ಕನ್ನಡ ಸಾರಸ್ವತ ಲೋಕ ಕಂಡ ಸರ್ವಶ್ರೇಷ್ಠ ಸಂಶೋಧಕರಲ್ಲಿ ಡಾ.ಚಿದಾನಂದಮೂರ್ತಿ ಅವರು ಅತ್ಯಂತ ಪ್ರಮುಖರು. ಸಂಶೋಧನೆ, ಬರವಣಿಗೆ, ಚಿಂತನೆ, ಬದುಕು, ಮಾತು; ಇವೆಲ್ಲವುಗಳಲ್ಲಿ ಕತ್ತಿ ಅಲಗಿನಷ್ಟೇ ನೇರವಾಗಿದ್ದ ದಿಟ್ಟಜೀವಿ. 2020 ಜನವರಿ 11ರಂದು ಚಿಮೂ ಅವರು ತಮ್ಮ ಇಹ ತ್ಯಜಿಸಿದ್ದರು. ಇವತ್ತಿಗೆ ಅವರ ನಿರ್ಗಮನಕ್ಕೆ ಒಂದು ವರ್ಷ. ಕನ್ನಡ ಬದುಕಿರುವಷ್ಟು ಕಾಲವೂ ಚಿಮೂ ಬದುಕಿರುತ್ತಾರೆ ಎಂಬುದರಲ್ಲಿ ಅತಿಶಯವೇನೂ ಇಲ್ಲ. ಆ ಚೇತನದ ವಿರಾಟ್ ಪ್ರತಿಭೆಯನ್ನು ಡಾ.ರುದ್ರೇಶ್ ಅದರಂಗಿ ಅವರು ಸಿಕೆನ್ಯೂಸ್ ನೌ ಓದುಗರಿಗಾಗಿ ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಲೇಖನದಲ್ಲಿ ಮುಖ್ಯವಾಗಿ ಚಿದಾನಂದಮೂರ್ತಿ ಅವರು ಶರಣ ಸಾಹಿತ್ಯವನ್ನು ಕುರಿತು ನಡೆಸಿದ ಅಧ್ಯಯನಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಕನ್ನಡ ಸಾಹಿತ್ಯದಲ್ಲಿ ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಮೂಲಕ ಸಂಶೋಧನೆಗೆ ಒಂದು ಮಾರ್ಗವನ್ನು ಹಾಕಿಕೊಟ್ಟ ಕೀರ್ತಿ ನಾಡೋಜ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಸಲ್ಲುತ್ತದೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ವಿದ್ಯಾರ್ಥಿಗಳಲ್ಲಿ ಸಂಶೋಧನೆ, ಸಾಹಿತ್ಯಾಸಕ್ತಿಯನ್ನು ಮೂಡಿಸಿದರು. ಡಿ.ಎಲ್.ಎನ್., ತೀನಂಶ್ರೀ ಮೊದಲಾದವರುಗಳ ಶಿಷ್ಯರಾದ ಇವರು ಗುರು ಪರಂಪರೆಯನ್ನು ಅಧ್ಯಯನ, ಅಧ್ಯಾಪನ, ಸಂಶೋಧನೆಗಳ ಮೂಲಕ ಮುಂದುವರಿಸಿದವರು. ಒಮ್ಮೆ ಸಿನಿಮಾವನ್ನು ನೋಡಲು ಹೋದ ಸಂದರ್ಭದಲ್ಲಿ ಜರುಗಿದ ಕಾರಣದಿಂದಾಗಿ ಸಂಶೋಧನೆಯಷ್ಟೇ ಕನ್ನಡವನ್ನು ಕಟ್ಟುವ ಕೆಲಸ ಮಹತ್ವದ್ದೆಂದು ಭಾವಿಸಿ ಕನ್ನಡ ಶಕ್ತಿಕೇಂದ್ರದ ಮೂಲಕ ಕನ್ನಡ ಚಳವಳಿಯಲ್ಲಿ ಮುನ್ನುಗ್ಗಿದರು. ಕನ್ನಡ ನೆಲೆ ಜಲ ಭಾಷೆಯ ವಿಷಯದಲ್ಲಿ ಅವರಿಗಿದ್ದ ಪಾಂಡಿತ್ಯ ಅಪಾರವಾದುದಾಗಿತ್ತು. ನಾಡು ನುಡಿಯನ್ನು ಕಟ್ಟುವ ನಿಟ್ಟಿನಲ್ಲಿ ಅವರು ಕೊಟ್ಟ ವರದಿಗಳು ಗಮನಾರ್ಹವಾದವುಗಳಾಗಿವೆ.
ಯಾವುದೇ ಅಧಿಕಾರ ಅಂತಸ್ತುಗಳಿಗೆ ಆಸೆಪಡದ ಇವರು ಕನ್ನಡದ ಏಳ್ಗೆಯಲ್ಲಿಯೇ ತನ್ನ ಏಳ್ಗೆಯನ್ನು ಕಂಡುಕೊಂಡರು. ಕನ್ನಡಕ್ಕೆ ಕೈ ಎತ್ತು ಅದು ಕಲ್ಪವೃಕ್ಷವಾಗುವುದು ಎಂಬ ತಮ್ಮ ಗುರು ಕುವೆಂಪು ಅವರ ಆಶಯದಂತೆ ಕನ್ನಡದ ಏಳ್ಗೆಗಾಗಿ ಶ್ರಮಿಸಿದರು. ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡದ್ದೇ ಆದ ವಿಶ್ವವಿದ್ಯಾಲಯವಿರಬೇಕೆಂಬ ಆಶಯದಿಂದ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಶ್ರಮಿಸಿ ಅದನ್ನು ಆಗುಮಾಡುವಲ್ಲಿ ಇವರ ಅಹರ್ನಿಶಿ ಕೊಡುಗೆಯನ್ನು ಅವರ ʼಕನ್ನಡಾಯಣʼ ಕೃತಿಯಲ್ಲಿ ನೋಡಬಹುದಾಗಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ತಂದುಕೊಡುವಲ್ಲಿ ಇವರ ಕೊಡುಗೆ ಅನನ್ಯವಾದುದಾಗಿದೆ. ಸಂಶೋಧನೆ, ಅದ್ಯಯನ, ಅಧ್ಯಾಪನ, ಸಂಘಟನೆ, ಚಳವಳಿ ಹೀಗೆ ಬಹುಮುಖಿಯಾದ ಕೊಡುಗೆ ಡಾ.ಎಂ.ಚಿದಾನಂದಮೂರ್ತಿ ಅವರದಾಗಿದೆ.
ಕನ್ನಡದ ಬಹುದೊಡ್ಡ ವಿದ್ವಾಂಸರಾದ ಇವರು ನಾಡು ನುಡಿ ಬಗೆಗಲ್ಲದೆ ನಾಡಿನ ಸಾಂಸ್ಕೃತಿಕ ಸಂಗತಿಗಳಿಗೆ ಕೂಡಲೇ ಸ್ಪಂಧಿಸುವುದರ ಮೂಲಕ ಸಾಕ್ಷೀಪ್ರಜ್ಞೆಯಂತಿದ್ದರು. ಕೆಲ ಸಂಗತಿಗಳಿಗಾಗಿ ನಾಡಿನ ವಿದ್ವಾಂಸರೊಂದಿಗೆ ವಾದ-ಸಂವಾದ ನಡೆಸಿದರೂ ಶ್ರೀಸಾಮಾನ್ಯರೊಡನೆ ಬೆರೆಯುವ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಡಾ.ಎಂ.ಚಿದಾನಂದಮೂರ್ತಿ ಅವರದು ಮೇರು ವ್ಯಕ್ತಿತ್ವ. ʼಮಾತಿಗಿಂಥ ಕೃತಿ ಮೇಲುʼ ಎಂಬಂತೆ ಇವರದು ಕೇವಲ ಮಾತಿನ ಮಂಟಪವಾಗಿರದೆ ಕೃತಿಯಾಗಿರುತ್ತಿತ್ತು. ಕಾವೇರಿ ಹೋರಾಟದ ಸಂದರ್ಭದಲ್ಲಿ ಗುರುಸ್ವಾಮಿ ಎಂಬವರು ಬಲಿದಾನವಾದ ಸಂದರ್ಭದಲ್ಲಿ ಎಲ್ಲರ ಹಾಗೆ ಕಣ್ಣೀರು, ಶ್ರದ್ಧಾಂಜಲಿಗೆ ಸೀಮಿತರಾಗದೆ, ತಾವು ಹಣ ಹೊಂದಿಸಿ ಇತರರ ನೆರವನ್ನು ಪಡೆದು ಗುರುಸ್ವಾಮಿಯವರ ಕುಟುಂಬದ ನೆರವಿಗೆ ಮುಂದಾದರು. ಇದೇ ರೀತಿ ಪ್ರವಾಹ ಸಂದರ್ಭ, ಬರ ಯಾವುದೇ ಸಂದರ್ಭವಾದರೂ ಕೂಡಲೇ ಕಾರ್ಯೋನ್ಮುಖರಾಗುತ್ತಿದ್ದರು. ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುವವರೂ ಕೂಡ ಅವರ ಮಾತು ಮತ್ತು ಕೃತಿಯ ಸಂದರ್ಭದಲ್ಲಿ ತಲೆಬಾಗುತ್ತಿದ್ದರು. ತಾವು ರಾಜಕೀಯವಾಗಿ ಬಲಪಂಥೀಯರೆಂದು ಯಾವುದೇ ಮುಲಾಜಿಲ್ಲದೆ ಹೇಳುತ್ತಿದ್ದರು. ಅಂತರಂಗ ಮತ್ತು ಬಹಿರಂಗಗಳು ಒಂದಾಗಿದ್ದ ಅಪ್ಪಟ ಅಸದೃಶ್ಯ ವ್ಯಕ್ತಿತ್ವ ಅವರದು.
