ಒಂದು ಪ್ರಕರಣ ಮೂರು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು
- ಮೇಲಿನ ಚಿತ್ರ: ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ ಒಕ ಅವರ ಸಮಕ್ಷಮದಲ್ಲಿ ಕೌಟುಂಬಿಕ ನ್ಯಾಯಾಲಯವನ್ನು ಉದ್ಘಾಟನೆ ಮಾಡಿದ ನಾರಾಯಣಸ್ವಾಮಿ ಹಾಗೂ ಲಕ್ಷ್ಮೀದೇವಮ್ಮ.
***
- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ನ್ಯಾಯಾಂಗದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ವಿಶೇಷ ಸನ್ನಿವೇಶ ಒಂದಕ್ಕೆ ಗುರುವಾರದಂದು ಚಿಕ್ಕಬಳ್ಳಾಪುರ ಜಿಲ್ಲೆಯು ಸಾಕ್ಷಿಯಾಯಿತು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಜಿಲ್ಲಾ ಕೌಟುಂಬಿಕ ನ್ಯಾಯಾಲಯವನ್ನು ಉದ್ಘಾಟಿಸಬೇಕಾಗಿದ್ದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ ಒಕ ಅವರು, ಜಿಲ್ಲೆಯ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಸಹಾಯಕರ ಹಸ್ತದಿಂದ ಉದ್ಘಾಟನೆ ಮಾಡಿಸುವ ಮೂಲಕ ಹೊಸ ಇತಿಹಾಸವನ್ನೇ ಬರೆದರು.
ಪೂರ್ವ ನಿಗದಿಯಂತೆ ಮುಖ್ಯ ನ್ಯಾಯಮೂರ್ತಿಗಳೇ ಈ ನ್ಯಾಯಾಲಯವನ್ನು ಉದ್ಘಾಟಿಸಬೇಕಾಗಿತ್ತು. ಆದರೆ, ಟೇಪ್ ಕತ್ತರಿಸುವ ಜಾಗಕ್ಕೆ ಬಂದ ಕೂಡಲೇ ಅವರು, ಜಿಲ್ಲೆಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ನಾರಾಯಣಸ್ವಾಮಿ ಹಾಗೂ ಲಕ್ಷ್ಮೀದೇವಮ್ಮ ಅವರನ್ನು ಕರೆದು ಟೇಪ್ ಕತ್ತರಿಸಿ ಹೊಸ ನ್ಯಾಯಾಲಯವನ್ನು ಉದ್ಘಾಟಿಸುವಂತೆ ಸೂಚಿಸಿದರು. ಅನಿರೀಕ್ಷಿತವಾಗಿ ಎದುರಾದ ಈ ಸನ್ನಿವೇಶ ಅಲ್ಲಿದ್ದವರೆಲ್ಲರೂ ಚಕಿತರಾದರಲ್ಲದೆ, ಆ ಸಹಾಯಕರಿಬ್ಬರೂ ಮರು ಮಾತನಾಡದೇ ಮುಖ್ಯ ನ್ಯಾಯಮೂರ್ತಿಗಳ ನೀಡಿದ ಆದೇಶವನ್ನು ಶಿರಸಾ ವಹಿಸಿ ಪಾಲಿಸಿದರು.
ಮುಖ್ಯ ನ್ಯಾಯಮೂರ್ತಿಗಳ ಉದಾರತೆ, ಸರಳತೆಗೆ ಎಲ್ಲರೂ ಮಾರು ಹೋದರು. ಇಂಥ ಅತ್ಯಂತ ವಿರಳ ಸನ್ನಿವೇಶದಲ್ಲಿ, ಅದೂ ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಸಮಕ್ಷಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ ಸರಳವಾಗಿ ಲೋಕಾರ್ಪಣೆಗೊಂಡಿತು.
- ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ ಒಕ ಅವರ ಭಾಷಣ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ ಒಕ ಅವರು, ಒಂದು ಕೌಟುಂಬಿಕ ಪ್ರಕರಣ ಮೂರು ಕುಟುಂಬಗಳ ಮೇಲೆ ಪ್ರಭಾವ ಬೀರುತ್ತದೆ. ಮೂರು ಕುಟುಂಬಗಳ ಪ್ರತಿಯೊಬ್ಬ ಸದಸ್ಯರು ಇದರಿಂದಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ವಿವಿಧ ಕಾರಣಗಳಿಂದ ಯಾವುದೇ ಕುಟುಂಬದಲ್ಲಿ ಎದುರಾಗುವ ಸಮಸ್ಯೆಗಳನ್ನು ಈ ನ್ಯಾಯಾಲಯದಲ್ಲಿ ಬಗೆಹರಿಸಲಾಗುವುದು. ಈ ನ್ಯಾಯಾಲಯ ಪೂರ್ಣ ಪ್ರಮಾಣದ ಸ್ವತಂತ್ರ ವ್ಯವಸ್ಥೆ ಹೊಂದಿದ್ದು, ಪ್ರಕರಣಗಳನ್ನೂ ಪರಿಹರಿಸುತ್ತದೆ ಎಂದರು.
