- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಇತ್ತೀಚೆಗೆ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಜನರ ಹುಬ್ಬೇರುವಂತೆ ಮಾಡಿದ್ದ ಕೆ.ವಿ.ನವೀನ್ ಕಿರಣ್, ತಾವು ಬಿಜೆಪಿ ಸೇರಲಿರುವುದಕ್ಕೆ ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ನಗರದ ಹೊರ ವಲಯದ ಜೆ.ವಿ.ಕ್ಯಾಂಪಸ್‌ನಲ್ಲಿ ತಮ್ಮ ಹಿತೈಷಿಗಳ ಸಭೆ ನಡೆಸಿದ ಅವರು, ಬಿಜೆಪಿಗೆ ಸೇರಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ ಹೇಳಿದರು.
ನವೀನ್ ಕಿರಣ್ ಕೊಟ್ಟ ಕಾರಣಗಳು ಹೀಗಿವೆ:
- ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ನನ್ನನ್ನು ರಾಜಕೀಯವಾಗಿ ನಂಬಿಕೊಂಡು ನನ್ನೊಡನೆ ಇರುವ ಸಹಸ್ರಾರು ಹಿತೈಷಿಗಳ ಕ್ಷೇಮಕ್ಕಾಗಿ ನಾನು ರಾಜಕೀಯವಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸಚಿವ ಡಾ.ಕೆ.ಸುಧಾಕರ್ ಅವರ ಸಮಕ್ಷಮದಲ್ಲಿ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದೇನೆ.
- ನನ್ನ ರಾಜಕೀಯ ನಿಲುವುಗಳಿಗೆ ನನ್ನ ಬೆಂಬಲಿಗರ ಅಭಿಪ್ರಾಯ ತಿಳಿದುಕೊಳ್ಳುವುದೇ ಈ ಸಮಾವೇಶದ ಮುಖ್ಯ ಉದ್ದೇಶ. ನನ್ನ ನಿರ್ಧಾರವನ್ನು ನನ್ನ ಬೆಂಬಲಿಗರು, ಹಿತೈಷಿಗಳೆಲ್ಲರೂ ಬೆಂಬಲಿಸುತ್ತಾರೆಂದು ನಂಬಿದ್ದೇನೆ.
- ರಾಜಕಾರಣದಲ್ಲಿ ಶಾಶ್ವತವಾಗಿ ಯಾರು ಮಿತ್ರರಲ್ಲ. ಶಾಶ್ವತವಾಗಿ ಯಾರೂ ಶತ್ರುಗಗಳೂ ಇರುವುದಿಲ್ಲ. ಪರಿಸ್ಥಿತಿಗಳಿಗೆ ತಕ್ಕಂತೆ ರಾಜಕೀಯ ನಿಷ್ಠೆ ಬದಲಾಗುತ್ತದೆ. ರಾಜಕಾರಣ ಎಂದೂ ನಿಂತ ನೀರಲ್ಲ.
- ಡಾ.ಕೆ.ಸುಧಾಕರ್ ಒಬ್ಬ ಸಮರ್ಥ ರಾಜಕಾರಣಿ. ಅವರು ಚುನಾವಣೆಗೆ ನಿಂತ ಮೊದಲ ವಿಧಾನಸಭೆ
ಚುನಾವಣೆಯಲ್ಲೇ ಅವರ ಗೆಲುವಿಗಾಗಿ ನಾನು ಶ್ರಮಿಸಿದ್ದೆ. ನಂತರ ಬದಲಾದ ಸನ್ನಿವೇಶಗಳಲ್ಲಿ ನಾನೇ ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ್ ವಿರುದ್ದ ಸ್ಪರ್ಧಿಸಬೇಕಾಯಿತು. ನನಗೆ ಕ್ಷೇತ್ರದಲ್ಲಿ ಜನ 29 ಸಾವಿರಕ್ಕೂ ಅಧಿಕ ಮತಗಳನ್ನು ನೀಡಿದ್ದರು. ಮತ ನೀಡಿದವರ ಹಿತ ಕಾಯವುದು ಸಹ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿಗೆ ಸೇರುವ ನಿರ್ಧಾರ ಮಾಡಿದ್ದೇನೆ.
ಹಿತೈಷಿಗಳ ಬೆಂಬಲ
ನವೀನ್ ಕಿರಣ್ ರಾಜಕೀಯವಾಗಿ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಮ್ಮ ಸಹಮತವಿದೆ ಎಂದರು ಅವರ ಬೆಂಬಲಿಗರು, ಹಿತೈಷಿಗಳು. ಸಭೆಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಕೆ.ಎಲ್.ಶ್ರೀನಿವಾಸ್, ನವೀನ್ ಕಿರಣ್ ಅವರ ರಾಜಕೀಯ ನಿರ್ಧಾರ ಚಿಕ್ಕಬಳ್ಳಾಪುರಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯದು ಮಾಡಲಿದೆ ಎಂದರು.
ಜತೆಗೆ; ನರೇಶ್, ಕುಬೇರ ಅಚ್ಚು, ಶ್ರಿನಿವಾಸ್, ವಕೀಲ ಅಭಿ ಸೇರಿದಂತೆ ಮತ್ತಿತರರು ಮಾತನಾಡಿ, ನವೀನ್ ಕಿರಣ್ ಅವರ ನಿರ್ಧಾರವೇ ನಮ್ಮ ನಿರ್ಧಾರ ಎಂದು ಪ್ರಕಟಿಸಿದರು. ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ನಿರ್ಮಲಾ ಪ್ರಭು, ದೀಪಕ್ ಕುಮಾರ್, ಪುರಸಭೆಯ ಮಾಜಿ ಸದಸ್ಯ ಕೆ.ಎಂ.ನಾಗರಾಜ್, ಲಕ್ಷ್ಮಣ್, ಗ್ರಾ.ಪಂ. ಸದಸ್ಯ ಡಾ.ಎನ್.ಚಂದ್ರಪ್ಪ, ಬಿ.ಮಹೇಶ್ ಮುಂತಾದವರು ಇದ್ದರು