ಪ್ರಾಮಾಣಿಕತೆ ಮತ್ತು ಅಧ್ಯಯನಶೀಲತೆ
ಸಂಶೋಧನೆಯಲ್ಲಿ ಅಪಾರ ಸಾಧನೆಯನ್ನು ಮಾಡಿದ್ದ ಡಾ.ಎಂ.ಚಿದಾನಂದಮೂರ್ತಿ ಅವರು ಸೂಕ್ಷ್ಮ ಸಂಗತಿಗಳನ್ನು ತಲಸ್ಪರ್ಶಿಯಾಗಿ ನೋಡುತ್ತಿದ್ದರು. ಓರ್ವ ಸಂಶೋಧಕನಿಗಿರಬೇಕಾದ ಪ್ರಾಮಾಣಿಕತೆ ಮತ್ತು ಅಧ್ಯಯನಶೀಲತೆಗೆ ಅವರೇ ಒಂದು ಮೈಲಿಗಲ್ಲಾಗಿದ್ದಾರೆ. ಭಾಷಾ ವಿಜ್ಞಾನವನ್ನು ಕುರಿತು ಹೆಚ್ಚು ಅಧ್ಯಯನಗಳಾಗಿದ್ದರೂ ಈಗಲೂ ಈ ಕ್ಷೇತ್ರದಲ್ಲಿ ಪ್ರವೇಶ ಪಡೆಯುವ ಅಧ್ಯಯನಾರ್ಥಿಗಳಿಗೆ ಅವರ ʼಭಾಷಾವಿಜ್ಞಾನದ ಮೂಲತತ್ತ್ವಗಳುʼ ಒಂದು ಆಕರ ಕೃತಿಯಾಗಿದೆ. ಒಂದು ವಿಚಾರ ಅವರ ಮನಸ್ಸಿಗೆ ನಾಟಿತೆಂದರೆ ಅದನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಪರಿಹಾರಕ್ಕೆ ಮುಂದಾಗುತ್ತಿದ್ದರು. ನಾಡಿನ ಪತ್ರಿಕೆಗಳ ಓದುಗರ/ವಾಚಕರ ಅಂಕಣದಲ್ಲಿ ಪತ್ರವನ್ನು ಬರೆಯುತ್ತಿದ್ದರು. ಅವರ ಪತ್ರಕ್ಕೆ ಚಂಪಾ ಒಮ್ಮೆ ವ್ಯಂಗ್ಯೋತ್ತರ ನೀಡಿದಾಗ, ವಿಡಂಬನೆ ಎಂದಿಗೂ ಉತ್ತರವಾಗುವುದಿಲ್ಲವೆಂದು ನೇರವಾಗಿ ಉತ್ತರಿಸಿದ್ದ ನೆನಪು. ಹೀಗೆ ಸೂಕ್ಷ್ಮ ಮನಸ್ಸಿನವರಾದ ಇವರು ತಮ್ಮ ಗಮನಕ್ಕೆ ಬಂದ ಸಂಗತಿಯ ಬಗೆಗೆ ಪತ್ರ, ಲೇಖನಗಳನ್ನು ಬರೆಯುತ್ತಿದ್ದರು. ಮೊಬೈಲ್ ಬಂದ ಮೇಲೆ ಅದನ್ನು ಕನ್ನಡೀಕರಿಸುವ ಸಂದರ್ಭದಲ್ಲಿ ಜಂಗಮವಾಣಿ, ಸನಿಹವಾಣಿ ಮೊದಲಾಗಿ ಕರೆಯುವ ಪರಿಪಾಠವಿದೆ. ಅದನ್ನು ಗಮನಿಸಿ ಮೇಷ್ಟ್ರು, ಸ್ಥಿರವಾಣಿ – ಚರವಾಣಿ ಎಂದು ಸ್ಪಷ್ಟವಾಗಿ ಕನ್ನಡೀಕರಣಗೊಳಿಸಿ ಸಂಶಯಕ್ಕೆ ತೆರೆಯೆಳೆದರು. ಆದರೂ ಕೆಲವರು ಇನ್ನೂ ಗೊಂದಲದಲ್ಲಿ ಹೇಳುವುದು ನಿಂತಿಲ್ಲ. ಆದರೆ ಹೀಗೆ ಪ್ರಾಸಂಗಿಕವಾಗಿ ಬರೆದ ಬಿಡಿ ಬಿಡಿ ಲೇಖನಗಳು ಸಹಸ್ರಾರು. ಮುಂದೆ ಆ ಲೇಖನಗಳನ್ನು ಸಂಗ್ರಹಿಸಿ ಹೊತ್ತಗೆಯಾಗಿ ಪ್ರಕಟಿಸುತ್ತಿದ್ದ ಅಧ್ಯಯನದ ಶಿಸ್ತು ಅವರದಾಗಿತ್ತು.
ಡಾ.ಎಂ.ಚಿದಾನಂದಮೂರ್ತಿ ಅವರು ಸಾಂದರ್ಭಿಕವಾಗಿ ಬಿಡಿ ಬಿಡಿಯಾಗಿ ಬರೆದ ಲೇಖನಗಳನ್ನು ಗಮನಿಸಿದಾಗ ಅವುಗಳಲ್ಲಿ ವಚನ ಸಾಹಿತ್ಯದ ಉಗಮ, ಶರಣ ಚಿಂತನೆಗಳು, ಶಾಸನ, ಐತಿಹಾಸಿಕ ಕ್ಷೇತ್ರಗಳು, ಕವಿಗಳ ಜನ್ಮಸ್ಥಳ, ಕವಿವಂಶದವರು, ಜಾನಪದ, ಭಾಷಾವಿಜ್ಙಾನ, ನಾಡು ನುಡಿ, ಸಾಂಸ್ಕೃತಿಕ, ರಾಜಕೀಯ, ಸಂಕೀರ್ಣ ಮೊದಲಾದ ವಿಭಾಗಗಳಲ್ಲಿ ವರ್ಗೀಕರಿಸಬಹುದಾಗಿದೆ. ಶರಣ ಚಿಂತನೆಗಳ ಲೇಖನಗಳಲ್ಲಿ ವೀರಶೈವ-ಹಿಂದೂ, ಶರಣರ ವ್ಯಕ್ತಿಚಿತ್ರ, ವಚನ ಸಾಹಿತ್ಯ ಉಗಮ ಮತ್ತು ವಿಕಾಸ, ಶರಣರಿಗೆ ಸಂಬಂಧಿಸಿದ ನೂತನ ಶೋಧ, ವಚನದ ಹೊಸ ವ್ಯಾಖ್ಯಾನ, ಕ್ಷೇತ್ರಕಾರ್ಯ ಮೊದಲಾದವುಗಳನ್ನು ಗಮನಿಸಬಹುದಾಗಿದೆ. ಇವುಗಳು ಸಾಂದರ್ಭಿಕವಾಗಿ ಬರೆದ ಲೇಖನಗಳಾದರೂ ಸಂಶೋಧನಾ ಶಿಸ್ತಿನಿಂದ ಕೂಡಿದವುಗಳಾಗಿವೆ. ಸಾಮಾನ್ಯವಾಗಿ ವಿಮರ್ಶಕರು ಮತ್ತು ಸಂಶೋಧಕರು ತಮ್ಮ ವಿಷಯ ಮಂಡನೆಗೆ ಕ್ಲಿಷ್ಟವಾದ, ಪಾರಿಭಾಷಿಕ ಪದಗಳ ಮೂಲಕ ಭಾಷೆಯನ್ನು ಕಬ್ಬಿಣದ ಕಡಲೆಯನ್ನಾಗಿ ಮಾಡಿದರೆ, ಚಿದಾನಂದಮೂರ್ತಿಯವರು ಶಾಸನ, ಭಾಷಾವಿಜ್ಞಾನದಂಥ ಸುಲಭವಾಗಿ ಗ್ರಾಹ್ಯವಾಗದ ಸಂಗತಿಗಳನ್ನೂ ಶ್ರೀಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಬರೆಯುವ ಕಲೆಗಾರಿಕೆಯನ್ನು ಕಾಣಬಹುದಾಗಿದೆ. ಅವರ ಯಾವುದೇ ಲೇಖನಗಳನ್ನು ಓದಿದರೂ ನಮ್ಮ ಅನುಭವಕ್ಕೆ ಬರುವ ಅಂಶವೆಂದರೆ ಕುತೂಹಲ, ಓದಿಸಿಕೊಂಡು ಹೋಗುವ ಗುಣ, ವಿಷಯದಾಚೆಗೆ ಅನಗತ್ಯವಾಗಿ ಎಳೆದಾಡದೆ, ನೇರವಾಗಿ ವಿಷಯವನ್ನು ನಿರೂಪಿಸುವುದು. ಅಂತಿಮವಾಗಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸುವುದು. ಅಗತ್ಯವಿದ್ದಲ್ಲಿ ಅಡಿಟಿಪ್ಪಣಿ, ಅನುಬಂಧ, ಆಕರಗ್ರಂಥಗಳನ್ನು ತಿಳಿಸುವುದು. ತಮ್ಮ ಅಧ್ಯಯನದ ಸಂದರ್ಭದಲ್ಲಿ ನೆರವಿಗೆ ಬಂದ ವಿದ್ವಾಂಸರಲ್ಲದೆ ಅನಕ್ಷರಸ್ಥ ಹಳ್ಳಿಯವರನ್ನೂ ಪ್ರಾಮಾಣಿಕವಾಗಿ ಸ್ಮರಿಸುವುದು. ಸಂಶೋಧಕನಿಗಿರಬೇಕಾದ ಪ್ರಾಮಾಣಿಕತೆಗೆ ಮೇಷ್ಟ್ರು ಒಂದು ಮಾದರಿಯಾಗಿದ್ದಾರೆ.