ಜಿಲ್ಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಸ್ಥಾಪಿಸುವುದು ಚಿಕ್ಕಬಳ್ಳಾಪುರ ಜಿಲ್ಲೆಯ ವಕೀಲರ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಇಂದು ಈ ನ್ಯಾಯಾಲಯವನ್ನು ಸ್ಥಾಪಿಸುವ ಮೂಲಕ ವಕೀಲರ ಕನಸು ನನಸಾಗಿಸಿದಂತಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಪ್ರತಿಯೊಬ್ಬ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ 19 ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಅವರು ಸಲಹೆ ನೀಡಿದರು.
ಹಿಂದೆಯೂ ಹೀಗೆಯೇ ಆಗಿತ್ತು
ಮುಖ್ಯ ನ್ಯಾಯಮೂರ್ತಿ ಅವರ ಸರಳತೆ ಮತ್ತು ಉದಾರತೆಗೆಈ ಹಿಂದೆಯೂ ಜಿಲ್ಲೆ ಸಾಕ್ಷಿಯಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ನ್ಯಾ.ಅಭಯ್ ಶ್ರೀನಿವಾಸ ಒಕ ಅವರು, ತ್ವರಿತ ವಿಚಾರಣಾ ನ್ಯಾಯಾಲಯವನ್ನು ಉದ್ಘಾಟನೆ ನೆರೆವೇರಿಸಬೇಕಾಗಿತ್ತು. ಆದರೆ, ಆಗಲೂ ನ್ಯಾಯಾಲಯದ ಸಹಾಯಕರಿಬ್ಬರಿಂದ ನೂತನ ನ್ಯಾಯಾಲಯದ ಉದ್ಘಾಟನೆ ಕಾರ್ಯವನ್ನು ಮಾಡಿಸಿದ್ದರು.
ಅವಲಂಭಿತರನ್ನೂ ನೋಡೋಣ
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಅಶೋಕ್ ಗೋಳಪ್ಪ ನಿಜಗುಣ್ಣನವರ್ ಅವರು ಮಾತನಾಡಿ, ಅನೇಕ ಕಾರಣಗಳಿಗೆ ಕೌಟುಂಬಿಕ ಕಲಹಗಳು ಉಂಟಾಗಬಹುದು. ಅದರಲ್ಲಿ ಕೆಲವೊಂದು ಸಣ್ಣ ಪುಟ್ಟ ವಿಚಾರಗಳಿಗೆ ವಿಚ್ಚೇದನವರೆಗೂ ಹೋಗುತ್ತಾರೆ. ಇದರಿಂದ ಆ ಕುಟುಂಬಗಳ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಈ ಕೌಟುಂಬಿಕ ನ್ಯಾಯಾಲಯಕ್ಕೆ ಬರುವ ಪ್ರಕರಣಗಳನ್ನು ಇತರೆ ಸಾಮಾನ್ಯ ಪ್ರಕರಣಗಳಂತೆ ನೋಡದೇ ಮಕ್ಕಳು, ಅವರ ಅವಲಂಭಿತರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಕ್ಕೆ ನ್ಯಾಯ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಸಾಮಾನ್ಯ ಕೌಟುಂಬಿಕ ಸಮಸ್ಯೆಗಳು ಮತ್ತು ಕೌಟುಂಬಿಕ ದೌರ್ಜನ್ಯ, ಶೋಷಣೆ ಮತ್ತಿತರ ಪ್ರಕರಣಗಳನ್ನು ದಾಖಲಿಸಿ, ಸೂಕ್ತ ನೆರವು ಪಡೆಯಬಹುದಾಗಿದೆ. ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬೈರಪ್ಪ ಶಿವಲಿಂಗ ನಾಯಿಕ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ರವರಾದ ಕೆ.ಎನ್.ರೂಪಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಚ್.ತಮ್ಮೇಗೌಡ ಸೇರಿದಂತೆ ಇತರೆ ಗೌರವಾನ್ವಿತ ನ್ಯಾಯಾಧೀಶರು ಹಾಗೂ ಇತರೆ ವಕೀಲರು ಹಾಜರಿದ್ದರು.