಅಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಜಿಲ್ಲಾ ಕೇಂದ್ರ ಸನಿಹದ ಅಮಾನಿ ಗೋಪಾಲಕೃಷ್ಣ ಕೆರೆ ಅಂಗಳವು ವಲಸೆ ಬರುವ ಹಕ್ಕಿಗಳ ಪಾಲಿಗೆ ಸ್ವರ್ಗವಾಗಿದೆ. ಈ ವಲಸೆ ಹಕ್ಕಿಗಳು ಇಲ್ಲಿ ಸಂತತಿ ಬೆಳೆಸಿ ಇತರೆಡೆಯ ಪ್ರದೇಶಗಳಿಗೆ ತೆರಳುತ್ತವೆ. ಪ್ರಸ್ತುತ ಈ ಕೆರೆಯ ಅಂಗಳದಲ್ಲಿ ಗ್ರೀನ್ ಸ್ಯಾಂಡ್‍ಪೈಪರ್, ವುಡ್‍ಸ್ಯಾಂಡ್‍ಪೈಪರ್, ಪೇಟೆಂಡ್ ಸ್ಟೋರ್ಕ್, ಕಾಮನ್ ಸ್ಯಾಂಡ್‍ಪೈಪರ್, ರಿವರ್ ಟರ್ಮ್, ಕ್ರಸ್ಟರ್ಡ್ ಲಾರ್ಕ್, ಕೆಂಟಿಸ್ಟ್ ಪ್ಲವರ್, ಬ್ಲಾಕ್ ಹೆಡೆಡ್ ಎಲ್ಬೀಸ್, ಸ್ಮಾಲ್ ಪ್ರಾಟಿನ್ ಕೋಲ್ ಎಂಬ ಹೆಸರಿನ ಪಕ್ಷಿಗಳು ಈ ಕೆರೆಗೆ ವಲಸೆ ಬಂದು ನೆಲೆಸಿವೆ ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹರ್ಸಲನ್ ಸಿಕೆನ್ಯೂಸ್ ನೌಗೆ ಮಾಹಿತಿ ನೀಡಿದ್ದಾರೆ.
ಜನರಲ್ಲಿ ಹೆಚ್ಚಿದ ಆತಂಕ
ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಹಕ್ಕಿಜ್ವರ ವೇಗವಾಗಿ ಹಬ್ಬುತಿದ್ದು, ನಮ್ಮ ದೇಶಕ್ಕೂ ಕಾಲಿಟ್ಟಿದೆ. ಸದ್ಯ ಕೇರಳದ ಆಲಪ್ಪುಳ್ಳ (ಅಲೆಪ್ಪಿ) ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತು ಕೋಳಿಗಳಲ್ಲಿ ಹಕ್ಕಿಜ್ವರ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲೂ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಪಕ್ಷಿಗಳು ಸತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆತಂಕ ಬೇಡ ಎಂದ ಜಿಲ್ಲಾಧಿಕಾರಿ
ಇದೇ ವೇಳೆ, ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಸ್ಪಷ್ಟಪಡಿಸಿದ್ದಾರೆ.
ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗುರುವಾರ ಎರಡು ವಲಸೆ ಪಕ್ಷಿಗಳು ಮೃತಪಟ್ಟಿದ್ದು, ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. 25 ದಿನಗಳ ಹಿಂದೆ ಇದೇ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ ಮೃತಪಟ್ಟಿದ್ದ ಎರಡು ಹಕ್ಕಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ ಈ ಎರಡು ಹಕ್ಕಿಗಳು ಯಾವುದೇ ಸೋಂಕಿನಿಂದ ಮೃತಪಟ್ಟಿರುವುದಿಲ್ಲ ಎಂದು ದೃಢಪಟ್ಟಿದೆ. ಹಾಗಾಗಿ, ಜಿಲ್ಲೆಯ ನಾಗರಿಕರು ಹಕ್ಕಿ ಜ್ವರದ ಬಗ್ಗೆ ಹೆದರಬೇಕಾಗಿಲ್ಲ. ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.