ಸ್ಥಾವರದಿಂದ ಜಂಗಮದೆಡೆಗೆ
ಡಾ.ಎಂ.ಚಿದಾನಂದಮೂರ್ತಿಯವರ ಬಿಡಿಬಿಡಿ ಲೇಖನಗಳ ಮಾದರಿಯನ್ನು ಗಮನಿಸುವುದಾದರೆ, ಅವರ ಸ್ಥಾವರ-ಜಂಗಮ ಲೇಖನವು ಬಸವಣ್ಣನವರ ವಚನದ ಒಂದು ಅರ್ಥ ವಿಸ್ತರಣೆಯಾಗಿದೆ. ಸ್ಥಾವರ ಪದಕ್ಕಿರುವ ಹಲವು ವ್ಯಾಖ್ಯಾನಗಳು, ನಿಘಂಟಿನ ಅರ್ಥಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ. ಅಲ್ಲದೆ ಆ ಪದಕ್ಕಿರುವ ಅರ್ಥದ ವ್ಯಾಖ್ಯಾನವನ್ನು ಮಾಡುವ ರೀತಿ ಕೇವಲ ಒಂದು ಸಂಶೋಧನಾ ಲೇಖನವಲ್ಲದೆ ಒಂದು ಲಲಿತ ಪ್ರಬಂಧದ ಸ್ವರೂಪವೂ ಇದೆ. ಇದರಲ್ಲಿ ಒಂದು ಸೂಕ್ಷ್ಮತೆಯನ್ನು ಗಮನಿಸಬಹುದಾಗಿದೆ. ಸ್ಥಾವರ ಮತ್ತು ಜಂಗಮ ಪದಗಳಿಗಿರುವ ಆನುಭಾವಿಕ ಅರ್ಥಗಳಾಚೆಗೆ ಅವುಗಳನ್ನು ಸಮಕಾಲೀನಗೊಳಿಸುವುದಾಗಿದೆ. ಶ್ರೀರಂಗಪಟ್ಟಣದ ಸಮೀಪದ ಅರಕೆರೆಗೆ “ಶೂಲದ ಹಬ್ಬ”ವನ್ನು ಕುರಿತು ಕ್ಷೇತ್ರಕಾರ್ಯಕ್ಕೆ ಹೋದ ಸಂದರ್ಭದಲ್ಲಿ ಮಾಸ್ತಿಕಲ್ಲನ್ನು ಕುರಿತು ಇವರು ಕೊಟ್ಟ ವಿವರಣೆಯಿಂದ ಅಲ್ಲಿಯ ಜನರು ಹೇಗೆ ಹಿಗ್ಗಿದರು ಎಂಬುದು. ಈ ರೀತಿಯ ಪ್ರಸಂಗಗಳು ಅವರ ಪಾಂಡಿತ್ಯರಸ ಕೃತಿಯಲ್ಲಿಯೂ ನೋಡಬಹುದಾಗಿದೆ. ಸಂಶೋಧನೆ ಎಂದಿಗೂ ಸ್ಥಾವರವಾಗದೆ, ನಿರಂತರವಾಗಿರಬೇಕೆಂಬ ಆಶಯ ಇಡೀ ಲೇಖನದುದ್ದಕ್ಕೂ ಕಾಣಬಹುದಾಗಿದೆ. ಇದೇ ರೀತಿಯಲ್ಲಿ ಅವರ ʼವಚನವೊಂದರ ಅಂದಿನರ್ಥ ಮತ್ತು ಇಂದಿನರ್ಥʼ ಎಂಬ ಲೇಖನವನ್ನು ಗಮನಿಸಬಹುದಾಗಿದೆ. ಸ್ಥಾವರ-ಜಂಗಮ ಲೇಖನದ ಕೊನೆಯಲ್ಲಿ ಅವರು ಹೇಳುವ “ಒಂದು ಸಾಹಿತ್ಯ ಕೃತಿಯ ಸಾರ್ಥಕ ವ್ಯಾಖ್ಯಾನವೂ ಅಷ್ಟೇ, ಸಂಶೋಧನೆಯಂತೆ ʼಸ್ಥಾವರʼವನ್ನು ʼಜಂಗಮʼಗೊಳಿಸುತ್ತದೆ. ಸ್ಥಾವರವನ್ನು ಜಂಗಮಗೊಳಿಸುವ ಪ್ರಕ್ರಿಯೆಯೇ ಸಂಶೋಧನೆ. “ಸಂಶೋಧನೆಯನ್ನು ಕುರಿತ ಈ ವ್ಯಾಖ್ಯಾನವು ಅರ್ಥಪೂರ್ಣವಾಗಿ ವಿಸ್ತರಣೆಯನ್ನು ಪಡೆದಿದೆ. ಹೀಗೆ ಮೇಷ್ಟ್ರು ಸಂಶೋಧನೆ, ಅಧ್ಯಯನ, ಕ್ಷೇತ್ರಕಾರ್ಯ, ಬಿಡಿಬಡಿ ಲೇಖನಗಳಲ್ಲೆಲ್ಲಾ ಕಾಣಬರುವುದು ಸ್ಥಾವರದಿಂದ ಜಂಗಮದೆಡೆಗೆ ಆಶಯವಾಗಿದೆ.
ವಚನಗಳ ಆಳಕ್ಕಿಳಿದ ಮೇಷ್ಟ್ರು
ಡಾ.ಎಂ.ಚಿದಾನಂದಮೂರ್ತಿ ಅವರ ಬಿಡಿಬಿಡಿ ಲೇಖನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಚನ ಸಾಹಿತ್ಯವನ್ನು ಕುರಿತು, ಅವುಗಳ ಉಗಮ, ಸ್ವರೂಪವನ್ನು ಕುರಿತಿವೆ. ʼವಚನಗಳು ಶಾಸ್ತ್ರವೇ? ಸಾಹಿತ್ಯವೇ?ʼ, ʼವೀರಶೈವ ಧರ್ಮದ ಬೆಳವಣಿಗೆಯಲ್ಲಿ ನಾಲ್ಕು ಪ್ರಮುಖ ಘಟ್ಟಗಳುʼ, ʼಕೊಂಡಗುಳಿ ಕೇಶಿರಾಜʼ, ʼಚಂಪೂ ಪ್ರಕಾರದಿಂದ ವಚನ ಪ್ರಕಾರಕ್ಕೆ ಸಂಕ್ರಮಣ – ಕೇಶಿರಾಜʼ, ಬಸವಪೂರ್ವ ಯುಗದ ವಚನಕಾರರುʼ, ʼವಚನ ಸಾಹಿತ್ಯದ ಉಗಮʼ, ಹೀಗೆ ಹತ್ತಕ್ಕೂ ಹೆಚ್ಚಿನ ಲೇಖನಗಳನ್ನು ಬರೆದಿದ್ದಾರೆ. ಇವುಗಳಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಚನ ಸಾಹಿತ್ಯ, ಶೂನ್ಯಸಂಪಾದನೆಯನ್ನು ಕುರಿತು, ಲಿಂಗಾಯತ ಅಧ್ಯಯನಗಳು ಮೊದಲಾದ ಗ್ರಂಥಗಳನ್ನು ಬರೆದಿದ್ದಾರೆ. ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನಕ್ಕೊಳಪಡಿಸಿದರೆ, ಅವರಿಗಿದ್ದ ವಚನ ಸಾಹಿತ್ಯದ ಆಳವಾದ, ತಲಸ್ಪರ್ಶಿಯಾದ, ಪ್ರಾಮಾಣಿಕವಾದ ಅಧ್ಯಯನ ವೇಧ್ಯವಾಗುತ್ತದೆ.
