ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಕೇಸ್‌ನಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯಾ ಆಳ್ವ ಕೊನೆಗೂ ರಾಜ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ ದಂಧೆಯ 6ನೇ ಆರೋಪಿಯಾಗಿರುವ ಆದಿತ್ಯ ಆಳ್ವ ಸೋಮವಾರ ರಾತ್ರಿ ಸಿಸಿಬಿ ಚೆನ್ನೈನಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಚೆನ್ನೈನಿಂದ ಮಂಗಳವಾರ ಮುಂಜಾನೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಆದಿತ್ಯ ಆಳ್ವನನ್ನು ಕರೆತರಲಾಗಿದೆ.
ಇನ್ಸ್‍ಪೆಕ್ಟರ್ ಪುನೀತ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡಸಿದೆ. ನಾಲ್ಕು ತಿಂಗಳ ನಂತರ ಸಿಸಿಬಿ ಪೊಲೀಸರು ಆದಿತ್ಯ ಆಳ್ವನನ್ನು ಬಂಧಿಸಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ಎ6 ಆರೋಪಿಯಾಗಿದ್ದ ಆದಿತ್ಯ ಆಳ್ವ ವಿರುದ್ಧ ಸೆಪ್ಟೆಂಬರ್ 4ರಂದು ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್ ದಾಖಲಾಗುತ್ತಿದ್ದಂತೆಯೇ ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ ನಡೆಸಲಾಗಿತ್ತು.
ಹೆಬ್ಬಾಳದ ಹೌಸ್ ಆಫ್ ಲೈಫ್ ಮೇಲೆ ದಾಳಿ ನಡೆಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ಅವರು ನಾಪತ್ತೆಯಾಗಿದ್ದರು.
ಆದಿತ್ಯ ಆಳ್ವ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದ ಸಿಸಿಬಿ ಪೊಲೀಸರು ಮುಂಬಯಿಯಲ್ಲಿರುವ ವಿವೇಕ್ ಒಬೆರಾಯ್ ಮನೆಯಲ್ಲೂ ಸರ್ಚ್ ವಾರಂಟ್ ಪಡೆದು ಶೋಧ ನಡೆಸಿದ್ದರು.
ತಮ್ಮ ಮನೆಯಲ್ಲೆ ಹಲವು ಪಾರ್ಟಿಗಳನ್ನ ಆಯೋಜನೆ ಮಾಡಿದ್ದರೆಂದು ಆದಿತ್ಯ ಆಳ್ವ ವಿರುದ್ಧ ಆರೋಪವಿದೆ. ಈ ಕೇಸ್‍ನಲ್ಲಿ ಹಲವರು ಬಂಧನಕ್ಕೊಳಗಾದ ಬಳಿಕ ನಾಪತ್ತೆಯಾಗಿದ್ದರು. ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಬಾಮೈದುನ ಆದಿತ್ಯಾ ಆಳ್ವ.