ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಶನಿವಾರ ಅಥವಾ ಭಾನುವಾರ 13.90 ಲಕ್ಷ ಕೋವಿಡ್ ಲಸಿಕೆ ರವಾನೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿರುವ ಮಾದರಿ ಲಸಿಕೆ ಕೇಂದ್ರಕ್ಕೆ ಶುಕ್ರವಾರ ಸಚಿವರು ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇಂದ್ರದ ಆರೋಗ್ಯ ಸಚಿವರು ನೀಡಿರುವ ಮಾಹಿತಿ ಪ್ರಕಾರ ರಾಜ್ಯಕ್ಕೆ ನಾಳೆ ಅಥವಾ ನಾಳಿದ್ದು 13.90 ಲಕ್ಷ ಕೊರೊನಾ ಲಸಿಕೆ ರವಾನೆಯಾಗುವ ಸಾಧ್ಯತೆಗಳಿವೆ. ಈ ಲಸಿಕೆ ನೀಡುವುದಕ್ಕಾಗಿ ವೈದ್ಯರು ಸೇರಿದಂತೆ 6.30 ಲಕ್ಷ ಆರೋಗ್ಯ ಸೇವಾ ಕಾರ್ಯಕರ್ತರನ್ನು ಗುರುತಿಸಿ ನೋಂದಾಯಿಸಲಾಗಿದೆ. ವೈದ್ಯಕೀಯ, ದಂತ ವೈದ್ಯಕೀಯ ಒಳಗೊಂಡು ಇನ್ನೂ ಯಾರಾದರೂ ಬಿಟ್ಟು ಹೋಗಿದ್ದರೆ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ರಾಜ್ಯದ 163 ಮಾದರಿ ಲಸಿಕೆ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಪೂರ್ವಾಭ್ಯಾಸದ ವ್ಯವಸ್ಥೆಯಾಗಿದೆ. ಆ ಮೂಲಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿ ಎಲ್ಲ ತಯಾರಿ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದವರು ತಿಳಿಸಿದರು.