ವಚನಗಳು ತಮಿಳಿನ ತೇವಾರಂಗಳಿಂದ ಪ್ರಭಾವಿತಗೊಂಡು ನಿಷ್ಪನ್ನವಾದವುಗಳೇ? ಎಂಬ ವಾದವಿದೆ. ಈ ವಾದವನ್ನು ಡಾ.ಎಂ.ಚಿದಾನಂದಮೂರ್ತಿ ಅವರು ಸಾಧಾರಪೂರಕವಾಗಿ ಅಲ್ಲಗಳೆಯುತ್ತಾರೆ. ತೇವಾರಂಗಳನ್ನು ಹಾಡಲು ರಚನೆಗೊಂಡವು, ವಚನಗಳು ಹಾಡಲೆಂದು ರಚಿಸಿದವುಗಳಲ್ಲ. ವಚನ ಸಾಹಿತ್ಯ ಹುಟ್ಟಿದ್ದೇ ಧರ್ಮಪ್ರಸಾರಕ್ಕಾಗಿ ಎಂಬ ನಿಲವಿಗೆ ಬರುತ್ತಾರೆ. ಇದುವರೆಗು ವಚನ ಸಾಹಿತ್ಯವನ್ನು ಕುರಿತು ನಡೆದಿರುವ ಚಿಂತನೆ ಚರ್ಚೆಗಳನ್ನು ಸಾವಧಾನವಾಗಿ ಗಮನಿಸುತ್ತಾರೆ. ಡಿ.ಎಲ್.ನರಸಿಂಹಾಚಾರ್, ತೀನಂಶ್ರೀ, ಶೀ.ಚ.ನಂದೀಮಠ, ಶಿ.ಶಿ.ಬಸವನಾಳ, ಎಂ.ಆರ್.ಶ್ರೀ, ಫ.ಗು.ಹಳಕಟ್ಟಿ, ಆರ್.ನರಸಿಂಹಾಚಾರ್, ಆರ್.ನರಸಿಂಹಾಚಾರ್, ಎಲ್.ಬಸವರಾಜು ಮೊದಲಾದವರುಗಳು ಹೇಳಿರುವ ವಿಚಾರವನ್ನು ಅವಲೋಕಿಸಿ ತಮ್ಮದೇ ಆದ ನಿರ್ಣಯಕ್ಕೆ ಬರುತ್ತಾರೆ. “ವಚನ ರಚನೆಗೆ ಮೂಲವನ್ನು ಮಾದರಿಯನ್ನು ಅನ್ಯಭಾಷಾ ಸಾಹಿತ್ಯಗಳಲ್ಲಿ ಹುಡುಕುವುದು ಹೆಚ್ಚು ಸೂಕ್ತ, ಫಲಕಾರಿ. ಅಲ್ಲದೆ ವಚನಕಾರರ ಪ್ರಧಾನ ಉದ್ದೇಶ ಅನ್ಯಭಾಷೆಗಳ ಮಾದರಿಯಲ್ಲಿ ಕನ್ನಡದ ಸಾಹಿತ್ಯ ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಪುಷ್ಟಿಗೊಳಿಸುವುದಾಗಿರಲಿಲ್ಲ. ಸಾಹಿತ್ಯ ಸೃಷ್ಟಿಗೆಂದೇ ಹೊರಡುವವರು ನೂತನತೆಗಾಗಿ ಅನ್ಯಭಾಷೆಯ ಶೈಲಿಯನ್ನು ಹೊಸದಾಗಿ ತಮ್ಮ ಭಾಷೆಯಲ್ಲಿ ತರಲು ಪ್ರಯತ್ನಪಡಬಹುದು. ವಚನಕಾರರ ಸದ್ಯದ ಉದ್ದೇಶ ಜನಸಾಮಾನ್ಯರಿಗೆ ತಿಳಿಯುವಂತೆ ಅವರ ಭಾಷೆಯಲ್ಲಿ, ಸಾಧ್ಯವಾದರೆ ಅವರ ಶೈಲಿಗೆ ಸಮೀಪವಾದ ಶೈಲಿಯಲ್ಲಿ ಅವರಿಗೆ ಪ್ರಿಯವಾಗುವಂತೆ ಗಹನವಾದ ವಿಚಾರಗಳನ್ನು ಹೇಳುವುದಾಗಿತ್ತು.” (ಪುಟ ೪೯, ಸ್ಥಾವರ ಜಂಗಮ) ವಚನ ಸಾಹಿತ್ಯವನ್ನು ಕುರಿತು ಇದುವರೆಗಿನ ಅಧ್ಯಯನಗಳನ್ನು ಸಮೀಕ್ಷಿಸಿ ತಮ್ಮದೇ ಆದ ಒಂದು ನಿರ್ಣಯಕ್ಕೆ ಬರುತ್ತಾರೆ. ಇವರ ಸಂಶೋಧನಾ ನಿರ್ಣಯಗಳು ಊಹೆಯ ಮೇಲೆ ನಿಂತವುಗಳಾಗಿರದೆ, ಸೂಕ್ತ ಆಧಾರಗಳ ಮೇಲೆ ಎಂಬುದು ಗಮನಿಸಬಹುದಾದ ಸಂಗತಿಯಾಗಿದೆ. ತಮ್ಮ ನಿರ್ಧಾರಕ್ಕೆ ಪೂರಕವಾಗಿ ಇತರರ ಅಭಿಪ್ರಾಯಗಳನ್ನು ಸಕಾರಣವಾಗಿ ಮಂಡಿಸುತ್ತಾರೆ. ಮೇಲಿನ ತಮ್ಮ ನಿರ್ಣಯಕ್ಕೆ ಇದೇ ಲೇಖನದಲ್ಲಿ ಎಂ.ಆರ್.ಶ್ರೀ ಅವರ “ವಚನ ಸಾಹಿತ್ಯ ಎರವಲು ತಂದದ್ದಲ್ಲ; ಅದು ಕನ್ನಡದ ಸ್ವಾರ್ಜಿತಸ್ವತ್ತು. ವಚನಕಾರರು ಸಂಸ್ಕೃತದ ಆಚರ‍್ಯರಲ್ಲ; ಅವರು ಅಚ್ಚಗನ್ನಡದ ಬೇಸಾಯಗಾರರು” ಎಂಬ ಉಲ್ಲೇಖವನ್ನು ಉದ್ಧರಿಸುತ್ತಾರೆ.
ವಚನಗಳ ರಾಚನಿಕ ಸ್ವರೂಪವನ್ನು ಅವಲೋಕಿಸುತ್ತಾ ಅವುಗಳು ತ್ರಿಪದಿಯಿಂದ ಪ್ರೇರಣೆಗೊಳಗಾದವುಗಳೇ? ಎಂಬುದನ್ನು ವಿಶ್ಲೇಷಿಸುತ್ತಾರೆ. ಜೇಡರ ದಾಸಿಮಯ್ಯನವರ ವಚನಗಳಲ್ಲಿ ತ್ರಿಪದಿಯ ಲಕ್ಷಣಗಳಿರುವುದನ್ನು ಉದಾಹರಿಸಿ ಅಲ್ಲಿಯ ಛಾಯೆಯನ್ನು ಅವಲೋಕಿಸುತ್ತಾರೆ. ಇದೇ ಲೇಖನದ ಪರಿಶಿಷ್ಟದಲ್ಲಿ ಶಾಸನಗಳಲ್ಲಿ ಬಂದಿರುವ ತ್ರಿಪದಿಗಳನ್ನು ಪೂರಕವಾಗಿ ಕೊಟ್ಟಿದ್ದಾರೆ. ಈ ರೀತಿಯಲ್ಲಿ ಪರಿಶಿಷ್ಟ, ಅನುಬಂಧಗಳನ್ನು ಕೊಡುವುದು ತಮ್ಮ ಸಂಶೋಧನೆಗೆ ಪೂರಕವಾಗಿಯೇ ಹೊರತು ಅನಗತ್ಯವಾಗಿ ಅಲ್ಲ. ತಾವು ಯಾವುದೇ ಒಂದು ವಿಚಾರವನ್ನು ಮಂಡಿಸಲಿ, ಅದನ್ನು ಸಾಕಷ್ಟು ಕೂಲಂಕಶವಾಗಿ ಅಧ್ಯಯನ ಮಾಡುತ್ತಾರೆ, ಸಾಕಷ್ಟು ಆಧಾರಗಳನ್ನು, ಪೂರಕ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಆನಂತರ ಸಕಾರಣವಾಗಿ, ಸಾಧಾರಪೂರಕವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವುದು, ಶ್ರಮವಹಿಸಿರುವುದು ಓದುಗರಿಗೆ ವೇಧ್ಯವಾಗುತ್ತದೆ. ಈ ಲಕ್ಷಣ, ಅಂಶಗಳು ಡಾ.ಎಂ.ಚಿದಾನಂದಮೂರ್ತಿ ಅವರ ಸಂಶೋಧನೆಯ ಮಾದರಿಯೂ ಹೌದು.
ವಿದ್ವಾಂಸರು ವಚನಗಳನ್ನು ಮೊದಲು ಸಾಹಿತ್ಯ ಎಂದು ಪರಿಗಣಿಸಲಿಲ್ಲ. ಆರ್.ಆರ್.ದಿವಾಕರ್ ಅವರು ವಚನಗಳನ್ನು ಸಂಗ್ರಹಿಸಿ ವಚನಶಾಸ್ತ್ರ ಸಾರ ಎಂದು ಕರೆದರೆ, ಎಂ.ಆರ್.ಶ್ರೀನಿವಾಸಮೂರ್ತಿ ಅವರು ವಚನಧರ್ಮಸಾರ ಎಂದು ಕರೆದರು. ಶಿ.ಶಿ.ಬಸವನಾಳರು ಗ್ರಂಥಸಂಪಾದನಾ ಶಾಸ್ತ್ರಾನುಸಾರವಾಗಿ ವಚನಗಳನ್ನು ಸಂಪಾದಿಸಿ ʼಬಸವಣ್ಣನವರ ಷಟ್ಥ್ಸಲದ ವಚನಗಳುʼ ಎಂದು ಕರೆದರು. ಮೇಷ್ಟ್ರು ತಮ್ಮ ʼವಚನಗಳು ಶಾಸ್ತ್ರವೇ? ಸಾಹಿತ್ಯವೇ?ʼ ಲೇಖನದಲ್ಲಿ ಈ ಚರ್ಚೆಗೆ ಒಂದು ತೆರೆಯನ್ನು ಎಳೆಯುತ್ತಾರೆ. “ಅನೇಕ ವಚನಕಾರರ ಅನುಭವದ ಫಲವಾಗಿ ಬಂದಿವೆ: ಅವುಗಳಲ್ಲಿ ಸಾಹಿತ್ಯದ ಗುಣ ಎದ್ದು ಕಾಣುತ್ತದೆ.” ಎಂಬ ನಿರ್ಣಯಕ್ಕೆ ಬರುತ್ತಾರೆ. ವಚನಗಳನ್ನು ಯಾರು, ಯಾವ ನೆಲೆಯಲ್ಲಿ ನೋಡುತ್ತಾರೆ ಎಂಬುದೂ ಕೂಡ ಮುಖ್ಯವಾದ ಸಂಗತಿಯೆಂಬುದನ್ನು ಗಮನಿಸುತ್ತಾರೆ.
ಕೊಂಡಗುಳಿ ಕೇಶಿರಾಜನನ್ನು ಕುರಿತು ಮೂರು ಲೇಖನಗಳನ್ನು ಬರೆದಿರುವ ಡಾ.ಎಂ.ಚಿದಾನಂದಮೂರ್ತಿಗಳು ಕೇಶಿರಾಜನನ್ನು ಚಂಪೂಪ್ರಕಾರದಿಂದ ವಚನಪ್ರಕಾರಕ್ಕೆ ಸಂಕ್ರಮಣಕಾರನೆಂದು ಗುರುತಿಸುತ್ತಾರೆ. ವೀರಶೈವ ಲಿಂಗಾಯತ ಧರ್ಮದ ಮತಸ್ಥಾಪಕರಾರು ಎಂಬ ಪ್ರಶ್ನೆಯ ಸಂದರ್ಭದಲ್ಲಿ ಕೊಂಡಗುಳಿ ಕೇಶಿರಾಜನ ಕಾಲ, ಅವನ ಕೃತಿಗಳನ್ನು ಸಮಗ್ರವಾಗಿ ಪರಿಶೀಲನೆಗೊಳಪಡಿಸುತ್ತಾರೆ. ಆ ಕಾಲಘಟ್ಟದ ಸಾಮಾಜಿಕ, ಧಾರ್ಮಿಕ ಸಂಗತಿಗಳನ್ನು ಅವಲೋಕಿಸಿ “ಪಂಚಾಚಾರ್ಯರನ್ನು ಒಪ್ಪುವ ಇಂದಿನ ಶಿಲವಂತರ ಆಚರಣೆಗಳಿಗೆ ಅಡಿಗಲ್ಲಾದ ಅರವತ್ತನಾಲ್ಕು ಶೀಲಗಳನ್ನು ಹೇಳುವ ಕೇಶಿರಾಜ ಪಂಚಾಚಾರ್ಯರಲ್ಲಿ ಯಾರನ್ನೂ ಅಪ್ಪಿತಪ್ಪಿಯಾದರೂ ಸ್ಮರಿಸಿಲ್ಲವಾದ ಕಾರಣ ಮತ್ತು ರೇವಣಸಿದ್ಧ ಅಥವಾ ರೇಣುಕ ಬಸವಣ್ಣನ ಹಿರಿಯ ಸಮಕಾಲೀನನೆಂಬುದು ಕತೆ (ಸಿದ್ಧರಾಮ ಚಾರಿತ್ರದ ಕತೆ), ಶಾಸನಗಳಿಂದ (ಸಿರಿವಾಳ ಶಾಸನ) ಸಿದ್ಧವಾಗುವುದರಿಂದ ಪಂಚಾಚಾರ್ಯರಿಂದ ಮತ ಸ್ಥಾಪನೆಯಾಯ್ತು ಎಂಬುದು ಈಚೆಗೆ ಯಾವುದೋ ಘಟ್ಟದಲ್ಲಿ ಕಲ್ಪಿತವಾದುದೆಂಬಲ್ಲಿ ಅನುಮಾನವಿಲ್ಲ.” (ಪುಟ ೧೫, ಸ್ಥಾವರ: ಜಂಗಮ) ವೀರಶೈವ ಧರ್ಮದ ಮತಸ್ಥಾಪಕರಾರು ಎಂಬ ವಿಚಾರದಲ್ಲಿ ಮೇಷ್ಟ್ರ ಈ ಮಾತು ಉಲ್ಲೇಖನೀಯವಾದುದು. ಸಾಧಾರಪೂರಕವಾಗಿ ಮತಸ್ಥಾಪಕರ ಬಗೆಗೆ ಒಂದು ಅಭಿಪ್ರಾಯವನ್ನು ಹೇಳಿದರೂ ಮುಂದೆ ಅವರು ಈ ನಿಲುವಿಗೆ ಅಂಟಿಕೊಳ್ಳದಿರುವುದು ಆಶ್ಚರ್ಯಕರವಾಗುತ್ತದೆ. ಭಾವನಾತ್ಮಕವಾಗಿ ಹಿಂದೂ ಧರ್ಮದ ಉಗ್ರ ಅಭಿಮಾನಿಗಳಾದ ಇವರು “ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ” ಗ್ರಂಥದಲ್ಲಿ ತಮ್ಮ ಈ ಹಿಂದಿನ ಅಭಿಪ್ರಾಯವನ್ನು ತಾವೇ ಅಲ್ಲಗಳೆದು ಹಿಂದೂ ಧರ್ಮಕ್ಕೆ ಅಂಟಿಕೊಳ್ಳುತ್ತಾರೆ.
ಧರ್ಮದ ಬಗ್ಗೆಯೂ ಅಚಲ ನಿಲವು
ವೀರಶೈವ ಧರ್ಮದ ವಿಚಾರದಲ್ಲಿ ಡಾ.ಎಂ.ಚಿದಾನಂದಮೂರ್ತಿಯವರದು ಹಿಂದೂಧರ್ಮ ಪ್ರಣೀತವಾದ ನಿಲುವಾಗಿದೆ. ಈ ನಿಲುವು ವೀರಶೈವಧರ್ಮ: ಭಾರತೀಯ ಸಂಸ್ಕೃತಿ, ರೇವಣಸಿದ್ಧ: ಹಿನ್ನೆಲೆ-ಮುನ್ನೆಲೆ, ನೇಪಾಳವನ್ನು ಕುರಿತಾದ ಗ್ರಂಥಗಳಲ್ಲಿ ಪ್ರಕರವಾಗಿದೆ. ಇದೇ ಅಭಿಪ್ರಾಯ ಅವರ ‘ಪಂಚಾಚಾರ್ಯರ ಬಗೆಗಿನ ವಿವಾದಕ್ಕೆ ಅಂತಿಮ ತೆರೆ, ಪಂಚಾಚಾರ್ಯರ ಬಗೆಗಿನ ವಿವಾದಕ್ಕೆ ಅಂತಿಮ ತೆರೆ – ಹೆಚ್ಚಿನ ನಿರ್ಣಾಯಕ ಆಧಾರಗಳು, ಜಂಗಮರು ಒಂದು ಐತಿಹಾಸಿಕ ಸಮೀಕ್ಷೆ, ಹಿಂದೂ – ವೀರಶೈವ: ಒಂದು ವಿಶ್ಲೇಷಣೆ, ವೀರಶೈವ – ಲಿಂಗಾಯತ, ವೀರಶೈವ ಅಥವಾ ಲಿಂಗಾಯತರು ಹಿಂದೂಗಳು, ವೀರಶೈವರು (ಲಿಂಗಾಯತರು) ಹಿಂದೂಗಳು, ವೀರಶೈವರು ಹಿಂದುಗಳಲ್ಲ ಎಂಬುದು ಸರಿಯಲ್ಲ, ವೀರಶೈವ (ಲಿಂಗಾಯತ)ರು ನೂರಕ್ಕೆ ನೂರರಷ್ಟು ಹಿಂದೂಗಳು, ಹಿಂದೂ – ಬಸವಣ್ಣ – ವೀರಶೈವ ಅವಿವೇಕದ ನಿಲುವುಗಳು, ಆರಾಧ್ಯ – ವೀರಶೈವದ ಒಂದು ವಿಶಿಷ್ಟ ಶಾಖೆ, ವೀರಶೈವರು ಹಿಂದೂಗಳಲ್ಲ ಎಂಬುದು ಅವಿವೇಕದ ವಾದ. . . ಮೊದಲಾದ ಲೇಖನಗಳಲ್ಲಿ ಕಾಣಬಹುದಾಗಿದೆ. ಈ ಲೇಖನ ಸರಣಿಗಳಲ್ಲಿ ತಾವು ಈಗಾಗಲೇ ಒಪ್ಪಿತವಾದ ಸಂಗತಿಯನ್ನು ಮತ್ತೆ ಪ್ರತಿಪಾದಿಸುವ ಧಾವಂತ, ಆತಂಕ ಅಭಿವ್ಯಕ್ತವಾಗುತ್ತದೆ. ಸಾತ್ವಿಕರಾದ ಡಾ.ಎಂ.ಚಿದಾನಂದಮೂರ್ತಿಯವರು ತಮ್ಮ ವಿಚಾರವನ್ನು ಮಂಡಿಸುವಾಗ ಕೆಲವೊಮ್ಮೆ ಆಕ್ರೋಶಕ್ಕೊಳಗಾಗುವುದನ್ನೂ ಕಾಣಬಹುದಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಾದ ವಿವಾದ ಸಂದರ್ಭದಲ್ಲಿ ಡಾ.ಎಂ.ಚಿದಾನಂದಮೂರ್ತಿಯವರ ವಾದವನ್ನು ಕೆಲವರು ಆಧಾರವಾಗಿಯೂ ಮಂಡಿಸಿದುದನ್ನು ಕಾಣಬಹುದಾಗಿದೆ. ಈ ಕಾರಣದಿಂದಾಗಿ ಒಂದು ವರ್ಗಕ್ಕೆ ಅಪಥ್ಯರಾದರೆ, ಮತ್ತೊಂದು ವರ್ಗಕ್ಕೆ ಆಪದ್ಬಾಂಧವ, ಧರ್ಮರಕ್ಷಕರಾಗಿಯೂ ಕಂಡುಬಂದರು. ಧರ್ಮದ ಇಂಥ ಸೂಕ್ಷ್ಮದ ಸಂದರ್ಭದಲ್ಲಿ ಮೇಷ್ಟ್ರು ಹಿಂದೂ ಧರ್ಮದ ಉಗ್ರಪ್ರತಿಪಾದಕರಂತೆ ಕಾಣಬರುತ್ತಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಸಂದರ್ಭದಲ್ಲಿ ಅವರ ದಿನಾಂಕ ೨೬-೦೬-೨೦೧೭ರ ಪತ್ರಿಕಾ ಗೋಷ್ಠಿಯಲ್ಲಿನ ಕೆಲವು ಅಂಶಗಳನ್ನು ನೋಡಿದಾಗ ಅವರ ತೀವ್ರವಾದ ಅಭಿಪ್ರಾಯವು ವ್ಯಕ್ತವಾಗುತ್ತದೆ. “ಇದೊಂದು ಶುದ್ಧ ಅವಿವೇಕದ ವಾದ – ಏಕೆಂದರೆ ವೀರಶಯವ ಅಥವಾ ಲಿಂಗಾಯತರು ನೂರಕ್ಕೆ ನೂರರಷ್ಟು ಹಿಂದೂಗಳು: ವೀರಶೈವವು ಹಿಂದೂ ಧರ್ಮದ ಉಪಧರ್ಮ, ಒಂದು ಧಾರ್ಮಿಕ ಶಾಖೆ ಎಂಬಲ್ಲಿ ಅನುಮಾನವಿಲ್ಲ…” (ಪುಟ ೩೮೮, ಸತ್ಯಂ:ಶೋಧಂ:ನಿರ್ಭಯಂ) ಲಿಂಗಾಯತರು ಎಲ್ಲಿ ಹಿಂದೂ ಧರ್ಮದಿಂದ ಪ್ರತ್ಯೇಕಗೊಳ್ಳುವರೋ ಎಂಬ ಆತಂಕವು ಪ್ರತಿ ಪದದಲ್ಲಿಯೂ ಕಾಣಬರುತ್ತದೆ. ಇದನ್ನು ತಡೆಯಬೇಕೆಂದು ಆಗ್ರಹಿಸುತ್ತಾರೆ. “ಅಸಹನೆಯಿಂದಾಗಿ ಅನ್ಯಧರ್ಮೀಯರಿಂದ ಹಿಂದು ಧರ್ಮದ ಮೇಲೆ ನಡೆಯುತ್ತಿರುವ ಮತಾಂತರ, ಹಿಂಸಾಚಾರಗಳನ್ನು ತಡೆಯಬೇಕಾದರೆ ಹಿಂದೂಗಳ ಒಗ್ಗಟ್ಟನ್ನು ಒಡೆಯಬಾರದು. ಇದನ್ನು ವೀರಶೈವ ಮಹಾಸಭೆಯು ಗಮನಿಸಬೇಕು.ಅದಕ್ಕೆ ಅಂತಹ ವಿವೇಕ ಬರಲಿ ಎಂದು ಹಿಂದೂ – ವೀರಶೈವ ಆದ ನಾನು ಆಶಿಸುತ್ತೇನೆ.” (ಪುಟ ೩೯೧, ಸತ್ಯಂ : ಶೋಧಂ : ನಿರ್ಭಯಂ) ಈ ರೀತಿಯಾದ ಲೇಖನ ಸರಣಿಯನ್ನು ಗಮನಿಸಿದಾಗ ಮೇಷ್ಟ್ರ ಗೆಗಿನ ಕಾಳಜಿ, ಕಳವಳ ಸುಸ್ಪಷ್ಟವಾಗುತ್ತದೆ. ಟಿಪ್ಪು ಜಯಂತಿ ವಿವಾದದ ಸಂದರ್ಭದಲ್ಲಿ ಕೂಡ ಅವರದು ಈ ಮೇಲಿನ ಉಗ್ರವಾದ ನಿಷ್ಠೆಯಾಗಿದೆ. ಹಾಗೆಂದು ಅವರನ್ನು ಅಲ್ಪಸಂಖ್ಯಾತ ಧರ್ಮದ ಉಗ್ರವೈರಿಗಳೆಂದು ಹೇಳಲಾಗುವುದಿಲ್ಲ. ಏಕೆಂದರೆ ಅವರು ಹಲವಾರು ಅಲ್ಪಸಂಖ್ಯಾತರೊಂದಿಗೆ ಉತ್ತಮವಾದ ಒಡನಾಟ ಮತ್ತು ಬಾಂಧವ್ಯವನ್ನು ಹೊಂದಿದ್ದರು. ಮಾನವೀಯ ಸಂದರ್ಭದಲ್ಲಿ ಅವರದು ವಿಶ್ವಮಾನವ ತತ್ತ್ವ ಧರ್ಮ ತಿಪಾದನೆಯ ಸಂದರ್ಭದಲ್ಲಿ ಅವರದು ಸಾಂಪ್ರದಾಯಿಕವಾದ ನಿಲುವಾಗಿತ್ತು.
ಡಾ.ಎಂ.ಚಿದಾನಂದಮೂರ್ತಿಯವರು ತಮ್ಮನ್ನು ತಾವು ಹಿಂದೂ ಧರ್ಮಪ್ರೇಮದ ನಿರ್ಭೀತ ಲೇಖಕನೆಂದು ಕರೆದುಕೊಳ್ಳುತ್ತಿದ್ದರು. ಆದರೆ ಅವರಲ್ಲಿ ಅನ್ಯ ಧರ್ಮದ ಬಗೆಗಿನ ಅಸಹನೆಗಿಂಥ ಹಿಂದೂ ಧರ್ಮದ ಬಗೆಗಿನ ಕಾಳಜಿ ಅಭಿವ್ಯಕ್ತವಾಗುತ್ತದೆ. ೨೦೦೩ರ ಶಿವರಾತ್ರಿಯ ಸಂದರ್ಭದಲ್ಲಿ ಅವರಿಗೆ ಜಮ್ಮು ಕಾಶ್ಮೀರದ ಸಾರ್ವಜನಿಕ ವ್ಯವಹಾರಗಳ ಮಂತ್ರಿಗಳಾದ ನಯೀಮ್ ಅಖ್ತರ್ ಅವರಿಂದ ಶುಭಾಶಯದ ಪತ್ರ ಬರುತ್ತದೆ. ಅದನ್ನು ನೋಡಿದ ಮೇಷ್ಟ್ರು ಆನಂದವದನರಾಗುತ್ತಾರೆ. ಇಂಥ ಸಂದರ್ಭದಲ್ಲಿ ಅವರಲ್ಲಿ ಮಾನವೀಯತೆಯ ಸೆಲೆ ವಿಶ್ವಮಾನವತ್ವದತ್ತ ಸಾಗುತ್ತದೆ. ಏನೇ ಆಗಲಿ ಮೇಷ್ಟ್ರು ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಲ್ಲವೆ!
ನೇಪಾಳದಲ್ಲೂ ಶೋಧನೆ
ಡಾ.ಎಂ.ಚಿದಾನಂದಮೂರ್ತಿ ಅವರು ೨೦೦೨ರಲ್ಲಿ ಹದಿನೈದು ದಿನಗಳ ಕಾಲ ನೇಪಾಳಕ್ಕೆ ಕ್ಷೇತ್ರಕಾರ್ಯದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಅಲ್ಲಿನ ಕ್ಷೇತ್ರಕಾರ್ಯದ ಅನುಭವದ ಹಿನ್ನೆಲೆಯಲ್ಲಿ ‘ಕರ್ನಾಟಕ – ನೇಪಾಳ ಸಾಂಸ್ಕೃತಿಕ ಸಂಬಂಧ’ ಹಾಗೂ ‘ನೇಪಾಳದ ಜಂಗಂ ವರ್ಗ’ ಎಂಬ ಎರಡು ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳು ಮುಂದೆ ನೇಪಾಳ ಮತ್ತು ಕರ್ನಾಟಕದ ನಡುವಿನ ಸಂಬಂಧ ಸೇತುವಾಗಿ ಒಂದು ಹೊತ್ತಗೆಯನ್ನೇ ಬರೆದಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕರ್ನಾಟಕಕ್ಕೂ ನೇಪಾಳಕ್ಕೂ ಇರುವ ಸಾಂಸ್ಕೃತಿಕ ಬಾಂಧವ್ಯವನ್ನು ವಿವರವಾಗಿ ಬರೆದಿದ್ದಾರೆ. ಕಲ್ಯಾಣ ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯನು ಉತ್ತರ ಭಾರತವನ್ನು ಗೆದ್ದು ನೇಪಾಳ ವಿದೇಹ ಭಾಗದಲ್ಲಿ ನಾನ್ಯದೇವನನ್ನು ಹಾಗೂ ಬಂಗಾಳದಲ್ಲಿ ವೀರಸೇನರನ್ನು ಸ್ಥಾಪಿಸಿ ‘ಕರ್ನಾಟ’ ಮತ್ತು ‘ಸೇನ’ ರಾಜವಂಶಗಳಿಗೆ ಕಾರಣನಾದನು. ಈ ನಾನ್ಯದೇವನು ತನ್ನನ್ನು ‘ಕರ್ನಾಟ ಚೂಡಾಮಣಿ’ ಎಂದು ಕರೆದುಕೊಂಡಿದ್ದಾನೆ. ಈತನು ನೇಪಾಳದ ಸಮ್ರೌನಗಡ್ ನಗರವನ್ನು ರಾಜಧಾನಿಯನ್ನಾಗಿ ಆಳ್ವಿಕೆ ಮಾಡಿದನು. ಮುಂದೆ ‘ಜಂಗಂ’ ವೀರಶೈವರ ಕುಟುಂಬಗಳು ನೇಪಾಳದಲ್ಲಿ ನೆಲೆನಿಂತರು. ಅಲ್ಲಿನ ಜಂಗಂ ಮಠಗಳಲ್ಲಿ ಎರಡು ಕನ್ನಡ ಶಾಸನಗಳು ದೊರಕಿವೆ. ೧೬೯೯ರ ಶಾಸನ ಮತ್ತು ೧೭೦೫ರ ತಾಮ್ರ ಶಾಸನಗಳು ಜಂಗಂ ಮಠದ ಗುರು ಚನ್ನವಿರದೇವರಿಗೆ ಸಂಬಂಧಿಸಿದವುಗಳಾಗಿವೆ. ಇಲ್ಲಿ ನೆಲೆ ನಿಂತಿರುವ ಜಂಗಂ ಸಮುದಾಯದವರು ಕರ್ನಾಟಕದ ಮೂಲದವರು. ಅದರಲ್ಲಿ ಕೆಲವರು ಈಗಲೂ ಕಾಶಿಯ ಜಂಗಮವಾಡಿ ಮಠದಲ್ಲಿ ಅಧ್ಯಯನ ಮಾಡುತ್ತಾರೆ. ಅಲ್ಲದೆ ನೇಪಾಳದ ಪ್ರಸಿದ್ದ ಪಶುಪತಿನಾಥ ದೇವಸ್ಥಾನದ ಅರ್ಚಕರು ಮಹಾಬಲೇಶ್ವರ ಭಟ್ಟರಾಗಿದ್ದಾರೆ. ಈ ಅಂಶಗಳನ್ನು ಅನುಲಕ್ಷಿಸಿ ಕರ್ನಾಟಕ ಮತ್ತು ನೇಪಾಳದ ಸಂಬಂಧವನ್ನು ಸಾಂಸ್ಕೃತಿಕ ನೆಲೆಯಲ್ಲಿ ವಿಷದಪಡಿಸಿದ್ದಾರೆ. ಇದೊಂದು ಶುದ್ಧಾಂಗವಾಗಿ ಕ್ಷೇತ್ರಕಾರ್ಯ ಆಧರಿಸಿದ ಲೇಖನವಾಗಿದೆ. ಮೇಷ್ಟ್ರು ಮುಂದೆ ನೇಪಾಳವನ್ನು ಕುರಿತು ಒಂದು ಹೊತ್ತಗೆಯನ್ನು ಬರೆದಿದ್ದಾರೆ.
ಡಾ.ಎಂ.ಚಿದಾನಂದಮೂರ್ತಿ ಅವರ ಬಿಡಿಬಿಡಿ ಲೇಖನಗಳಲ್ಲಿ ಶರಣರನ್ನು ಕುರಿತ ಲೇಖನಗಳು ಗಮನ ಸೆಳೆಯುತ್ತವೆ. ಯುಗದ ಉತ್ಸಾಹ ಬಸವಣ್ಣ, ಅಲ್ಲಮನ ಸಾಧಕ ಜೀವನ – ಒಂದು ಪುನಾರಚನೆ, ಬಳ್ಳಿಗಾವೆಯಲ್ಲಿ ಅಲ್ಲಮನ ಸ್ಮಾರಕಗಳಿಗಾಗಿ ಶೋಧ, ಉರಿಲಿಂಗಪೆದ್ದಿ, ಅಕ್ಕಮಹಾದೇವಿಯ ಗಂಡ ಕೌಶಿಕನನ್ನು ಇತಿಹಾಸದಲ್ಲಿ ಗುರುತಿಸುವ ಒಂದು ಪ್ರಯತ್ನ, ಕೆಲವು ಶರಣದ ಅಭಿಜ್ಞೆ: ಶಿವದೇವ, ಸೇವಕಿ, ಗೌರವ್ವೆ, ನೊಬೇಶ ಇತ್ಯಾದಿ, ಸರ್ವಜ್ಞ ಮತ್ತು ವಚನಕಾರರು, ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ, ಮೊದಲಾದ ಜೀವನ ಚಿತ್ರಣದ ಲೇಖನಗಳು ಗಮನಸೆಳೆಯುತ್ತವೆ. ಇವುಗಳಲ್ಲಿರುವ ವಿಚಾರಗಳು ಕೆಲವು ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿವೆ. ಇಲ್ಲಿಯ ವ್ಯಕ್ತಿಚಿತ್ರಣಗಳು ಸಂಶೋಧನಾ ನೆಲೆಯಲ್ಲಿವೆ. ಯುಗದ ಉತ್ಸಾಹ ಬಸವಣ್ಣ ಲೇಖನವು ‘ಕರ್ನಾಟಕದ ಐಕಾನ್ ಬಸವಣ್ಣ’ ಲೇಖನಕ್ಕೆ ಪೂರಕವಾಗಿದೆ. ಬಸವಣ್ಣನವರ ಜೀವನ, ಸಾಧನೆ, ಕೊಡುಗೆಗಳನ್ನು ಸಾಂಸ್ಕೃತಿಕ ಹಾಗೂ ಧಾರ್ಮಿಕ ನೆಲೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲಮ ಪ್ರಭು ತನ್ನ ವಚನದಲ್ಲಿ ಉಲ್ಲೇಖಿಸಿದ ಯುಗದ ಉತ್ಸಾಹ ಬಸವಣ್ಣನವರ ಕೊಡುಗೆಯನ್ನು ವಿಸ್ತೃತವಾಗಿ ತಿಳಿಸಿದ್ದಾರೆ. ಶೋಷಿತ ಸಮುದಾಯದ ಏಳಿಗೆಗೆ ಶ್ರಮಿಸಿದ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾಜೋಧಾರ್ಮಿಕ ಚಳವಳಿಯನ್ನು ಕಟ್ಟಿಕೊಡುತ್ತಾರೆ. ಬಸವನ ಚಳವಳಿಯನ್ನು ಕುರಿತು “ಭಿನ್ನ ಜಾತಿಗಳ ಮಧ್ಯೆ, ಅದರಲ್ಲೂ ಬ್ರಾಹ್ಮಣ-ದಲಿತ ಜಾತಿಗಳ ಮಧ್ಯೆ ವಿವಾಹಗಳು ನಡೆಯಲು ಪ್ರೋತ್ಸಾಹಿಸಿದುದಲ್ಲದೆ ಅಂತಹುದೊಂದು ನಡೆಯಲು ವ್ಯವಸ್ಥೆಯು ಆಯಿತೆಂಬುದನ್ನು ನೋಡಿದರೆ ಆ ಆಂದೋಲನವು ಉನ್ಮುಖೀ ಸಾಮಾಜಿಕ ಚಲನೆಯ ಪರವಾಗಿತ್ತು ಎಂಬುದು ಸ್ವಯಂವೇದ್ಯ.” (ಪುಟ ೧೮೬, ಸ್ಥಾವರ:ಜಂಗಮ) ಈ ಮಾತುಗಳು ವಚನ ಸಾಹಿತ್ಯವನ್ನು ಓದಿದವರಿಗೆ ಅತಿಶಯವೇನಲ್ಲವೆನ್ನಿಸುವುದು. ಬಸವಣ್ಣ – ಮಾನವತಾವಾದಿ, ಬಸವಣ್ಣ : ಮೂರು ಲಕ್ಷಣಗಳ ಸಂಗಮ ಲೇಖನಗಳಲ್ಲಿಯೂ ಬಸವಣ್ಣನವರನ್ನು ಕುರಿತು ಸುಧಾರಕನೆಂದು ಬರೆದಿದ್ದಾರೆ. ರೇಣುಕರು ಮತ್ತು ರೇವಣಸಿದ್ಧರನ್ನು ಕುರಿತ ಲೇಖನವು ಮುಂದೆ ‘ರೇವಣಸಿದ್ಧ : ಹಿನ್ನೆಲೆ –ಮುನ್ನೆಲೆ’ ಕೃತಿಗೆ ಕಾರಣವಾಗಿದೆ.
ಡಾ.ಎಂ.ಚಿದಾನಂದಮೂರ್ತಿ ಅವರ ಬಿಡಿಬಿಡಿ ಲೇಖನಗಳಲ್ಲಿ ಸಂಶೋಧನಾ ನೆಲೆಯನ್ನು ಕಾಣಬಹುದಾಗಿದೆ. ಹಂಪೆಯಲ್ಲಿ ಹರಿಹರ ಮತ್ತು ಚಾಮರಸರ ವಾಸಸ್ಥಾನಗಳ ಶೋಧ, ಪಾಲ್ಕುರಿಕೆ ಸೋಮನಾಥನ ವಾಸದ ಮನೆ ಮತ್ತು ಸಮಾಧಿ, ಬಸವಣ್ಣನ ವಂಶಸ್ಥರು, ಹರಿಹರ ಕವಿಯ ಕುರುಹುಗಳು, ರಾಘವಾಂಕ, ಕೆರೆಯ ಪದ್ಮರಸರ ಸ್ಮಾರಕಗಳು, ಪಾಲ್ಕುರಿಕೆ ಸೋಮನಾಥನ ವಂಶಸ್ಥರು, ಚಾಮರಸ ವಾಸವಾಗಿದ್ದ ಗುಹೆ, ಕೆಳದಿ ರಾಜರ ವಂಶಸ್ಥರು, ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥರು ಮೊದಲಾದ ಲೇಖನಗಳು ಕ್ಷೇತ್ರಕಾರ್ಯ ಮತ್ತು ಶೋಧದ ನೆಲೆಯಲ್ಲಿ ಮುಖ್ಯವಾಗುತ್ತವೆ. ಇಲ್ಲೆಲ್ಲ ಸಂಶೋಧಕ ಪ್ರಧಾನವಾಗಿ, ಶೋಧದ ಮಹತ್ವವನ್ನು ಮನಗಾಣಬಹುದು. ಚಿಕ್ಕನಂಜೇಶನ ಹರಿಹರಮಹತ್ವದಲ್ಲಿನ ಕೆಲವು ಭಾಗಗಳ ಹಿನ್ನೆಲೆಯಲ್ಲಿ ಹೊರಟ ಇವರ ಅನ್ವೇಷಣೆಯಿಂದಾಗಿ ಮಹಾಕವಿ ಹರಿಹರನ ವಾಸಸ್ಥಾನದ ಶೋಧಕ್ಕೆ ಕಾರಣವಾಗುತ್ತದೆ. ಆ ಸ್ಥಳಗಳ ಶೋಧದ ತರುವಾಯ ಮೇಸ್ಟುç ಭಾವಪರವಶರಾಗುತ್ತಾರೆ. ಇದೇ ರೀತಿಯಲ್ಲಿ ಕಲ್ಯದಲ್ಲಿ ಸೋಮನಾಥನ ಸಮಾಧಿಯನ್ನು ಕಂಡಾಗಲು ವ್ಯಕ್ತವಾಗುತ್ತದೆ.
ಡಾ.ಎಂ.ಚಿದಾನಂದಮೂರ್ತಿ ಅವರು ಕೇವಲ ಭಾಷಾಪಂಡಿತರು, ಸಂಶೋಧಕರು, ಶಾಸನ ತಜ್ಞರಷ್ಟೇ ಅಲ್ಲದೆ ಜಾನಪದ ವಿದ್ವಾಂಸರೂ ಹೌದು. ಜಾನಪದದ ಬಗೆಗೆ ಅವರಿಗಿದ್ದ ಆಸಕ್ತಿಯು ‘ವಾರದ ಏಳೂ ದಿನ ವೀರಶೈವರು, ಒಂದು ದಿನ ವೈಷ್ಣವರು’, ‘ನಂದಿಯ ಕೋಡುಗಳ ಮೂಲಕ ಶಿವಲಿಂಗ ದರ್ಶನ’ ಮೊದಲಾದ ಲೇಖನಗಳಲ್ಲಿ ವ್ಯಕ್ತವಾಗುತ್ತದೆ. ತಮ್ಮ ಗಮನಕ್ಕೆ ಬಂದ, ತಾವು ಎಂದೋ ಕೇಳಿದ ಸಂಗತಿಗಳು ಹೇಗೆ ಕುತೂಹಲವನ್ನು ಮೂಡಿಸಿ ಅಧ್ಯಯನಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಲೇಖನಗಳು ಉದಾಹರಣೆಯಾಗುತ್ತದೆ. ಭಾಷಾವಿಜ್ಞಾನದ ನೆಲೆಯಲ್ಲಿಯೂ ವಚನಗಳ ಪದಗಳನ್ನು ಅರ್ಥವಿಸ್ತರಣೆ ಮಾಡುವುದು, ಪಂದರ ಅಲ್ಲ ಪಂಡಾರ, ಕೊಟ್ಟಣ ಹಾಕಿಸು ಎಂದರೇನು, ಕನ್ನಡ ದೇವಾರಂ / ದೇಹಾರಂ ಮೊದಲಾದ ಲೇಖನಗಳಲ್ಲಿ ಮೇಷ್ಟ್ರು ಭಾಷಾ ಪಾಂಡಿತ್ಯವನ್ನು ಕಾಣಬಹುದಾಗಿದೆ.
ಅತ್ಯಂತ ಸೂಕ್ಷ್ಮ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಅವರು ಒಂದು ಸಣ್ಣ ಸಂಗತಿಯನ್ನಾಗಲಿ ಅದರ ಬಗ್ಗೆ ಉದಾಸೀನ ತಾಳದೆ ಗಂಭೀರವಾಗಿ ಅಧ್ಯಯನ ಸಂಶೋಧನೆಗೊಳಪಡಿಸುತ್ತಿದ್ದರೆಂಬುದಕ್ಕೆ ಅವರ ಬಿಡಿಬಿಡಿ ಲೇಖನಗಳೇ ಉದಾಹರಣೆಗಳಾಗಿವೆ. ಈ ಲೇಖನಗಳಲ್ಲಿ ಅವರಲ್ಲಿನ ಸಂಶೋಧಕ, ಸಮಾಜವಿಜ್ಞಾನಿ, ಭಾಷಾತಜ್ಞ, ಜಾನಪದ ವಿದ್ವಾಂಸ, ನಿರ್ಬಿಡಬೀರು, ಹಿಂದೂಧರ್ಮ ಪ್ರತಿಪಾದಕರನ್ನು ಕಾಣಬಹುದು. ಈ ಲೇಖನಗಳು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳು, ಸ್ಮರಣ ಗ್ರಂಥಗಳಿಗೆ ಬರೆದವುಗಳಾಗಿವೆ. ಕೆಲವುಗಳನ್ನು ವಿವಿಧೆಡೆ ಮಾತನಾಡಿದ ಭಾಷಣಗಳಾಗಿವೆ. ಭಿನ್ನಭಿನ್ನ ಕಾಲದವುಗಳಾಗಿವೆ. ಅವುಗಳನ್ನೆಲ್ಲ ಸಂಗ್ರಹಿಸಿ ಚಿದಾನಂದ ಸಂಪುಟದಲ್ಲಿ ಪ್ರಕಟಿಸಲಾಗಿದೆ. ಆದರೆ ಈ ಸಂಗ್ರಹಗಳನ್ನು ವಸ್ತು, ವಿಷಯ ವರ್ಗೀಕರಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಲೇಖನಗಳನ್ನು ಬರೆದ ಕಾಲವನ್ನು ನಮೂದಿಸಿದ್ದರೆ, ಅವುಗಳ ಹಿನ್ನೆಲೆ ತಿಳಿದುಕೊಳ್ಳಲು ಅನುಕೂಲವಾಗುತ್ತಿತ್ತು. ಕೆಲವು ವಿಷಯಗಳು ಪುನರಾವರ್ತನೆಯಾಗುವುದನ್ನು ಕೂಡ ಕಾಣಬಹುದಾಗಿದೆ. ಕೆಲವು ಲೇಖನಗಳ ಶೀರ್ಷಿಕೆಗಳನ್ನು ನೋಡಿದರೆ, ಇದರಲ್ಲಿ ಇದೇ ವಿಷಯ ಪ್ರತಿಪಾಧನೆ ಮಾಡಲಾಗಿದೆ ಎಂದು ಹೇಳಬಹುದಾಗಿದೆ. ಈ ಎಲ್ಲ ಬಿಡಿಬಿಡಿ ಲೇಖನಗಳಲ್ಲಿ ಕನ್ನಡದ ಬಹುದೊಡ್ಡ ಸಂಶೋಧಕರನ್ನು ಪ್ರತಿ ಲೇಖನದಲ್ಲಿಯೂ ಕಾಣಬಹುದಾಗಿದೆ. ಇವು ಯಾವುದೋ ಕಾಲ, ಸಂದರ್ಭದಲ್ಲಿ ಬರೆದರೂ ಅವುಗಳು ಕಾಲಾತೀತವಾಗಿ ಅಧ್ಯಯನದ ಹೊತ್ತಗೆಗಳಾಗಿವೆ.
ಡಾ.ರುದ್ರೇಶ್ ಅದರಂಗಿ ಸೂಕ್ಷ್ಮ ಮನಸ್ಸಿನ ನೇರ ಮಾತುಗಾರ ಮತ್ತು ಬರಹಗಾರ. ವೃತ್ತಿಯಲ್ಲಿ ಪ್ರಾಧ್ಯಾಪಕ. ಅಂಕಣ ಬರಹಗಾರರೂ ಹೌದು. ಸಾಹಿತ್ಯ ಮತ್ತು ಅಧ್ಯಯನದಲ್ಲಿ ಆಸಕ್ತಿ. ಜತೆಗೆ, ಕನ್ನಡದ ಹೊಸ ತಲೆಮಾರಿನ ರಂಗ ವಿಮರ್ಶಕರು ಹಾಗೂ ಹೆಸರಾಂತ ಗ್ರಂಥ ಸಂಪಾದನಾ ಶಾಸ್ತ್ರಜ್ಞರಾಗಿದ್ದ ದಿವಂಗತ ಎಚ್.ದೇವೀರಪ್ಪನವರನ್ನು ಕುರಿತು ಪಿಎಚ್.ಡಿ ಮಾಡಿದ್ದಾರೆ. ಸದ್ಯಕ್ಕೆ ಇವರು ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.